ಧನಿಕನ ತಿಜೋರಿ ಕೀ ಅವನ ಸಂಪತ್ತನ್ನು
ಮೆರೆಸಿ ಅವನೆದೆಯನ್ನು ಸುಖದೊಳದ್ದುವುದು;
ಎಲ್ಲೊ ಒಮ್ಮೊಮ್ಮೆ ತೆರೆಯುವನು ಅವನು ಅದನ್ನು,
ಇಲ್ಲವೋ ಅಪರೂಪ ಸುಖ ಹಳಸಿಹೋಗುವುದು.
ಅವನಂತೆ ನಾನು ಸಹ. ಉದ್ದ ಎದೆಸರದಲ್ಲಿ
ಎಲ್ಲೊ ಅಲ್ಲಲ್ಲಷ್ಟೆ ಹರಳು ಮಿಂಚುವುದು;
ನಿಡುಬೇಸರದ ವರ್ಷದಲ್ಲಿ ಅಲ್ಲಿ ಇಲ್ಲಿ
ನಿನ್ನ ಮಿಲನದ ಹಬ್ಬದೂಟ ಒದಗುವುದು.
ನೀನು ನನಗೀಗ ಧನಿಕನ ರತ್ನಭಂಡಾರ,
ಬಹುಬೆಲೆಯ ಉಡುಪುಗಳು ಒಳಗಿರುವ ಅಲಮಾರು;
ಬಚ್ಚಿಟ್ಟ ಹೆಮ್ಮೆಗಳ ಆಗೀಗ ಹೊರತೆಗೆವೆ,
ಆಗ ಈ ಬಾಳೊ ಹುಣ್ಣಿಮೆಯ ಬಣ್ಣದ ತೇರು.
ಪುಣ್ಯವಂತನು ನೀನು ಹೀಗೆ ನಮಗೊದಗಲು,
ಪಡೆದಾಗ ಹಿಗ್ಗಿ, ಇರದಾಗ ಹಾರೈಸಲು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 52
So am I as the rich whose blessed key