ಹಿತ್ತಲು ನನ್ನದು
ಯಾಕೆಂದರೆ ಅಲ್ಲಿಯೇ ನನ್ನ
ಕನಸುಗಳು ಚಿಗುರಿದ್ದು
ಪಿಸುಮಾತು ಆಡಿದ್ದು
ನಲ್ಲನ ಜೊತೆ ಕಾಮನಬಿಲ್ಲ ಏರಿದ್ದು
ಗೆಳತಿಗೆ ಎಲ್ಲಾ ಉಸುರಿದ್ದು
ಕಣ್ಣೀರು ಹಾಕಿದ್ದು
ಮತ್ತೆ ಮತ್ತೆ ಕಣ್ಣೋರಿಸಿಕೊಂಡು
ಆತನ ಮಾತು ಕೇಳಿ ಸಮಾಧಾನಿಸಿಕೊಂಡಿದ್ದು
ಮುಳುಗಿಯೇ ಹೋಗಿದ್ದ ಬದುಕಿಗೆ
ಮತ್ತೆ ಬಣ್ಣ ತುಂಬಿದ್ದು ಇದೇ
ಹಿತ್ತಲಲ್ಲಿ
ಅದೇ ಬಸಲೇ ಬಳ್ಳಿ ಚಪ್ಪರದ  ನೆರಳಲ್ಲಿ
ನಡು ಮನೆಯ ಪಡಸಾಲೆ
ಅವ್ವನದು
ಅಲ್ಲಿಯೇ ಅವ್ವನ ಪಾರ್ಮಾನಿಗೆ ಅಪ್ಪ
ತಲೆಯಾಡಿಸಿದ್ದು
ಒಲ್ಲದ ಮನಸ್ಸಿಂದ ಹಳೆಯ ಗೂಟಕ್ಕೆ
ಕೊರಳೊಡ್ಡಿದ್ದು
ಇನ್ನು ಜಗುಲಿ ಅಪ್ಪನದು
ಅಲ್ಲಿಯೇ ಅಪ್ಪನ ಲಕ್ಷ್ಮಣ ರೇಖೆ
ಜಗುಲಿಯ ಮಾತು ಒಳಜಗತ್ತಿಗೆ
ಶಾಸನ
ಉರುಳೋ ಇರುಳೋ
ಕೊರಳೊಡ್ಡಿದ್ದು ಅವ್ವ
ನಂತರದ ಸರದಿ ಹೆಣ್ಣು ಸಂತತಿಯದೇ
ಹೊರ ಜಗತ್ತಿಗೆ ಒಳಗಿನ ಲೋಕ ಕಾಣಲಿಲ್ಲ
ಒಳಗಿದ್ದವರಿಗೆ ಹೊರಲೋಕ ಕಾಣಲಿಲ್ಲ
ಜಗುಲಿ ದರ್ಬಾರಿನಲ್ಲಿ