ಶಿವತತ್ತ್ವರತ್ನಾಕರ : ಕನ್ನಡ ನೆಲದ ಹೆಮ್ಮೆ

ದೇಶ ನೋಡು, ಕೋಶ ಓದು ಎನ್ನುವುದು ಕನ್ನಡದ ಪ್ರಸಿದ್ಧ ಗಾದೆ. ಇಲ್ಲಿ ಕೋಶ ಎಂಬುದು , ಕೇವಲ ಶಬ್ದಕೋಶಗಳನ್ನಷ್ಟೇ ಅಲ್ಲ, ವಿವಿಧ ವಿಷಯ ವಿಶ್ವಕೋಶಗಳನ್ನು ಒಳಗೊಳ್ಳುತ್ತದೆ. ನಮ್ಮ ಸಂಸ್ಕೃತಿಯ ಇತಿಹಾಸದ ಹೆಜ್ಜೆ ಜಾಡನ್ನು ಹುಡುಕುವಲ್ಲಿ ಈ ವಿಶ್ವಕೋಶಗಳು ದಾರಿದೀಪಗಳಾಗಿವೆ. ಆಧುನಿಕ ಎನ್?ಸೈಕ್ಲೋಪಿಡಿಯಾಕ್ಕೆ ಸಂವಾದಿಯಾದ ವಿಶ್ವಕೋಶಗಳ ಕಲ್ಪನೆ ಹುಟ್ಟಿದ್ದೇ ಮೊದಲು ಭಾರತದಲ್ಲಿ. ಅದರಲ್ಲೂ ಕನ್ನಡದ ನೆಲದಲ್ಲಿ ಎಂಬುದು ಹೆಮ್ಮೆಯ ವಿಚಾರ.

ಚಾವುಂಡರಾಯನ ಲೋಕೋಪಕಾರ ಪ್ರಪ್ರಥಮ ವಿಶ್ವಕೋಶವಾಗಿದ್ದು, ಕನ್ನಡದಲ್ಲಿ ರಚಿತವಾಗಿದೆ. ಈ ಗ್ರಂಥವನ್ನೇ ಮಾದರಿಯಾಗಿಟ್ಟುಕೊಂಡು ಸಂಸ್ಕೃತ ಕೋಶಗಳ ಸೃಷ್ಟಿಯಾಯ್ತು. ಆ ಮಹಾನ್ ಕಾರ್ಯಗಳನ್ನು ಕೈಗೊಂಡವರೂ ಕನ್ನಡಿಗರೇ ಆಗಿರುವುದು ಮತ್ತೊಂದು ವಿಶೇಷ.  ಲೋಕೋಪಕಾರದ ನಂತರ ಕನ್ನಡಿಗನಾದ ಮೂರನೇ ಸೋಮೇಶ್ವರನಿಂದ ಸಂಸ್ಕೃತ  ಭಾಷೆಯಲ್ಲಿ ಮಾನಸೋಲ್ಲಾಸದ ರಚನೆಯಾಯ್ತು. ಮುಂದೆ ಹದಿನಾರು ಹದಿನೇಳನೇ ಶತಮಾನದಲ್ಲಿ ಕನ್ನಡ ನೆಲವನ್ನಾಳಿದ ಬಸವ ಭೂಪಾಲನ ನೇತೃತ್ವದಲ್ಲಿ ನಡೆದ ಭಗೀರಥ ಪ್ರಯತ್ನದ ಫಲವೇ ಶ್ರೀ ಶಿವತತ್ತ್ವ ರತ್ನಾಕರದ ಆವಿರ್ಭಾವ.

