ಎಷ್ಟೊ ಸಲ ನುಡಿಸಿರುವೆ ನೀ ಪಿಯಾನೋವನ್ನ,
ಏನದರ ಭಾಗ್ಯವೇ ಚಿನ್ನ! ಎರಡೂ ಬದಿಗೆ
ನೀ ತೂಗಿ ಮೈಯ, ಸರಿಸಲು ಬೆರಳು ಸಾಲನ್ನ
ಸಂಭ್ರಾಂತಿ ನನಗೆ ಸುರಿಯುವ ಜೇನುದನಿಮಳೆಗೆ.
ಎತ್ತಿದೆಯೊ ಬೆರಳ, ಚಂಗನೆ ನೆಗೆದು ಅಂಗೈಯ
ಮುತ್ತಿಡುವ ಸ್ವರದ ಕೀ ಮನೆಗಳ ಅದೃಷ್ಟಕ್ಕೆ
ಮಾತ್ಸರ್‍ಯ ನನಗೆ! ಆ ಭಾಗ್ಯಕ್ಕೆ ತವಕಿಸುವ
ನನ್ನ ಬಡ ತುಟಿಗಳು ಮನೆಯ ದಿಟ್ಟತನಕ್ಕೆ
ನಾಚುತ್ತ ನಿನ್ನ ಕೆನ್ನೆಯ ಬದಿಗೆ ಸುಯ್ಯುವುವು.
ನಿನ್ನ ಮೋಹಕ ಬೆರಳು ಮನೆ ಮನೆಯ ನೇವರಿಸಿ,
ಅವೆ ಧನ್ಯ ಎನಿಸಿ ಜೀವಂತ ತುಟಿಗಿಂತಲೂ,
ಆ ಜಾಗ ಬಯಸಿ ಕುದಿಯುವುವು ತುಟಿ ಕಾತರಿಸಿ.
ತುಂಟ ಮನೆಗೆಂಥ ಸಂತೋಷ ಆ ಆಟದಲಿ,
ಬೆರಳು ಅದಕಿರಲಿ, ಮುತ್ತಿಡಲು ತುಟಿ ಕೊಡು ಇಲ್ಲಿ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 128
How oft when thou, my music, music play’st