Home / ಕವನ / ನೀಳ್ಗವಿತೆ / ಘಾತಕ ಅಣ್ಣ

ಘಾತಕ ಅಣ್ಣ

(ಪ್ರತಿ ಸಾಲಿನ ಕೂನಗೆ ‘ತಾನಿತಾನಿ ತಾನಿರೋ’ ಎನ್ನಬೇಕು)

ಕೇಳಲೆ ಕೇಳಲ್ಲೆ ನಮ್ಮಲು ತಾಯೇ, ತಾನಿತಾನಿ ತಾನಿರೋ
ನಮ್ಮನಿಲಿಂದೀ ಮದೊಡ್ಡ ಹಬ್ಬಾ
ತಂಗಿ ಕರ್‍ವಲ್ಲೀ ನಾ ಹೋಗಬೇಕೂ”
ಅಟ್ಟೊಂದ ಮಾತಾ ಹೇಳಾವ್ನೆ ಅಣ್ಣಾ ||೧||

ಕೊದರೀ ಸಾಲೀಗೇ ನೆಡದಾನೆ ಲೀಗೇ
ಆಯಾಕ್ವೊಂದ ಕೊದರೀ ಹೆಕ್ಕಾನೆ ಅಣ್ಣಾ
ಹಿಂತಿರುಗಿ ಮನೆಗೇ ಬಂದಾನೆ ಅಣ್ಣಾ
ಬೇಕಾದ ವಸ್ತ್ರಾ ದರ್‍ಸಾನೆ ತಾನೂ ||೨||

ಕೊದರೀ ಸಾಲೀಗೇ ನೆಡದಾನೆ ಅಣ್ಣಾ
ಹತ್ತವರಸೀನಾ ಬುದ್ವಂತ ಯೆತ್ತೂ
ಯೆತ್ತಿನ ಮೇನಿನ್ನೇ ಕೂತಾನೆ ಅಣ್ಣಾ
ತಂಗೀ ಮನಿಗಾಗೀ ನೆಡದಾನೆ ಯೇಗೇ ||೩||

ಅಟದೊರೆ ಬರುವಾಗೆ ಇಟದೊರೇ ಕಂಡಳು
“ಯೇನ್‌ ಬಂದೆ ಅಣ್ಣಾ, ಯೆಂತ್‌ ಬಂದೆ ಅಣ್ಣಾ,
ಯೆತ್ನಿಂದ್‌ ಕಿಂದ್‌ ಕೆಳಗೆ ಇಳಿಬೇಕೋ ಅಣ್ಣಾ”
ಯೆತ್ನಿಂದ್‌ ಕಿಂದ್‌ ಕೆಳಗೆ ಇಳ್ದಾನೆ ಅಣ್ಣಾ ||೪||

ಕೊಂಬಾನ ಗಿಂಡ್ಯಲ್ಲೀ ನೀರಾನೆ ಕೊಟ್ಟೀತೂ
ಕೈಕಾಲ ಮೊಕವಾ ತೊಳ್ದಾನೆ ಅಣ್ಣಾ
ಪಟ್ಟೀ ಮಂಚ್ದ ಮೇನೇ ಕೂತಾನೆ ಅಣ್ಣಾ
“ಯೇನ್‌ ಬಂದೇ ಅಣ್ಣಾ, ಯೆಂತ್‌ ಬಂದೆ ಅಣ್ಣಾ? ||೫||

ಬಂದಾ ಸಂಗುತಿಯಾ ವದ್ಗ ಹೇಳೂ ನೀನೂ”
“ಕೇಳಲ್‌ ಕೇಳಲ್ಲೇ ನಮ್ಮಲು ತಂಗೀ,
ನಮ್ಮನೀಲಿಂದೂ ಮಾದೂಡ್ಡ ಹಬ್ಬಾ
ಕರ್‌ವಕಾದಾರೇ ಬಂದಾನೆ ನಾನೂ ||೬||

ನಿನ್ನಾ ಕರ್‌ವಲ್ಲೀ ಬಂದಾನೆ ನಾನೂ
ಕೇಳಾಲೆ ಕೇಳೇ ನನ್ನಲು ತಂಗೀ,
ಬಾವಾನಾದರೇ ಯೆಲ್ಲೀಗೆ ಹೋಗಾನೇ?”
“ಕೇಳಲ್‌ ಕೇಳಲ್ಲೋ ನಮ್ಮಲು ಅಣ್ಣಾ, ||೭||

