ನನ್ನೊಡನೆ ಗೆಳೆಯನನೂ ಹಿಂಡಿ ನನ್ನೆದೆಯನ್ನ,
ನರಳಿಸುತ್ತಿರುವ ಆ ಹೃದಯಕ್ಕೆ ಧಿಕ್ಕಾರ,
ಕೊಟ್ಟುದಲ್ಲದೆ ನನಗೆ ಚಿತ್ರಹಿಂಸೆಯ, ನನ್ನ
ಮಿತ್ರನನೂ ದಾಸ್ಯಕೂಪಕ್ಕೆಳೆದ ಹುನ್ನಾರ.
ಕ್ರೂರಿ ಉರಿಗಣ್ಣಿಂದ ಸೆಳೆದುದಲ್ಲದೆ ನನ್ನ
ಇನ್ನೊಂದು ಆತ್ಮವನೂ ಬಲವಾಗಿ ಮುತ್ತಿರುವೆ;
ಕಳಕೊಂಡು ಅವನನ್ನ ನನ್ನನ್ನ ನಿನ್ನನ್ನ
ಮೂರುಮಡಿ ನೋವಿನಲಿ ಕುದಿಯಬೇಕಾಗಿರುವೆ.
ನಿನ್ನ ಆ ಉಕ್ಕಿನೆದೆಯಲಿ ನನ್ನ ಬಂಧಿಸಿಡು
ಅದಕೆ ಬದಲಾಗೆನ್ನ ಗೆಳೆಯನನು ಬಿಟ್ಟುಬಿಡು;
ಯಾರೆ ಹಿಡಿಯಲಿ ನನ್ನ ಎದೆಯೊಳವನಿರುವನು,
ಆಗ ನೀನವನ ಬಿರುಸಾಗಿ ಬಳಸಲು ಬರದು-
ಆದರೂ ಬಿಡೆ ನೀನು, ನಾನಿನ್ನ ಸೆರೆಯಲ್ಲಿ
ನನ್ನೊಳಗಿರುವುದೆಲ್ಲ ನಿನ್ನ ಹತೋಟಿಯಲ್ಲಿ
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 133
Beshrew that heart that makes my heart to groan