ನಿಂತ ನೆಲವೆ ದ್ವೀಪವಾಗಿ
ಕೂಪದಾಳದಲ್ಲಿ ತೂಗಿ
ಕಂದಕವನು ಕಾವಲಾಗಿ
ತೋಡಿದಂತೆ ನನ್ನ ಸುತ್ತ
ಒಂದು ಕಲ್ಲ ವೃತ್ತ.
ಹೃದಯ ಮಿದುಳು ಕಣ್ಣು ಕಿವಿ
ಉಂಡ ಸವಿ, ಮನದ ಗವಿಯ
ತಳದಲೆಲ್ಲೊ ಪಿಸುಗುಟ್ಟುವ
ಪಿತಾಮಹರ ಚಿತ್ತ-
ಕೊರೆದುದಂತೆ ಈ ವಲಯ
ಇದೇ ನನ್ನ ಎಲ್ಲ ಕಲೆಯ
ಗರಡಿಮನೆ, ಗಣೆಯ ಕೊನೆ,
ಬಳಸಿ ಕವಿದ ಹುತ್ತ
ಒಳಗೆ ನೆಲದ ಕೆಳಗೆ ತಳವೆ
ಇರದ ಇರುಳ ಕೊಳವಿಯೊಳಗೆ
ಹತ್ತಿಳಿಯುವೆ ಸದಾ ಹಳಸು-
ಗಾಳಿಯ ಹೀರುತ್ತ.

ಒಂದಲ್ಲ ಹತ್ತಲ್ಲ
ಸುತ್ತ ಕಣ್ಣು ಹರಿವಲ್ಲೆಲ್ಲ
ಹುತ್ತದಂತೆ ಎದ್ದುನಿಂತ
ಇಂಥ ಲಕ್ಷ ವೃತ್ತ.
ಕೆಲಕೆಲವಕೆ ಕಿಂಡಿಯುಂಟು
ಕೆಲಕೆಲವಕೆ ಕಿಟಕಿಯುಂಟು
ದೊಡ್ಡ ದೊಡ್ಡ
ಬಾಗಿಲುಂಟು
ಲಕ್ಷದಲ್ಲಿ ನಾಲ್ಕಕೆ.
ಉಳಿದವುಗಳ ತಳದಲೆಲ್ಲೊ
ಸಣ್ಡದೊಂದು ಸಂದಿದಾರಿ
ಆಮದು ರಫ್ತಿಗೆ ಸಾಲದ
ಗಾಳಿ ಬೆಳಕ ವೈರಿ.

ಕಲ್ಲಗೋಡೆ ಹೊರಗೆ ದಿನಾ
ಬಿಲ್ಲು ಹಿಡಿದ ಎಷ್ಟೊ ಜನ
ಗವಿಯ ತಳದ ಸಂದಿಯಿಂದ
ತೆವಳಿ ಹೊರಗೆ ಬರುವರು.
ಬಾಣ ತೂಗಿ ಬೆನ್ನಿನಲ್ಲಿ
ಏನೊ ಉರಿದು ಕಣ್ಣಿನಲ್ಲಿ
ಬಿಸಿಲು ಕೆರಳುತಿದ್ದೆಂತೆಯೆ
ಸಂತೆ ಸೇರಿ ಕುಣಿವರು.
ನಾಯಿಯ ನಾಲಗೆಯಾದರು
ಕಿವಿಯಿಲ್ಲದ ನಾಗರು;
ಕೆನ್ನೆ ಕೆನ್ನೆ ತಿಕ್ಕಿ ಉಬ್ಬಿ
ಬೆನ್ನು ಬೆನ್ನು ಕೊಟ್ಟು ದಬ್ಬಿ
ಬೇತಾಳಕೆ ಕಾಮವರ್ಧಿನೀ ರಾಗವ ಹಬ್ಬಿ
ಸೊಕ್ಕಿ ಕೆರಳುಗೊರಳಿನಲ್ಲಿ
ಭೂತಕುಣಿತ ಕುಣಿವರು;
ಬಿಸಿಲಾರಿತೊ ಎಲ್ಲ ಓಡಿ ಗವಿಯ ತಳಕೆ ಸರಿವರು.

