ತರಂಗಾಂತರ – ೭

ತರಂಗಾಂತರ – ೭

ಸುಂದರ ಹುಡುಗಿಯರು ಬಂದವರಿಗೆ ಬಟ್ಟೆ ತೊಡಿಸುವುದಕ್ಕೆ ಸಿದ್ಧರಾಗಿ ನಿಂತಿದ್ದರು. ಆಧುನಿಕ ಶೈಲಿಯ ಬ್ಯಾಗಿ ಪ್ಯಾಂಟ್ಸ್, ಸ್ಟ್ರೈಪ್ಡ್ ಶರ್ಟು ಕೊಂಡು ಕೊಂಡು ಸಾಯಂಕಾಲ ಮನೆಗೆ ಮರಳಿದ. ರೇಶ್ಮಳಿಗೆ ಏನಾದರೂ ಕೊಳ್ಳಬಹುದಿತ್ತು. ಅದಕ್ಕೆ ಸಮಯ ಈಗ ಅಲ್ಲ. ಮುಂದೊಂದು ದಿನ ಅವಳ ಜತೆ ಸ್ವಪ್ನಲೋಕಕ್ಕೆ ಬಂದು ಏನೇನು ಬೇಕೋ ಅದನ್ನೆಲ್ಲ ಕೊಂಡರಾಯಿತು ಎಂದುಕೊಂಡ.

ಸ್ನಾನ ಮಾಡಿ, ಹೊಸ ಪ್ಯಾಂಟು ಶರ್ಟು ಧರಿಸಿ ಕನ್ನಡಿಯಲ್ಲಿ ಹಲವು ಯಾಂಗಲುಗಳಿಂದ ಪ್ರತಿಬಿಂಬ ನೋಡಿಕೊಂಡ. ಗಡ್ಡ! ಅದನ್ನ ತೆಗೀಬಹುದಿತ್ತು ಸ್ವಲ್ಪ ಟ್ರಿಮ್ಮಾದರೂ ಮಾಡಿಕೋಬಹುದಿತ್ತು. ಬೇಡ. ಇರಲಿ ಎಂದುಕೊಂಡ. ತೆಗಿಯೋದು ಸುಲಭ. ಬೆಳೆಸೋದು ಕಷ್ಟ ಎಂದು ರಾಕ್ಲಿಟಸನ ಶೈಲಿಯಲ್ಲಿ ವಾಕ್ಯವೊಂದು ಮನಸ್ಸಿಗೆ ಬಂತು. ಅಂತೂ ಕೊನೆಗೆ ಮನೆಯಿಂದ ಹೊರಟು ಲಿಫ಼್ಟ್ ಗೆ ಕಾಯದ ಮೆಟ್ಟಲೇರಲು ತೊಡಗಿದಾಗ, ಬಹಳ ಮುಖ್ಯ ಸಂಗತಿಯಾದ ರಿಮೋಟನ್ನ ಮನೆಯಲ್ಲೆ ಬಿಟ್ಟುಬಂದುದು ನೆನಪಾಗಿ ಮತ್ತೆ ಕೆಳಗಿಳಿದು ಹೋದ. ಯಾಕೆ ಹೀಗಾಗುತ್ತದೆ? ವಿನಯಚಂದ್ರ ಆರ್ಥಡಾಕ್ಸ್ ಅಲ್ಲ. ದುಶ್ಶಕುನಗಳಲ್ಲಿ ಅವನಿಗೆ ನಂಬಿಕೆಯಿಲ್ಲ. ಪರೀಕ್ಷಾ ದಿನಗಳಲ್ಲಿ ಎಷ್ಟೋ ಬೆಕ್ಕುಗಳು ಅವನ ಮುಂದೆ ಹಾದುಹೋಗಿದೆ. ಯಾಕೆಂದರೆ, ಪಕ್ಕದ ಮನೆಯವರು ಬೆಕ್ಕುಗಳನ್ನು ಸಾಕುತ್ತಾರೆ. ಅವರಿಗೆ ಪ್ರಾಣಿಗಳೆಂದರೆ ಇಷ್ಟವಂತೆ. ಗ್ರೌಂಡ್ ಫ್ಲೋರ್ ನಲ್ಲಾದರೆ ನಾಯಿಗಳನ್ನೂ ಸಾಕಬಹುದಿತ್ತು ಎಂದು ಕರುಬುತ್ತಾರೆ. ಈ ಕೊರತೆಯನ್ನು ನೀಗಿಸಲು ಅವರು ಮನೆಯಲ್ಲಿ ಐದಾರು ಬೆಕ್ಕುಗಳನ್ನು ಇಟ್ಟುಕೊಂಡಿದ್ದಾರೆ. ಅವು ಆಗಾಗ ಮನೆಯಿಂದ ಹೊರಬಿದ್ದು ಇಡೀ ಕೈಲಾಸವನ್ನ ಸುತ್ತುತ್ತ ಇರುತ್ತವೆ – ಎಲ್ಲರನ್ನೂ ಮಿಯಾಂ ಮಿಯಾಂ ಎಂದು ಕರೆಯುತ್ತ. ಬೆಕ್ಕುಗಳ ಮೂಲ ಭಾಷೆ ಉರ್ದೂ ಇದ್ದಿರಬಹುದು. ವಿನಯಚಂದ್ರನ ತಾಯಿಗೆ ಬೆಕ್ಕುಗಳು ಅಡ್ಡ ಹಾಯಬಾರದು ಎನ್ನುವ ಆತಂಕ. ಪ್ರಾಣಿಗಳ ಕುರಿತಾದ ಯಾವುದೇ ಶಕುನಗಳೂ ಚಾಲ್ತಿಯಲ್ಲಿರೋದು ನೆಲದ ಮೇಲೆ ಮಾತ್ರ, ಆಕಾಶದಲ್ಲಲ್ಲ ಎಂದು ವಿನಯಹಂದ್ರ ಆಕೇನ ಸಮಾಧಾನಪಡಿಸಿದ್ದಾನೆ. ಆದರೆ ಈಗ ಮೇಲಿಂದ ಮೇಲೆ ಹೀಗೆ ತನ್ನ ಕೆಲಸಕ್ಕೆ ತಡೆ ಬರುತ್ತಿರೋದನ್ನು ಕಂಡು ಅವನ ವಿಶ್ವಾಸಗಳೂ ಕುಸಿಯತೊಡಗಿದುವು. ತಾನು ದೇವಾಲಯಕ್ಕೆ ಭೇಟಿಕೊಡದೆ ಹಲವಾರು ವರ್ಷಗಳಾದುವು. ಅಷ್ಟೇ ಅಲ್ಲ, ದೈವವಿರೋಧಿ ಯಂತೆ ವರ್ತಿಸೋದಕ್ಕೆ ಸುರುಮಾಡಿದ್ದೇನೆ. ಅದರ ಅಗತ್ಯವಿಲ್ಲದಿದ್ದರೂ! ಈ ಸಕಲ ವಿಷಯಗಳನ್ನೂ ತಾನು ಚರ್ಚಿಸಬಹುದಾದರೆ ರೇಶ್ಮಳ ಜತೆ ಮಾತ್ರ, ಸುಸ್ತಾದ ತನ್ನ ಬದುಕಿಗೆ ರೇಶ್ಮ ಒಂದು ನೆಲೆ, ನಿಲ್ದಾಣ, ದಿಕ್ಸೂಚಿ, ಟಾನಿಕ್ ಸಕಲವೂ.

