Home / ಕವನ / ಕವಿತೆ / ಸೂಳೆ

ಸೂಳೆ

ಥೂ….ಸೂಳೆ, ಹೇಸಿ ಪಾಪದ ಹೆಣ್ಣು
ಇವಳ ಬಾಳೇನಿಹುದು ಹಾಳು ಮಣ್ಣು
ಊರ ಕೇರಿಯ ಹೊಲಸು ಕೊಳಚೆಯಿಹ ಬೀದಿಯಲಿ
ದೇಹದಂಗಡಿಯಿಟ್ಟು ಯಜಮಾನಿಕೆ
ಗರತಿಯರ ಎದುರಿನಲಿ ಎದೆಗಾರಿಕೆ
ಎಂದು ಜನ ಕಂಡಂತೆ, ರಾಮ ಸೀತೆಯರಂತೆ
ಬಾಳಿ ಬದುಕುವ ತೆರದಿ ನುಡಿವ ಸೊಲ್ಲು
ತೆರೆದ ಹಲ್ಲು…..!
ಅವರಿವರ ಸಂಸ್ಕೃತಿಗೆ ಮತ್ತೆ ನಾಗರಿಕತೆಗೆ
ಇವಳ ಕಥೆ ಸರಿಯಾಗಿ ಸಾಗಬೇಕು;
ಇವಳಿಲ್ಲದೇ ಜಗದ ಬಾಳ ಗೋಳಿನ ಕಥೆಗೆ
ಯಾರು ಮುನ್ನುಡಿಯನ್ನು ಬರೆಯಬೇಕು?
ಹರಿನಾಮದ ಆಚಾರ್ಯರು
ಹಣೆಯ ತುಂಬ ವೀಭೂತಿಯ ಪಟ್ಟ ಹೊತ್ತ ಶರಣರು
ಮೂರು ಹೊತ್ತು ನೀರ ಮುಳುಗಿ ಮಂತ್ರ ತಂತ್ರ ಭಟ್ಟರು
ಹೊಟ್ಟೆ, ಹೊತ್ತ ಶೆಟ್ಟರು
ಕತ್ತಲಲ್ಲಿ ಕದ್ದು ಬಂದು ಇವಳ ಗುಡಿಯ ಭಕ್ತರು
ನೀತಿಯಿಂದ ಮುಕ್ತರು.
ಆದರೂನು ಇರುಳು ಕಳೆದು ಹಗಲು ಬರಲು ಮಾನ್ಯರು
ಮಹಾ ಶೀಲವಂತರು!
ಇವಳೋರ್ವಳೆ ಸೂಳೆಯೆಂದು
ಹೊಲಸು ಹೇಸಿ ಪಾಪಿಯೆಂದು
ಇವಳಿಂದಲೇ ಈ ಸಮಾಜ
ಅಧೋಗತಿಗೆ ಇಳಿಯಿತೆಂದು ವಿಷವ ಕಾರಿ ನುಡಿವರು
ಪಿಸಿ….ಪಿಸಿ….ಪಿಸಿ…. ನಗುವರು.
ವಿಧವೆಯ ಬಾಳ್- ಹಾಳಾಗಿದೆ ಮರಳಿ ಮದುವೆಯಾಗದೆ
ಹೇಗಾದರು ದಾಟಬೇಕು ಕಾಮಕಡಲ ದೈವವೆ
ಕಣ್ಣೀರಿನ ಆಸರೆ!
ಯಾರೊ ಕೊಟ್ಟ ಶಾಪದಲ್ಲಿ
ದೇಹದುರಿಯ ತಾಪದಲ್ಲಿ
ಹಾಗು ಹೀಗು “ಹೀಗಾಯಿತು” ಅಯ್ಯೋ ಕಾಲು ಜಾರಿತು
ದೇಹ ನೀರಿಗುರುಳಿತು!
ಮದುವೆಯಾಗಲಿಲ್ಲವೆಂದು ಸ್ಕೂಲಿನಲ್ಲಿ ಶಿಕ್ಷಕಿ
ಸೆರಗ ಸರಸಿ ಕಣ್ಣ ಬಲೆಯ ಬೀಸಿ ಬರುವ ನರ್ತಕಿ
ಹಾಸ್ಪಿಟಲ್ಲು ನರ್ಸಾಯಿತು ಬಿಳಿಯುಡಿಗೆಯ ಚಾಕರಿ
ಅಡುಗೆ ಮನೆಗೆ ಶರಣು ಹೊಡೆದು ಆಫೀಸಿನ ನೌಕರಿ
ಕಾಲೇಜಿನ ಕಥೆಯಾಯಿತು
ದೇಹ ಬೆಳೆದು ಬಂದಿತು!
ದೈವ ಕೃಪೆಯದೆಂತೊ ಏನೊ ಭ್ರೂಣಹತ್ಯವಾಯಿತು
ಬಾವಿ ಕೆರೆಯ ಪಾಲಾಯಿತು ಆಯುಷ್ಯವೆ ತೀರಿತು!
ಮಡಿವಂತರ ಮೂಲೋಕದಿ ಇದೊ ಇದೂ ನ್ಯಾಯ ನೀತಿ
ಶಿಲಕೆ ಪಂಚಾರತಿ!
ಮನೆ ಮನೆಯಲಿ ತೆರೆಯ ಮರೆಗೆ ಎಂಥದಯ್ಯೊ ನಾಟಕ
ರಾಮಾಯಣ ಭಾರತ!
ನಿನ್ನ ಮುಖದಿ ಏನಿಹುದೋ ಈಗಾದರು ನೋಡಿ ನಗು
ಹೊಲಸು ಕಪ್ಪು ಕಲೆಯನೆಲ್ಲ ಬೇಗ ಬೇಗ ಅಳಿಸಿಬಿಡು
ನಂತರ….
ಸೂಳೆ ಕಥೆಯ ಕೇಳಿ ಒಮ್ಮೆ ನೀನೂನು ಅತ್ತುಬಿಡು.
*****
Tagged:

Leave a Reply

Your email address will not be published. Required fields are marked *

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...