ಕೆಲವು ಸ್ಥಳಗಳ ಹೆಸರುಗಳಿಗೆ ಹಸಿಹುಲ್ಲಿನ ವಾಸನೆ ಮತ್ತು
ಈಗ ತಾನೆ ಮಳೆನಿಂತ ಮಣ್ಣಿನ ತೇವಗಳಿರುತ್ತವೆ.
ಅಪರಾಹ್ನದ ಇಳಿಬಿಸಿಲಲ್ಲಿ ಮನೆಮುಂದಿನ ಪಾರದರ್ಶಕ
ತೋಡಿನಲ್ಲಿ ಕಲ್ಲಿನ ಪಲ್ಲೆಗಳು ಏಡಿಗಳಂತೆ ಮಲಗಿರುವುದನ್ನು
ನೆನಪಿಗೆ ತರುತ್ತದೆ.

ಪಶ್ಚಿಮದಲ್ಲಿ ಹೊಳೆವ ಸಮುದ್ರದ ಅಂಚಿನಂತೆ
ಸ್ಪಷ್ಟವಾಗಿರುತ್ತದೆ. ಬಹುದೂರದ ಆಕಾಶದಲ್ಲಿ ಮಾಯುವ
ಘಟ್ಟಗಳ ಶಿಖರಗಳಂತೆ ಅಸ್ಪಷ್ಟವಾಗಿರುತ್ತವೆ ಕೂಡ.
ಅಂಥ ಸ್ಥಳಗಳಿಂದ ಸಂಜೆ ಕಣಿವೆಗಳಲ್ಲಿ ಇರುಳು
ತುಂಬಿ ಬರುವುದನ್ನು ಕಣ್ಣಾರೆ ಕಾಣಬಹುದು.

ಹೆಮ್ಮರಗಳು ಕಡಿದುರುಳಬಹುದು. ಬೆಂಕಿಯಿಟ್ಪರೆ ಬುಡಗಳು
ಅನೇಕ ದಿನಗಳ ತನಕ ಉರಿದು ಬೂದಿಯಾಗಬಹುದು ಅಥವ
ಕಮರಿ ಹೋಗಬಹುದು. ಬೆಂಕಿ ಹಚ್ಚಿದ ಕಾಡು ಇಡೀ ಗ್ರಾಮದ
ಮೇಲೆ ಕವಿಸುವುದು ಕಂದು ಹೊಗೆ. ಬಿಸಿಲು ಬೀಳುವ ದಿನ
ಆ ಬಣ್ಣಕ್ಕೆ ಬೇರೆ ಹೋಲಿಕೆಯಿಲ್ಲ.

ಒಮ್ಮೆ ವಲಸೆ ಹೋದ ಹುಲಿಗಳು ಮರಳಿ ಬರುವುದಿಲ್ಲ. ಆದರೂ
ಹೆಸರುಗಳು ಉಳಿಯುತ್ತವೆ. ಜಡಿ ಮಳೆಯಲ್ಲಿ ಹಳೆ ರೂಪಕಗಳಂತೆ
ಧ್ವನಿಸುತ್ತವೆ. ಚಳಿಗಾಲದ ಮುಗಿಯದ ರಾತ್ರಿಗಳಲ್ಲಿ
ಅಗ್ಗಿಷ್ಟಿಕೆಯ ಮುಂದೆ ಕತೆಗಳಾಗುತ್ತವೆ. ಬೇಸಿಗೆಯಲ್ಲಿ
ಮಾಗಿದ ಗೇರು ಮರಗಳಿಂದ ಕೆಂಪು ಹಳದಿ ಹಣ್ಣುಗಳಾಗಿ
ತೊನೆಯುತ್ತವೆ -ಅಥವ ಹಾಗೆಂದು ನೆನಪು.
*****