ಮೂಡನ ಬಯ್ಲೀಗೇ ಹೂಡೂಕ್‌ ಹೋಗರ್‍ಯೋ”
“ಕೇಳಲ್‌ ಕೇಳಲ್ಲೇ ನಮ್ಮಲು ತಂಗೀ,
ಬಾವಾನಾದರೇ ಯೆಟ್‌ ಹೊತ್ಗ್‌ ಬರುವಾ?”-
“ಕೇಳಲ್‌ ಕೇಳಲ್ಲೋ ನಮ್ಮಲು ಅಣ್ಣಾ ||೮||

ವೂಟಾಕಾದಾರೇ ಬರ್‌ತಾರೆ ಅವರೂ”
ಅಟ್ಟಂದ ಹೊತ್ತೀಗೇ ಬರ್‍ತಾನೆ ಬಾವಾ
“ಕೇಳಲ್‌ ಕೇಳಲ್ಲೋ ನಮ್ಮಲು ಬಾವಾ
ನಮ್ಮನೆ ಇಂದೀ ಮಾದೊಡ್ಡ ಹಬ್ಬಾ ||೯||

ನಿಮ್ಮ ಕರ್‍ವಲ್ಲೀ ಬಂದಾನೆ ಬಾವಾ”
“ಕೇಳಲ್‌ ಕೇಳಲ್ಲೋ ನಿಮ್ಮಲು ಬಾವಾ,
ನನ್ಗೇ ಆದಾರೇ ಬರವದು ಇಲ್ಲಾ
ತಂಗೀನಾದರೇ ಕರ್‍ಕಂಡಿ ಹೋಗೂ” ||೧೦||

ಅಟ್ಟೊಂದ ಮಾತಾ ಕೇಳಾರೆ ಅವರೂ
“ವೋಟಾಕಾದರೇ ಬರಬೇಕು ಅಣ್ಣಾ”
ವೋಟಾನಾದಾರೇ ನುಂಡಾರೆ ಯೇಗೇ
ಪಟ್ಟೀ ಮಂಚ್ಚ ಮೇನೇ ಕೂತಾರೆ ಅವರೂ ||೧೧||

ಅಯೂಕ್‌ ವಂದು ಕವಳಾ ಮೆಲಿದಾರೆ ನೋಡೂ
ಬಾವಾನ ಕೋಡೇ ಯೇನಾ ಹೇಳ್ತಾನೇ?
“ಕೇಳಲ್‌ ಕೇಳಲ್ಲೋ ನಮ್ಮಲು ಬಾವಾ
ತಂಗೀ ನಾದಾರೆ ಕರ್‍ಕಂಡಿ ಹೋಗೂ ||೧೨||

ನಾಕೈದ್‌ ದಿವಸಾಕೇ ಕರ್‍ಸಬೇಕು ಬಾವಾ”
ಅಟ್ಟೊಂದ ಮಾಲಾ ಕೇಳಾದೆ ತಂಗೀ
ಬಾಚೀ ಸಿರಿ ಮೂಡಿಯಾ ಬಿಗಿದಾದೆ ಯೇಗೇ
ಮೆಟ್ಟೀ ದಂಡೀಯಾ ಮುಡ್ಡಾದೆ ತಂಗೀ ||೧೩||

ಬೇಕಾದ ಪಟ್ಟೀ ದರ್‌ಶಾದೆ ತಂಗೀ
ಬೇಕಾದ ಚೆನ್ನಾ ಹಾಕಾದೆ ತಂಗೀ
“ಕೇಳಲ್‌ ಕೇಳಲ್ಲೊ ನಮ್ಮಲು ಅಣ್ಣಾ
ನನಗೆ ಆದಾರೇ ತಯ್ಯಾರ ಆಯ್ತೂ” ||೧೪||

ಅಟ್ಟೊಂದ ಮಾತಾ ಹೇಳಾರೆ ಯೇಗೇ
ಹತ್ತವರಸಿನಾ ಬುದ್ವಂತಾ ಯೆತ್ತೂ
ಯೆತ್ತೀನ ಮೇನಿನ್ನೇ ಕೂತಾನೆ ಅಣ್ಣಾ
ತಂಗೀ ನಾದಾರೇ ಮುಂದೇ ಕುಳ್ಸಾನೇ ||೧೫||