ಬೆಲ್ ಒತ್ತಿದಾಗ ತೆರೆದವಳು ಅವಳೇ. ಬಹಳ ಸುಂದರವಾಗಿ ಡ್ರೆಸ್ ಮಾಡಿಕೊಂಡಿದ್ದಳು.

“ಕಮ್ ವಿನ್! ಕಮಿನ್!” ಎಂದು ಆಹ್ವಾನಿಸಿದಳು.

ವಿನಯಚಂದ್ರನಿಗೆ ಅವಳನ್ನು ಹಿಡಿದು ಮುದ್ದಿಸಬೇಕೆನಿಸಿತು. ಅಂಥ ಯಾವ ಸಾಹಸಕ್ಕೂ ಕೈಹಚ್ಚದೆ ಅವಳು ತೋರಿಸಿದ ಸೋಫಾದ ಮೇಲೆ ಹೋಗಿ ಕುಳಿತುಕೊಂಡ.

“ವಾಟ್ ವಿಲ್ ಯೂ ಹ್ಯಾವ್? ಕಾಫ಼ಿ, ಚಹಾ, ಶರಬತ್ತು?”

“ನಥಿಂಗ್. ಈಗ ಮನೆಯಿಂದ ಕುಡಿದು ಬಂದೆ.” ಎಂದು ಸುಳ್ಳು ಹೇಳಿದ.

“ನೋ ನೋ ಯೂ ಮಸ್ಟ್ ಹ್ಯಾವ್ ಸಂಥಿಂಗ್!” ಎಂದು ಒಳಕ್ಕೆ ಹೋಗಿ ಫ಼್ರಿಜ್ ನಿಂದ ಒಂದು ಗ್ಲಾಸ್ ಫ಼ೈನಾಪಲ್ ಜ್ಯೂಸ್ ತಂದಿತ್ತಳು. ನನ್ನ ಸಕಲ ನಿರ್ಣಯಗಳನ್ನೂ ನಿನಗೆ ಬಿಟ್ಟುಕೊಟ್ಟರೆ ಹೇಗೆಂದು ಯೋಚಿಸಿದ. ಏನು ಕುಡಿಯಬೇಕು, ಕುಡಿಯಬಾರದು, ಯಾವ ಡ್ರೆಸ್ ಹಾಕಬೇಕು, ಯಾವುದನ್ನ ಹಾಕಬಾರದು…..

“ಏನು ಯೋಚಿಸ್ತ ಇದೀರಿ?”

“ಏನಿಲ್ಲ”

“ಏನೋ ಇದೆ.”

“ನೀವು ಬಹಳ ಸುಂದರವಾಗಿ ಕಾಣಿಸ್ತಿದೀರಿ.”

“ಥಾಂಕ್ಸ್. ಆದರೆ ನಾನೇ ಹಾಳಬೇಕೆಂದಿದ್ದೆ. ಈ ಪ್ಯಾಂಟ್ಸು ಶರ್ಟಿನಲ್ಲಿ ನೀವು ಭಾಳ ಅಟ್ರಾಕ್ಟಿವ್ ಆಗಿ ಕಾಣಿಸ್ತಿದೀರಿ!”

“ಸುಮ್ಮಗೇ ನಾ ಹೇಳಿದ್ದಕ್ಕೆ ಹೇಳ್ತ ಇದೀರಿ!”

“ಖಂಡಿತಾ ಅಲ್ಲ. ನಂಬದೇ ಇದ್ದವರನ್ನ ನಂಬಿಸೋದು ಹೇಗೆ?”

“ಹಲವು ದಾರಿಗಳಿದೆ!”

“ಒಂದನ್ನಾದರೂ ಹೇಳಿ!”

“ಅದೆಲ್ಲಾ ಹೇಳಿ ಬರೋ ಸಂಗತಿಯಲ್ಲ. ಹೃದಯದಿಂದ ಬರಬೇಕು. ಹಾಂ, ಹೃದಯದಿಂದ!”

“ಯಾಕೋ ನೀವಿವತ್ತು ಕಾರಣವಿಲ್ಲದೆ ಆರ್ಗ್ಯುಮೆಂಟೀಟಿವ್ ಆಗುವ ಹಾಗೆ ಕಾಣಿಸ್ತ ಇದೆ.”

“ಆಯ್ತಾಯ್ತು. ಆರ್ಗ್ಯುಮೆಂಟ್ಸ್ ಬೇಡ, ನಿಮ್ಮ ಟೀವಿ ರಿಮೋಟ್ ಕಂಟ್ರೋಲರ್ ನ ರಿಪೇರಿ ಮಾಡಿ ತಂದಿದ್ದೇನೆ.” ಎಂದು ಜೇಬಿನಿಂದ ಅದನ್ನ ತೆಗೆದು ಅವಳ ಕೈಯಲ್ಲಿಟ್ಟ.

