ನಾನವನ ಅರ್ಧಾಂಗಿ,
ಅವನ ಯಾವ ಅಂಗದ ಮೇಲೆ
ನನಗೆ ಅಧಿಕಾರವಿದೆ ಹೇಳು?
ನನ್ನ ನಗು, ಅಳುವಿನ
ಮೇಲೆಯೂ ಅವನದೇ ಅಧಿಕಾರ,
ಅಷ್ಟೇ ಏಕೆ?
ಅವನ ಒಪ್ಪಿಗೆ ಪಡೆದೇ
ನಾನು ಫಲ ಧರಿಸಬೇಕು,
ಭ್ರೂಣ ಹೆಣ್ಣಾಗಿದ್ದರೆ
ಹೃದಯ ಕಲ್ಲಾಗಿಸಿ,
ಚಿಗುರುಗಳ ಹೊಸಕಿ
ಕರುಳಿನ ಕುಡಿಗೆ
ಕತ್ತರಿಯ ಪ್ರಯೋಗ,
ಬದುಕಿನ ಪ್ರತಿ ಕ್ಷಣವೂ
ವಿಷದ ಗುಟುಕುಗಳ
ಕಣ್ಮುಚ್ಚಿ ಕುಡಿಯುತ್ತ
ವೇದನೆಯನು ಸಹಿಸುತ್ತ
ಹೆಣ್ತನದ ಹಣೆಬರಹ
ಹೇಡಿಯಂತೆ ಹಳಿಯುತ್ತ
ಹೃದಯ ಗೋರಿಯಲಿ
ನಿಶ್ಯಬ್ದ ರೋದನ,
ಕಲ್ಲಾದ ಹೃದಯ ಗೋರಿ
ಬತ್ತಿ ಹೋದ ಕಣ್ಣೀರಿನ ಧಾರೆ,
ಹೃದಯದಲ್ಲಿಯ ಮೌನ,
ರೋದನದ ಶಬ್ದ-
ಆ ನನ್ನ ಹಡೆದವ್ವನ
ಕಿವಿಗೆ ಕೇಳಿಸುವುದೇನೆ ?
*****