ಬಿದ್ದಾ ಮಾರಿಗವಾ ಹಿಡ್ದಾರೆ ಲೇಗೇ
ಮುಂದಾಕೆ ದಾರೀ ಹಿಡ್ದಾರೆ ಯೇಗೇ
“ಕೇಳಲ್‌ ಕೇಳಲ್ಲೋ ನಮ್ಮ ಅಣ್ಣಾ
ಮನಿಗೋಗೂ ದಾರೀ ಬಿಟ್ಯಲ್ಲೋ ಅಣ್ಣಾ ||೧೬||

ಅಡ್ವೀ ಮುಂದಾಗೀ ಹೊಡ್ದೆಯಲೊ ಅಣ್ಣಾ”
“ಕೇಳೆಲ್‌ ಕೇಳಲ್ಲೇ ನಮ್ಮಲು ತಂಗೀ
ಹೀಗೇ ಹೋದಾರೇ ಸುತ್ತೂ ಆಯೀತೇ
ಹೀಗೇ ಹೋದಾರೇ ನೆಟ್ಟಾಗೆ ಆಯೀತೇ” ||೧೭||

ಅಂದೇಳಿ ಅಣ್ಣಾ ಹೇಳ್ತಾನೆ ಲೇಗೇ
“ಕೇಳಲ್‌ ಕೇಳಲ್ಲೋ ನಮ್ಮಲು ಅಣ್ಣಾ
ಹತ್ತ ವರುಸಿನಾ ಬುದವಂತ ಯೆತ್ತೂ
ಕಲ್ಲಾಗ ಮುಳ್ಳಾಗೇ ಶಿಗದೀನ್ನೆ ಬಂತೂ ||೧೮||

ಗೋರಂಬು ಅಡವಿಗೆ ಬಂದ್ಯಲ್ಲೋ ಅಣ್ಣಾ’
“ಕೇಳಲ್‌ ಕೇಳಲ್ಲೇ ನಮ್ಮಲು ತಂಗೀ,
ಅಡವೀ ಆದಾರೇ ಸಿಕ್ತಾದೆ ಬೈಲೂ”
ಅಂದ್‌ ಹೇಳಿ ಅಣ್ಣಾ ಮುಂದಾಕ್‌ ಹೊಡೆದಾ ||೧೯||

ಅಟ್ಟೊಂದ ಮಾತಾ ಹೇಳಾನೆ ಅಣ್ಣಾ
ಯೆತ್ನಕಿಂದ ಕಳುಗೇ ಇಳ್ದಾನೆ ಅಣ್ಣಾ
ಸುತ್ತೀದ ಪಂಜೀ ಬಿಸ್ಸಾನೆ ಅಣ್ಣಾ
ಕಣ್ಣಾನೆ ಕಟದಾ ಕಯ್ಯಾನೆ ಬಿಗದಾ ||೨೦||

ಕಂಕ್ಳದನ ಚೂರೀ ತೆಗದಾನೆ ಚೂರೀಯಾಕೂಕೆ
ಅಡ್ವಿಯನ ಕಲ್ಲಾ ಮರಚಾನೆ ಅಣ್ಣಾ
ಕಲ್ಲಾನೆ ಹುಳವೇ ಮುಟ್ಟೇ ತಣ್ಣಾಗೇ
“ಕೇಳಲ್‌ ಕೇಳಲ್ಲೇ ನಮ್ಮಲು ತಂಗೀ ||೨೧||

ಕಲ್ಲಾನ ಹುಳವೆ ಮುಟ್ಟೀ ತಣ್ಣಾಗೇ
ಹುಳ ಮುಟ್ಟಿದ ಮದ್ದ ಹಳಬೇಕೆ ತಂಗೀ”
“ಕೇಳಲ್‌ ಕೇಳಲ್ಲೋ ನಮ್ಮಲು ಅಣ್ಣಾ
ಕಣ್ಣಾನೆ ಬಿಡಸೂ ಕಯ್ಯಾನೆ ಬಿಡಸೂ” ||೨೨||

ಕಣ್ಣಾನೆ ಬಿಡ್ಸಲೆಲ್ಲ ಕಯ್ಯಾನೆ ಬಿಡ್ಸಲೆಲ್ಲ
ಹುಳ ಮುಟ್ಟಿದ ಮದ್ದಾ ಹೇಳಲೆಲ್ಲ ತಂಗೀ
ಅಣ್ಣಾನ ಜೀವಾ ಹಾಗೇ ಹೋಗೀತೂ
ಹತ್ತ ವರಸಿನಾ ಬುದ್ವಂತ ಯೆತ್ತೂ ||೨೩||

