ಕುಂಟ ಬಸವನ ಪ್ರೇಮ ಪುರಾಣ

ಕುಂಟ ಬಸವನ ಪ್ರೇಮ ಪುರಾಣ

ಚಿತ್ರ: ಬ್ರಿಗಿಟ್ ವೆರ್ನರ್‍
ಚಿತ್ರ: ಬ್ರಿಗಿಟ್ ವೆರ್ನರ್‍

ಕೊಡಗಿನ ಕೊನೆಯ ದೊರೆ ಚಿಕ್ಕವೀರನ ದಿವಾನ ಕುಂಟ ಬಸವನದು ವಿಶಿಷ್ಟ ವ್ಯಕ್ತಿತ್ತ್ವ. ಅವನಿಗೆ ತನ್ನ ಹಿನ್ನೆಲೆ ಗೊತ್ತಿರಲಿಲ್ಲ. ಅರಮನೆಯ ಚಾಕರಿ ಮಾಡಿಕೊಂಡಿದ್ದ ಅವನನ್ನು ಚಿಕ್ಕವೀರ ದಿವಾನಗಿರಿಗೆ ಏರಿಸಿ ಜಾತೀಯ ಮೇಲರಿಮೆಯಿಂದ ಬೀಗುತ್ತಿದ್ದ ಇತರ ದಿವಾನರುಗಳ ಅಹಮ್ಮಮಿಗೆ ಬಲವಾದ ಏಟು ನೀಡಿದ್ದ. ತನ್ನ ಏಳಿಗೆಗೆ ಕಾರಣ ನಾದ ಚಿಕ್ಕವೀರ ರಾಜನಿಗಾಗಿ ಕುಂಟ ಬಸವ ಯಾವ ತ್ಯಾಗಕ್ಕೂ ಸಿದ್ಧನಾಗಿದ್ದ.

ಎಡಕಾಲು ಬಲಕಾಲಗಿಂತ ಸ್ವಲ್ಪ ಗಿಡ್ಡ ಎನ್ನವುದನ್ನು ಬಿಟ್ಟರೆ ಅವನಲ್ಲಿ ಬೇರಾವ ಊನವೂ ಇರಲಿಲ್ಲ. ಅವನು ಎತ್ತರವಾಗಿ ಸದೃಢನಾಗಿದ್ದ. ಚಂಚಲೆಯರನ್ನು ಸೆಳೆಯಬಲ್ಲ ರೂಪೂ ಅವನಿಗಿತ್ತು. ಚಿಕ್ಕವೀರರಾಜ ಕುಂಟ ಬಸವನಿಗಿಂತ ಪ್ರಾಯದಲ್ಲಿ ಹತ್ತು ವರ್ಷ ಚಿಕ್ಕವನು. ಪಟ್ಟವೇರಿದ ಆರಂಭದಲ್ಲಿ ಚಿಕ್ಕವೀರರಾಜನಿಗೆ ಚೆಲುವಿನ ತರುಣಿಯರತ್ತ ಒಂದು ದೌರ್ಬಲ್ಯವಿತ್ತು. ಚಿಕ್ಕವೀರ ರಾಜ ಇಷ್ಟಪಟ್ಟ ಯಾವಳೇ ತರುಣಿಯನ್ನೇ ಅಂದೇ ಅರಮನೆಗೆ ಅನುನಯದಿಂದಲೋ, ಭಯೋತ್ಪಾದನೆಯಿಂದಲೋ ಕುಂಟ ಬಸವ ತಂದು ಬಿಡುತ್ತಿದ್ದ. ರಾಜನ ಹೆಸರಲ್ಲಿ ತಾನೂ ಸಾಕಷ್ಟು ಸುಖ ಉಂಡು ಬಿಡುತ್ತಿದ್ದ. ರಾಜನ ಎಳೆಯ ಶರೀರ ಅವಿಶ್ರಾಂತ ಮೈಥುನದಿಂದ ಎಲುಬಿನ ಹಂದರವಾಗತೊಡಗಿದಾಗ ವೈದ್ಯರು ಕಟ್ಟು ನಿಟ್ಟಿನ ಪಲ್ಲಂಗ ಪಥ್ಯವನ್ನು ಅನುಸರಿಸಲೇಬೇಕೆಂದು ಎಚ್ಚರಿಸಿದರು. ಅಲ್ಲಿಗೆ ಅದೊಂದು ವ್ಯಸನ ನಿಂತು ಹೋಯಿತು. ಆದರೆ ಆವರೆಗೆ ಮಾಡಿದ ಅನಾಹುತವನ್ನು ಸಂತ್ರಸ್ತರ ಕುಟುಂಬ ಮರೆಯಲು ಸಿದ್ಧವಿರಲಿಲ್ಲ. ಅದರೊಂದಿಗೆ ಕುಂಟ ಬಸವ ಮಾಡಿಸಿದ ವಿವೇಚನಾ ರಹಿತ ಕೊಲೆಗಳು ಕೊಡಗನ್ನು ವಶಪಡಿಸಿಕೊಳ್ಳಲು ಇಂಗ್ಲೀಷರಿಗೆ ಸಂದರ್ಭ ಮತ್ತು ನೆಪ ಒದಗಿಸಿಕೊಟ್ಟವು. ಆದರೆ ತಾನು ಮಾಡುವುದೆಲ್ಲವೂ ರಾಜನ ಒಳಿತಿಗಾಗಿ ಎಂದು ಕುಂಟ ಬಸವ ದೃಢವಾಗಿ ನಂಬಿದ್ದ.
ಒಂದು ಬಾರಿ ಕುಂಟ ಬಸವ ತುಳುನಾಡಿನ ನೇತ್ರಾವತಿ ನದಿ ದಡದ ನಂದಾವರ ದೇವಾಲಯಕ್ಕೆ ತನ್ನ ಪುಟ್ಟ ದಂಡಿನೊಡನೆ ದೇವರ ದರ್ಶನಕ್ಕೆಂದು ಹೋಗಿದ್ದ. ರಾತ್ರಿಯಾದುದರಿಂದ ಅವನು ದಂಡಿನೊಡನೆ ಅಲ್ಲೇ ತಂಗಬೇಕಾಯಿತು. ಕೊಡಗಿನ ರಾಜನ ದಿವಾನನೆಂದು ದೇವಾಲಯದ ಮೊಕ್ತೇಸರ ಕುಂಟ ಬಸವನನ್ನು ಬಹಳ ಗೌರವದಿಂದ ಕಂಡ. ದೊಡ್ಡ ವೀರ ರಾಜನ ಕಾಲದಲ್ಲಿ ಕೊಡಗು ನಂದಾವರದವರೆಗೂ ವಿಸ್ತರಿಸಿದ್ದನ್ನು ಅವನು ಹೆಮ್ಮೆಯಿಂದ ನೆನಪಿಸಿಕೊಂಡ.

