ಈ ಕಿಟಕಿ ಈ ಬಾಗಿಲುಗಳ ಹಲಸು ಬೀಟೆ ಹೆಮ್ಮರಗಳನ್ನು
ಹಳೆ ಕಾಡುಗಳಿಂದ ಉರುಳಿಸಿದರು.  ಚಿತ್ತಾರದ ಮಂಚಗಳನ್ನು
ಪಳಗಿದ ಕೆಲಸದವರಿಂದ ಮಾಡಿಸಿದರು.  ನೆಲಕ್ಕೆ ಹಾಸಿದ ಬಣ್ಣಬಣ್ಣದ
ಕಲ್ಲುಗಳನ್ನು ಬಹುದೂರದಿಂದ ತರಿಸಿದರು.  ಪಡಸಾಲೆಯಲ್ಲಿ ತೂಗಿದ
ಬೃಹತ್ತಾದ ತೈಲಚಿತ್ರಗಳು ಹಿರಿಯರದು.  ಆ ಮೂಲೆಯಲ್ಲೊಂದು
ಎರಕದ ಬುದ್ಧ. ಇಲ್ಲೊಂದು ಕಪ್ಪು ಶಿಲೆಯ ಗೊಮ್ಮಟ.
ದೊಡ್ಡ ಜನರು ದೊಡ್ಡ ಮನೆಗಳಲ್ಲಿ ವಾಸ ಮಾಡುತ್ತಾರೆ.

ಸರ್ವಸೇವಾ ಸಂಸ್ಥೆಯ ಅಧ್ಯಕ್ಷಿಣಿ ಕಾಮಾಕ್ಷಮ್ಮ
ನೆಲ ಮುಟ್ಟಿದ್ದೆ ಅಪರೂಪ.  ಚಿನ್ನದ ಬಣ್ಣದ ಸಾಂಡಲುಗಳನ್ನು
ಸ್ನಾನಗೃಹದ ಹೊರಗೊಮ್ಮೆ, ಶಯನಗೃಹದ ಒಳಗೊಮ್ಮೆ
ತೆಗೆಯುತ್ತಾರಷ್ಟೆ. ಮತ್ತೆ ಒಂದು ರಾಬಿನ್ಸನೊಂದಿಗೇ
ಒಂದು ಭೈರಪ್ಪನೊಂದಿಗೋ ಮೆತ್ತೆಯಲ್ಲಿ ಮಲಗಿ ನಿದ್ದೆಹೋದರೆ
ಎಬ್ಬಿಸಬೇಕು ಅಡಿಗೆಯವಳು ಅಥವ ಸ್ಥಳೀಯ ಮುಖಂಡರು.
ದೊಡ್ಡ ಜನರು ದೊಡ್ಡ ಹೆಂಗಸರನ್ನು ಮದುವೆಯಾಗುತ್ತಾರೆ.

ಬೇಸಿಗೆಯ ಇಳಿಹೊತ್ತಿನಲ್ಲಿ ಹೊರಗೆ ಕುಳಿತುಕೊಳ್ಳುವುದು ಆರಾಮ.
ಗುಲ್ಮೊಹರ್‍ ಮರಗಳ ಕೆಳಗೆ ಬೆತ್ತದ ಆಸನಗಳನ್ನು ಹಾಕಿದೆ.
ಟೀಪಾಯಿಯ ಮೇಲೆ ಚಹಾದ ಕೆಟ್ಟಲು ಕಪ್ಪುಗಳು.
ಸೆಕೆಗಾಲದಲ್ಲಿ ಲಿಂಬೆಹಣ್ಣಿನ ಚಹಾವನ್ನೆ ಎಲ್ಲರೂ ಇಷ್ಟಪಡುತ್ತಾರೆ.
ಮಾನವೀಯ ಹಕ್ಕುಗಳೆ? ನೇಪಾಳವನ್ನು ತಗೊಳ್ಳಿ, ಉದಾಹರಣೆಗೆ.
ಹಿಂದೆ ನಾನು ಡಾರ್ಜೀಲಿಂಗಿನಲ್ಲಿದ್ದಾಗ ಒಬ್ಬಳು ನೇಪಾಳಿ ಸಿಕ್ಕಿದಳು.
ದೊಡ್ಡ ಜನರು ದೊಡ್ಡ ಸಂಗತಿಗಳನ್ನು ಚರ್ಚಿಸುತ್ತಾರೆ.
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)