ಒಲಿದ ಮನಗಳ ಮಿಲನಕಿಲ್ಲ ತಡೆ, ಇದೆಯೆನಲು
ಒಪ್ಪುವವ ನಾನಲ್ಲ. ಒಲವು ಒಲವೇ ಅಲ್ಲ
ಮತ್ತೊಂದಕೆಂದು ಹೊರಳಿದರೆ, ಇಲ್ಲವೆ ಒಂದು
ಬದಲಿತೆಂದಿನ್ನೊಂದು ಕದಲಿದರೆ. ಛೆ, ಇಲ್ಲ
ಬಿರುಗಾಳಿಯಲ್ಲು ಕಂಪಿಸದೆ ನಿಲ್ಲುವುದು ಅದು
ಸ್ಥಿರವಾದ ಜ್ಯೋತಿ, ಕಡಲಲ್ಲಿ ಕುರುಡಲೆಯುವಾ
ಯಾವುದೇ ದೋಣಿಗದು ಧ್ರುವತಾರೆ : ಅಳೆಯುವುದು
ಸಾಧ್ಯವಿರಬಹುದು ಅದರೆತ್ತೆರವ, ನಿಜಬೆಲೆಯ
ತಿಳಿವ ಯತ್ನವು ಮಾತ್ರ ವ್ಯರ್‍ಥ. ಜವರಾಯನ
ಪಾಶಕೊಳಗಾದರೂ ಗುಲಾಬಿ ತುಟಿ ಕೆನ್ನೆಗಳು,
ಮೋಸಹೋಗದು ಪ್ರೀತಿ. ಕಾಲನ ಗಳಿಗೆ ವಾರ
ಕದಲಿಸವು ಅವನು, ಉಳಿಯುವುದು ಪ್ರಳಯದವರೆಗು.
ಸತ್ಯಸ್ಯ ಸತ್ಯ ಈ ಮಾತು, ಆಯಿತೊ ಸುಳ್ಳು
ನಾನು ಬರೆದುದೆ ಸುಳ್ಳು, ಜನ ಒಲಿದುದೇ ಸುಳ್ಳು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 116
Let me not to the marriage of true minds