ಗೆಳೆಯಾ ನಾವಿಂದು ಕೂಡಿದ್ದೇವೆ ಧ್ಯಾನಕ್ಕಾಗಿ
ಮತ್ತೆ ಮನದ ಮೈಲಿಗೆ ತೊಳೆಯುವ ತಪಸ್ಸಿಗಾಗಿ
ತೊಳೆಬೇಕು ತನವ ಮಾಡಬೇಕು ಹವನ
ಆ ಮನದಲಿ ಕಾಣಬೇಕು ಸತ್ ಚಿತ್ತ ಶಿವನ

ಮೃತ್ಯೂ ನಗುತ್ತಿದೆ ನಿನ್ನ ಬಾಳಿನ ಬಾಗಿಲಿನಲಿ
ಸತ್ಯ ಅಡಗಿದೆ ನಿನ್ನ ಬದುಕಿಗೆ ಆಳದಲಿ
ಎದ್ದೇಳು ಎದೆಗಾರಿಕೆಯಿಂದ ಹಿಮ್ಮೆಟಿಸು ಬೈರವನ
ಪಡೆದುಕೊ ಪರಮಾತ್ಮನ ಅಲಂಗಿಸು ಅವನ

ನಿನ್ನ ಮನಸ್ಸು ನಿಲ್ಲಲಿ ಎತ್ತರದ ಸ್ತರದಲಿ
ಬೆಳ್ಳಗಿನ ಮನಸ್ಸೆಂಬುದೆ ನಿನ್ನ ಆತ್ಮ
ನಿನ್ನ ಭಾವಗಳ ತುಂಬ ಪರಶಿವನ ತುಂಬಿಕೊ
ಕರ್‍ಮದ ಇಂಚು ಇಂಚಿನಲಿ ಸಾಕ್ಷಿಯಾಗಲಿ ಆತ್ಮ

ಹಂಸ ಪಕ್ಷಿ ಜಲದಿ ಕ್ಷೀರವೆ ಹೀರುವಂತೆ
ಸಂಸಾರ ಮಾಯೆಯಲಿ ದೇವನ ಆರಾಧಿಸು
ಸ್ವಾತಿ ಮಳೆಯು ಬೀಳಲು ಮುತ್ತಾಗುವಂತೆ
ಧ್ಯಾನದಲಿ ಜ್ಯೋತಿಗಾಗಿ ನೀನು ಕಾತರಿಸು

ಇಲ್ಲಿ ಮೋಸ ವಂಚನೆ ಸ್ವಾರ್ಥಗಳಿಲ್ಲ
ಇಲ್ಲಿ ಕುಳಿತವರೆಲ್ಲ ಪರಶಿವನ ರೂಪ
ನಿನ್ನ ಮುಕ್ತಿ ಧಾಮಕ್ಕೆ ಇವರೆಲ್ಲ ಸೋಪಾನರು
ಮಾಣಿಕ್ಯ ವಿಠಲನೆರಗಿದವರೇ ದಾಸರು
*****