Home / ಲೇಖನ / ಹಾಸ್ಯ / ಅವರ ‘ಸರ್ವಿಸು’

ಅವರ ‘ಸರ್ವಿಸು’

“ಜಿ. ಬಿ.” ಕ್ಲಬ್ಬಿನ ಮೂವತ್ತು ಸದಸ್ಯರಿಗೂ ತಮ್ಮ ಫೋಟೋ ತೆಗೆಸಬೇಕೆಂದು, ಒಂದು ವಸಂತ ಋತುವಿನ ರಾತ್ರೆಯಲ್ಲಿ, ಕ್ಲಬ್ಬಿನಲ್ಲಿ ಕುಳಿತು ಐಸ್ ಕ್ರೀಮನ್ನು ತಿನ್ನುತ್ತಾ, ಆಲೋಚನೆಯಾಯಿತು. ಊರಲ್ಲಿ ಯಾವ ಫೋಟೋಗ್ರಾಫರನು ಅತಿ ಕುಶಲನೆಂಬ ಪ್ರಶ್ನೆ, “ಯೋಶ್ವ” ಎಂದನೊಬ್ಬ; “ಹೈಮನ್ಸ್” ಎಂದನು ಮತ್ತೊಬ್ಬ; “ಫೋನ್ಸ್” ಎಂದನು ಮಗದೊಬ್ಬ; “ಕಪಾಲರಾಯರು” ಎಂದನು ಇನ್ನೊಬ್ಬ. ಚರ್ಚೆ ನಡೆದು ವೋಟು ತೆಗೆಯಲಾಗಿ… ನಿಮಗೆ ಆಶ್ಚರ್ಯವೆನಿಸಬಹುದು-… ಆ ನಾಲ್ವರಲ್ಲಿ ಯಾರನ್ನೂ ಆರಿಸದೆ, ಆಕಸ್ಮಿಕವಾಗಿ ಸಿ. ವಿ ಕೋಮಟಿಯವರ ಕಡೆಗೆ ಬಹುಮತವು ಮಾಲಿತು! ಮಂಗಳೂರಿಗೆ ಬಂದ ಮೊದಲನೇ ಕೆಮರವನ್ನು ಕೊಂಡುಕೊಂಡವರೇ ಇವರಂತೆ! “ಸರ್ವಿಸು” ಹೆಚ್ಚಾದ ಇವರೇ ಒಳ್ಳೆಯ ಫೋಟೋ ಎತ್ತಬಲ್ಲರೆಂದು ಬಹುಮತವು ನಿರ್ಧರಿಸಿತ್ತು.

ಮರುದಿನ ಬೆಳಿಗ್ಯೆ ಏಳು ಘಂಟೆಯೊಳಗೆ ಸದಸ್ಯರೆಲ್ಲ ಸಾಲಂಕೃತರಾಗಿ ಹಾಜರಾದರು. ಮೀಸೆಗಳು ಕಾಣಬಾರದೆಂದು ಬೋಳಿಸಿ ಕೊಂಡವನೊಬ್ಬ; ಕ್ರಾಪ್ ಹೊಳೆಯ ಬೇಕೆಂದು ಅರ್ಧ ಬಾಟಲಿ ವೆಸಲೀನ್ ಹಚ್ಚಿದವನೊಬ್ಬ; ಗಡ್ಡವೇನೂ ತೋರಬಾರದೆಂದು, ಮುಂಜಾನೆ ೪ ರಿಂದ ೬ ರ ತನಕ ಪ್ರಯತ್ನ ಪೂರ್ವದ ಕ್ಷೌರ ತೆಗೆಸಿದವನೊಬ್ಬ; ಅಳುಮೊಗವು ತೋರಬಾರದೆಂದು, ಕಳೆದ ರಾತ್ರೆಯ ಹೆಂಡತಿಯ ತೀಕ್ಷ್ಣ ನುಡಿಗಳನ್ನು ಮರೆಯಲೆತ್ನಿಸಿ, ನಗಲು ಸಾಹಸ ಗೊಂಡವನೊಬ್ಬ.