ಬೆಳಿಗ್ಗೆ ಎಲ್ಲರಿಗಿಂತ ಬೇಗ ಎದ್ದ ಕುಂಟ ಬಸವ ಮಾವಿನ ಎಲೆಯೊಂದನ್ನು ಕೊಯಿದು ಮಧ್ಯದ ನಾರನ್ನು ತೆಗೆದು ಕಿವಿಗಿರಿಸಿಕೊಂಡು, ಎಲೆಯನ್ನು ಸುರುಳಿ ಸುತ್ತಿ, ಅದರಿಂದ ಹಲ್ಲುಜ್ಜುತ್ತಾ ನಿತ್ಯಾಹ್ನಿಕಕ್ಕಾಗಿ ನೇತ್ರಾವತಿ ನದಿಯತ್ತ ಬಂದ. ನದಿಯಲ್ಲಿ ಯಾರೋ ಈಜುತ್ತಿರುವುದನ್ನು ಅವನು ದೂರದಿಂದಲೇ ಗಮನಿಸಿದ. ದಡದಲ್ಲೊಂದು ಮರವಿತ್ತು. ಅದರ ಮರೆಯಲ್ಲಿ ನಿಂತು ಯಾರಿರಬಹುದು ಎಂದು ಕದ್ದು ನೋಡತೊಡಗಿದ.
ಈಜುತ್ತಿದ್ದ ವ್ಯಕ್ತಿ ದಡಕ್ಕೆ ಬಂದಿತು. ಕುಂಟ ಬಸವ ಕಣ್ಣು ಬಾಯಿ ಬಿಟ್ಟ. ಅವಳು ಒಬ್ಬಳು ಹದಿಹರೆಯದ ಚೆಲುವೆ. ಸ್ವರ್ಣ ಪುತ್ಥಳಿಯಂತಹ ಅವಳ ದೇಹವನ್ನು ನೆಪ ಮಾತ್ರಕ್ಕೆ ಒಂದು ದಾವಣಿ ಮರೆಮಾಚಿತ್ತು. ಆ ದಾವಣಿ ಒದ್ದೆಯಾಗಿ ಅವಳ ದೇಹವನ್ನು ಪಾರದರ್ಶಕವನ್ನಾಗಿಸಿತ್ತು. ಅವಳು ಎರಡೂ ದಡಗಳತ್ತ ಕಣ್ಣು ಹಾಯಿಸಿ ಯಾರೂ ಇಲ್ಲವೆನ್ನುವುದನ್ನು ಖಚಿತಪಡಿಸಿಕೊಂಡು ನಿರ್ಭೀತಿಯಿಂದ ತನ್ನ ಅಂಗಾಂಗಗಳನ್ನು ಅಂಟುವಾಳದ ಕಾಯಿಯ ನೊರೆಯಿಂದ ತಿಕ್ಕಿ ತೊಳೆದಳು. ಒದ್ದೆಯಾಗಿದ್ದ ತುಂಡು ಬಟ್ಟೆ ಎತ್ತಿ ತೋರಿಸುತ್ತಿದ್ದ ಅವಳ ದೇಹಸಿರಿಗೆ ಮರುಳಾದ ಕುಂಟ ಬಸವ ಬೆಳ್ಳಂಬೆಳಗ್ಗೆ ಎಂಥಾ ದೃಶ್ಯವೆಂದು ಬಾಯಿ ಚಪ್ಪರಿಸಿಕೊಂಡ. ಅವನು ಕದ್ದು ನೋಡುತ್ತಿದ್ದಂತೆ ಅವಳು ನದಿಗೆ ಹಾರಿದಳು. ಸ್ವರ್ಣ ಪುತ್ಥಳಿಯ ಮೃದುಮಧುರ ಸ್ಪರ್ಶದಿಂದ ನದಿಯ ನಿರ್ಮಲ ಸಲಿಲ ಪುಳಕಗೊಳ್ಳುವಂತೆ ಈಜಿದಳು. ನೀರಲ್ಲಿ ಮುಳುಗಿ ಒಂದಷ್ಟು ದೂರ ಸಾಗಿ, ಶ್ವಾಸ ಕಟ್ಟುತ್ತಿದೆ ಎಂದಾದಾಗ ಮೀನಿನಂತೆ ಮೇಲಕ್ಕೆ ಚಿಮ್ಮಿದಳು. ಅಂಗಾತವಾಗಿ ಕೈಗಳಿಂದ ನೀರನ್ನು ಹಿಂದಕ್ಕೆ ತಳ್ಳುತ್ತಾ ಬಾಯಿಯಿಂದ ಕಾರಂಜಿಯಂತೆ ಚಿಮ್ಮಮಿಸುತ್ತಾ ಮನದಣಿಯೆ ಈಜಿದಳು.

ಇನ್ನು ಸಾಕೆಂದು ಅವಳ ಕೈಗಳು ಹೇಳಿದಾಗ ದಡಕ್ಕೆ ಬಂದಳು. ಮತ್ತೊಮ್ಮೆ ಸುತ್ತಲೂ ದೃಷ್ಟಿ ಹಾಯಿಸಿ ಯಾರೂ ಇಲ್ಲವೆಂಬುದನ್ನು ಖಚಿತಪಡಿಸಿಕೊಂಡು ದೇಹಕ್ಕೆ ನೆಪಮಾತ್ರಕ್ಕೆ ಅಂಟಿಕೊಂಡಿದ್ದ ತುಂಡು ಬಟ್ಟೆಯನ್ನು ಬಿಚ್ಚಿ ಒಗೆದು ಹಿಂಡತೊಡಗಿದಳು.

ಕುಂಟ ಬಸವ ಅಂತಹ ಅದ್ಧಿತ ಲಾವಣ್ಯವತಿಯನ್ನು ತನ್ನ ಜೀವಮಾನದಲ್ಲಿ ಎಂದೂ ಕಂಡಿರಲಿಲ್ಲ. ತೀರಾ ಎಳೆ ಪ್ರಾಯ. ಹೆಚ್ಚೆಂದರೆ ಹದಿನೆಂಟು. ಅವಳ ಸುಂದರ ಸಮೃದ್ಧ ವಕ್ಷಸ್ಥಳ, ಕಾಮನೆಗಳನ್ನು ಬಡಿದೆಬ್ಬಿಸುವ ಅದ್ಧಿತವಾದ ಜಪನ, ಎರಡು ರಂಬೋರುಗಳ ಮಧ್ಯ ಪ್ರದೇಶ ಆಹಾ! ಸ್ವರ್ಣ ಪುತ್ಥಳಿಗೆ ಜೀವ ಬಂದಂತೆ. ಮೈಥುನವು ಆರಾಧನೆಯಾಗ ಬೇಕಾದರೆ ಇಂತಹ ಹೆಣ್ಣು ಸಿಗಬೇಕು ಎಂದು ಅವನು ಅಂದುಕೊಂಡ. ಅವಳ ರೂಪವನ್ನು ಬಿಟ್ಟು ಕಣ್ಣುಗಳಲ್ಲಿ ತುಂಬಿಸಿಕೊಳ್ಳುತ್ತಾ ಮೈಮರೆತು ಮಿಂಚು ಹೊಡೆಯಿಸಿಕೊಂಡವನಂತೆ ನಿಂತುಬಿಟ್ಟ.

ಅವಳು ಬಟ್ಟೆ ಬದಲಾಯಿಸಿ, ಸೀರೆಯುಟ್ಟುಕೊಂಡು ಮೇಲಕ್ಕೆ ಬರುವಾಗ ಅವನು ಎದುರಾದ.

ಆ ಹೊತ್ತಲ್ಲಿ ಯಾರನ್ನೂ ನಿರೀಕ್ಷಿಸದಿದ್ದ ಅವಳು ಭಯದಿಂದ ಬಿಳಿಚಿಕೊಂಡಳು.

