ಹೆಣ್ಣಾಗಿ ಹುಟ್ಟಿದೆನೆಂದು
ಹಣೆಬರಹಕೆ ಹಳಿಯದಿರು,
ನಿನ್ನ ತುಳಿದವರು
ನಾಚಿ ನೀರಾಗುವ ಕಾಲ
ದೂರವಿಲ್ಲ ಕೇಳು.

ಮನು ಮಹಾಶಯರ
ಧರ್ಮ ಶಾಸ್ತ್ರಗಳ ಹೊತ್ತು
ಗೊಡ್ಡು ವಿಚಾರಗಳಿಗೆ ತಲೆಕೊಟ್ಟು
ಕೆರೆ-ಬಾವಿಗಳಿಗೆ
ಹಾರವಾಗುವದ ನಿಲ್ಲಿಸು,

ತುಂಬಿದ ಸಭೆಯಲ್ಲಿ
ಅಸಹಾಯಕಳಾಗಿ ನಿಂತು
ಸೀರೆಯನು ಸೆಳಸಿಕೊಳ್ಳುತ್ತ
ಅವಮಾನದ ಬೆಂಕಿಯಲಿ
ಬೇಯುವದ ನಿಲ್ಲಿಸು.

ಸಂಶಯದ ಸುಳಿಗೆ ಸಿಕ್ಕು
ಅಗ್ನಿ ಪರೀಕ್ಷೆಗೆ ಮೈಯೊಡ್ಡಿ
ಶೀಲವನ್ನು ಶಂಕಿಸಿಕೊಳ್ಳುವ
ಸೀತೆಯಾಗುವದ ನಿಲ್ಲಿಸು.

ಹೃದಯಹೀನರ ಸಂತೆಯಲಿ
ಕೇವಲ ವಸ್ತುವಾಗಿ,
ಹೊಡೆತಕ್ಕೆ ಮೈಕೊಟ್ಟು,
ಒಳಗೊಳಗೇ ರೋದಿಸುವ
ಕಪ್ಪು ಕತ್ತಲೆ ಕೋಣೆಗೆ
ಕೈದಿಯಾಗುವುದ ನಿಲ್ಲಿಸು.

ನಿನ್ನೊಡಲ ತುಂಬ
ಈಡೇರದೇ ಬಿಕ್ಕುತಿಹ
ಸತ್ತಬಯಕೆಗಳ ಚೀತ್ಕಾರ
ಸಂಪ್ರದಾಯಗಳ ಕಪ್ಪು ಹೊಗೆ
ದಟ್ಟ ನೋವಿನ ಛಾಯೆಗೆ
ಧ್ವನಿಯ ನೀಡು.

ನಾನು, ನೀನು, ಸೀತೆ
ಮತ್ತೆ ದೌಪದಿ
ಎಲ್ಲರೂ ನೊಂದವರು,
ದಾಸ್ಯದ ಕೊಂಡಿ ಕಳಚಿ
ಹೊರಗೆ ಬಾ ಗೆಳತಿ,

ಕೈಗೆ ಕೈ ಕೂಡಿಸು
ನವಚೇತನ ನಮ್ಮದು
ಬದುಕಿನ ಹೋರಾಟ
ಮುಗಿಯಲಿಲ್ಲ ಗೆಳತಿ
ಮುಗಿಯಲಿಲ್ಲವೋ.
*****