ಲೋಕೋಪಕಾರ ಮತ್ತು ಮಾನಸೋಲ್ಲಾಸಗಳಿಗಿಂತ ಶಿವತತ್ತ್ವರತ್ನಾಕರದ ವ್ಯಾಪ್ತಿ ಹಿರಿದು. ಶಿವತತ್ತ್ವರತ್ನಾಕರ ನಿಜಕ್ಕೂ ರತ್ನಾಕರವೇ ಆಗಿದೆ. ಈ ಸಾಗರಗರ್ಭದ ಒಳಹೊಕ್ಕವರಿಗೆ ಸುಮಾರು ಇನ್ನೂರ ಹದಿಮೂರು ವಿವಿಧ ಶಾಸ್ತ್ರಗಳ ಅಮೂಲ್ಯ ರತ್ನಗಳು ಕೈವಶವಾಗುತ್ತವೆ. ಅಂದಿನ ಕಾಲಘಟ್ಟದಲ್ಲಿ ಪ್ರಚಲಿತವಾಗಿದ್ದ ವಿವಿಧ ಜ್ಞಾನಶಾಖೆಗಳ ಸಾರವನ್ನು ಹದಿಮೂರು ಸಾವಿರ ಶ್ಲೋಕಗಳಲ್ಲಿ ಭಟ್ಟಿ‌ಇಳಿಸಲಾಗಿದೆ. ಭೂಪತಿಯು ಕವಿಯಾಗಿ, ಕವಿಯು ಚಮೂಪತಿಯಾಗಿ ಮೆರೆದ ಕನ್ನಡ ನಾಡಿನ ಮಹಿಮೆಯಂತೆ , ಈ ಬೃಹತ್ ಮಹತ್ ಕಾರ್ಯವನ್ನು ಕೈಗೊಂಡ ಸಾಹಸಿ ಕೆಳದಿಯ ದೊರೆ ಬಸವರಾಜ ಭೂಪಾಲ.

ಮಧ್ಯಕಾಲೀನ ಭಾರತದ ರಾಜಕೀಯ ಅಸ್ಥಿರತೆಯ ಪರಿಣಾಮ ಕನ್ನಡ ನಾಡಿನ ಮೇಲೂ ಆಗಿತ್ತು. ವಿಜಯನಗರ ಸಾಮ್ರಾಜ್ಯದ ಪತನಾನಂತರ , ಪ್ರೋತ್ಸಾಹಕರ ವಾತವರಣವಿಲ್ಲದೆ ಅನೇಕ ಜ್ಞಾನ ಶಾಖೆಗಳು, ಸಾಂಸ್ಕೃತಿಕ ಸ್ಮೃತಿಗಳು,  ಅಳಿವಿನಂಚನ್ನು ತಲುಪಿತ್ತು . ಇವನ್ನು ಉಳಿಸಿಕೊಳ್ಳುವ ದಿಟ್ಟ ಪ್ರಯತ್ನವೇ ಶಿವತತ್ತ್ವರತ್ನಾಕರದ ಸಂಕಲನ. ಕೆಳದಿಯ ರಾಜವಂಶ ,ಅಂದಿನ ಕವಿಗಳನ್ನು ವಿದ್ವಾಂಸರನ್ನು ಪೋಷಿಸಿತು. ಸ್ವಯಂ ವಿದ್ವಾಂಸನಾಗಿದ್ದ  ಬಸವ ಭೂಪಾಲ ತನ್ನ ಕಾಲದ ವಿದ್ವಾಂಸರನ್ನೆಲ್ಲ ಒಂದೆಡೆ ಸೇರಿಸಿ, ಈ ಗ್ರಂಥ ರತ್ನವನ್ನು ಸಂಕಲಿಸಿದ್ದಾನೆ. ಈ ಬಸವ ಭೂಪಾಲ, ಕೆಳದಿಯ ಚೆನ್ನಮ್ಮಾಜಿಯ ದತ್ತುಪುತ್ರ.