ಹೆದರಬೇಡ ಅರಗಿಣಿ, ಈ ಊರಲ್ಲಿ ಇಂಥದ್ದೊಂದು ಅಪರಂಜಿಯನ್ನು ಹೀಗೆ ಕಂಡೇನು ಎಂದು ಕನಸಲ್ಲೂ ನಾನು ಊಹಿಸಿದವನಲ್ಲ. ಒಂದು ಕ್ಷಣ ನಿನ್ನ ಸಹಜವಾದ ಸ್ವರ್ಗೀಯ ದಿವ್ಯ ಸೌಂದರ್ಯವನ್ನು ನೋಡಿ ಜನ್ಮ ಸಾರ್ಥಕ ಮಾಡಿಕೊಂಡೆ. ಈ ಅದ್ಧಿತ ಪ್ರಕೃತಿಗೆ ಪುರುಷ ಸಂಪೂರ್ಣವಾಗಿ ಸೋತು ಹೋಗಿದ್ದಾನೆ. ನೀನು ನನಗೆ ಈ ಜೀವನದ ಕೊನೆಯ ಕ್ಷಣದವರೆಗೂ ಬೇಕು. ನಾನು ನಿನ್ನನ್ನು ಮೆಚ್ಚಿದ್ದೇನೆ, ಪ್ರೀತಿಸುತ್ತೇನೆ, ಗೌರವಿಸುತ್ತೇನೆ. ಅದ್ಧಿತ ಸೌಂದರ್ಯ ದೇವತೆಯಾದ ನಿನ್ನನ್ನು ಕೈಹಿಡಿದು ಬಾಳಿಗೊಂದು ಉಲ್ಲಾಸವನ್ನು ಕೊಡು. ಜೀವನವನ್ನು ಸಾರ್ಥಕಗೊಳಿಸು. ನಿನ್ನನ್ನು ಮಹಾರಾಣಿಯ ಹಾಗೆ ನೋಡಿಕೊಳ್ಳುತ್ತೇನೆ.

ಅವನು ಒಂದೇ ಉಸಿರಿಗೆ ಹಾಗೆ ಹೇಳುವಾಗ ಅವಳಿಗೆ ಆಶ್ಚರ್ಯವಾಯಿತು. ಈ ದೃಢದೇಹಿ ಗಂಡು ತನ್ನನ್ನು ಪೂರ್ಣ ನಗ್ನಾವಸ್ಥೆಯಲ್ಲಿ ನೋಡಿದ್ದಾನೆ ಎನ್ನುವುದು ಗೊತ್ತಾಗಿ ಅವಳು ಮುದುಡಿ ಹೋದಳು. ಇಷ್ಟೆಲ್ಲಾ ಬಡಬಡಿಸಿದವನು ಏಕಾಂಗಿನಿಯಾದ ತನ್ನನ್ನು ಬಲಾತ್ಕರಿಸುತ್ತಿಲ್ಲ. ಇವನು ಕೆಟ್ಟವನಾಗಿದ್ದರೆ ಆಗ ಸಂಪೂರ್ಣ ನಗ್ನ ಸ್ಥತಿಯಲ್ಲಿರುವಾಗ ಏನನ್ನು ಬೇಕಾದರೂ ಮಾಡಬಹುದಿತ್ತು. ಈಗಲೂ ಅವನು ಮೈ ಮುಟ್ಟುತ್ತಿಲ್ಲ ಎನ್ನುವುದು ಅವಳಲ್ಲಿ ಧೈರ್ಯವನ್ನು ಮೂಡಿಸಿತು.

ಆದರೂ ಅವಳು ದುರುಗುಟ್ಟಿಕೊಂಡು ಅವನನ್ನು ನೋಡಿದಳು.

ಜಳಕ ಮಾಡುವ ಹೆಣ್ಣನ್ನು ಹಾಗೆ ನೋಡುವುದು ಸಂಸ್ಕಾರವಂತರ ಲಕ್ಷಣವಲ್ಲ. ನಾನು ಮದುವೆಯಾದ ಹೆಣ್ಣು. ನಂದಾವರ ದೇಗುಲದ ಅರ್ಚಕರ ಮಗ ಪಾಣೆ ಸೂರ್ಯನ ಹೆಂಡತಿ ನಾನು. ಪರರ ಪತ್ನಿಯೊಡನೆ ಪ್ರೇಮ ಯಾಚನೆ ಮಾಡಲು ನಿಮಗೆ ನಾಚಿಕೆಯಾಗ ಬೇಕು. ಅಸಭ್ಯ ನಡವಳಿಕೆಯ ನಿಮ್ಮಂತಹ ಸಂಸ್ಕಾರ ಹೀನರ ಪರಿಚಯ ಮಾಡಿಕೊಳ್ಳಬೇಕಾದ ಯಾವ ಅಗತ್ಯವೂ ನನಗಿಲ್ಲ. ದಾರಿಬಿಡಿ.

ತುಂಬಿ ತುಳುಕುವ ಅವಳ ಯವ್ವನದ ಸುಗಂಧಭರಿತ ಮಾದಕ ಸೌಂದರ್ಯದಿಂದ ಕುಂಟ ಬಸವ ಕಣ್ಣು ಕೀಳದಾದ. ಯಾಚನೆಯ ದನಿಯಲ್ಲಿ ತನ್ನ ಪರಿಚಯ ಹೇಳಿಕೊಂಡ.

ನಾನು ಕೊಡಗಿನ ದಿವಾನ ಬಸವಯ್ಯ. ಚಿಕ್ಕವೀರ ದೊರೆಗಳ ಬಳಿಕ ರಾಜ್ಯದಲ್ಲಿ ಅತಿ ಹೆಚ್ಚು ಅಧಿಕಾರ ಹೊಂದಿರುವವನು. ಇದು ನಮ್ಮ ಅಧಿಕಾರ ವ್ಯಾಪ್ತಿಗೆ ಒಳಪಟ್ಟ ಪ್ರದೇಶ. ನೆನಪಿರಲಿ. ನಾನು ಮನಸ್ಸು ಮಾಡಿದರೆ ಏನನ್ನೂ ಮಾಡಬಲ್ಲೆ. ಆದರೆ ನಿನ್ನ ದಿವ್ಯ ಸೌಂದರ್ಯದೆದುರು ಏನನ್ನೂ ಮಾಡಲಾರದವನಾಗಿದ್ದೇನೆ. ನನ್ನನ್ನು ಧಿಕ್ಕರಿಸಬೇಡ.

ನಾನು ನಿಮ್ಮ ಪರಿಚಯವನ್ನು ಕೇಳಲಿಲ್ಲ. ನನಗದರ ಅಗತ್ಯವೂ ಇಲ್ಲ. ದಿವಾನರಾದವರು ಹೀಗೆ ಕಂಡ ಹೆಣ್ಣುಗಳಿಗೆಲ್ಲಾ ಮನಸೋತರೆ ರಾಜ್ಯ ಉದ್ಧಾರವಾದ ಹಾಗೇನೇ ನಾನು ಹೋಗಬೇಕು. ತಡೆಯಬೇಡಿ.

ಕುಂಟ ಬಸವನ ಸ್ವರದಲ್ಲಿ ಎಂದೂ ಇಲ್ಲದ ಸೌಮ್ಯಭಾವ.