‘ಹರ ಹರ’ ಅಂತೂ ‘ಶಿವ ಶಿವ’ ಅಂತೂ
ಕಲ್ಲಾಗೆ ಮುಳ್ಳಾಗೇ ಶಿಗದೀನ್ನೀ ಬಂತೂ
ಮನಿಗೋಗು ದಾರೀ ಹಿಡ್ದಾದೆ ಯೆತ್ತೂ
ನೆಡೆದೀ ನೆಡದಿನ್ನೇ ಸಾಕಾಯ್ತೂ ಯೆತ್ತೂ ||೨೪||

ತನ್ನ ಮನಿಗಿನ್ನೆ ಕರ್‍ಕಂಡಿ ಬಂತೂ
ಅಟದೊರೆ ಬರುವಾಗೇ ಇಟದೋರೆ ಕಂಡ್ತೂ
“ಕೇಳಲ್‌ ಕೇಳಲ್ಲೇ ನನ್ನಾಲು ಮಗುವೇ
ವಬ್ಬಾಳಾದಾರೇ ಬಂದ್ಯಲ್ಲೇ ಮಗುಳೇ ||೨೫||

ಕರ್‍ವಾಕ ಹೋದಣ್ಣಾ ಯಾಕೇ ಬರಲೆಲ್ಲಾ!”
“ಕೇಳಲ್‌ ಕೇಳಲ್ಲೇ ನನ್ನಾಲು ತಾಯೇ,
ಅಣ್ಣಾನ ಸುದ್ದೀ ಹೇಳ್ತೇನೆ ತಾಯೇ
ಕಣ್ಣಾನೆ ಬಿಡಸೂ ಕಯ್ಯಾನೆ ಬಿಡಸೂ” ||೨೬||

ಕಣ್ಣಾನೆ ಬಿಡಸ್ತೂ, ಕಯ್ಯಾನೆ ಬಿಡಸ್ತೂ
“ಕೇಳಲ್‌ ಕೇಳಲ್ಲೇ ನನ್ನಾಲು ತಾಯೇ,
ಅಡ್ವಿ ಮುಂದಾಗೇ ಹೊಡ್ದಾನೆ ನಿನಮಗಾ
ಹತ್ತ ವರಶಿನಾ ಬುದವಂತ ಯೆತ್ತೂ ||೨೭||

ಕಲ್ಲಾಗೆ ಮುಳ್ಳಾಗೇ ಶಿಗದಿನ್ನೆ ಹೋಯ್ತೋ
ಮನಿಗೋಗು ದಾರೀ ಬಿಟ್ಯಲ್ಲೋ ಅಣ್ಣಾ
‘ಹೀಗೇ ಹೋದಾರೇ ನೆಡ್ದಾಗೆ ಆಯ್ತೂ’
ಅಂದೇಳಿ ತಾಯೇ ಹೇಳ್ದಾನೆ ನಿನ ಮಗ ||೨೮||

ಯೆತ್ನಕಿಂದ ಕೆಳಗೇ ಇಳ್ದಾನೆ ತಾಯೇ
ಸುತ್ತೀದ ಪಂಜೀ ಬಿಡ್ಸಾನೆ ತಾಯೇ
ಕಣ್ಣನೆ ಕಟಿದಾ ಕಯ್ಯಾನೆ ಬಿಗದಾ
ಕಂಳ್ಳದನ ಚೂರೀ ತೆಗ್ದಾನೆ ಅಣ್ಣಾ ||೨೯||

ಅಡ್ವೀಯಾನ ಕಲ್ಲಾ ಮರ್‌ಚಾನೆ ಅಣ್ಣಾ
ಕಲ್ಲಾನ ಹುಳವೇ ಮುಟ್ಟೀತಣ್ಣಾಗೇ
‘ಹುಳಮುಟ್ಟಿದ ಮದ್ದಾ ಹೇಳಬೇಕು’ ಲಂದಾ
‘ಕಣ್ಣಾನೆ ಬಿಡಸೂ, ಕಯ್ಯಾನೆ ಬಿಡಸೂ ||೩೦||

