ಇಂದು ನನ್ನ ಮನ ಮಲಿನ ವಾಯ್ತು
ಸುಳ್ಳು ಮೋಸಗಳ ಹುಟ್ಟಿಸಿತ್ತು
ಸುಖದ ಬಾಳಿನ ಗುರಿಗೆ
ಯಾವುದಕ್ಕೆ ಹೇಸದೆ ವಟಗುಡಿಸಿತು

ತೂತು ಹೊಂದಿದ ಮಡಕೆಯಲಿ
ನೀರು ತಾನೇ ನಿಲ್ಲಬಹುದೆ
ಆತ್ಮ ಸತ್ಯದ ದಾರಿಯಲ್ಲಿದಾಗ
ಸುಳ್ಳಿದ್ದರೆ ಆತ್ಮ ನಲಿಯಬಹುದೆ!

ಹೃದಯದ ಮನೆಯಲ್ಲಿ ಗುಡಿಸದೆ
ಮತ್ತೆ ಸತ್ಯದಿ ಸಾರಣಿಸದೆ
ಹಾಕಬಹುದೆ ಓಂ ರಂಗವಲ್ಲಿ
ರಾಮನ ಪ್ರತಿಷ್ಠೆ ಪೂರ್‍ಣಿಸುವುದೇ

ಬೇಕಾದಾಗಲೆಲ್ಲ ನಡೆ, ವಂಚಿಸಿ
ಮತ್ತೆ ಉತ್ತಮ ಮಾತುಗಳೇಕೆ!
ಉತ್ತಮ ಮಾತುಗಳ ಮುಂಚೆ
ಆತ್ಮ ಪರಿಶೀಲನೆ ಬಾರದೇಕೆ

ಈಗ ಸಾಕು ನಿನ್ನ ಸುಳ್ಳು ಮೋಸ
ಒಂದೊಂದು ಸುಳ್ಳು ನಿನ್ನ ಘಾತಕ
ಸತ್ಯದ ಅಹ್ವಾನವೊಂದೇ ಸಾಕು
ಮಾಣಿಕ್ಯ ವಿಠಲನದೇ ಜಾತಕ
*****