ಹೆಚ್‌ಪಿ ಲೇಸರ್‌ಜೆಟ್ ಪ್ರಿಂಟರ್ ಮೇಲೆ
ಕುಗ್ರಾಮದ ಮುದುಕಿಯಂತೆ ಹೊದೆಯಲ್ಪಟ್ಟಿರುವ
ಕಡುಗುಲಾಬಿ ವರ್ಣದ ದಾವಣಿ-
ಬ್ರೌಸಿಂಗ್ ಸೆಂಟರ್‌ನ ಹುಡುಗಿಯ ಮೈ ಮೇಲೆ ಬೀಳಲು
ಕಳ್ಳ ಸಂಚೇನೋ ಹೂಡುತ್ತಿರುವಂತಿರುತ್ತದೆ.

ಅವನ ಗುಪ್ತ ಪ್ರೇಮ ವ್ಯವಹಾರ, ಕೈ ಸನ್ನೆಗಳು ಇನ್ನಿತರ
ತೆವಲುಗಳು ಮುಗಿದ ಬಳಿಕ ಆ ಹುಡುಗಿ ಅಲ್ಲಿರಲಾರಳು.

ಅಲ್ಲಿಂದ ನೆಲಕ್ಕೆ ಬಿದ್ದು, ಮೇಲೇಳಲಾಗದೆ ಒದ್ದಾಡಿಕೊಂಡು
ಕುಂಟುತ್ತಾ ಮೂಲೆ ಸೇರಿಕೊಳ್ಳುತ್ತದೆ.

ಕಸ ಗುಡಿಸುವವಳು ಬಂದು ಅದನ್ನು ಪ್ರಿಂಟರ್ ಮೇಲೆ
ಹೊದೆಯುತ್ತಾಳೆ.

ಮತ್ತೆ ಆ ಹುಡುಗಿ ಬರುತ್ತಾಳೆ:
ಚಿನ್ನದಬಣ್ಣದೊಂದಿಗೆ ಮತ್ತೊಂದು ಸಂಜೆ ಆವರಿಸಿಕೊಳ್ಳುವುದು.

ಆ ದಾವಣಿ ಬಿಟ್ಟು ಹೋದವಳ ಬದುಕು ಎಂಥದಿರಬಹುದು?
ಯೋಚಿಸುತ್ತೇನೆ.
*****

Latest posts by ಮಂಜುನಾಥ ವಿ ಎಂ (see all)