“ಹೌ ವಂಡರ್ ಫುಲ್! ಆದರೆ ಇದು ಹೊಸತರ ಹಾಗಿದೆ!”

“ಪ್ಲಾಸ್ಟಿಕ್ ಪೇಂಟಿನಿಂದ ಪಾಲಿಶ್ ಮಾಡಿದ್ದೇನೆ, ಅದಕ್ಕೇ ಹಾಗೆ ಕಾಣಿಸ್ತ ಇದೆ.”

“ಇದರ ಸ್ಟೇರ್ ಪಾರ್ಟ್ಸ್ ಇದಕ್ಕೆಲ್ಲ ಖರ್ಚಾಗಿರಬೇಕಲ್ಲ?”

“ನಥಿಂಗ್. ಎಲ್ಲ ನಮ್ಮ ಲೆಬೊರೇಟರಿಯೊಳಗೆ ಸಿಗತ್ತೆ.”

“ಶುಕ್ರನ್ನ, ಬಹೂತ್ ಶುಕ್ರನ್!”

“ಹಾಗಂದ್ರೆ ಅರೇಬಿಕ್ ನೊಳಗೆ ಥ್ಯಾಂಕ್ಸ್ ಅಂತ.”

“ರೇಶ್ಮ, ಒಂದು ಮಾತು ಕೇಳಲೆ?”

“ಕೇಳಿ”

“ನಿಮಗೆ ಈ ಅರೇಬಿಯಾದ ಕನೆಕ್ಷನ್ ಹೇಗೆ?”

“ಓ! ಅದೊಂದು….”

“ದೊಡ್ಡಕತೆ?”

ಆ ಮಾತಿಗೆ ಅವಳು ಕಿರುನಗೆ ನಕ್ಕಳು. ಅದೇನೂ ಸಂತೋಷ ಸೂಚಿಸುವ ನಗೆಯಾಗಿರಲಿಲ್ಲ. ಮುಖ ಕೆಳಗೆ ಹಾಕಿದಳು. ಇಬ್ಬರ ಮಧ್ಯ ಮೌನ ಬಂದು ಕೊತುಕೊಳ್ಳುವ ಹಾಗೆ ತೋರಿತು.

“ಐ ಯಾಮ್ ಸಾರಿ.” ಎಂದ ವಿನಯಚಂದ್ರ.

“ಯಾತಕ್ಕೆ? ನೀವೇನೂ ತಪ್ಪು ಮಾಡಿಲ್ಲ. ತಪ್ಪು ನಂದೇ.”

“ಇಲ್ಲಿ ತಪ್ಪು ಒಪ್ಪಿನ ಪ್ರಶ್ನೆಯೇನು? ನನಗೊಂದೂ ಅರ್ಥ ಆಗ್ತಾ ಇಲ್ಲ. ನಾನು ಬಹುಶಃ ಬಹಳ ಕ್ಯೂರಿಯಸ್ ಆಗಿದ್ದೇನೆ.”

“ಇಲ್ಲ ಇಲ್ಲ! ನೀವು ಸಹಜವಾಗಿಯೇ ಕೇಳ್ತಿದೀರಿ. ನೀವು ಕೇಳ್ದೆ ಇರ್ತಿದ್ದರೆ ಅಸಹಜ ಅನಿಸ್ತಿತ್ತು. ನಾನು ಕೆಲವು ಬಾರಿ ಅಂದುಕೊಳ್ತೇನೆ: ಎಲ್ಲರೂ ಸಹಜವಾಗಿಯೆ ಇದ್ದರೆ ಎಷ್ಟು ಚಲೋ ಅಂತ. ನಾವು ಭೇಟಿಯಾದ ದಿನ ಎಷ್ಟು ಚೆನ್ನಾಗಿತ್ತು! ನಿಮ್ಮ ಮಾತು ಕೇಳಿ ನಾನು ಮರುಳಾದೆ. ನಾವು ಹಾಗೇ ಇರೋದು ಸಾಧ್ಯ ಇಲ್ವೆ?…..ನೋ, ಡೋಂಟ್ ಸೇ ಎನೀಥಿಂಗ್! ಸಾಧ್ಯವಿಲ್ಲಾಂತ ನನಗೆ ಗೊತ್ತು. ಹೆಚ್ಚೆಚ್ಚು ಪರಿಚಯ ಆದ ಹಾಗೆ ನಾವು ನಗುವ ಕೆಪಾಸಿಟಿಯನ್ನ ಕಳಕೊಳ್ಳುತ್ತೇವೆ ಅಲ್ವೆ?”

“ನಿಜ! ಅದ್ಭುತವಾದ ಮಾತು!”

“ವಿನ್, ಈ ಎರಡು ಮೂರು ದಿನ ನಾನು ಸ್ವಲ್ಪ ಬಿಸಿಯಾಗಿದ್ದೇನೆ. ಹುಡುಗರಿಗೆ ಟೆಸ್ಟ್ ಕೊಡಬೇಕು. ಸ್ಕಾಟರ್ಡೇ ಎಲ್ಲಾದರೂ ಕಲೆಯೋಣ, ಯಾವುದಾದರೊಂದು ಫ಼ಿಲ್ಮ್ ನೋಡ್ಕೊಂಡು ಎಲ್ಲಾದರೂ ಕಲೆಯೋಣ, ಯಾವುದಾದರೊಂದು ಫ಼ಿಲ್ಮ್ ನೋಡ್ಕೊಂಡು ಎಲ್ಲಾದರೂ ಊಟಾನೂ ಮಾಡ್ಕೊಂಡು ಬರೋಣ. ಯೂ ಡಿಸೈಡ್.”

“ವಂಡರ್ ಫ಼ುಲ್! ಫ಼ೋನ್ ಮಾಡಿ ತಿಳಿಸ್ತೇನೆ.”