ಈ ಹಾಳೂರಲ್ಲಿ ತಿಂಗಳಿಗೆ ಮೂರು ವರಹ ಗಳಿಸುವ ಅರ್ಚಕನ ಸೊಸೆಯಾಗಿ ನೀನು ಪಡುವ ಸುಖ ಅಷ್ಟರಲ್ಲೇ ಇದೆ. ನೀನು ಮಹಾರಾಣಿಯಾಗಿ ಮೆರೆಯಬೇಕಾದವಳು ನೀನು. ಕೊನೆಯ ಪಕ್ಷ ರಾಜ್ಯವೊಂದರ ದಿವಾನನ ಮಡದಿಯಾದರೂ ಆಗು. ನನ್ನೊಡನೆ ಬಂದು ಬಿಡು. ಮಡಿಕೇರಿಯಲ್ಲಿ ನಿನ್ನನ್ನು ಹೊನ್ನ ಹಾಸಿಗೆಯಲ್ಲಿ ಪವಡಿಸುವಂತೆ ಮಾಡುತ್ತೇನೆ. ಸುಖದ ಸುಪ್ಪತ್ತಿಗೆಯಲ್ಲಿ ಹೊಸ ಪ್ರಪಂಚವನ್ನು ತೋರಿಸುತ್ತೇನೆ. ವಿಶಾಲ ಕೊಡಗಿನ ಅತಿ ಬಲಿಷ್ಠ ದಿವಾನನ ಹೃದಯ ಸಿಂಹಾಸನದ ಸಾಮ್ರಾಜ್ಞಿಯಾಗಿ ಅಷ್ಟೈಶ್ವರ್ಯದಿಂದ ಮೆರೆದಾಡುವ ಯೋಗ ನಿನ್ನನ್ನು ಅರಸಿಕೊಂಡು ಬಂದಿದೆ. ಭವಿಷ್ಯವೇ ಇಲ್ಲದ ಈ ಊರಲ್ಲಿ ನಿನ್ನ ಯವ್ವನ ಮತ್ತು ಆಯುಷ್ಯವನ್ನು ಹಾಳುಮಾಡಿಕೊಳ್ಳಬೇಡ.

ಅವಳು ಚಡಪಡಿಸತೊಡಗಿದಳು.
ನೀವಾಡುವ ಮಾತುಗಳು ದಿವಾನರ ಬಾಯಿಯಿಂದ ಬರುವಂತದ್ದಲ್ಲ. ಅನ್ಯರ ಹೆಂಡತಿಯರನ್ನು ತಾಯಿಯಂತೆ ಕಾಣಬೇಕು. ಅದು ಸುಸಂಸ್ಕೃತರ ಲಕ್ಷಣ. ನೀವು ನನ್ನನ್ನು ಹೀಗೆ ಅಡ್ಡಗಟ್ಟಬಾರದು. ನೀವೀಗ ಹಾದಿ ಬಿಡದಿದ್ದರೆ ಒಂದೋ ನಾನು ನದಿಗೆ ಹಾರಿ ಪ್ರಾಣ ಕಳಕೊಳ್ಳಬೇಕಾಗುತ್ತದೆ. ಇಲ್ಲಾ, ಗಟ್ಟಿಯಾಗಿ ಬೊಬ್ಬಿಟ್ಟು ನಿಮ್ಮ ಮಾನ ಮರ್ಯಾದೆ ತೆಗೆಯಬೇಕಾಗುತ್ತದೆ. ಎರಡೂ ನಿಮಗಿಷ್ಟವಿರಲಾರದೆಂದು ಭಾವಿಸುತ್ತೇನೆ.
ಕುಂಟ ಬಸವ ಪಕ್ಕಕ್ಕೆ ಸರಿದು ನಿಂತ. ಅವಳು ದೇವಸ್ಥಾನದಿಂದ ನೂರು ಗಜ ದೂರದಲ್ಲಿರುವ ಒಂಟಿ ಮನೆಯನ್ನು ಹೊಕ್ಕಳು. ಕುಂಟ ಬಸವ ಮನದಲ್ಲೇ ಲೆಕ್ಕ ಹಾಕಿಕೊಂಡ.

ರಾತ್ರಿ ಅವಳ ಮನೆಗೆ ತನ್ನ ದಂಡಿನೊಡನೆ ನುಗ್ಗಿದ. ಅವಳ ಬಾಯಿಗೆ ಬಟ್ಟೆ ತುರುಕಿ ಅವಳನ್ನು ಅನಾಮತ್ತಾಗಿ ಎತ್ತಿಕೊಂಡ. ಮನೆಯಲ್ಲಿದ್ದ ಅವಳ ಮುದಿ ಅತ್ತೆ ತಡೆಯ ಬಂದಾಗ ಅವಳ ಕಪಾಳಕ್ಕೆ ಬಿಗಿದ ಏಟಿನಿಂದ ಹದಿನಾಲ್ಕು ಲೋಕ ಏಕಕಾಲದಲ್ಲಿ ಕಂಡಂತಾಗಿ ಅವಳು ತುಳುವ ಹಲಸಿನ ಹಣ್ಣಿನ ಹಾಗೆ ಪಚಕ್ಕನೆ ಬಿದ್ದುಬಿಟ್ಟಳು. ಮತ್ತೆ ಅಲ್ಲಿ ಅಡ್ಡಿಪಡಿಸುವವರು ಬೇರಾರೂ ಇರಲಿಲ್ಲ.

ಕೆಲವು ದಿನಗಳು ಉರುಳಿದವು. ಕುಂಟ ಬಸವ ಎಂದಿನಂತೆ ಆಸ್ಥಾನಕ್ಕೆ ಬಂದು ಹೋಗುತ್ತಿದ್ದ. ನಂದಾವರದಿಂದ ಅವನು ಒಬ್ಬಾಕೆಯನ್ನು ಬಲಾತ್ಕಾರದಿಂದ ಕರೆತಂದಿದ್ದಾನೆ ಎಂಬ ಸುದ್ದಿ ಮಡಿಕೇರಿಯಲ್ಲಿ ಹರಡಿತು. ಅದು ಚಿಕ್ಕವೀರ ರಾಜನ ಕಿವಿಗೆ ಬೀಳಲಿಲ್ಲ. ಕುಂಟ ಬಸವ ಚಿಕ್ಕವೀರನ ಅತ್ಯಂತ ನಂಬಿಕಸ್ತ ಬಂಟನಾದುದರಿಂದ ಅದನ್ನು ಮಹಾರಾಜನಲ್ಲಿ ಹೇಳುವ ಧೈರ್ಯ ಯಾರಿಗೂ ಇರಲಿಲ್ಲ. ಇನ್ನು ಕೆಲವರು ತೊಂದರೆಗೊಳಗಾದವರೇ ದೂರು ಸಲ್ಲಿಸದಿರುವಾಗ ಇಲ್ಲದ ಉಸಾಬರಿ ತಮಗೇಕೆ ಎಂದು ಸುಮ್ಮನಿದ್ದು ಬಿಟ್ಟರು.

ಒಂದು ದಿನ ದಿವಾನ ಲಕ್ಷ್ಮೀನಾರಾಯಣ ಮಹಾರಾಜನನ್ನು ಕಾಣಬಂದ. ಆತ ಗಹನವಾದ ರಾಜಕೀಯ ವಿಷಯಗಳಿಲ್ಲದಿದ್ದರೆ ಏಕಾಂತದಲ್ಲಿ ಬಂದು ರಾಜನ ಸಮಯ ಹಾಳು ಮಾಡುತ್ತಿರಲಿಲ್ಲ. ಅವನು ಬಂದಾಗಲೆಲ್ಲಾ ಮಹಾರಾಜ ಗೌರವದಿಂದ ಅವನನ್ನು ಮಾತಾಡಿಸುತ್ತಿದ್ದ.
ಏನು ದಿವಾನರು ಏಕಾಂತದಲ್ಲಿ ರಾಜದರ್ಶನಕ್ಕೆ ಬಂದಿರಿ, ಏನೋ ಗಹನವಾದ ವಿಷಯ ನಿಮ್ಮನ್ನು ಕಳವಳಕ್ಕೀಡು ಮಾಡಿದಂತಿದೆ.
ದಿವಾನ ಲಕ್ಷ್ಮೀನಾರಾಯಣ ರಾಜನಿಗೆ ತಲೆಬಾಗಿ ವಂದಿಸಿದ.

