ಜಿಟ್ಟಿಹುಳಗಳು ಎದ್ದಾವು ಇದು ನೋಡು
ಸೃಷ್ಟಿಪತಿ ಅರಸರಿಗೆಲ್ಲಾ ಕೇಡೋ
ಅಷ್ಟದಶಮಧ್ಯದಲಿ ಒಪ್ಪುವ ನೆಟ್ಟನಾದಿಭೂಮಿ ದಿಲ್ಲಿಗೆ
ಶ್ರೇಷ್ಠಕ್ರಿಸ್ತಾನಬಾದಶಹ ಪಟ್ಟಗಟ್ಟಲು ಕಂಡು ||ಪ||

ವಸುಮತಿಪತಿ ವರದಿಂ ಕುಮಾರ
ಈಶಾನ್ಯೆಂಬುವ ಪರಮನವತಾರಾ
ರೋಸಬಾದಶಾ ಇಂಗ್ಲೀಷಮತವನುದ್ಧರಿಸಲು
ಬಹುಧಾನ್ಯನ ಸಂವತ್ಸರಕೆ ಉತ್ತಮ ಬೇಸಿಗ ಬರಹವ ಕೇಳಿ ||೧||

ಕ್ಷೋಣಿಗೆ ಆಧಿಕಾರಕೊಟ್ಟು ಕಂಪನಿಗೆ
ರಾಣಿ ದೊರೆ ತಾನು ಕಟ್ಟಾಕಾನೂನಿಗೆ
ಜಾಣತನದಲಿ ಇಳಿಯನಾಳುತ ತಾನೇ ತಾನೇ‌ಆಗಿ ಕಲಿಯುಗ
ಪ್ರಾಣ ನಿರ್ಮಲಪಾದದಲಿ ಭೂ ಅಣಿದು ತಲ್ಲಣಿಸಕೆ ||೨||

ಮಜದಲಿ ಪೇಳುವೆ ಮೌಜಿನ ಮಾತು
ಮೂಜಗದೊಳು ಆತಿಕೌತುಕವಾತು
ರಾಜ್ಯದಲಿ ಯಾವತ್ತು ದೇಶದ ಪಾಳ್ಯಾಗಾರರು ಪರಮಡಿಸಿ ಮಹಾ-
ರಾಜ್ಯ ಕೋರ್ಟಿಗೆ ಒಯ್ದರೆಂಬುವ ಸುದ್ಧಿ ಕೇಳಿ ||೩||

ಧರ್ಮದಾತಾ ಶಿಶುವಿನಾಳಧೀಶಾ
ಊರ್ವಿ ಪಾಲಿಸಿದನು ಇಷ್ಟುದಿವಸಾ
ಕರ್ಮಕಟ್ಟಳೆ ತೀರಿಸಿ ಮೂವತ್ತು-
ವರ್ಷ ಮುಂದ ಹದಿನೈದು ಇರುತಿರೆ
ಮೊಗಲ ವಿಲಾಯತಿ ಪಟ್ಟಕ್ಕೆ ಕರ್ಮ ತಟ್ಟಲು ಕಂಡು ಜಿಟ್ಟಿಹುಳ ||೪||
*****