ಬಾಗಿಲದಾಗಿನ ಕೋಗಿಲ ಕೂಗಿ ಕೂಗಿ ಮರನೇರಿ |
ನಾಗರ್‍ಹೆಡಿಯಂಗಾಡ್ಯಾವೇಳಯ್ಯಾ | ಸಿದ್ಧರಾಮಾ |
ನಾಗರ್‍ಹೆಡಿಯುಗಾಡ್ಯಾವೇಳಯ್ಯಾ ||೧||
ಅತ್ತಿಽಯ ಮಽರನೇರಿ ಸತ್ತು ಸೊರಗಿ ನಾನೆ ಬಂದ |
ಮುತ್ತಿನೊಸ್ತಾ, ತೋರ್‍ಯಾರೇಳಯ್ಯಾ | ಸಿದ್ಧರಾಮಾ |
ಮುತ್ತಿ ನೊಸ್ತಾ, ತೋರ್‍ಯಾರೇಳಯ್ಯಾ ||೨||
ಆಲಽದ ಮಽರನೇರಿ ಆಲಪರದು ನಾನೆ ಬಂದ |
ನೀಲದೊಸ್ತಾ ತೋರ್‍ಯಾರೇಳಯ್ಯಾ | ಸಿದ್ಧರಾಮಾ |
ನೀಲದೊಸ್ತಾ ತೋರ್‍ಯಾರೇಳಯ್ಯಾ ||೩||
ಅಕ್ಕಿಪೂಜಿ ಬ್ಯಾಳಿಪೂಜಿ ಮ್ಯಾಲ ಎಲಿಯ ಘಟ್ಟಪೂಜಿ |
ನಿತ್ಯಪೂಜಿ ಕಟ್ಟ್ಯಾರೇಳಯ್ಯಾ | ಸಿದ್ಧರಾಮಾ |
ನಿಮಗ ಪೂಜಿ ಕಟ್ಟ್ಯಾರೇಳಯ್ಯಾ ||೪||
ಕೆಂಪ ಗಂಧಾ ಬಿಳಿಯ ಗಂಧಾ ಅಷ್ಟಗಂಧಾ ಸಿರಿಯಗಂಧಾ |
ಛೆಂದದಿಂದ ಏರ್‍ಯಾವೇಳಯ್ಯಾ | ಸಿದ್ಧ ರಾಮಾ |
ಛೆಂದದಿಂದ ಏರ್‍ಯಾವೇಳೆಯ್ಯಾ ||೫||
ಜಾಜಮಲ್ಲಿಗಿ ಜೂಜಮಲ್ಲಿಗಿ ಅರಳಮಲ್ಲಿಗಿ ಶಾವಂತಿಗ್ಹೂವಾ |
ನಿಮ್ಮ ಪೂಜಿಗಿ ಬಂದಾವೇಳಯ್ಯಾ | ಸಿದ್ಧರಾಮಾ |
ನಿಮಗ ಪೂಜಿ ಮಾಡ್ಯಾರೇಳಯ್ಯಾ ||೬||
ಅಚ್ಚದಚ್ಚ ಬೆಲ್ಲದಚ್ಚಾ ಮ್ಯಾಗ ಎಳ್ಳ ಚಿಗಳಿನೆಚ್ಚಾ |
ನಿಮಗ ನೇವುದೀ ಬಂದಾವೇಳಯ್ಯಾ | ಸಿದ್ಧರಾಮಾ |
ನಿಮಗ ನೇವುದೀ ತೋರ್‍ಯಾರೇಳಯ್ಯಾ ||೭||
ಬಾಜಿ ಬಾಜಿ ಬಾಜಿಯಂತರಿ ಬಾಳಿ ಬನದಾಗ್ ಹೆಲಗಿ ಖೊಂಬಾ |
ಭೋರಗೆಜ್ಜಿ ಗಿಲ್ಲಂದಾವೇಳಯ್ಯಾ | ಸಿದ್ಧರಾಮಾ |
ಭೋರಗೆಜ್ಜಿ ಗಿಲ್ಲಂದಾನೇಳಯ್ಯಾ ||೮||
ಗಂಗಿಯೊಳಗ ಸ್ನಾನ ಮಾಡಿ ಶಿವನ ಸಿಕರ ಸುತ್ತಿಬಂದು |
ಹರದ್ಯೇರು ಫಲವ ಬೇಡ್ಯಾರೇಳಯ್ಯಾ | ಸಿದ್ಧರಾಮಾ |
ಹೆರದ್ಯೇರು ಫಲವ ಬೇಡ್ಯಾರೇಳಯ್ಯಾ ||೯||
ಸಂಕರಾತರಿ ಭೋಗಿ ದಿನಾ ಮಲ್ಲಿನಾಧನ ಗುಡಿಯ ಒಳಗ |
ನಾಚನಾದವ ಛೆಂದದಿಂದ | ಸಿದ್ಧರಾಮಯ್ಯ |
ನಾಚನಾದವ ಛೆಂದಛೆಂದ ಸಿದ್ಧರಾಮಯ್ಯ ||೧೦||
ಸಂಕರಾತರಿ ಸಮತಿ ದಿನಾ ನಂದಿಕೋಲಾ ಮೆರೆವ ದಿಽನಾ |
ಟಿಂಗಕೈ ಸೂರ್‍ಯಾದವೇಳಯ್ಯಾ | ಸಿದ್ಧರಾಮಾ |
ಖಾರೀಕಕೈ ಸೂರ್‍ಯಾದವೇಳೆಯ್ಯಾ ||೧೧||
ಸಂಕರಾತರಿ ಕರಿಯ ದಿಽನಾ ಮಿತ್ರೆರೆಲ್ಲಾ ಮಡಿಗಳುಟ್ಟು |
ಮುತ್ತಿನಾರುತಿ ಎತ್ತ್ಯಾರೇಳಯ್ಯಾ | ಸಿದ್ಧರಾಮಾ |
ಮುತ್ತಿನಾರುತಿ ಎತ್ತ್ಯಾರೇಳಯ್ಯಾ ||೧೨||
ಸಿಂಗರಾದ ಸೊಲ್ಲಪೂರಽ ಭಂಗರಾದ ಸಿದ್ಧರಾಮಾ |
ಸಿಕರ ಕಟ್ಟ್ಯಾರು ರೈತರೆಲ್ಲಾರು | ಸಿದ್ಧರಾಮಾ |
ಸಿಕರ ಕಟ್ಟ್ಯಾರು ರೈತರೆಲ್ಲಾರು ||೧೩||
ಕಮರ ತಽಳಿ ರೇವಣಸಿದ್ಧಾ ಗಂಗಿಯೊಳಗ ಸಿದ್ಧರಾಮಾ |
ನಡುವ ಕುಂತಾರ ಮಲ್ಲಿಕಾರ್ಜುಽನ | ಸಿದ್ಧರಾಮಾ |
ಊರಾಗ್ಹಾರ ಮಲ್ಲಿಕಾರ್ಜುಽನ ||೧೪||
*****