ಹೌದು ಮಹಾಪ್ರಭೂ. ಒಂದು ದೊಡ್ಡ ಅನಾಹುತ ಸಂಭವಿಸಿದೆ. ತಾವು ಅದನ್ನು ತಕ್ಷಣ ಸರಿಪಡಿಸಬೇಕು.
ಚಿಕ್ಕವೀರ ರಾಜನ ಹುಬ್ಬುಗಳು ಮೇಲೇರಿದವು.

ಕೆಲವು ದಿನಗಳ ಹಿಂದೆ ದಿವಾನ ಕುಂಟ ಬಸವಯ್ಯನವರು ಕಂದಾಯ ಸಂಗ್ರಹಕ್ಕೆ ತುಳುನಾಡಿಗೆ ಹೋಗಿದ್ದರು. ಹಾಗೆ ಬಂಟವಾಳ ಸಮೀಪದ ನಂದಾವರ ದೇವಾಲಯಕ್ಕೆ ದೇವರ ದರ್ಶನಕ್ಕೆಂದು ಹೋದವರು ಅಲ್ಲಿಂದ ವಿವಾಹಿತ ಹೆಣ್ಣೊಬ್ಬಳನ್ನು ಅಪಹರಿಸಿ ತಂದಿದ್ದಾರೆ. ಇದು ತಪ್ಪಲ್ವಾ ಮಹಾಪ್ರಭೂ?
ಒಂದು ಕ್ಷಣ ಚಿಕ್ಕವೀರರಾಜ ಆಲೋಚನೆಗೊಳಗಾದ. ಕೊಡಗಿನ ಸಿಂಹಾಸನವೇರುವಾಗ ಅವನಿಗೆ ಏರು ಯವ್ವನ. ಆಗ ಅವನಿಗೆ ಹೆಣ್ಣುಗಳ ಬಗ್ಗೆ ಅಸಾಧ್ಯವಾದ ಸೆಳೆತವಿತ್ತು. ಕುಂಟ ಬಸವ ರಾಜನಿಗೆಂದು ಸುಂದರಾಂಗದ ಸುಂದರಿಯರನ್ನು ಹುಡುಕಿ ತಂದು ಅರ್ಪಿಸುತ್ತಿದ್ದ. ರಾಜ ನಿರಾಕರಿಸಿದ್ದನ್ನು ತಾನು ಬಳಸಿಬಿಟ್ಟು ಬಿಡುತ್ತಿದ್ದ. ಮಿತಿಮೀರಿದ ಮೈಥುನ ದಿಂದ ರಾಜನ ದೇಹ ಹಾಳುಬಿದ್ದಾಗ ಅದರಿಂದ ದೂರವಿರದಿದ್ದರೆ ಸಾವು ಖಂಡಿತ ಎಂದು ವೈದ್ಯರು ಎಚ್ಚರಿಸಿದ್ದರು. ಚಿಕ್ಕವೀರ ರಾಜ ತನ್ನನ್ನು ತಾನು ಸಂಪೂರ್ಣವಾಗಿ ನಿಯಂತ್ರಿಸಿಕೊಂಡ. ವಿಜ್ಞಾನ ಮತ್ತು ಆಧ್ಯಾತ್ಮ ಗ್ರಂಥಗಳನ್ನು ಓದತೊಡಗಿದ. ಆಳುವವರು ಇಂದ್ರಿಯ ನಿಗ್ರಹ ಸಾಧಿಸದಿದ್ದರೆ ಪ್ರಜೆಗಳಿಂದ ಗೌರವವನ್ನು ಪಡೆಯಲು, ಕಾನೂನು ಮತ್ತು ವ್ಯವಸ್ಥೆ ಕಾಪಾಡಲು ಸಾಧ್ಯವಿಲ್ಲವೆನ್ನುವುದು ಅರ್ಥಮಾಡಿಕೊಂಡ. ಆ ಬಳಿಕ ಅನ್ಯ ಹೆಣ್ಣುಗಳನ್ನು ಅರಮನೆಗೆ ಬಲಾತ್ಕಾರದಿಂದ ತಂದಿರಲಿಲ್ಲ. ರಾಜನ ಬೋಧನೆಯಿಂದಾಗಿ ಕುಂಟಬಸವನೂ ಅಧಿಕಾರದ ದುರುಪಯೋಗ ಮಾಡಿರಲಿಲ್ಲ. ಈಗ ಇದ್ದಕಿದ್ದ ಹಾಗೆ ಹೀಗೇಕಾಯಿತು?

ರಾಜ ಕಳವಳದಿಂದ ಕೇಳಿದ.
ಯಾರು, ಎತ್ತ ಎಂದು ವಿಚಾರಿಸಿದಿರಾ ದಿವಾನರೆ?

ಹೌದು ಪ್ರಭೂ, ಅವಳ ಗಂಡನೇ ಸ್ವಯಂ ಬಂದು ನನಗೆ ದೂರು ನೀಡಿದ್ದಾನೆ. ಅವಳು ನಂದಾವರ ದೇವಾಲಯದ ಅರ್ಚಕನ ಮಗ ಪಾಣೆ ಸೂರ್ಯನ ಹೆಂಡತಿ. ಮದುವೆ ಯಾಗಿ ಒಂದು ತಿಂಗಳೂ ಕಳೆದಿಲ್ಲವಂತೆ. ಮಹಾರಾಜರು ಆ ಬಡಪಾಯಿಗೆ ನ್ಯಾಯ ಒದಗಿಸಬೇಕು.

ಅದುವರೆಗೆ ವಿವಾಹಿತ ಹೆಣ್ಣುಗಳನ್ನು ಬಲಾತ್ಕಾರದಿಂದ ಅರಮನೆಗೆ ತಂದಿರಲಿಲ್ಲ. ಆಸ್ಥಾನಿಕರೂ ಅಂತಹ ಅಕೃತ್ಯ ಮಾಡಿರಲಿಲ್ಲ. ಕುಂಟ ಬಸವನ ವಿಪರೀತ ಬುದ್ಧಿಯಿಂದ ವಿನಾಶಕಾಲ ಬರಲಿದೆ ಎಂದು ಮಹಾರಾಜನಿಗೆ ಭೀತಿಯುಂಟಾಯಿತು. ಆದರೂ ಅವನು ಅದನ್ನು ತೋರ್ಪಡಿಸಿಕೊಳ್ಳದೆ ಹೇಳಿದ.
ಈ ಪ್ರಕರಣ ನನ್ನ ಗಮನಕ್ಕೆ ಬಂದಿರಲಿಲ್ಲ ದಿವಾನರೇ. ಈಗಲೇ ವಿಚಾರಣೆ ನಡೆಸುತ್ತೇನೆ. ಕರೆ ಕಳುಹಿಸಿದಾಗ ಪಾಣೆ ಸೂರ್ಯನೊಡನೆ ಬಂದು ಬಿಡಿ.
ಲಕ್ಷ್ಮೀನಾರಾಯಣ ಹೋದ ಮೇಲೆ ಮಹಾರಾಜ ಕುಂಟ ಬಸವನ ಮನೆಗೆ ದೂತರನ್ನು ಅಟ್ಟಿದ. ಅವನು ಗಡಬಡಿಸಿ ಹೊರಟು ಬಂದ.

ಏನೋ ಬಸವಾ, ಇತ್ತೀಚೆಗೆ ಅರಮನೆಗೆ ಬರುವುದೇ ಕಡಿಮೆಯಾದಂತಿದೆ.

