ಮತ್ತೆ ಮತ್ತೆ ಬದುಕಿಗೊಡ್ಡುವ
ಜೀವನೋತ್ಸಾಹದ
ಪ್ರತೀಕವಾಗಿ ನಿಂತ.
ಮದನಿಕೆಯರ ಚಿತ್ರ.

ಕಣ್‌ ತುಂಬಿ
ಮನ ತುಂಬಿ
ಇಲ್ಲೇ ಇದೇ
ನಿಜವೆಂದು ಭ್ರಾಂತ.

ಧುಮ್ಮಿಕ್ಕಿ ಹರಿವ ಹೇಮೆ
ಒಮ್ಮೆ ಮೇರೆ ಮೀರಿ ತುಳುಕಿ
ಮೈಭಾರ ತಡೆಯದೇ ಬಳುಕಿ
ಸಡಗರದ ಪಯಣ ಗಮ್ಯದೆಡೆಗೆ.

ಮತ್ತೊಮ್ಮೆ ಸೊರಗಿ
ಮೈ ಹಿಡಿಯಾಗಿ
ಮೆಲ್ಲಗೆ ತೆವಳಿದರೂ
ಒಳಗೇ ಜೀವಂತ!

ಎಲ್ಲ ಬಯಲೆಂದು
ಎತ್ತರಕ್ಕೇರಿ ನಿಂತ ತಾನೇ ಬಯಲಾದ
ವೈರಾಗ್ಯ ಮೂರ್ತಿ.

ಎತ್ತರಕ್ಕೇರಿದಷ್ಟೇ
ಆಳಗಳಿಗೂ ಇಳಿದಾಗಷ್ಟೇ
ಸಿಕ್ಕೀತು ಅರಿವು
ದಕ್ಕೀತು ಅಳಿಸಲಾಗದ ಕೀರ್ತಿ!

ಕಲ್ಲು ಹೂವಾಗಿ ಅರಳಿ ನಗುವ
ಈ ಮಣ್ಣೊಳಗೆ
ಹೆಜ್ಜೆ ಹೆಜ್ಜೆಗೂ ಕಲೆ ಅರಳಿದೆ
ತನು – ಮನ ಬೆಳೆದಿದೆ

ಮತ್ತೆ ಮತ್ತೆ ಸೋತ
ಬದುಕನರಳಿಸುವ
ಈ ಮಣ್ಣ ಬಗೆಗೆ
ಕಲೆಯ ಬಲೆಗೆ
ಮನ ತುಂಬಿ ತಲೆಬಾಗಿದೆ!
*****