ಅವಳ ಕೈಕುಲುಕಿದ. ಮನಸ್ಸಿಲ್ಲದ ಮನಸ್ಸಿನಿಂದ ಕೈಯನ್ನು ಬಿಡಿಸಿ ಕೊಂಡು ಅವಳಿಗೆ ವಿದಾಯ ಹೇಳಿ ಹೊರಬಿದ್ದ. ರೇಶ್ಮಾ ಲಿಫ಼್ಟಿನ ತನಕವೂ ಬಂದು ಅವನನ್ನು ಬೀಳ್ಕೊಟ್ಟಳು.

ಶುಕ್ರವಾರ ಸಂಜೆಗೇ ವಿನಯಚಂದ್ರ ತನ್ನ ಪ್ಯಾಕಿಂಗ್ ಮುಗಿಸಿದ: ಒಂದು ವಾರಕ್ಕೆ ಬೇಕಾದ ಬಟ್ಟೆ ಬರೆ, ಸೋಪು, ಹೇರಾಯಿಲ್. ಓಡೋಮೋಸ್ ನ ದೊಡ್ದದೊಂದು ಟ್ಯೂಬು ಓದಲು ಒಂದೆರಡು ಪುಸ್ತಕಗಳು. ಟೂರಿನಲ್ಲಿ ಜಾಗರೂಕನಾಗಿರುವಂತೆ ತಾಯಿ ಪದೇ ಪದೇ ಹೇಳಿದ್ದನ್ನು ವಿಧೇಯನಾಗಿ ಕೇಳಿಕೊಂಡ. ದಿನಕ್ಕೊಂದು ಸಲ ಸಾಧ್ಯವಿದ್ದರೆ ಫೋನ್ ಮಾಡುವಂತೆ ತಂದೆ ಹೇಳಿದ್ದಕ್ಕೆ ಒಪ್ಪಿದ. ಅಣ್ಣ, ಅತ್ತಿಗೆ, ಅವರ ಇಬ್ಬರು ಮಕ್ಕಳು ಬಂದಿದ್ದರು. ಸಂಜೆಯೆಲ್ಲಾ ಅವರ ಜತೆ ಕಲೆತದ್ದಾಯಿತು. ಮಕ್ಕಳಿಬ್ಬರಿಗೂ ಏನಾದರೂ ಸರ್ಪ್ರೈಸ್ ಗಿಫ಼್ಟ್ ತರ್ತೇನೆಂದು ಮಾತುಕೊಟ್ಟ. ಅಣ್ಣ ಪ್ರತ್ಯೇಕವಾಗಿ ಕೊಟ್ಟ ಮುನ್ನೂರು ರೂಪಾಯಿಗಳನ್ನ ಜೇಬಿಗೆ ಹಾಕಿಕೊಂಡ. ಮುಂಜಾನೆ ತಾಯಿಯ ಕೆನ್ನೆಗೆ ಚುಂಬಿಸಿ, ತಂದೆಗೆ ದೊರದಿಂದಲೆ ಬೈ ಬೈ ಹೇಳಿ, ಆಟೋರಿಕ್ಷಾ ಪಿಡಿದು ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿದ್ದ ದೀಕ್ಷಿತನ ವಸತಿ ಮುಂದೆ ಬಂದಿಳಿದ.

ಯಾರದೋ ಮನೆಯಲ್ಲಿ ಒಂದು ಭಾಗವನ್ನು ಬಾಡಿಗೆ ಹಿಡಿದು ಕಳೆದೆರಡು ವರ್ಷಗಳಿಂದ ದೀಕ್ಷಿತ ಅಲ್ಲಿ ನೆಲೆಯೂರಿದ್ದ. ಅದಕ್ಕೆ ಮುನ್ನ ಹಾಸ್ಟೆಲಿನಲ್ಲಿದ್ದ. ಆದರೆ ಹಾಸ್ಟೆಲಿನ ಊಟತಿಂಡಿ ಸಮಯಪರಿಪಾಲನೆ ಅವನಿಂದ ಅಸಾಧ್ಯವಾಯಿತು. ಅನೇಕ ವೇಳೆ ಮೆಸ್ಸಿಗೆ ಹೋದಾಗ ಊಟದ ಅವಧಿ ಮುಗಿದಿರುತ್ತಿತ್ತು. ಅಲ್ಲದೆ, ಅವನ ಹಲವಾರು ಚಟುವಟಿಕೆಗಳಿಗೆ ಹಾಸ್ಟಲಿ ನಲ್ಲಿ ಹಿತವಾದ ವಾತಾವರಣ ಇರುತ್ತಿರಲಿಲ್ಲ. ದೀಕ್ಷಿತನ ಪ್ರಕೃತ ವಸತಿ ಕ್ಯಾಂಪಸಿನಿಂದ ಎರಡು ಕಿಲೋಮೀಟರು ದೂರದಲ್ಲಿತ್ತು. ಒಂದು ಕೋಣೆ, ಅದಕ್ಕೆ ಸೇರಿದಂತೆ ಕಿಚೆನೆಟ್, ಬಾತ್ ರೂಮು. ಮಂಚ, ಟೇಬಲು, ಕುರ್ಚೀ, ಗೋಡೆಯಲ್ಲೊಂದು ಕಬರ್ಡ್. ಇನ್ನೊಂದು ಶೆಲ್ಫ಼ಿನ ತುಂಬ ಪುಸ್ತಕಗಳು. ಶಿಲ್ಫಿನಲ್ಲಿ ಹಿಡಿಯದೆ ನೆಲದ ಮೇಲೂ ಕೆಲವು ಬಿದ್ದಿದ್ದವು. ದೀಕ್ಷಿತನ ವಸತಿ ವಿನಯಚಂದ್ರನಿಗೆ ಹೊಸತಲ್ಲ. ಆದರೆ ಈಗ ಕಾಣಿಸಿದ ಬದಲಾವಣೆಯೆಂದರೆ, ಗೋಡೆಯಮೇಲಿನ ಮಾರ್ಕ್ಸ್, ಎಂಗಲ್ಸ್, ಲೆನಿನ್, ಮಾವೋ, ಚಾರು ಮಜುಂದಾರ ಮೊದಲಾದವರ ದೊಡ್ಡ ದೊಡ್ಡ ಚಿತ್ರಗಳು. ಪರವಾಯಿಲ್ಲ. ದೀಕ್ಷಿತನೂ ಬೆಳಿಯುತ್ತಿದ್ದಾನೆ ಅನಿಸಿತು.