ತುಳುನಾಡಿಗೆ ಕಂದಾಯ ಸಂಗ್ರಹಕ್ಕೆಂದು ಕಳಿಸಿದ್ದು ತಾವೇ ಅಲ್ವಾ ಪ್ರಭೂಲ ತಮಗೆ ತಿಳಿಸಿಯೇ ಹೋಗಿದ್ದೆ. ಬಂದ ಮೇಲೂ ತಮಗೆ ವರದಿ ಮಾಡಿದ್ದೇನೆ.
ಅಲ್ಲಿಂದ ತಂದದ್ದನ್ನು ಏನು ಮಾಡಿದೆ ಬಸವಾ?
ಅಲ್ಲಿಂದ ತಂದದ್ದೆಲ್ಲವನ್ನೂ ಅರಮನೆಗೆ ಒಪ್ಪಿಸಿದ್ದೇನೆ. ಮುನ್‌ಶಿಯವರನ್ನು ಕರೆಸಿ ಮಹಾಪ್ರಭುಗಳು ಅದನ್ನು ಖಚಿತ ಪಡಿಸಿಕೊಳ್ಳಬಹುದು.
ಅದರ ಅಗತ್ಯವಿಲ್ಲ ಬಸವಾ. ನನಗೆ ನಿನ್ನ ಮೇಲೆ ನಂಬಿಕೆಯಿದೆ. ಆದರೆ ನಂದಾವರದಿಂದ ಏನನ್ನೋ ತಂದವನು ಮಹಾರಾಜರಿಗೆ ಒಪ್ಪಿಸದೆ ಮನೆಯಲ್ಲೇ ಇಟ್ಟು ಕೊಂಡಿದ್ದೀಯೆಂದು ಕೇಳಿದೆ. ನಿಜವೇನೊ?
ಕುಂಟ ಬಸವನ ಮುಖ ವಿವರ್ಣವಾಯಿತು.
ಅದು…….. ಅದು… ಮಹಾರಾಜರು ವೈದ್ಯರ ಸಲಹೆಯ ಮೇರೆಗೆ ಅದರಿಂದ ದೂರವಿದ್ದೀರೆಂದು……..
ಹಾಗಾದರೆ ನಾನು ಕೇಳಿದ್ದು ನಿಜ?
ಕುಂಟ ಬಸವನಿಗೆ ಇನ್ನು ಅಡಗಿಸಿಡಲು ಸಾಧ್ಯವಾಗಲಿಲ್ಲ.
ನಿಜ ಪ್ರಭೂ. ತಾವು ಅಂದು ಬೋಧನೆ ಮಾಡಿದ ಮೇಲೆ ನಾನೂ ನನ್ನ ಹೆಂಡತಿಯಲ್ಲೇ ಎಲ್ಲವನ್ನೂ ಕಾಣುತ್ತಿದ್ದೆ. ನಂದಾವರದಲ್ಲಿ ಇವಳನ್ನು ನೋಡಿದ ಮೇಲೆ ಸಂಪೂರ್ಣವಾಗಿ ಸೋತು ಹೋದೆ. ಈ ಅರಮನೆ, ಈ ದಿವಾನಗಿರಿ ಎಲ್ಲವನ್ನೂ ಬಿಟ್ಟು ಯಾವುದೋ ಒಂದು ಗ್ರಾಮದಲ್ಲಿ ಮಹಾರಾಜರು ದಯಪಾಲಿಸುವ ಜಹಗೀರಿನಲ್ಲಿ ಕೃಷಿ ಮಾಡಿಕೊಂಡು ಉಳಿದ ಆಯುಸ್ಸನ್ನು ಇವಳೊಡನೆ ಕಳೆದು ಜನ್ಮ ಸಾರ್ಥಕ ಮಾಡಿಕೊಳ್ಳುತ್ತೇನೆ. ಮಹಾಪ್ರಭುಗಳು ಅನುಗ್ರಹಿಸಬೇಕು.
ಚಿಕ್ಕವೀರ ರಾಜನಿಗೆ ವಿಪರೀತ ಸಿಟ್ಟು ಬಂತು.
ಬುದ್ಧಿ ಇದೆಯೇನೋ ಬಸವಾ ನಿನಗೆ? ನೀನು ಸಂಸಾರವಂದಿಗ. ಇನ್ನೊಂದು ಸಂಸಾರವನ್ನು ಸರ್ವನಾಶ ಮಾಡಲು ಹೊರಟದ್ದೀಯಲ್ಲಾ? ನಾಳೆ ನಿನ್ನ ಹೆಂಡತಿಯನ್ನು ಯಾರಾದರೂ ಹೊತ್ತೊಯ್ದರೆ ನೀನು ಸುಮ್ಮನೆ ಬಿಟ್ಟು ಬಿಡುತ್ತೀಯಾ?
ಇವಳು ನನ್ನ ಜತೆಗಿರುವುದಾದರೆ ಯಾರನ್ನೂ ಬಿಟ್ಟೇನು?
ನನ್ನನ್ನೂ?
ಕುಂಟ ಬಸವ ಕುಸಿದು ಕುಳಿತ. ಎರಡೂ ಕೈಗಳಿಂದ ತಲೆಯನ್ನು ಹಿಡಿದುಕೊಂಡ. ಸೋತ ಸ್ವರದಲ್ಲಿ ಹೇಳಿದ.
ಇಲ್ಲ ಪ್ರಭೂ. ಹಜಾಮ, ಕುಂಟ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ನನ್ನನ್ನು ದಿವಾನಗಿರಿಗೇರಿಸಿದವರು ತಾವು. ತಮಗಾಗಿ ಈ ಪ್ರಾಣವನ್ನೂ ಕೊಟ್ಟೇನು.
ಅವನ ನಿಷ್ಠೆ ಮಹಾರಾಜನ ಸಿಟ್ಟನ್ನು ತಣಿಸಿತು. ಅವನು ಸ್ವರ ತಗ್ಗಿಸಿ ಹೇಳಿದ.
ಬಸವಾ, ನಿನ್ನ ಸ್ಥಿತಿ ನನಗೆ ಅರ್ಥವಾಗುತ್ತದೆ. ಅವಳು ಅವಿವಾಹಿತೆ ಎಂದಾಗಿರುತ್ತಿದ್ದರೆ ನಿನ್ನಿಚೆಗೆ ನಾನು ಅಡ್ಡ ಬರುತ್ತಿರಲಿಲ್ಲ. ಅವಳ ಗಂಡನೇ ಬಂದು ದೂರು ಸಲ್ಲಿಸಿದ್ದಾನೆ. ನಾಡನ್ನು ಆಳುವ ದೊರೆಯಾಗಿ ನಾನು ಏನು ಮಾಡಬೇಕು ಹೇಳು?
ಸೆರೆಗೆ ಹಾಕಿ ಬಿಡಿ ಪ್ರಭೂ. ರಾಜದ್ರೋಹದ ಆಪಾದನೆ ಹೊರಿಸಿ ತಲೆ ಕಡಿಸಿದರಾಯಿತು.
ಛೆ! ಮೋಹದಿಂದ ಕುರುಡಾಗಿ ಹುಚ್ಚರ ಹಾಗೆ ಬಡಬಡಿಸಬೇಡ. ಅವನ ಹಿಂದೆ ದಿವಾನ ಲಕ್ಷ್ಮೀನಾರಾಯಣ ನಿಂತಿದ್ದಾನೆ. ನಾನಿವನ ತಲೆ ಕಡಿಸಿದರೆ ಇಡೀ ಬ್ರಾಹ್ಮಣ ಸಮುದಾಯ ನನಗೆ ತಿರುಗಿ ಬಿದ್ದು ಇಂಗ್ಲೀಷರ ಕಡೆ ಸೇರಿಕೊಳ್ಳುತ್ತದೆ. ಇಷ್ಟು ದೊಡ್ಡ ರಾಜ್ಯದ ದಿವಾನ ನೀನು. ಒಬ್ಬ ಬಡ ಬ್ರಾಹ್ಮಣನ ಹೆಂಡತಿಗೆ ಆಸೆ ಬಿದ್ದು ರಾಜ್ಯ ಹಾಳಾಗಿ ಹೋಗಲಿ ಅನ್ನುತ್ತೀಯಲ್ಲಾ?
ಅವಳೂ ನನ್ನನ್ನು ಮೆಚ್ಚಿಕೊಂಡಿದ್ದಾಳೆ ಪ್ರಭೂ.
ಅದು ಭಯಕ್ಕಿರಬಹುದು. ಅಥವಾ ಸೂರ್ಯನಲ್ಲಿಲ್ಲದ ಅಧಿಕಾರ, ಸಂಪತ್ತು ನಿನ್ನಲ್ಲಿರುವುದಕ್ಕಿರಬಹುದು. ನೆಟ್ಟಗೆ ಒಂದು ತಿಂಗಳು ಸಂಸಾರ ಮಾಡಿರಲಿಕ್ಕಿಲ್ಲ ಅವಳು. ಆ ಎಳೆಯ ಹೆಣ್ಣಿಗೆ ಎನು ಲೋಕಾನುಭವ ಇರಬಹುದು? ನೀನು ಲೋಕ ಕಂಡವ. ಒಂದು ರಾಜ್ಯದ ದಿವಾನ. ಇಡೀ ರಾಜ್ಯಕ್ಕೆ ನೈತಿಕತೆಯ ಪಾಠ ಹೇಳಿ ಕೊಡಬೇಕಾದವ. ನಿನ್ನನ್ನು ತಿದ್ದಿಕೋ ಬಸವಾ.
ಕುಂಟ ಬಸವ ತುಂಬಾ ಹೊತ್ತು ಯೋಚಿಸಿದ. ಕೊನೆಗೆ ತಗ್ಗಿದ ಸ್ವರದಲ್ಲಿ ಹೇಳಿದ.
ಅರಮನೆಯ ಉಪ್ಪನ್ನವುಂಡ ದೇಹ ಇದು. ತಮ್ಮ ಮಾತಿಗೆ ವಿರುದ್ಧವಾಗಿ ಹೋದರೆ ಆ ಓಂಕಾರೇಶ್ವರ ನನ್ನನ್ನು ಕ್ಷಮಿಸುವುದಿಲ್ಲ. ಹೇಳಿ ಪ್ರಭೂ, ಈಗ ನಾನೇನು ಮಾಡಬೇಕು?
ಇಲ್ಲಿಗೆ ಅವಳನ್ನು ಈಗಲೇ ಕರಕೊಂಡು ಬಾ.
ಲಕ್ಷ್ಮೀನಾರಾಯಣ ಪಾಣೆಸೂರ್ಯನೊಡನೆ ಬಂದ. ಕುಂಟ ಬಸವ ಪಾಣೆ ಸೂರ್ಯನ ಹೆಂಡತಿಯನ್ನು ಕರೆತಂದ. ಚಿಕ್ಕವೀರರಾಜ ಪಾಣೆ ಸೂರ್ಯನನ್ನೂ, ಅವನ ಹೆಂಡತಿಯನ್ನೂ ನೋಡಿದ. ಒಣಮರ ಮತ್ತು ಮಳೆಗಾಲದ ಜಲಪಾತ ನೆನಪಾದವು. ಈ ಮಂಗನಿಗೆ ಎಂತಹ ಮಾಣಿಕ್ಯ ಎಂದುಕೊಂಡ.
ದಿವಾನ ಬಸವಯ್ಯನವರ ಕಡೆಯಿಂದ ಒಂದು ಪ್ರಮಾದ ನಡೆದು ಹೋಗಿದೆ. ಅದಕ್ಕಾಗಿ ನಾವು ವಿಷಾದಿಸುತ್ತೇವೆ. ಇಂಥದ್ದು ಈವರೆಗೆ ಕೊಡಗಿನಲ್ಲಿ ನಡೆದುದಿಲ್ಲ. ಕಾಲ ದೋಷ. ಇನ್ನು ಮುಂದೆ ಹೀಗೆ ನಡೆಯುವುದಿಲ್ಲ. ದಿವಾನ ಬಸವಯ್ಯನವರು ಪಾಣೆ ಸೂರ್ಯನ ಕ್ಷಮೆ ಯಾಚಿಸುತ್ತಿದ್ದಾರೆ. ನಡೆದುದೆಲ್ಲವನ್ನೂ ಮರೆತು ಪಾಣೆಸೂರ್ಯ ತನ್ನ ಪತ್ನಿಯೊಡನೆ ಹೊಸ ಬಾಳನ್ನು ಆರಂಭಿಸಬೇಕು.
ಪಾಣೆ ಸೂರ್ಯ ಹೆಂಡತಿಯ ಬಳಿಗೆ ಹೋದ. ಅವಳಿಗೆ ತಾಗಿಕೊಂಡೇ ನಿಂತ. ಅವನ ಮುಖದಲ್ಲಿ ಬೆಳಕಿತ್ತು. ಅವಳ ಮುಖ ಅರಳಿರಲಿಲ್ಲ. ಅವನನ್ನು ಮದುವೆಯಾಗ ಬೇಕಾದರೆ ಅವಳ ಮನೆಯಲ್ಲಿ ಅದಿನ್ನೆಂತಹಾ ಬಡತನವಿದೆಯೋ ಎಂದು ಮಹಾರಾಜ ಅಂದುಕೊಂಡ.
ಬಸವಾ, ಹೋಗಿ ನಮ್ಮ ಕೋಶಾಧಿಕಾರಿಯಿಂದ ಐದು ಸಾವಿರ ತೆಗೆದುಕೊಂಡು ಬಾ.
ಮಹಾರಾಜ ಆ ಹಣವನ್ನು ಸೂರ್ಯನ ಕೈಗಿತ್ತ. ಅವನು ಕೃತಜ್ಞತೆಯಿಂದ ಬಾಗಿ ವಂದಿಸಿದ. ಮಹಾರಾಜ ಗಂಭೀರ ಸ್ವರದಲ್ಲಿ ಹೇಳಿದ.
ಬಡವರಾಗಿ ಹುಟ್ಟುವುದು ತಪ್ಪಲ್ಲ ಸೂರ್ಯ. ಬಡವರಾಗಿ ಸಾಯುವುದು ತಪ್ಪು. ನಿನಗೆ ಸಿಕ್ಕಿರುವ ಐದು ಸಾವಿರದಲ್ಲಿ ಒಳ್ಳೆಯ ಕೃಷಿ ಭೂಮಿ ಕೊಂಡುಕೋ. ಮನಸ್ಸಿಟ್ಟು ಕೃಷಿ ಮಾಡಿ ಮಣ್ಣಲ್ಲಿ ಹೊನ್ನನ್ನು ಬೆಳೆಯಲು ಕಲಿ. ತುಳುನಾಡಿನ ಅಕ್ಕಿಗೆ ಅರಬು ದೇಶದಲ್ಲಿ ಬಹಳ ಬೇಡಿಕೆಯಿದೆಯೆಂದು ಕೇಳಿದ್ದೇನೆ. ಮನಸ್ಸಿಟ್ಟು ಮೈ ಬಗ್ಗಿಸಿ ದುಡಿದರೆ ನೀನೂ ಸ್ಥಿತಿವಂತನಾಗುತ್ತಿ. ಬರಿದೆ ಮದುವೆಯಾದರೆ ಸಾಲದು ಸೂರ್ಯ. ಹೆಂಡತಿಗೆ ನಿಜವಾದ ಸುಖ ನೀಡುವುದರ ಬಗ್ಗೆಯೂ ಯೋಚಿಸಬೇಕು.
ತಲೆತಗ್ಗಿಸಿ ಮಾತು ಕೇಳಿಸಿಕೊಳ್ಳುತ್ತಿದ್ದ ಸೂರ್ಯನೆಂದ.
ನನಗೆ ಗದ್ದೆ ಬೇಸಾಯದ ಅನುಭವವಿಲ್ಲ ಪ್ರಭೂ.
ಚಿಕ್ಕವೀರರಾಜನಿಗೆ ಸೂರ್ಯನ ಕೆನ್ನೆಗೆ ಬಾರಿಸುವಷ್ಟು ಸಿಟ್ಟು ಬಂತು.