ಹುಳಮುಟ್ಟಿದ ಮದ್ದಾ ಹೇಳ್ತೇನೆ’ ಅಂದೇ
ಕಣ್ಣಾನೆ ಬಿಡ್ಸಲೆಲ್ಲ ಕಯ್ಯಾನು ಬಿಡ್ಸಲೆಲ್ಲ
ಹುಳ ಮುಟ್ಟಿದ ಮದ್ದಾ ಹೆಳ್ಳೆಲ್ಲ ತಾಯೇ
ಅಣ್ಣಾನ ಜೀವಾ ಅಲ್ಲೇ ಹೋಯಿತೂ ||೩೧||

ಹತ್ತ ವರುಶೀನಾ ಬುದ್ವಂತ ಯೆತ್ತೂ
ಮನಿಗೇ ನಾಧದಾರೇ ಕರಹಂಡಿ ಬಂತೂ”
ಅಟ್ವೊಂದ ಮಾತಾ ಕೇಳಾದೆ ತಾಯೀ
“ಯೆಲ್ಲೀನನ ಮಗನಾ ನೋಡಬೇಕಂದ್‌” ಹೇಳೀ ||೩೨||

ತಾಯೀ ಹೊಡಕೇಯಾ ನೋಡ್ವಾಂಗೇ ಯೆಲ್ಲ
ತಾಯೀ ಹೊಡಕೇಯಾ ನೋಡೂ ಹೊತ್ತೀಗೇ
ಹತ್ತೂ ವರಶೀನಾ ಬುದ್ವಂತ ಯೆತ್ತೂ
ಅಡವೀಗಾದಾರೇ ವೋಡಾದೆ ಯೇಗೇ ||೩೩||

ಮಗನ ಜೀವವಾ ಪಡಿದಾದೆ ಯೆತ್ತೂ
ಯೆತ್ತೀನ ಮೇಲಿನ್ನೇ ಕೂತಾನೇ ಯೇಗೇ
ಮನಿಗೇ ನಾದಾರೇ ಬಂದಾನೆ ಮಗನೇ
ಮನಿಗೇ ನಾದಾರೇ ಬಂದಾನೆ ಯೇಗೇ ||೩೪||

“ಕೇಳಲ್‌ ಕೇಳಲ್ಲೇ ತಾಯಮ್ಮ ನೀನೂ
ನಿನ್ನಾಲು ಮಗನೇ ಬಂದಾನೆ ಯೇಗೆ”
ಅಟ್ಟೊಂದ ಮಾತಾ ಕೇಳಾದೆ ತಾಯೀ
ಕೂಂಬನ ಗಿಂಡ್ಯಲ್ಲೀ ನೀರಾನೆ ಕೊಟ್ಟಿತೂ ||೩೫||

“ಕೈಕಾಲ ಮೋರೀ ತೊಳ್ದಾರು ಬಾರೋ”
ಕೈಕಾಲ ಮೊಕವಾ ತೊಳ್ದಾನೆ ಮಗನೇ
ಶಣ್ಣಾ ಮೊಕದಿಂದಾ ವಳಗೇನು ಬಂದಾ
“ಕೇಳಲ್‌ ಕೇಳಲ್ಲೋ ನನ್ನಾಲು ಮಗನೇ ||೩೬||

ತಂಗೀ ಕರ್‍ವಲ್ಲಿ ಹೋಗೀದೆ ಮಗನೇ
ವಬ್ಬನಾದಾರೇ ಬಂದ್ಯಲ್ಲೋ ಮಗನೇ
ತಂಗೀ ನಾದಾರೇ ಕರ್‍ಕಂಡಿ ಬರಲಿಲ್ಲ
ತಂಗೀಯ ಸುದ್ದೀ ಯೇನಾಯ್ತೋ ಮಗನೇ? ||೩೭||

ಕೇಳಲ್‌ ಕೇಳಲ್ಲೋ ನನ್ನಾಲು ಮಗನೇ,
ವಂದಾಲು ಮಗನೇ ವಂದಾಲು ಮಗಳೂ
ಇಂತಂಬು ಮೋಸಾ ಯಾಕಂತು ಮಾಡದೇ?
ತಂಗೀ ಮೋರೀಯಾ ಹ್ಯಂಗೇ ನೋಡಿದೇ? ||೩೮||