“ಟ್ಯಾಂಕ್ ಬಂಡ್ ನ ಮೇಲೆ ಎನ್ ಟೀ ಆರ್ ನಿಲ್ಲಿಸಿದ ಪ್ರತಿಮೆಗಳನ್ನ ನೋಡಿದ್ದೀಯಾ?” ವಿನಯಚಂದ್ರ ನಗುತ್ತ ಕೇಳಿದ.

“ನೋಡಿದ್ದೀನಿ. ಕಣ್ಣಿಗೆ ಹೊಡೆಯೋ ಹಾಗೆ ನಿಲ್ಲಿಸಿದರೆ ನೋಡದೆ ಇರೋದಕ್ಕೆ ಆಗುತ್ತದೆಯೇ?” ಎಂದ ದೀಕ್ಷಿತ.

“ಅಲ್ಲಿ ಒಂದು ಕಡೆ ಆತ ಖಾಲಿ ಜಾಗ ಬಿಟ್ಟಿದ್ದಾನೆ. ಯಾತಕ್ಕೆ ಗೊತ್ತೆ?”

“ಯಾತಕ್ಕೆ?”

“ತನ್ನದೇ ಪ್ರತಿಮೆ ನಿಲ್ಲಿಸೋದಕ್ಕೆ!”

“ಈ ಗೋಡೇ ಮೇಲೆ ನೀನು ಅಂಟಿಸಿರುವ ಚಿತ್ರಗಳನ್ನು ನೋಡಿ ನೆನಪಿಗೆ ಬಂತು ಕಣೋ, ಸಿಟ್ಟಾಗಬೇಡ!”

“ಅಲ್ಲಯ್ಯ, ನಿನ್ನ ಯೋಗ್ಯತೆಗೆ ಮೀರಿದ ಮಾತುಗಳನ್ನ ಯಾತಕ್ಕೆ ಎತ್ತುತ್ತ ಇದ್ದೀಯ? ನನಗೆ ಎನ್ ಟೀ ಆರನ್ನ ಕಂಡರೆ ಆಗೋದಿಲ್ಲ. ಇನ್ ಫ಼್ಯಾಕ್ಟ್ , ನಮ್ಮ ಎನಿಮಿ ನಂಬರ್ ವನ್ ಆತ. ಆದರೂ ನೀನು ರೆಪ್ರಸೆಂಟ್ ಮಾಡೋ ವರ್ಗಕ್ಕಿಂತ ಅವನೇ ಹತ್ತು ಪಾಲು ಹೆಚ್ಚಂತ ತಿಳಕ್ಕೊ. ನೀನೆಂದಾದರೂ ಆತ್ಮಶೋಧನೆ ಮಾಡಿಕೊಂಡಿದ್ದೀಯಾ? ನೀ ತೊಟ್ಟುಕೊಂಡಿರುವ ಬಟ್ಟೆ, ಊಟಮಾಡುತ್ತಿರುವ ಅನ್ನ, ಸಂಚರಿಸುತ್ತಿರುವ ವಾಹನ ಎಲ್ಲಿಂದ ಹೇಗೆ ಬರೆತ್ತೆ ಅಂತ ಯೋಚಿಸಿದ್ದೀಯಾ? ಇದನ್ನೆಲ್ಲಾ ನಿನಗೆ, ನನಗೆ, ನಮ್ಮಂಥವರಿಗೆ ಸಪ್ಲೈ ಮಾಡುತ್ತಿರೋರು ಕಾರ್ಮಿಕರು, ಕೃಷಿಕರು ಕಣೋ, ಇದೇನೂ ಗೇಲಿ ಮಾಡೋ ಸಂಗತಿಯಲ್ಲ.” ಎಂದು ದೀಕ್ಷಿತ ಹೇಳಿದ.

“ಆಯ್ತು ದೀಕ್ಷಿತ್ ಒಪ್ದೆ. ಆದರೆ ಈಗ ನಿನ್ಜತೆ ಚರ್ಚಿ ಮಾಡುವ ಅವಸ್ಥೆಯಲ್ಲಿ ನಾನಿಲ್ಲ. ನಾನು ನಿನ್ನ ಮನೆಯ ಅತಿಥಿ.”

“ಫ಼ೀಲ್ ಫ಼್ರೀ, ಪ್ಲೀಸ್. ಮನೆ ನಿನಗೆ ಹೊಸತಲ್ಲ.”

“ಆದರೆ ಮೊದಲು ಹೊಟ್ಟಿಗೇನಾದರೂ ಹಾಕಿಕೊಳ್ಳಬೇಕು.”

“ಅನ್ನ, ಮೊಸರು, ಉಪ್ಪಿನಕಾಯಿ ಇದೆ. ಊಟ ಮಾಡ್ತೀಯಾ? ನನ್ನದು ಆಗಲೇ ಮುಗಿಯುತು. ನಿನಗೋಸ್ಕರ ತೆಗೆದಿರಿಸಿದ್ದೇನೆ.”

“ನೀ ಚಾ ಕಾಫ಼ಿ ಕುಡಿಯಲ್ಲ.”

“ಇಲ್ಲ. ಆದರೆ ಸಂಜೆ ಹೊತ್ತು ತಗೊಂಡು ಬರ್ತೆನೆ, ಚಾ ಪುಡಿ, ಹಾಲಿದೆ. ನೀನು ಮಾಡ್ಕೋಬಹುದು.”

“ಇಲ್ಲೇ ಹತ್ತಿರ ಏನಾದರೂ ಚಹಾದಂಗಡಿ ಇದೆಯೆ?”

