ಮಂಗ
ನಗರ ನೋಡಲೆಂದು
ಮರದಿಂದಿಳಿದು ಬಂದ
ಪಾಪ!
ಆಕಾಶ ಚುಂಬಿ
ಆಹ ಏನೆಂಬಿ
ಸೌಧಗಳ ಕಂಡ
ಸೌಧಗಳ ನಡುವೆ ನಾಗರದಂತೆ
ಅಲ್ಲ ಅಜಗರದಂತೆ
ಬಿದ್ದ ಟಾರ್ ರೋಡುಗಳ
ಕಂಡ
ಟಾರ್ ರೋಡುಗಳ ಮೇಲೆ
ಏನು ಭಗವಂತನ ಲೀಲೆ
ಓಡಾಡುವ ಮೋಟಾರು ಆಮೆಗಳ ಕಂಡ
ಆಮೆಗಳ ಗರ್ಭದೊಳಗಿಂದ
ಕೆಳಗಿಳಿವೆ ಆಧುನಿಕ
ದೇವತೆಗಳ ಕಂಡ
ಪಾತಾಳ ನಾಟ್ಯ ಮಂದಿರದೊಳಕ್ಕೆ
ಇವರೊಂದಿಗಿಳಿದ
ಲಗಾ ಲಗಾ
ಏನು ಜಗಾ
ಆಹ ಏನಲ್ಲಿ
ಓಹೊ ಮಿಸ್ ಲಿಲ್ಲಿ
ಕುಣಿಸ್ತಿದಾಳೆ ಬೆಲ್ಲಿ
ವ್ಹಾರೆ ವ್ಹಾ
ಲ ಲ್ಲಾ ಲ ಲಾ
ಅರರೆ ಏನಿಲ್ಲಿ
ಓಹೋ ರೇ ಕ್ಯಾಬರೆ
ಸ್ಕರ್ಟ್ ಚೆಲ್ಲಿ
ಬ್ರಾ ಚೆಲ್ಲಿ
ಅರರೆ ಬ್ರಾ ಚೆಲ್ಲಿ
ಪರೆ ಕಳಚಿ
ಕದ ತೆರೆದು
ಆಹ ಸ್ವರ್ಗವೆ ತೆರೆದು
ಸ್ಟ್ರಿಪ್ ಟೀಸ್
ಪ್ಯಾರಡೈಸ್
ವಿ ಕೇಮ್ ಫ್ರಮ್ ಪ್ಯಾರಡೈಸ್
ವಿ ಗೋ ಟು ಪ್ಯಾರಡೈಸ್

ಮುಚ್ಚಿದ ಕಿವಿ ಕಣ್ಣು ಬಾಯಿ
ಹಾರಿದ ಕಿಷ್ಕಿಂಧೆಗೆ
ತಪಸ್ಸಿಗೆ ಕುಳಿತು
ಅಲ್ಲೇ ಆದ ಸಮಾಧಿ
*****