ಬೋಟಿನಲ್ಲಿ ಸಹಪ್ರಯಾಣ
ಕೆಲೆ ನಿಲ್ದಾಣದಲ್ಲಿ ಕೇವಲ ನಗೆ
ನಂತರ ಲೂವ್ರ್‌ ಮ್ಯೂಸಿಯಮಿನಲ್ಲಿ
ಬೆರಗಿನಿಂದ
ಎಲ್ಲರೂ ಕತ್ತೆತ್ತಿ ನೋಡುತಿದ್ದಾಗ
ನಾನು ಕಂಡದ್ದೇನು–
ನೋಡಲೆಂದು ಇಲ್ಲಿಯ ತನಕ ಬಂದ
ಮೋನಾ ಲಿಸಾ ಚಿತ್ರವನ್ನೆ ಅಥವ
ಹೆಸರು ಸ್ಥಳ ಗೊತ್ತಿರದ
ಕೇವಲ ಒಬ್ಬಳು ಹೆಂಗಸನ್ನೆ?

ಹೊರಗೆ ತಣ್ಣನೆ ಗಾಳಿಯಿದೆ
ಒಬ್ಬ ವ್ಯಾಪಾರಿ
ವಿದ್ಯುಚ್ಚಾಲಿತ ಹಕ್ಕಿಗಳನ್ನು ಮಾರುತ್ತಾನೆ
ಆ ಹಕ್ಕಿಗಳೋ ! ನಿಜವಾದ ಹಕ್ಕಿಗಳನ್ನು
ಅಣಕಿಸುವಂತೆ ಅಷ್ಟು ದೂರಕ್ಕೆ ಹಾರಿ
ಕೆಳಗೆ ಬಂದಿಳಿಯುತ್ತಿವೆ!
ಮಕ್ಕಳ ದೊಡ್ಡ ಗುಂಪೇ ಸೇರಿದೆ!

ಜಿನುಗು ಮಳೆಯಲ್ಲಿ ನಾನಿದೋ ಹೊರಟೆ
ಸಿಯೆನ್ ನದಿಯ ದಂಡೆಯ ಮೇಲೆ
ಹಲವು ವಿರೋಧಾಭಾಸಗಳನ್ನು
ತಲೆಯಲ್ಲಿ ಹೊತ್ತು
ಹುಡುಕಲೆಂದು ಆ
ಮಹಾ ಕಲಾವಿದನ ಜಗತ್ತು
*****