“ಇದೆ. ಕಾರ್ನರಿನಲ್ಲೊಂದು ಇರಾಣಿ ಕೆಫ಼ೆ ಯಿದೆ. ಈ ಚಾಬಿ ಇಟ್ಟುಕೋ. ನಾನು ಯಾರನ್ನೋ ಕಾಣೋದಕ್ಕೆ ಬೋಲಾರಾಮಿಗೆ ಹೋಗಬೇಕು. ”

ವಿನಯಚಂದ್ರ ಬೀಗದ ಕೀ ಇಸುಗೊಂಡು ಜೇಬಿನಿಂದ ಸಿಗರೇಟು ತೆಗೆದು ಬಾಯಿಗಿರಿಸಿದ. ತಕ್ಷಣ ಅವನಿಗೆ ಮಾವೋನ ಚಿತ್ರದ ಕೆಳಗೆ ತೂಗಿ ಹಾಕಿದ್ದ DO NOT SMOKE ಎಂಬ ಬರಹ ಕಾಣಿಸಿತು. ಸಿಗರೇಟಿಗೆ ಬೆಂಕಿ ತಗಲಿಸಲು ಮುಂದಾದ ಕೈ ಅರ್ಧಕ್ಕೆ ನಿಂತಿತು. ಎದ್ದು ಹೋಗಿ ಅದನ್ನ ಉಲ್ಟಾ ಹಾಕಿದರೆ SILENCE ಎಂಬ ಬರಹ!

“ಅಲ್ಲಯ್ಯ, ನೀ ಒಳ್ಳೆ ಮಾರಲಿಸ್ಟ್ ಆಗಿದ್ದು ಎಂದಿನಿಂದ? ಸಿಗರೇಟು ಸೇದುವ ಹಾಗಿಲ್ಲ, ಮಾತನಾಡುವ ಹಾಗಿಲ್ಲ!” ಎಂದು ದೀಕ್ಷಿತನನ್ನು ಛೇಡಿಸಿದ.

“ದಯವಿಟ್ಟು ತಪ್ಪು ತಿಳಕೋಬೇಡ. ಇದೆಂದೂ ನಿನಗೆ ಲಗಾವಾಗೋ ದಿಲ್ಲ. ಯಾರು ಯಾರೋ ಬರ್ತಿರ್ತಾರೆ. ಅವರನ್ನ ಡಿಸ್ಕರೇಜ್ ಮಾಡೋದಕ್ಕೋಸ್ಕರ ಇದು. ಸೇದು, ಆದೊಂದುದರಲ್ಲಾದರೂ ಮಾವೋನ ಶಿಷ್ಯನಾಗು.” ಎಂದ ದೀಕ್ಷಿತ.

“ಇಲ್ಲ, ಹೊರಗೆ ಕಟ್ಟೆ ಮೇಲೆ ಕೂತ್ಕೊಂಡು ಸೇದ್ತೇನೆ.”

“ಹೌದೆ? ಆಯ್ತು ಪ್ರಯತ್ನಿಸಿ ನೋಡು. ” ಎಂದ ದೀಕ್ಷಿತ ನಿಗೂಢವಾಗಿ.

ಹೊರಗೆ ನಾಲ್ಕಾರು ವಯಸ್ಸಿನ ಮಗುವೊಂದು ಆಡಿಕೊಳ್ತ ಇತ್ತು. ವಿನಯಚಂದ್ರ ಬೇವಿನಮರದ ಕಟ್ಟಿ ಮೇಲೆ ಕೂತುಕೊಂಡು ಸಿಗರೆಟು ಹಚ್ಚಿದ. “ಏನಮ್ಮ ನಿನ್ನೆಸ್ರು” ಎಂದು ಮಗುವನ್ನು ಪ್ರೀತಿಯಿಂದ ಮಾತಾಡಿಸಲು ಯತ್ನಿಸಿದ. ಒಡನೆಯ ಒಳಗಿನಿಂದ ಯಾರೋ ದೊಡ್ಡದಾಗಿ ಕೂಗಿದ ಸದ್ದಾಯಿತು. ಮಗು ಒಳಕ್ಕೆ ಓಡಿಹೋಯಿತು. ಕೆಲವೇ ನಿಮಿಷಗಳಲ್ಲಿ ಇಬ್ಬರು ಹುಡುಗರು ಕ್ರಿಕೆಟ್ ಬ್ಯಾಟು ಚೆಂಡು ಹಿಡಿದುಕೊಂಡು ಹೊರಬಂದರು. ಕ್ರಿಕೆಟ್ ಆಡುವ ನೆವೆದಲ್ಲಿ ಕಟ್ಟಿಯ ಮೇಲೆ ಕುಳಿತವನ ಕಡೆಗಾಗಿ ಚೆಂಡನ್ನು ಎಸೆಯಲು ಆರಂಭಿಸಿದರು. ವಿನಯಚಂದ್ರನ ಪ್ರತಿರೋಧವನ್ನು ಅವರು ಗಣನೆಗೇ ತೆಗೆದುಕೊಳ್ಳಲಿಲ್ಲ. ಅಲ್ಲಿ ಕೂತುಕೊಳ್ಳುವುದು ಕ್ಷೇಮವಲ್ಲ ಎಂದೆನಿಸಿ ದೀಕ್ಷಿತನ ಕೊನೆಗೆ ಮರಳಿದ. ದೀಕ್ಷಿತ, “ಆಯ್ತೆ?” ಎಂದು ಒಂದು ವಿಧವಾಗಿ ಕೇಳಿದ.

“ಅಲ್ಲಯ್ಯ ದೀಕ್ಷಿತ! ನೀನು ಐಡಿಯಾಲಜಿ ಓದಿ ಓದಿ ಮನುಷ್ಯ ಸಂಬಂಧಗಳನ್ನೇ ಹಾಳುಮಾಡಿಕೊಂಡಿದೀಯಲ್ಲ!”

“ಈ ಮನುಷ್ಯರು ಎಷ್ಟು ಕೆಟ್ಟವರಿದ್ದಾರೆ ಎಂದು ಗೊತ್ತಾದರೆ ನೀನು ಆ ಮಾತು ಹೇಳೋದಿಲ್ಲ.”

