ಕಳೆದು ಹೋದ ದಿನಗಳೆ
ಕನಸಾಗಿ ಕಾಡದಿರಿ
ಉರುಳಿಹೋದ ಹಾಡುಗಳ
ಉರುಳಾಗಿ ಮಾಡದಿರಿ ||

ಕೈ ಬೀಸಿದ ಚಂದ್ರತಾರೆ
ಮಗಿಲಿನಾಚೆ ನಿಲ್ಲಲಿ
ಕವಿ ಮಾಡಿದ ಆ ಕೋಗಿಲೆ
ಕಾವ್ಯದಲ್ಲೆ ನೆಲೆಸಲಿ
ಬದುಕು ನಿತ್ಯ ಶ್ರಾವಣ
ಸುವರ್‍ಣದ ಹೂರಣ
ನೆನಪಾಗಿ ಬಾರದಿರಲಿ
ಚಿತ್ರವಾಗಿ ಕಾಡದಿರಲಿ

ಗಿರಿ ಪರ್‍ವತ ಹೂ ಹಸಿರು
ಹೊಸತು ಬಣ್ಣ ತಳೆಯಲಿ
ನೆಲೆದೊಡಲಿನ ಬಿಸಿಯುಸಿರು
ಕಾವ್ಯಕೆ ಬಸಿರಾಗಲಿ
ನಾಳೆ ಇರಲಿ ನಾಳೆಯಾಗಿ
ಭೂತವಿರಲಿ ನಿನ್ನೆಗೆ
ಬದುಕ ಪಯಣ ಸಾಗುವಲ್ಲಿ
ವರ್‍ತಮಾನ ಹಾಡಲಿ
*****