ಕಪ್ಪು ಚೆಲುವೆಂದು ಗಣಿಸಿರಲಿಲ್ಲ ಹಿಂದಕ್ಕೆ
ಗಣಿಸಿದರು ಚೆಲುವೆಂಬ ಹೆಸರು ಎಲ್ಲಿತ್ತದಕೆ ?
ಏರುತಿದೆ ಈಗ ಅದು ಸೌಂದರ್ಯಪಟ್ಟಕ್ಕೆ
ಸಿಕ್ಕಿಸಿದೆ ಹುಸಿ ಹೊಳೆವ ಚೆಲುವನಪವಾದಕ್ಕೆ.
ಕಲೆಯ ಎರವಲು ಮುಖವ ತೊಡಿಸಿ ಕಳಪೆಗಳನ್ನು
ಕಮನೀಯ ಎನ್ನಿಸುವ ಕೈವಾಡ ಎಲ್ಲ ಕಡೆ ;
ಸವಿಚೆಲುವಿಗೆಲ್ಲಿ ಆಸರೆ, ಹೆಸರು ? ಅದಕಿನ್ನು
ಎಲ್ಲಿ ಮಾನ್ಯತೆ ? ಹಿಂದೆ ಇದ್ದಂಥ ರಾಣಿನಡೆ ?
ಅದಕೆಂದೆ ಕಡುಗಪ್ಪು ಕಣ್ಣು ನನ್ನೊಲವಿಗೆ,
ಹುಬ್ಬು ಎವೆ ಎರಡು ಸಹ ಹೊಂದಿಕೊಂಡಿವೆ ಅದಕೆ ;
ಕೃತಕ ಸಾಧನ ಬಳಸಿ ಹೊಳೆದು, ನಿಜ ಚೆಲುವಿಗೆ
ಅಪಕೀರ್‍ತಿ ತರುವವರ ಕುರಿತು ಅವು ಶೋಕಿಸಿವೆ.
ಎಷ್ಟು ಮೋಹಕ ನಯನ ಶೋಕಿಸುತಲಿದ್ದರೂ,
ಚೆಲುವೆಂದರಿದೆ ಎಂದು ಹೊಗಳುವರೆ ಎಲ್ಲರೂ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 127
In the old age black was not counted fair