ಶಿವತತ್ತ್ವರತ್ನಾಕರದ ವಿಶೇಷತೆಗಳು:
ಶಿವತತ್ತ್ವರತ್ನಾಕರವು ಕೇವಲ ಲಿಖಿತ ಗ್ರಂಥವಲ್ಲ. ಅದೊಂದು ಕ್ರೋಡೀಕೃತ ಗ್ರಂಥ. ಸಂಸ್ಕೃತ ಸಾಹಿತ್ಯ ಸಾಗರವನ್ನೆಲ್ಲ ಜಾಲಾಡಿ, ಅಮೂಲ್ಯ ಕೃತಿಗಳಿಂದ ವಿವಿಧ ವಿಷಯಗಳನ್ನು ಹೆಕ್ಕಿ ಸಂಗ್ರಹಿಸಲಾಗಿದೆ. ಸೃಷ್ಟಿಯ ಕಥನದಿಂದ ಪ್ರಾರಂಭಿಸಿ, ಮಣಿ, ಮಂತ್ರ, ತಂತ್ರ, ಔಷಧ, ರಸ, ಸಾಹಿತ್ಯ, ಸಂಗೀತ, ಚಿತ್ರ, ವಾಸ್ತು, ನೃತ್ಯ, ಇತಿಹಾಸ, ಜ್ಯೋತಿಷ, ಆಗಮ, ಖಗೋಳ, ಭೂಗೋಳ, ರಥ, ತುರಗ, ಹಸ್ತಿ, ಸಂಗ್ರಾಮ, ಕೃಷಿ, ರಾಜನೀತಿ ಮೊದಲಾದ ವಿವಿಧ ವಿಷಯಗಳನ್ನು ತನ್ನ ಮಡಿಲಿನಲ್ಲಿ ಅಡಗಿಸಿಕೊಂಡಿದೆ. ಅಷ್ಟೇ ಅಲ್ಲ, ಇದು ಹದಿನೇಳು ಹದಿನೆಂಟನೇ ಶತಮಾನದ ಕನ್ನಡಿಗರ ಸಮಗ್ರ ಸಂಸ್ಕೃತಿಯ ಇತಿಹಾಸವನ್ನೇ ಸಾದರಪಡಿಸುತ್ತದೆ. ಆ ಕಾಲದ ಆಚರಣೆಗಳು, ನಂಬಿಕೆಗಳನ್ನು ಇಲ್ಲಿ ನೋಡಬಹುದಾಗಿದೆ. ಕೆಳದಿಯ ರಾಜವಂಶದ ಚರಿತ್ರೆಯ ಮೇಲೂ ಈ ಗ್ರಂಥ ಬೆಳಕು ಚೆಲ್ಲುತ್ತದೆ. ಹಾಗಾಗಿ ಚಾರಿತ್ರಿಕ ಮಹತ್ವವನ್ನೂ ಇದು ಪಡೆದುಕೊಂಡಿದೆ. ಪೌರಾಣಿಕ ಮಾದರಿಯಲ್ಲಿ ರಚಿತವಾಗಿದ್ದರೂ, ಸಂಭಾಷಣೆಯ ರೂಪದಲ್ಲಿ ಪ್ರಸ್ತುತ ಪಡಿಸಲಾಗಿದೆ. ಶಿವತತ್ತ್ವರತ್ನಾಕರದ ಸಂಕಲನದಲ್ಲಿ ಹಲವಾರು ಗ್ರಂಥಗಳ ಸಹಾಯ ಪಡೆಯಲಾಗಿದೆ. ಪ್ರತಿಯೊಂದು ಕಲ್ಲೋಲದ ಅಂತ್ಯದಲ್ಲೂ ಋಣಿಯಾಗಿರುವ ಗ್ರಂಥಗಳ ಪಟ್ಟಿಯನ್ನು ಕೊಡಲಾಗಿದೆ. ಇದರಲ್ಲಿ ಎಷ್ಟೋ ಕೃತಿಗಳು ಇಂದಿಗೂ ಅಲಭ್ಯವಾಗಿವೆ. ಭಾರತದ ಭೌಗೋಳಿಕ ವಿವರಣೆಯಂತೂ ಅಚ್ಚರಿ ಹುಟ್ಟಿಸುತ್ತದೆ. ಇಲ್ಲಿರುವ ನದ – ನದಿಗಳ ಪಟ್ಟಿಯನ್ನು ಗಮನಿಸಿದಾಗ ಎಷ್ಟೋ ನದಿಗಳ ಹೆಸರನ್ನೇ ನಾವು ಕೇಳಿಲ್ಲವೆಂಬ ಸತ್ಯ ಅರಿವಾಗುತ್ತದೆ.

