ಮೋಡಗಳಿಗೆಲ್ಲಿವೆಯೋ ಕಾಲು
ಕುಟುಂಬವೇ ನಡೆಯುತಿಹುದಿಲ್ಲಿ
ಅಪ್ಪ ಅಮ್ಮ ಮಕ್ಕಳು ಮೊಮ್ಮಕ್ಕಳು
ಸಂಬಂಧಿಗಳು
ಒಮ್ಮೆ ವೇಗ ಮಗದೊಮ್ಮೆ ನಿಧಾನ
ಒಮ್ಮೆ ಮುನಿಸಿ ದೂರ ದೂರ
ಮತ್ತೊಮ್ಮೆ ಸುತ್ತಿ ಒಬ್ಬರೊಳಗೊಬ್ಬರು
ತಲೆಯ ಮೇಲೆ ಕಪ್ಪುಬುಟ್ಟಿ ಚಾಪಿ
ಬಗಲಿಗೆ ಗಂಟುಮೂಟೆಗಳ ಚೀಲ
ಗುಳೆ ಹೊರಟಿವೆ.

ಮೋಡಗಳಿಗೆಲ್ಲಿವೆಯೋ ಕಾಲು
ಒಡುತಿವೆ ಯಾವುದೋ ರೇಸಿಗೆ ಸ್ಪರ್ಧಿಸಿ
ಸುಸ್ತಾಗಿ ಹಿಂದುಳಿದಿವೆ ಕೆಲವು
ಕಾಲು ಕುಂಟಾಗಿದೆಯೇನೋ ಪಾಪ!
ಮತ್ತೊಂದು ಮುಗ್ಗರಿಸುತಿದೆ
ಹಿಡಿದಿಡುವವರಾರು ಇವುಗಳ
ಹೆಜ್ಜೆ ಗುರುತು
ವಿಶಾಲ ಆಟದೀ ಮೈದಾನದಲಿ

ಮೋಡಗಳಿಗೆಲ್ಲಿವೆಯೋ ಕಾಲು
ನೆಲದೆದೆ ತುಳಿದು
ನಾನು ನನದೆಂದು ಕಚ್ಚಾಡುವ
ಹೇಸಿಗರನು ದಾಟಿ ಕ್ಷಣ ಕ್ಷಣಕೂ
ಗಡಿ, ರೇಖೆಗಳ ದಾಟುತ ಧಾವಿಸುತಿವೆ
ನಿರಮ್ಮಳವಾಗಿ ವಿರಮಿಸಲು ಸಮುದ್ರದ ಮೇಲೆ
ಮೂಡಿವೆ ಅಚ್ಚಾಗಿವೆ
ಮೋಡಗಳ ಹೆಜ್ಜೆ ಗುರುತು
ನೋಡುಗರೆದೆಯೊಳಗೇ…
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)