ಜೀವದಲುಸಿರು ಇರುವಾಗ ನೋಡು ಕರುನಾಡು
ನಾಲಿಗೆ ನುಡಿಯುತಿರುವಾಗ ಕನ್ನಡವ ಹಾಡು /ಪ//
ಕನ್ನಡವ ಹಾಡು ಸಿರಿಗನ್ನಡವ ನೋಡು
ಚೆಲುಗನ್ನಡ ಬೀಡು ಅದರಿಂದಲೆ ಈ ಹಾಡು /ಅ.ಪ./
ಹುಟ್ಟಿದ ಕೋಗಿಲೆ ಹಾಡುವುದು ಕನ್ನಡ ಸ್ವರದಲ್ಲಿ
ಗಿರಿನವಿಲು ಗರಿ ಬಿಚ್ಚುವುದು ಅದರ ಮೇಳದಲಿ
ಮಲೆ ಸಹ್ಯಾದ್ರಿ ಬಾಗುವುದು ಕಾಣುವ ತವಕದಲಿ
ಸಾವಿರ ಕವಿತೆ ಬೀಗುವುದು ಸ್ಫೂರ್ತಿಯ ಪಡೆಯುತಲಿ /೧/
ಮಳೆಗಾಳಿಗೆ ಎದೆಯೊಡ್ಡಿಹುದು ಗೊಮ್ಮಟ ಸಹ್ಯಾದ್ರಿ
ಹೊಳೆಯಾಲಿಂಗನಕೊಪ್ಪಿಹುದು ಕರಾವಳಿಯ ಸಿರಿ
ಬಯಲನು ಬಿತ್ತಿ ಬೆಳೆದಿಹುದು ಬಯಲು ಬಾನು ಕಾನು
ಅಂತರಂಗ ಬಹಿರಂಗದಲಿ ಕಳೆದಿದೆ ನಾನು ನೀನು /೨/
ಸಾವಿರದಾಚೆ ನಮ್ಮ ಕತೆ ಸಾಮಾನ್ಯವೆ ಚರಿತೆ
ಸಾಗರದಾಚೆ ಹರಿದಿಹುದು ನಮ್ಮರಿವಿನ ಒರತೆ
ಆದರು ಕಂದಕ ಕಂಡಿಹುದು ಓಡುವ ನೆಲದಲ್ಲಿ
ಕಂದಕ ಮುಚ್ಚುವ ಬಗೆ ಗೊತ್ತು ಏಕತ ಭಾವದಲಿ /೩/
*****