ಬುತ್ತಿ ಮ್ಯಾಲ ಬುತ್ತೀ ಬುತ್ತಿ ಒಯ್ಯು ಜಾಣಿ|
ನಮ ಗಂಗನಳ್ಳಿ ಹಾದ್ಯೊಂದ್ಯಾವ ಕಡಿಗಾದ| ಕೋಲೆಣ್ಣ ಕೋಲ ||೧||
ನಮ್ಮತ್ತಿ ಕಟ್ಟ್ಯಾಳ ಒಂದು ಅರದ ಕೊಟ್ಟಿ|
ಹಾದ್ಯಾಗ ನಾ ಎಲ್ಲಿ ಬಿಚ್ಚಿಕೊಡಲೆಪ್ಪಾ| ಕೋ ||೨||
ನಿನ್ನ ರೊಟ್ಟಿ ನಿನಗಿರಲಿ ನಿನ್ನ ಬುತ್ತಿ ನಿನಗಿರಲಿ|
ನಮ ಗಂಗನಳ್ಳಿ ಹಾದ್ಯೊಂದ್ಯಾವು ಕಡಿಗಾದ| ಕೋ ||೩||
ಏ ಗಂಡಾ ಏ ಪುರುಷಾ ಹಾದ್ಯಾಗ ನನಗೊಬ್ಬ|
ರೊಟ್ಟಿ ಬೇಡುತಿದ್ದಾ| ಕೋ ||೪||
ಏ ಭಾರ್‍ಗೆ ಏ ಮೂಳಾ ನಾಕು ಮೂಲಿ ಬೆಳಿಯಲಿ|
ಕಿಂವ್ಯಾಗ್ವಾಲಿ ಬುಗುಡಿ ಮಾಡಸೇನಂದಾ| ಕೋ ||೫||
ಏ ಅತ್ತಿ ಏ ಮಾವಾ ಹೊಲದಾಗ ನನ ಗಂಡಾ|
ಮಲಿಯಾರೆ ಮೂಗಾರೆ ಕೊಯ್ದೇನಂದಾ| ಕೋ ||೬||
ಒಳಗೀನಕ್ಕೆಂತಾ ಆದಾಳ್ಹಾದಾಽಳಂದ ನೆರಮನಿ|
ಕುಂಬಾರ್‍ಗ ನನಗ ಹಾದರಿಟ್ಟಾಽಳ| ಕೋ ||೭||
ಅವ್ರಾಣಿ ಅಪ್ರಾಣಿ ದೇವರಾಣಿ ದಿಂಡರಾಣಿ|
ತೊಗರೀಯ ಗುಗ್ಗರಿ ತಿಂದಿಲ್ಲ ಅತ್ತಿ| ಕೋ ||೮||
****
ಕಿವುಡರ ಹಾಡು
ಗೆಂಡ, ಹೆಂಡತಿ, ಅತ್ತೆ, ಎಲ್ಲರೂ ಕಿವುಡರು. ಒಬ್ಬರು ಒಂದು ಕೇಳಿದರೆ ಇನ್ನೊಬ್ಬರು ಇನ್ನೊಂದು ಹೇಳುತ್ತಾರೆ. ಮೊದಲು ಸೊಸೆಗೆ ದಾರಿಕಾರನೊಬ್ಬನು ಹಾದಿಯನ್ನು ವಿಚಾರಿಸುವನು. ಇಲ್ಲಿಂದ ಮುಂದೆ ಒಬ್ಬೊಬ್ಬರ ಅಸಂಬದ್ಧ ಪ್ರಲಾಪಕ್ಕೆ ಆರಂಭ.
ಛಂದಸ್ಸು: ತ್ರಿಪದಿಯ ಪೂರ್ವಾರ್ಧ.
ಶಬ್ಧ ಪ್ರಯೋಗಗಳು:- ಭಾರಿಗೆ ಮತ್ತು ಮೂಳ=ಬೈಗುಳುಗಳು.