ಮದುವೆಯಾಗುವಾಗ ನಿನಗೆ ಸಂಸಾರ ಮಾಡಿದ ಅನುಭವವಿತ್ತಾ ಸೂರ್ಯ? ಆ ಅನುಭವವನ್ನು ಯಾರಿಂದ ಕಲಿತಿ? ಮೈಮುರಿದು ದುಡಿಯಬೇಕೆಂದು ಹೇಳುವಾಗ ಅನುಭವವಿಲ್ಲವೆನ್ನಲು ನಿನಗೆ ನಾಚಿಕೆಯಾಗಬೇಕು. ಕೂತು ಉಣ್ಣುವವನಿಗೆ ದೇವರೂ ಸಹಾಯ ಮಾಡುವುದಿಲ್ಲ. ಗದ್ದೆ ಕೆಲಸ ಕೀಳು ವೃತ್ತಿ ಎಂಬ ಭಾವನೆ ಬಿಡು. ನಿನ್ನ ಅಪ್ಪ ಅರ್ಚಕನೆಂದು ಕೇಳಿದೆ. ನಿನಗೂ ನಾಲ್ಕು ಮಂತ್ರ ಗೊತ್ತಿರಬಹುದು. ಅದಕ್ಕೆ ಯಾವ ಮಾವಿನಕಾಯಿ ಉದುರೀತು, ಹೇಳು? ಬಾಯಿಗೆ ಮೊಸರು ದಕ್ಕಬೇಕಾದರೆ ಕೈ ಕೆಸರು ಮಾಡಿಕೊಳ್ಳಲು ನೀನು ಸಿದ್ಧನಿರಬೇಕು. ಹಿರಿಯರು ಹೇಳುವುದನ್ನು ಕೇಳಿದ್ದೀಯಾ ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೆ ಮೇಲು ಎಂದು. ಹೊಟ್ಟೆಗೆ ಹಿಟ್ಟಿಲ್ಲದಿದ್ದರೆ ನಿನ್ನ ಜಾತಿ, ಕುಲ, ಅಂತಸ್ತು, ದೇವರುದಿಂಡರು, ಒಂದೂ ಇರುವುದಿಲ್ಲ. ತಿಳಿದುಕೋ.

