ಗಂಡಂದಿರೈವರು ನಿನಗೆ ಪಾಂಚಲಿ
ಅದ್ಹೇಗೆ ನೀ ಪಂಚಪತಿವ್ರತೆಯರಲ್ಲಿ
ಒಬ್ಬಳೊ ನಾಕಾಣೆ
ಯಾರದೊ ಶೃಂಗಾರವ ಕಂಡ
ರೇಣುಕೆ, ಪತಿಯ ಕೋಪಕೆ ಬಲಿಯಾಗಿ
ಸುತನಿಂದಲೇ ಶಿರ ಛೇದಿಸಿಕೊಂಡಳು
ಇಂದ್ರನ ಮೋಸಕ್ಕೆ ಬಲಿಯಾದ ಅಹಲ್ಯೆ
ಕಲ್ಲಾದಳು ಕೈಹಿಡಿದವನಿಂದಲೇ
ರಾವಣ ಕದ್ದೊಯ್ದನೆಂದು ಅಗ್ನಿಪರೀಕ್ಷೆ
ದಾಟಿ ಬಂದ ಜಾನಕಿ ಕೊನೆಗೂ ವನಸೇರಿ
ವಸುವಿನ ಗರ್ಭ ಹೊಕ್ಕು ಪಾರಾದಳು
ಅವರವರ ಅನುಕೂಲಕ್ಕಂತೆ ಧರ್ಮಶಾಸ್ತ್ರ
ನಿನ್ನ ಮಾತ್ರ ಐವರಿಗೆ ಹಂಚಿ
ಪತಿವ್ರತೆ ಎಂದೇ ಘೋಷಿಸಿ ಬಿಟ್ಟಾಗ
ನೀ ಹೇಗೆ ಒಪ್ಪಿದೆಯೋ ಐವರಿಗೆ ಸತಿಯಾಗಲು
ಗಂಡಂದಿರೈವರಿಗೆ ನಿನ್ನ ಹಂಚಿಕೊಂಡಾಗ
ನಿನಗಾದರೂ ಅನಿಸಿತೆ
ನೀ ಪತಿವ್ರತೆಯೆಂದು
ಸಿಡಿದೇಳುವ ಪ್ರವೃತ್ತಿ ನಿನ್ನಲ್ಲಿದ್ದರೂ
ಐವರಿದ್ದೂ ನೀ ಬೆತ್ತಲೆಯಾಗಬೇಕಿದ್ದ
ಆ ಕ್ಷಣಗಳಲಿ ರಕ್ಷಿಸಲಾರದ ಅವರ
ಬಿಟ್ಟು ನೀನೇಕೆ ದೂರಾಗದೆ ಉಳಿದೆ
ತನ್ನದೇನು ನಡೆಯದೆಂದು ಮೌನವಾಗಿ
ಕೊರಳೊಡ್ಡಿ ಪತಿವ್ರತೆಯ ಬಿರುದು
ಸಿಕ್ಕಿದ್ದೆ ಸಾಕೆಂದು ನಿನ್ನುರಿಯ ನಿನ್ನೊಳಗೆ
ಅಡಗಿಸಿಕೊಂಡು ಒಳಗೆ ಸುಟ್ಟು ಬೂದಿಯಾದೆಯಾ?
*****