ಇವರ ನಡುವೆ ಬೆರೆಯದೆ
ಕಂಡವರನು ಕರೆಯದೆ
ಎಲ್ಲೊ ನಾಲ್ಕು ಜನರು ಅಲ್ಲೆ ದೂರದಲ್ಲಿ ನಿಲುವರು.
ಬಾವಿಗಣ್ಣು ಈಟಿಮೂಗು
ಬಡಕಲು ಮೈಯವರು.
ಗುಂಡಿಗೆನ್ನೆ ಬಟ್ಟತಲೆ
ಹೆಚ್ಚು ಹೊದೆಯದವರು.
ಶಾಂತರಾಗಿ ದೂರ ನಿಂತು
ಚಿಂತೆ ತುಡಿವ ಕಣ್ಣಿನಿಂದ
ಸಂತೆಯತ್ತ ನೋಡಿ ಖಿನ್ನರಾಗಿ ಹಿಂದೆ ಸರಿವರು.

ಸದಾ ಹೊರಗೆ ನಿಲುವ ಇವರು
ಅಪ್ಪಿತಪ್ಪಿ ಎಲ್ಲೊ ಒಮ್ಮೆ
ವೃತ್ತದಲ್ಲಿ ಸರಿವರು,
ಕಿಟಕಿ ಬಾಗಿಲನ್ನು ಮಾತ್ರ ಸದಾ ತೆರೆದೆ ಇರುವರು.
ಯಾರಿವರು, ಯಾರಿವರು?
ಎಷ್ಟು ಅಳೆದು ಸುರಿದರೂ
ಇಷ್ಟು ವರುಷ ಕಂಡರೂ
ತಿಳಿಯದೆ ಹೋದವರು?

ಬಿಸಿಲಿನಲ್ಲಿ ನೆರೆದ ಸಂತೆ
ಸಂಜೆಯಿಳಿದು ಕರಗುತಿದೆ,
ಸೊಕ್ಕಿ ಕುಣಿದ ಬೇಡರ ಪಡೆ
ಮತ್ತೆ ಗವಿಗೆ ತೆರಳುತಿದೆ,
ಜೊತೆಗಿದ್ದರು ಅವರು ಮಬ್ಬು ರೂಪವಷ್ಟೆ ಕಾಣುತಿದೆ.
ಕೇಳುತಿದೆಯ ಮಾತು? ಇಲ್ಲ.
ತುಂಬುತ್ತಿದೆ ಕಿವಿಯ ನನ್ನ ಕೂಗೆ ಗಿರಣಿ ಸಿಳ್ಳಿನಂತೆ.
ಬರೆಯುತ್ತಿರುವೆ ಸ್ವಂತ ಭಾಷ್ಯ
ಸುತ್ತಲಿರುವ ಜನರ ನಡೆಗೆ,
ಕಿರಿಚುತ್ತಿರುವೆ ‘ಉಳಿದುದೆಲ್ಲ ಸುಳ್ಳು
ಇಷ್ಟು ಮಾತ್ರ ಸತ್ಯ:
ನನ್ನ ಒಲೆಗೆ ಇಟ್ಟ ಸೌದೆ
ಗಡಿಗೆ ಮತ್ತು ಆದ ನಡಿಗೆ’

ಕಣ್ಣ ಮುಚ್ಚಿ ಕಿರಿಚುವಾಗ ಸರಕ್ಕನೆ ಏನೊ ನೆನಪು;
ದೂರ ನಿಲುವ ಸ್ವಲ್ಪ ಜನರ ಕಣ್ಣಲ್ಲಿದ್ದ ತಂಪು ಬೆಳಕು,
ಕುಣಿಯುತಿರುವ ಮಂದೆ ಕಡೆಗೆ ನೋವಿನಿಂದ, ಕರುಣೆಯಿಂದ
ನೋಡಿದಾಗ ಮೂಡುತಿದ್ದ ಬಿಚ್ಚಲಾಗದಂಥ ಒಡಪು
ಕಿರಿಚುಗೊರಳಿಗಡ್ಡವಾಗಿ
ಕಿವುಡು ಕಿವಿಯ ಶೂಲವಾಗಿ
ಇರಿಯುತಿರಲು
ವೃತ್ತದಲ್ಲಿ
ಎಲ್ಲೂ ಗಾಳಿ ಬೆಳಕು!
*****

Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)