ಇಂತಹ ಬೃಹತ್ ಮಹತ್ ಗ್ರಂಥವನ್ನು ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಕನ್ನಡದಲ್ಲಿ ಕನ್ನಡಿಸಿದ್ದಾರೆ. ಹದಿಮೂರು ಸಾವಿರ ಶ್ಲೋಕಗಳಿರುವ ಈ ಗ್ರಂಥವನ್ನು ಐದು ಸಂಪುಟಗಳಲ್ಲಿ ಸಂಗ್ರಹಿಸಿ, ಕನ್ನಡಿಗರ ಕೈಗಿತ್ತಿದ್ದಾರೆ. ಈ ಕೃತಿಯನ್ನು ಅವಲೋಕಿಸಿದರೆ ಇದೊಂದು ಅನುವಾದಿತ ಕೃತಿ ಎಂಬ ಭಾವ ಬರುವುದಿಲ್ಲ. ಇದು ಕನ್ನಡದ್ದೇ ಕೃತಿ ಎನಿಸುವಷ್ಟು ಸಹಜವಾದ, ಸರಳವಾದ ನಿರೂಪಣೆ ಈ ಕೃತಿಯ ಜೀವಾಳವಾಗಿದೆ. ಮಲ್ಲೇಪುರಂ ಸ್ವತಃ ಘನ ವಿದ್ವಾಂಸರಾಗಿದ್ದರೂ ಈ ಕೃತಿಯಲ್ಲಿ ಪಾಂಡಿತ್ಯ ಪ್ರದರ್ಶನದ ಉಸಿರುಗಟ್ಟಿಸುವ ವಾತವರಣವಿಲ್ಲ. ಬದಲಾಗಿ ಸಹಜವಾಗಿ ಸರಾಗವಾಗಿ ಉಸಿರಾಡಬಹುದು. ಸಂಸ್ಕೃತ ಸಾಹಿತ್ಯದ ಪಾಕಶಾಲೆಯಲ್ಲಿ ತಯಾರಾದ ಕಬ್ಬಿಣದ ಕಡಲೆಯನ್ನು , ಕನ್ನಡಿಗರ ಹಲ್ಲುಗಳು ನೋಯದಂತೆ, ಕಡಲೆಯ ರುಚಿಯ ಸವಿಗೂ ಭಂಗ ಬರದಂತೆ ಹದವಾಗಿ ಹುರಿದು ಕೊಟ್ಟಿದ್ದಾರೆ. ಹಾಗಾಗಿ, ಕನ್ನಡಿಗರು ಹೆದರದೆ ಇದರ ಸವಿ ನೋಡಬಹುದು.

ವಿವಿಧ ಶಾಸ್ತ್ರಗಳ ಪರಿಚಯಿಸುವ ಈ ಗ್ರಂಥ ಹಿಂದಿ, ಇಂಗ್ಲೀಷ್ , ಮತ್ತು ಇತರ ಭಾರತೀಯ ಭಾಷೆಗಳಲ್ಲೂ ಮೈತಳೆಯಬೇಕು. ತನ್ಮೂಲಕ, ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿಶ್ವದ ಮೂಲೆಮೂಲೆಯ ಓದುಗರನ್ನು ತಲುಪಬೇಕು. ಭಾರತೀಯರ ಬಹುಜ್ಞತೆ, ಬುದ್ಧಿಮತ್ತೆ, ದೈತ್ಯಪ್ರತಿಭೆಗಳು ಜಗತ್ತಿನ ಮುಂದೆ ಮತ್ತೊಮ್ಮೆ ಅನಾವರಣಗೊಳ್ಳಲಿ.

ಸಂಸ್ಕೃತದ ವಿಶ್ವಕೋಶವೊಂದನ್ನು ಕನ್ನಡದಲ್ಲಿ ಕಟ್ಟಿಕೊಡುವ ದಿಟ್ಟಪ್ರಯತ್ನವನ್ನು ಮಲ್ಲೇಪುರಂ ಮಾಡಿದ್ದಾರೆ. ಅದನ್ನು ಪ್ರಕಟಿಸಿ ಸಹೃದಯ ಓದುಗರಿಗೆ ತಲುಪಿಸುವ ಸಾಹಸವನ್ನು ದರೇಸ ಪ್ರಕಾಶನದವರು ಮಾಡಿದ್ದಾರೆ. ಮೂಲತಃ ಮಾಹಿತಿ ತಂತ್ರಜ್ಞಾನದ ಉದ್ದಿಮೆಯ ಟೆಕಿಗಳಾದ ಪ್ರಕಾಶಕರು, ಪ್ರಾಚೀನ ಮಾಹಿತಿ ಕೋಶವನ್ನು ಪ್ರಕಟಿಸುವ ಉತ್ಸಾಹ ತೋರಿರುವುದು ಪ್ರಶಂಸನೀಯ.

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳಕಿನ ತೇರು
Next post ಹಳ್ಳೇಗೆ ಅಂಗೈಲಿ ವೈಕುಂಠ ತೋರಿದ ಕೊಮಾಸಾಮಿ

ಸಣ್ಣ ಕತೆ

 • ರಾಧೆಯ ಸ್ವಗತ

  ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

 • ದೊಡ್ಡವರು

  ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

 • ಏಕಾಂತದ ಆಲಾಪ

  ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

 • ಸಾವಿಗೊಂದು ಸ್ಮಾರಕ

  ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

 • ಸಂಶೋಧನೆ

  ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…