ಫೋಟೋಗ್ರಾಫರ ಕೋಮಟಿಯವರು, ಕೈಝರನ ಗಾಂಭೀರ್‍ಯವನ್ನು ಜತೆಯಲ್ಲಿ ಕರಕೊಂಡು ಬಂದು, ಕೆಮರವಿಟ್ಟರು, ಕ್ಲಬ್ ಮೆಂಬರರೆಲ್ಲ ಒಂದು ಮಾವಿನ ಮರದ ಕೆಳಗೆ ಕುಳಿತುಕೊಂಡರು. ಕೋಮಟಿಯವರು ಶಾಲಾ ಆಧ್ಯಾಪಕನಂತೆ, ಅವರೆಲ್ಲರನ್ನೂ ಕ್ರಮವಾಗಿ ಕುಳ್ಳಿರಿಸಿದರು. ಎಂಟರ ತನಕ ಹೀಗೆ ಅವರನ್ನು ದಣಿಸಿ, ಕೊನೆಗೆ “ನಗುತ್ತಿರ್ರಿ!” ಎಂದರು. ಮೆಂಬರರೆಲ್ಲ ಏಕಕಾಲದಲ್ಲಿ, ತಂತಮ್ಮ ಸಂಸಾರ ತಾಪತ್ರಯಗಳನ್ನೆಲ್ಲ ಆ ಒಂದು ಕ್ಷಣಕ್ಕೆ ಮರೆತು, ಕಿಸಕ್ಕೆಂದು ನಕ್ಕರು. ಕೋಮಟಿಯವರು “ಇನ್ನು ನೀವು ಏಳಬಹುದು” ಎಂದು ಅನುಜ್ಞೆಯಿತ್ತು, ಫೋಟೋ ಪ್ರತಿಯೊಂದೊಂದನ್ನು ಒದಗಿಸುವ ಬಗ್ಗೆ ಮೂವತ್ತು ಸದಸ್ಯರಿಂದ ಮೂವತ್ತು ರೂಪಾಯಿಗಳನ್ನು ಪಡಕೊಂಡು, ಗಾಡಿಯಲ್ಲಿ ಕುಳಿತು, ತಮ್ಮ ಮನೆಗೆ ತೆರಳಿದರು.

ವಸಂತ‌ಋತುವಿನ ಮೇಲೆ ಎರಡು ಋತುಗಳು ಕಳೆದುವು; ಛಳಿಗಾಲ ಬಂತು. ಕೋಮಟಿಗಳು ಫೋಟೋ ಪ್ರತಿಗಳನ್ನು ಇನ್ನೂ ತಯಾರಿಸುತ್ತಲೇ ಇದ್ದರು. ಬೇಸರ ಹುಟ್ಟಿ ನಾನು….

ಹಣ ಕೊಟ್ಟವರಲ್ಲಿ ನಾನೂ ಒಬ್ಬನು!

….ನಾನು ಅವರ ಮನೆ ತನಕವೂ ಪ್ರಯಾಣ ಬೆಳೆಸಿ ಕೇಳಿದೆ:- “ಕೋಮಟಿಯವರೇ, ಹೇಗೆ ಬಂದಿದೆ ಫೋಟೋ? ಪ್ರತಿಗಳು ಸಿದ್ಧವಾಗಿವೆಯೇ?”

ಕೋಮಟಿಯವರು ತಮ್ಮ ದೀರ್ಘಕಾಲದ ಸರ್ವಿಸಿನ ಮುಖವನ್ನು ಅವರೇ ಕಾಳಿನಷ್ಟು ಸಣ್ಣದು ಮಾಡಿ ಒಂದು ಪಂಕ್ತಿಯನ್ನು ಪ್ರಯತ್ನಪೂರ್ವಕವಾಗಿ ಉಸಿರಿದರು:- “ಸ್ವಾಮಿ, ಕ್ಷಮಿಸಿರಿ; ಆ ದಿನ ನಾನು ಕೆಮರದೊಳಗೆ ಪ್ಲೇಟನ್ನಿಡಲು ಮರೆತಿದ್ದೆನು, ಇನ್ನೊಮ್ಮೆ ಅತ್ತ ಬರಲು ನಾಚಿಕೆಯಾಯಿತು! ನಿಮ್ಮ ಫೋಟೋವನ್ನು ತೆಗೆಯಲೇ ಇಲ್ಲ!!”
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...