ಬವಣೆಯ ಬದುಕು
ಭರವಸೆಯಲಿ ಸವೆಸುತ್ತಾ
ದುಡಿಮೆಯಲಿ ಕಾಲ ಕಳೆಯುತ್ತಾ
ತಿನ್ನುವ ಅನ್ನವ ತೊರೆದು
ಹೊರಟೆಯೇನಣ್ಣ ಆತ್ಮಹತ್ಯೆಗೆ
ಆತುರಬೇಡ… ಅವಸರಬೇಡ
ನಿನ್ನ ಒಡಲ ಕುಡಿಗಳಿಹರು
ಆತಂಕಬೇಡ ನಾವಿರುವೆವು ನಿಮಗಾಗಿ

ಹಸಿವೆ.. ಹರಿ ಹಾಯ್ದರೂ…
ನಾವೆಲ್ಲಾ… ಒಂದೊತ್ತಿನ
ಉಣ್ಣುವ ಊಟವು ಬಿಟ್ಟು
ಮೇಘನ ಮೇಲೆ ಆಣೆಯಿಟ್ಟು
ಬೇಡೋಣ ಭೂತಾಯಿ ಒಲವಿಗೆ
ಆತಂಕಬೇಡ ನಾವಿರುವೆವು ನಿಮಗಾಗಿ

ಹೋಗಿಯೇ… ಬಿಡಲಿ
ಅನುಕಂಪವಿರದೆ ಈ ದೇಹದ
ಆ ಒಂದು ಕ್ಷಣ ಉಸಿರು…
ಆಗಲಿ ಆವಾಗಲಾದರೂ
ಭೂಮಡಿಲ ಒಡಲು ಹಸಿರು
ಆತಂಕಬೇಡ ನಾವಿರುವೆವು ನಿಮಗಾಗಿ

ಬದುಕು ಬರಿ ಬರವಲ್ಲ
ಸುಡು ಬಿಸಿಲಿನಿ ಸಿಡೆಲೆಯಾದರೂ
ಬಿಡಲು-ಕೈಬಿಡಳು ಭೂಮಾತೆ
ತನ್ನ-ಕುಡಿಗಳಾಗಿರುವ…
ನಮ್ಮೆಲ್ಲರನ್ನೂ…. ಪೊರೆದವಳು
ಆತಂಕಬೇಡ… ನಾವಿರುವೆವು ನಿಮಗಾಗಿ

ಬೆಂಕಿ ಉಂಡೆಯ ಝಳದಲ್ಲೂ
ತಂಪನೆಯ ತಂಗಾಳಿ ಕಾಣುತ
ಮೈಕೊರೆವ ಮಾಗಿ ಚಳಿಯಲ್ಲೂ
ಬೆಚ್ಚಗಿನ ಬದುಕು ಅರಸಿದವರು
ಆತಂಕಬೇಡ… ನಾವಿರುವೆವು ನಿಮಗಾಗಿ

ಬಿಸಿಲು-ಗಾಳಿ-ಮಳೆಯೆನ್ನದೆ
ಮೈ-ಕೈ ಒಡ್ಡಿ ಮುದಡದ
ಬೆಳೆದು… ಬಾಳಿದವು…
ನನ್ನೂರಿನ ಹೆಮ್ಮೆಯ ಸಿರಿಯುಳ್ಳ
ನಾಡಿನ ಸಾರ್ವಭೌಮರು ನೀವು
ಆತಂಕಬೇಡ… ನಾವಿರುವೆವು ನಿಮಗಾಗಿ

ಬಿಡುವದಿಲ್ಲ… ನಾವು…
ಶರಣಾಗಲು ಸಾವಿಗೇ ನೀವು
ಬರದ ಬೇಗೆಯ ಹಲವು
ವೃಷ್ಟಿ-ಅನಾವೃಷ್ಟಿಗಳೇ ಮುತ್ತಲಿ
ಆತಂಕಬೇಡ ನಾವಿರುವೆವು ನಿಮಗಾಗಿ

ಬೆಂಕಿ ಉಗುಳುತ ಚೆಲ್ಲಲಿ
ಧರೆಯೆ ದಹಿಸುತಲಿ…
ಎದೆಗುಂದಿ… ತಲೆಬಾಗದೆ
ಧೈರ್ಯ ಒಂದೆ ಸರ್ವಸಾಧನೆ
ಮೇರು ಸವಾಲು ಸ್ವೀಕಾರವಿರಲಿ
ಆತಂಕಬೇಡ ನಾವಿರುವೆವು ನಿಮಗಾಗ….

ಬದುಕು-ಗೆಲ್ಲುತಲಿ
ಜಗವೆಲ್ಲಾ ಗೆಲ್ಲಿರಿ…
ಆತ್ಮಹತ್ಯೆಯ ಆಲಿಂಗನದಿ
ಬಡತನದ ಭೂತಕ್ಕೆ ಬೆದರಿ
ಮರೀಚಿಕೆ ಸವಾರಿಬೇಡ
ಆತಂಕಬೇಡ… ನಾವಿರುವೆವು
ನಿಮಗಾಗಿ ಸದಾ… ನಿಮಗಾಗಿ

*****