Home / ಕವನ / ಕವಿತೆ / ಸ್ಥಿತ್ಯಂತರ

ಸ್ಥಿತ್ಯಂತರ

ಸದಾ ಕಿಚಿಪಿಚಿಗುಡುವ
ಗೊಂದಲದ ಗುಬ್ಬಿ ಗೂಡು
ಕೇಳುವುದಿಲ್ಲ ಒಂದಾದರೂ
ಸುಮಧುರ ಹಾಡು

ಬಿಡುವಿಲ್ಲದೇ ತುಯ್ಯುವ ಒಂದು ವೀಣೆ
ನಿರಂತರ ಕಾಡುವುದೇಕೋ ಕಾಣೆ!
ಮಧ್ಯಂತರದಲಿ ನಿಂತ
ನಾನು-ನನ್ನಂತವರು
ದವಡೆಯ ಕೊನೆಯ ಹಲ್ಲುಗಳನ್ನು
ಅರ್ಧವಷ್ಟೇ ಕಂಡವರು.

ಹಳತು ಸರಿಯೋ?
ಹೊಸದು ಸರಿಯೋ?
ಸದಾ ಮಂಥನದ ಚಿಂತನ
ಹಳವಂಡಗಳ ಸೃಷ್ಟಿಸಿ
ನವ ಸೃಷ್ಟಿಕರ್ತರ ಜನನ.
ಎಲ್ಲ ಕಾಲಕ್ಕೂ ಮಿಡಿಯುತ್ತಿದ್ದ ತಾಯಿಬೇರು
ಇತ್ತೀಚೆಗೆ ಒಮ್ಮೊಮ್ಮೆ ಮಾತ್ರ
ಎಲ್ಲೋ ಮಿಸುಕು
ಮುಂದಿನವರಿಗೆ ಅದೂ ಇಲ್ಲವೇನೋ?
ಸಧ್ಯ ನಮ್ಮಂತೆ
ದ್ವಂದ್ವದಲಿ ಸುಯ್ಯಬೇಕಿಲ್ಲ!

ಅದೂ ಬೇಕು, ಇದೂ ಬೇಕು
ಎಲ್ಲವೂ ಬೇಕು ಎನ್ನುವಂತಿಲ್ಲ
ಇಲ್ಲಿ ಆಯ್ಕೆಗಿರುವುದೊಂದೇ ಬದುಕು
ಎದೆಗೆ ಗುರಿಯಿಟ್ಟಿದೆ ಬಂದೂಕು!

ವರಗಳು ಶಾಪವಾಗಿ,
ಶಾಪಗಳೇ ವರವಾಗಿಬಿಡುವ
ಈ ಮನ್ವಂತರದ ಕಾಲದಲಿ
ಅತ್ತಬಾಗದೇ, ಇತ್ತ ಬೀಗದೇ
ಸ್ಥಿರನಿಂತ ಸೂರ್ಯನಂತೆ
ಗೆದ್ದೂ ಬೀಗದೆ, ಸೋತೂ ಬಾಗದೆ
ಎಲ್ಲ ಚಡಪಡಿಕೆ ಎದೆಯೊಳಗೆ ಮುಚ್ಚಿಟ್ಟು
ಸದಾ ಧಗಧಗ ಉರಿವ
ಕೆಂಪುಸೂರ್ಯನ ಬಗಲಲ್ಲೇ ಬಚ್ಚಿಟ್ಟು
ಮೇಲೆ ಆತ್ಮವಿಶ್ವಾಸದ ನಗೆಯ
ಮುಸುಕು ಹೊದ್ದರಾಯ್ತು
ಎಲ್ಲ ತನ್ನಂತೆ ತಾನೇ ಸರಿಹೋದೀತು!
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...