ಕೆಡದೆಯೇ ಕೆಟ್ಟವನು ಎನ್ನಿಸುವುದಕ್ಕಿಂತ
ಕೆಟ್ಟುಬಿಡುವುದೆ ಸರಿ ಅಪವಾದವಿದ್ದಾಗ,
ನಮಗೆ ಅನ್ನಿಸದಿದ್ದೂ ಪರರ ಅನಿಸಿಕೆಯಿಂದ
ಕಳೆಯುವುದು ನ್ಯಾಯವಾದೊಂದು ಸಂತಸ ಆಗ.
ನನ್ನ ರಕ್ತಕ್ಕೆ ಪ್ರಿಯವಾದ ನಡವಳಿಕೆಗಳ
ಪರರ ಹುಸಿಗಣ್ಣು ನಿಯಂತ್ರಿಸುವುದೇತಕ್ಕೆ ?
ನನಗೆ ತಪ್ಪೆನ್ನಿಸದ ನನ್ನ ದೌರ್ಬಲ್ಯಗಳ
ನನಗಿಂತ ದುರ್‍ಬಲರು ತಪ್ಪೆನುವುದೇತಕ್ಕೆ ?
ನಾನೇನೊ ಅದೆ ನಾನು, ನನ್ನದನು ತಪ್ಪೆಂದು
ಹಳಿವವರು ತಮ್ಮ ದೌರ್ಬಲ್ಯವನೆ ತೋರುವರು;
ಅವರೆ ಸಲ್ಲದರಿದ್ದು ನಾನೆ ಸರಿಯಿರಬಹುದು
ಪರರ ಕೀಳ್ಗಣನೆಗಳು ನನ್ನನಳೆಯವು ಎಂದೂ-
ಎಲ್ಲರೂ ಕೇಡಿಗರೆ, ಮಾಡುವುದು ಕೆಟ್ಟುದೇ
ಎಂದು ಈ ಜನ ಒಂದು ನಿಯಮವನು ಮಾಡದೆ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 121
Tis better to be vile than vile esteemed