ಅವನ ಜತೆ ಚರ್ಚಿಸಿ ಉಪಯೋಗವಿಲ್ಲವೆನಿಸಿತು. ತಾನಿಲ್ಲಿಗೆ ಬಂದುದು ಅಜ್ಞಾತವಾಸಕ್ಕೆ. ಅಜ್ಞಾತವಾಗಿಯೆ ಇದ್ದು ಬಿಟ್ಟರಾಯಿತು. ಇರಾಣಿ ಹೋಟಿಲಿಗೆ ಹೋಗಿ ಚಹಾ ಕುಡಿಯೋದು ಎಂದುಕೊಂಡು, ದೀಕ್ಷಿತನಿಗೆ ಹೇಳಿ ಕಾರ್ನರಿ ನತ್ತ ಹೆಜ್ಜೆ ಹಾಕಿದ. ಕ್ರಿಕೆಟ್ ಆಡುವಂತೆ ನಟಿಸಿದ ಹುಡುಗರು ಈಗ ಮನೆಯೊಳಕ್ಕೆ ಹೋದುದನ್ನು ಗಮನಿಸಿದ. ಅವನಿಗೆ ಕೇಳಿಸುವಂತೆ ಯಾರೋ ಬಯ್ದರು.

ರಸ್ತೆಯ ತಿರುವಿನಲ್ಲಿದ್ದ ಅರ್ಧಚಂದ್ರಾಕಾರದ ಇರಾಣಿ ಹೋಟೆಲು ಆಗಲೆ ಜನರಿಂದ ಕಿಕ್ಕಿರಿದುಹೋಗಿತ್ತು. ಹೆಚ್ಚಾಗಿ ಕೊಲಿಯವರು, ಹಣ್ಣು, ತರಕಾರಿ ಮಾರುವವರು, ಏನೂ ಕೆಲಸ ಕಾರ್ಯವಿಲ್ಲದವರು. ದೋ ಚಾಯ್! ತೀನ್ ಚಾಯ್! ಎಂದು ಕೂಗುವ ಅತ್ಯಂತ ಕೊಳಕುವಸ್ತ್ರದ ಸಪ್ಲಯರುಗಳು. ಕಪ್ಪು ಸಾಸರುಗಳ ಕಣ್, ಕಣ್, ಕಣ್ ಸಪ್ಪಳ. ಕಿವಿಗಿಡಿಚಿಕ್ಕುವಂಥ ಮಾತು ಕತೆ. ವಿನಯಚಂದ್ರ ಒಂದು ಖಾಲಿ ಕುರ್ಚಿಯನ್ನು ಹೇಗೋ ಸಂಪಾದಿಸಿಕೊಂಡ. ತಿನ್ನಲು ಬ್ರೆಡ್ ಮತ್ತು ಕೆನೆ ಆರ್ಡರ್ ಮಾಡಿದ. ಒಂದು ಕಪ್ಪು ಚಹಾಕ್ಕೂ ಹೇಳಿದ. ಹೊಟ್ಟೆ ಹಸಿವನ್ನು ತಾಳಲಾರದೆ ಇರುತ್ತಿದ್ದರೆ ಇಲ್ಲಿ ತಿನ್ನುವುದು ಅಸಾಧ್ಯವಾಗುತ್ತಿತ್ತು. ಹಸಿವೆಯ ಕಾರಣದಿಂದಲೆ ಜನ ಎಂಥ ಕೊಳಕನ್ನೂ ಸಹಿಸಿಕೊಂಡಿರುತ್ತಾರೆ ಅನಿಸಿತು. ಉಪಾಹಾರ ಆದಮೇಲೆ, ಬಿಲ್ಲಿನ ಹಣವನ್ನು ಸಪ್ಲಯರಿನ ಕೈಗೇ ಕೊಟ್ಟು ಚಿಲ್ಲರೆ ಹಣವನ್ನು ಇರಿಸಿಕೊಳ್ಳುವಂತೆ ಹೇಳಿದ. ನಂತರ ಕೌಂಟರಿಗೆ ಬಂದು ತಾನು ಫೋನು ಮಾಡಬಹುದೆ ಎಂದು ಅಲ್ಲಿ ಕೂತ ಇರಾಣದವನನ್ನು ಕೇಳಿದ. ಕೌಂಟರಿನ ಹಿಂದಿನ ಗೋಡೆ ಮೇಲಿದ್ದ ಆಯತುಲ್ಲಾ ಖೊಮೇನಿಯ ಬಹುದೊಡ್ಡ ಭಾವಚಿತ್ರ ಸಕಲರನ್ನೂ ತನ್ನ ಪರಿಧಿಯೊಳಗೆ ತೆಗೆದುಕೊಂಡಂತೆ ಕಾಣಿಸಿತು. ವಿನಯ ಚಂದ್ರನ ಪ್ರಶ್ನೆಗೆ ಕೌಂಟರಿನ ವ್ಯಕ್ತಿ ಕೇವಲ ದೃಷ್ಟಿಯ ನಿರ್ದೇಶನದಿಂದಲೆ ಅನುಮತಿ ಕೊಟ್ಟ. ಇಂಥ ಗದ್ದಲದಲ್ಲಿ ಮಾತಿಗಿಂತ ಮೌನವೇ ಹೆಚ್ಚು ಸಂವಹನೀಯ ಗುಣವನ್ನು ಪಡೆದಿತ್ತು.

ವಿನಯಚಂದ್ರ ನಂಬರ್ ತಿರುಗಿಸಿದ. ಗಂಟೆ ಒಂಬತ್ತಾಗಿತ್ತು. ರೇಶ್ಮ ಇಷ್ಟು ಹೊತ್ತಿಗೆ ಮನೆಯಲ್ಲಿರುತ್ತಾಳೆಯೆ. ಅಥವ ಸ್ಕೂಲಿಗೆ ಹೊರಟುಹೋಗಿರುತ್ತಾಳೆಯೆ? ಫೊನಿನಲ್ಲಿ ಗಂಡುದನಿಯೊಂದು ಬಂತು.

“ರೇಶ್ಮ ಬೇಕಿತ್ತು.” ಎಂದ.

“ಹೂ ಈಸ್ ಸ್ಪೀಕಿಂಗ್?” ಒರಟು ಮನುಷ್ಯ!

“ವಿನ್! ವಿನಯಚಂದ್ರ.”

“ಹೋಲ್ಡಾನ್.”