ಚಿಕ್ಕವೀರರಾಜ ಸೂರ್ಯನ ಹೆಂಡತಿಯನ್ನು ನೋಡಿದ. ಅವಳ ಅಕ್ಷರಶಃ ಕೋಲ್ಮಿಂಚು. ಅವಳಿಗೆ ಕುಂಟ ಬಸವ ಸೋತದ್ದು ಆಶ್ಚರ್ಯವೇನಲ್ಲವೆಂದು ರಾಜನಿಗೆ ಅನ್ನಿಸಿತು. ಅವಳ ಬಗ್ಗೆ ಕನಿಕರ ಮೂಡಿತು. ರಾಜ ಅವಳಿಗೆ ನಾಲ್ಕು ಸೀರೆ, ನಾಲ್ಕು ಚಿನ್ನದ ಬಳೆ ಮತ್ತು ಎರಡು ಚಿನ್ನದ ಹಾರ ಕೊಡಿಸಿದ. ಅವಳ ಮುಖದಲ್ಲಿ ಪ್ರಸನ್ನತೆ ಗೋಚರಿಸಿ ರಾಜನಿಗೆ ಸಾಷ್ಟಾಂಗ ವಂದಿಸಿದಳು.

ರಾಜ ಕನಿಕರದ ದನಿಯಲ್ಲಿ ಉಪದೇಶಿಸಿದ.

ಯೋಚಿಸಿ ಮದುವೆಯಾಗಬೇಕಿತ್ತಮ್ಮ. ಮದುವೆಯಾದ ಮೇಲೆ ಯೋಚಿಸಬಾರದು.
ಅವಳು ಮಾತಾಡಲಿಲ್ಲ. ಅವಳ ಅನಿವಾರ್ಯತೆ ಏನಿತ್ತೊ?
ಸೂರ್ಯ ಸಂಭ್ರಮದಿಂದ ತನ್ನ ಹೆಂಡತಿಯೊಡನೆ ಹೊರಟುಹೋದ.
ಒಂದಷ್ಟು ಹೊತ್ತು ಬರಿದೆ ಸರಿದು ಹೋಯಿತು.
ಆಮೇಲೆ ಚಿಕ್ಕವೀರರಾಜ ಕುಂಟ ಬಸವನಲ್ಲೆಂದ.

ಅವಳಿಗೆ ಇಲ್ಲಿಂದ ಹೋಗಲು ಮನಸ್ಸು ಇರಲಿಲ್ಲವೆಂದು ಕಾಣುತ್ತದೆ. ಹೆಣ್ಣಿನ ಮನಸ್ಸೇನೆಂದು ತಿಳಿಯದೆ ಹಿರಿಯರು ಮದುವೆ ಮಾಡಿಸುವುದು ಅನ್ಯಾಯ. ಮದುವೆ ಯಾದ ಮಾತ್ರಕ್ಕೆ ಹೆಂಡತಿ ತನ್ನ ಗುಲಾಮಳಾಗಿರಬೇಕೆಂದು ಗಂಡ ಬಯಸೋದು ಕೂಡಾ ಸರಿಯಲ್ಲ ಅಲ್ಲವೇ ಬಸವಾ?
ಕುಂಟ ಬಸವ ಮಾತು ಕಳಕೊಂಡಿದ್ದ.
ಕೊನೆಯಲ್ಲಿ ರಾಜ ಗಂಭೀರ ಸ್ವರದಲ್ಲಿ ನುಡಿದ.
ಆದರೆ ಬಸವಾ ನೀನು ಮಾಡಿದ್ದು ತಪ್ಪೇ. ನ್ಯಾಯ ನೀಡಬೇಕಾದವರು ಅನ್ಯಾಯ ಮಾಡಬಾರದು.
*****

One thought on “0

  1. ಎಲ್ಲಾ ಸರಿ ಆದರೆ ಎಲ್ಲಾ ಹೆಣ್ಣು ಮಕ್ಕಳು ಎನ್ನುವ ವಿಶೇಷಣ ಬೇಡ ಯಾಕೆಂದರೆ ದಲಿತರನ್ನು ಈಗಲೇ ಮುಟ್ಟಿಸಿಕೊಳ್ಳುವುದಿಲ್ಲ ಇನ್ನು ಆಗ..???

Leave a Reply to ರುದ್ರೇಶ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೦೦
Next post ಕೌತುಕದ ಕಣ್ಣ ಮಿಂಚಿನಿಂದ

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

cheap jordans|wholesale air max|wholesale jordans|wholesale jewelry|wholesale jerseys