ಬಾವನ್‌ ಕೈಲಿ ಯೇನಾ ನುಡಿಬೇಕು ನಾವು”
ಅಟ್ಟೊಂದ ಮಾತಾ ಹೇಳದೆ ತಾಯೀ
‘ನಿನ್ನಾ ಸಂಗಾದೇ ಕಳಗೂದೆ ಯಲ್ಲಾ’
ಅಳಿಯ ಗಾದಾರೇ ಕರ್‌ಯಾನ ಕೊಟ್‌ತೂ ||೩೯||

ಅಳ್ಯಾನಾದಾರೇ ಬಂದಾನೆ ಲೇಗೇ
“ಕೇಳಲ್‌ ಕೇಳಲ್ಲೇ ನಮ್ಮಲು ಅತ್ತೇ
ನಾಕೂ ದಿವ್ಸಾಕೇ ಕಳ್ಸಬೇಕು ಅಂದೇ
ನಾಕೂ ದಿವ್ಸಾಕೇ ಕಳ್ಸಲೆಲ್ಲ ಅತ್ತೇ ||೪೦||

ಬಾವಾನಾದಾರೇ ಯಲ್ಲೀಗೆ ಹೋದಾ?”
“ಕೇಳಲ್‌ ಕೇಳಲ್ಲೋ ನಮ್ಮಲು ಅಳಿಯಾ,
ಬಾವಾನಾದಾರೇ ಯೆತ್ಲಾಗೆ ಹೋದನೋ
ನಿನ್ನಾಲು ಹೆಂಡತೀ ಕರ್‍ಕಂಡಿ ಹೋಗೂ” ||೪೧||

ಅಟ್ಟೊಂದ ಮಾತಾ ಕೇಳಾನೆ ಅಳಿಯಾ
“ವೋಟಾ ಕಾದಾರೇ ನಾನಿಲ್ಲೂದೆಲ್ಲಾ”
ಅಟ್ಟೊಂದ ಮಾತಾ ಕೇಳಾದೆ ಮಗಳೂ
“ಕೇಳಲ್‌ ಕೇಳಲ್ಲೇ ನನ್ನಾಲು ತಾಯೇ ||೪೨||

ಇಂದೀಗೆ ರುಣವೇ ತೀರೀತು ನನಗೇ ತಾಯೇ
ನಾಹೋಗೆ ನನ್ನಾ ಅರಮನೆಗೆ ತಾಯೇ
ಇನ್ನೇನಿನ್‌ ಮಗನಾ ಕಳ್ಸಾಲು ಬೇಡಾ
ಮಗನಾ ಕೋಡಿನ್ನೇ ಸುಕದಲ್ಲಿ ಉಳಿಯೇ” ||೪೩||

ಅಟ್ಟೊಂದ ಮಾತಾ ಹೇಳಾದೆ ಮಗಳೂ
ಗಂಡಾನ ಬಿನ್ನಾ ಹಿಡದಾದೆ ಅವಳೂ
“ಕೇಳಲ್‌ ಕೇಳಲ್ಲೇ ನನ್ನಾಲು ಮಡದೀ
ನಿಮ್ಮಣನ ಸುದ್ದೀ ಯೇನಾಯ್ತೇ ಮಡದೀ? ||೪೪||

ನಾಕೂದಿವಸಾಕೇ ಬರ್‍ವಳು ನೀನೂ
ಯೆಂಟೂ ದಿವ್ಸಾವೇ ಕಳ್ದೀತು ನಿನಗೇ
ಅಪ್ಪನ ಮನಿ ಆಸೀ ಬಿಡಬೇಕೂ ನೀನೂ”
“ಕೇಳಿರಿ ಕೇಳಿರೀ ಯಲ ಸ್ವಾಮೀ ನೀವೂ ||೪೫||

ಅಣ್ಣಾ ಗಾದಾರೇ ಸೀಕೂ ಆಯೀತೂ
ಅದರಿಂದ ನನಗೇ ತಡವಾಗಿ ಹೋಯ್ತು
ತಮ್ಮ ಮನಸೀಗೇ ಬೇಸಕಿ ಬೇಡಾ” ||೪೬||
*****

ಕೆಲವು ಪದಗಳ ವಿವರಣ:
ಕಲ್ಲಾನ ಹುಳು = ಕಲ್ಲಲ್ಲಿದ್ದ ಹಾವು, ಸರ್‍ಪ
ಬೇಸಕಿ = ಬೇಜಾರು

ಹೇಳಿದವರು: ದಿ. ಗೌರಿ ಶಿವಪ್ಪನಾಯ್ಕ, ಹೆಗಡೆ ಊರು.

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...