ತುಸು ಹೊತ್ತಿನಲ್ಲೆ ರೇಶ್ಮಳ ದನಿ.

“ಯಸ್?”

“ಗುಡ್ ಮಾರ್ನಿಂಗ್, ರೇಶ್ಮ! ನಾನು ವಿನ್ ಮಾತಾಡ್ತ ಇರೋದು.”

“ವಿನ್! ಹಲೋ! ಗುಡ್ ಮಾರ್ನಿಂಗ್! ಹೌ ನ್ಯಾಸ್! ನಿಂಬಗ್ಗೇ ಯೋಚಿಸ್ತ ಇದ್ದೆ. ಎಲ್ಲಿಂದ ಮಾತಾಡ್ತ ಇದೀರಿ?”

“ನನ್ ಬಗ್ಗೇ ಯೋಚಿಸ್ತ ಇದ್ದೀರ! ಹೌ ನೈಸ್ ಆಫ಼್ ಯೂ! ಇಲ್ಲೇ ಯೂನಿವರ್ಸಿಟಿ ಪಕ್ಕದಿಂದ ಮಾತಾಡ್ತ ಇದೇನೆ. ನನ್ ಬಗ್ಗೆ ಏನು ಯೋಚ್ನೆ ಮಾಡ್ತ ಇದ್ದಿರಿ?”

“ಸ್ವಲ್ಪ ದೊಡ್ಡಕೆ ಮಾತಾಡಿ, ಲೈನ್ ಕ್ಲಿಯರಿಲ್ಲಾಂತ ಕಾಣಿಸ್ತದೆ.”

“ಲೈನ್ ದೇನೂ ತಪ್ಪಿಲ್ಲ. ನಾನೊಂದು ಹೋಟಲ್ನಿಂದ ಮಾತಾಡ್ತಿರೋದು, ಹಲೋ!”

“ಗೋ ಆನ್!”

“ನಾನೂ ನಿಂಬಗ್ಗೇನೇ ಯೋಚಿಸ್ತ ಇದ್ದೆ, ರೇಶ್ಮ. ವಾಸ್ತವಾಂತಂದ್ರೆ, ನಿಮ್ಮ ಭೇಟಿಯಾದಂದ್ನಿಂದ….”

“ಸ್ವಲ್ಪ ದೊಡ್ಡಕ ಮಾತಾಡಿ!”

“ದೊಡ್ಡಕೇ ಮಾತಾಡ್ತ ಇದ್ದೇನೆ. ಇದಕ್ಕಿಂತ ದೊಡ್ಡಕೆ ಮಾತಾಡಿದ್ರೆ ನನ್ನ ಇಲ್ಲಿಂದ ಹೊರಕ್ಕೆ ಕಳಿಸ್ತಾರೆ. ಆಥ್ವಾ ನನಗೆ ಸನ್ಮಾನ ಏರ್ಪಡಿಸ್ತಾರೆ! ಯಾಕಂತಂದ್ರೆ ಇಲ್ಲಿ ದೊಡ್ಡಕೆ ಮಾತಾಡೋ ಸ್ಪರ್ಧೆ ನಡೀತಾ ಇದೆ!”

“ಸ್ಪರ್ಧೇನೇ”

“ಹೌದು! ಆದ್ದರಿಂದ ನಾನು ಸ್ವಲ್ಪ ಗಡಿಬಿಡೀನಲ್ಲಿದ್ದೇನೆ. ಇರಲಿ ಈಗ ಲಿಸ್ಷ್!ಸಂಗೀತ್ನಲ್ಲಿ ಒಂದು ಪಿಕ್ಚರಿದೆ. ಹೌ ಅಬೌಟ್ ದಿಸ್ ಈವ್ನಿಂಗ್?”

“ಹೌ ಅಬೌಟಿಟ್?”

“ಫ಼ಸ್ಟ್ ಶೋವಿಗೆ ಎರಡು ಟಿಕೀಟು ಖರೀದಿಸ್ತೇನೆ. ನಂತ್ರ ಅಲ್ಲೆ ಎಲ್ಲಾದ್ರೂ ಆಸ್ರಾಣಿ ಗಿಸ್ರಾಣೀನಲ್ಲಿ ಊಟ ಮಾಡೋಣ.”

“ವೆರಿ ಫ಼ೈನ್! ಕ್ಯಾನ್ಯೂ ಪಿಕ್ ಮಿ ಅಪ್?”

“ನೋ, ಸಾರಿ. ನಾನು ಈ ಒಂದು ವಾರಕ್ಕೆ ಆ ಕಡೆ ಸುಳಿಯೋಹಾಗಿಲ್ಲ!

“ನೀವು ನೇರವಾಗಿ ಸಂಗೀತ್ ಗೇ ಬರೋಕಾಗತ್ಯೆ? ಆರು ಗಂಟೆ ಸುಮಾರಿಗೆ. ಆರೂವರೀಗೆ ಪಿಕ್ಚರು ಶುರು.”

“ಓಕೇ! ಆರಕ್ಕೆ ಬಂದುಬಿಡ್ತೀನಿ.”

“ಖಂಡಿತಾ?”

“ಖಂಡಿತಾ. ಏನು ಪಿಕ್ಚರ್ನ ಹೆಸ್ರು?”

“ಬ್ಲೇಮಿಟಾನ್ ರಿಯೋ!”

“ಬ್ಲೇಮಿಟಾನ್ ವ್ಹಾಜ್?”

“ಬ್ಲೇಮಿಟಾನ್ ವ್ಹಾಟೆಲ್ಲ, ಬ್ಲೇಮಿಟಾನ್ನ್ ರಿಯೋ, ರಿಯೋ!”

ರಿಸೀವರನ್ನು ಅದರ ತೊಟ್ಟಿಲಲ್ಲಿರಿಸಿ ವಿನಯಚಂದ್ರ ಒಂದು ಗ್ಲಾಸು ತಣ್ಣೀರು ಕುಡಿದ – ಆರಿಹೋಗಿದ್ದ ಗಂಟಲನ್ನು ಸರಿಪಡಿಸುವುದಕ್ಕೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಲೆ
Next post ಸೆಳೆತ

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys