ಪ್ರಫುಲ್ಲತೆ

ಮಳೆನಾಡಿನ ಯಾವುದೋ ಒಂದು ದೊಡ್ಡ ಪಟ್ಟಣದಲ್ಲಿ ಒಂದು ದಿನ ಇಳಿಹೊತ್ತಿನಲ್ಲಿ ನಾನು ಮಕ್ಕಳಿಂದ ತುಂಬಿದ ಏಳೆಂಟು ಗಾಡಿಗಳನ್ನು ಕಂಡೆನು. ಅವರು ಮುಂಜಾವಿನಲ್ಲಿಯೆ ಊರಕಡೆಗೆ ಹೊಲದಿಂದ ಆಟ- ಪಾಟಗಳ ಸಲುವಾಗಿ ಹೋಗಿದ್ದರು ಅದರೆ ಮಳೆಯ ಸಲುವಾಗಿ ಅವರು ವೇಳೆಗಿಂತ ಮುಂಚಿತವಾಗಿಯೇ ಮರಳಬೇಕಾಯ್ತು.

ಆದರೇನು? ಆ ಮಗುಗಳು ನಗುತ್ತಿದ್ದವು; ಹಾಡುತ್ತಿದ್ದವು; ಹಾಗೂ ಬರುಹೋಗುವವರಿಗೆ ನಗೆಚಾಟಿಕೆಯ ಸಂಕೇತಗಳನ್ನು ಮಾಡುತ್ತಿದ್ದವು. ಆ ನಿರುತ್ಸಾಹದ ಸಮಯದಲ್ಲಿ ಸಹ ಅವರು ತಮ್ಮ ಪ್ರಸನ್ನತೆಯನ್ನು ಕಾಯ್ದುಕೊಂಡಿದ್ದರು. ಒಬ್ಬನು ಉದಾಸೀನನಾದರೆ ಇನ್ನೊಬ್ಬನು ತನ್ನ ಹಾಡುಗಳಿಂದ ಅವನನ್ನು ಪ್ರಫುಲ್ಲಿತಗೊಳಿಸಿಬಿಡುತ್ತಿದ್ದನು. ಕೆಲಸಬೊಗಸೆಗಳಲ್ಲಿ ತೊಡಗಿದವರು ಅವರ ಕಿಲಿಕಿಲಾಟವನ್ನು ಕೇಳಿದಕೂಡಲೇ ಅವರಿಗೆ ಆಕಾಶದ ಕಪ್ಪುಮೋಡಗಳು ತುಸು ತಿಳಿಯಾಗಿಹೋದಂತೆ ಅನಸಿಬಿಡುವದು.

ಖುರಾಸಾನದಲ್ಲಿ ಒಬ್ಬ ರಾಜಕುಮಾರನಿದ್ದನು. ಅವನ ಹೆಸರು ಅಮರ. ಅವನಿಗೆ ಸೊಗಸಾದ ಆಸ್ತಿಪಾಸ್ತಿಯಿತ್ತು. ಒಂದು ಸಾರೆ ಅವನು ಯುದ್ಧಕ್ಕೆ ಹೋದಾಗ ಅವನ ಅಡಿಗೆಯ ಸಾಹಿತ್ಯವನ್ನು ಹೊತ್ತುಕೊಂಡು ಮೂರುನೂರು ಒಂಟೆಗಳು ಅವನ ಸಂಗಡ ಹೋಗಿದ್ದವು. ಆದರೆ ದುರ್ಭಾಗ್ಯದಿಂದ ಅವುಗಳಿಗೆ ಆತನ ಹಸಿವೆ ಹಿಂಗಿಸಲಿಕ್ಕಾಗಲಿಲ್ಲ. ಬಳಿಯಲ್ಲಿ ನಿಂತ ತನ್ನ ಪ್ರಮುಖ ಅಡಿಗೆಯವನು – ಅವನೊಬ್ಬ ಒಳ್ಳೆಯ ಮನುಷ್ಯನಾಗಿದ್ದನು – ಅವನಿಗೆ ಹೇಳಿದ್ದೇನಂದರೆ – “ಅಣ್ಣಾ, ಉಣ್ಣಲಿಕ್ಕೇನಾದರೂ ಸಿದ್ದಪಡಿಸಿಕೊಡು.”

ಆ ಬಡಪಾಯಿಯ ಬಳಿಯಲ್ಲಿ ಮಾಂಸದ ಒಂದು ತುಣುಕು ಉಳಿದಿತ್ತು. ಅವನದನ್ನು ಒಂದು ಗಡಿಗೆಯಲ್ಲಿ ಕುದಸಲಿಕ್ಕೆ ಇಟ್ಟನು.  ಹಾಗೂ ಅಡಿಗೆಯನ್ನು ಒಂದಿಷ್ಟು ರುಚಿಕಟ್ಟು ಮಾಡಬೇಕೆಂದು ಸ್ವತಃ ಕೆಲವೊಂದು ಕಾಯಿಪಲ್ಲೆಗಳನ್ನು ಹುಡುಕಲು ಹೊರಟನು.

ಅಷ್ಟರಲ್ಲಿ ಒಂದು ನಾಯಿ ಅಲ್ಲಿಗೆ ಬಂದಿತು. ಮಾಂಸದ ವಾಸನೆಗೆ ಆಕರ್ಷಿತವಾಗಿ ಅದು ತನ್ನ ಮುಖವನ್ನು ಗಡಿಗೆಯಲ್ಲಿ ಹಾಕಿತು; ಆದರೆ ಉಗಿಯ ಕಾವು ತಗುಲಿ ಅದು ತಟ್ಟನೆ ತುಸು ಅಡ್ಡತಿಡ್ಡವಾಗಿ ಎಳೆದಾಡಿತು. ಅದರಿಂದ ಅದರ ತಲೆಯು ಗಡಿಗೆಯಲ್ಲಿ ಸಿಕ್ಕುಬಿದ್ದಿತು. ಅದು ಗಾಬರಿಯಾಗಿ ಗಡಿಗೆ ಸಹಿತ ಅಲ್ಲಿಂದ ಓಡಿತು.

ಅಮರನು ಅದನ್ನು ನೋಡಿ ಉಚ್ಚ ಸ್ವರದಲ್ಲಿ ನಕ್ಕುಬಿಟ್ಟನು. ಅವನ ಅಧಿಕಾರಿಯು ಅಂದರೆ ಚೌಕಸಿಯ ಸಲುವಾಗಿ ನಿಯಮಿಸಲ್ಪಟ್ಟವನು ಅಮರನಿಗೆ- “ಅದು ಹೇಗೆ ನಗೆ ಬರುವುದು ? ಈ ದುಃಖದ ಸಮಯದಲ್ಲಿಯೂ ನೀವು ನಗುತ್ತಿವಿರುವಿರಲ್ಲ? ” ಎಂದು ಕೇಳಿದನು.

ಅಮರನು ಓಡಿಹೋಗುತ್ತಿರುವ ನಾಯಿಗೆ ಎಚ್ಚರಿಕೆ ಕೊಡುತ್ತ ನುಡಿದದ್ದೇನಂದರೆ- ಇಂದು ಮುಂಜಾವಿನವರೆಗೆ ನನ್ನ ಅಡಿಗೆಯ ಸಾಮಾನುಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಮೂರುನೂರು ಒಂಟೆಗಳು  ಬೇಕಾಗುತ್ತಿದ್ದವು. ಈಗ ಆ ಎಲ್ಲದರ ಸಲುವಾಗಿ ಒಂದು ನಾಯಿಯೇ ಸಾಕಾಗಿ ಬಿಟ್ಟಿ ತೆಂದುದು ನೆನಪಾಗಿ ನಗೆ ಬರುತ್ತಿದೆ.

ಪ್ರಸನ್ನನಾಗಿರುವುದರಲ್ಲಿ ಅಮರನಿಗೆ ಒಂದು ಸವಿಯು ದೊರೆಯುತ್ತಿತ್ತು. ಹೆರರನ್ನು ಪ್ರಸನ್ನಗೊಳಿಸುವುದಕ್ಕೆ ಅವನು ಅಷ್ಟೊಂದು ಪ್ರಯತ್ನ ಶೀಲನಾಗಿರಲಿಲ್ಲ. ಅದರೂ ಅವನ ವಿನೋದ ಸ್ವಭಾವವನ್ನು ಪ್ರಶಂಸಿಸದೆ ಇರಲಿಕ್ಕಾಗದು. ಯಾರಾದರೂ ಅದೆಂಥದೋ ಗಂಭೀರ ವಿಪತ್ತಿನಲ್ಲಿ ಸಹ ಪ್ರಸನ್ನರಾಗಿರಬಲ್ಲರಾದರೆ ನಾವು ವಾಡಿಕೆಯ ಚಿಂತೆಯಲ್ಲಿ ಒಂದು ಮುಗುಳು ನಗೆಯನ್ನಾದರೂ ತರಲಾರೆವೇ?

ಇರಾಣ ದೇಶದಲ್ಲಿ ಒಬ್ಬ ಸ್ತ್ರೀ ಇದ್ದಳು. ಅವಳು ಜೇನು ಮಾರುವ ಉದ್ಯೋಗವನ್ನು ಕೈಕೊಂಡಿದ್ದಳು. ಅವಳ ನಡೆನುಡಿಗಳ ಪದ್ಧತಿಯು ಬಹು ಅಕರ್ಷಕವಾಗಿತ್ತು. ಅವಳ ಅಂಗಡಿಯ ಸುತ್ತಲು ಗಿರಾಕಿಗಳು ಕಿಕ್ಕಿರಿಯುತ್ತಿದ್ದರು. ಈ ಕಥೆಯನ್ನು ಹೇಳುವ ಕವಿಯು ಅನ್ನುವುದೇನಂದರೆ- ಅವಳು ಜೇನಿನ ಬದಲು ವಿಷವನ್ನು ಮಾಡುತ್ತಿದ್ದರೂ ಜನರು ಅವಳಲ್ಲಿ ಅದನ್ನು ಸಹ ಜೇನುತುಪ್ಪವೆಂದೇ ತಿಳಿದು ಕೊಂಡುಕೊಳ್ಳುತ್ತಿದ್ದರು.

ಒಬ್ಬ ದುಷ್ಟಸ್ವಭಾವದ ಮನುಷ್ಯನು, ಈ ಉದ್ಯೋಗದಿಂದ ಅ ಸ್ತ್ರೀಯು ಬಹಳ ಲಾಭ ಪಡೆಯುತ್ತಿರುವುದನ್ನು ಕಂಡು ಅವನೂ ಅ ಉದ್ಯೋಗವನ್ನು ತನ್ನದನ್ನಾಗಿ ಮಾಡಿಕೊಳ್ಳಬೇಕೆಂದು ನಿಶ್ಚಯಿಸಿದನು.

ಅಂಗಡಿಯನ್ನೇನೋ ಆತನು ತೆರೆದನು. ಅದರೆ ಜೇನಿನ ಸಜ್ಜು-ಸಿದ್ಧತೆಯ ಆಡಂಬರದ ಹಿಂದೆ ಅವನ ರೂಪವು ಕಠೋರಕ್ಕಿಂತ ಕಠೋರವಾಗಿಯೇ ಉಳಿಯಿತು. ಅವನು ಗಿರಾಕಿಗಳನ್ನು ಯಾವಾಗಲೂ ತನ್ನ ಗಂಟಿಕ್ಕಿದ ಹುಬ್ಬುಗಳಿಂದಲೇ ಸ್ವಾಗತಿಸುತ್ತಿದ್ದನು. ಅದ್ದರಿಂದ ಎಲ್ಲರೂ ಅವನ ವಸ್ತುವನ್ನು ಬಿಟ್ಟುಕೊಟ್ಟು ಮುಂದೆ ಹೋಗುವರು. ಕವಿ ಮುಂದೆ ಹೇಳುವದೇನೆಂದರೆ- ಆತನ ಜೇನಿನ ಸಮೀಪದಲ್ಲಿ ಒಂದು ನೊಣವು ಸಹ ಸುಳಿಯುವ ಸಾಹಸ ಮಾಡುತ್ತಿದ್ದಿಲ್ಲ. ಸಂಜೆಯಾದರೂ ಆತನ ಕೈ ಕೆಳಗೇ ಇಳಿಬಿದ್ದಿರುತ್ತಿದ್ದವು. ಒಂದು ದಿವಸ ಒಬ್ಬ ಸ್ತ್ರೀಯು ಅವನನ್ನು ಕಂಡು ತನ್ನ ಪತಿಗೆ- ಕಹಿ ಮುಖವು ಜೇನನ್ನು ಸಹ ಕಹಿ ಮಾಡಿಬಿಡುತ್ತದೆ-ಎಂದು ಹೇಳಿದಳಂತೆ!

ಉದ್ಯೋಗಿಯಾದ ಆ ಸ್ತ್ರೀಯು ಕೇವಲ ಗಿರಾಕಿಗಳನ್ನು ಅಕರ್ಷಿಸುವುದಕ್ಕಾಗಿಯೆ ಮುಗುಳುನಗೆ ಬೀರುತ್ತಿದ್ದಳೇ? ಇಲ್ಲ. ಅವಳ ಪ್ರಪುಲ್ಲತೆಯು ಅವಳ ಒಳ್ಳೆಯ ಸ್ವಭಾವದ ಅಂಗವಾಗಿತ್ತೆಂದು ನಮಗೇನೋ ವಿಶ್ವಾಸವಿದೆ. ಜಗತ್ತಿನಲ್ಲಿ ನಮ್ಮ ಕಾರ್ಯವು ಬರಿಯ ಕೊಳ್ಳುವುದು-ಮಾರುವದು ಇಷ್ಟೇ ಆಗಿರಲಾರದು. ನಾವು ಇಲ್ಲಿ ಒಬ್ಬರು ಇನ್ನೊಬ್ಬರಿಗೆ ಗೆಳೆಯರಾಗಿ ಇರಬೇಕಾಗಿರುತ್ತದೆ. ಆ ಒಳ್ಳೆಯ ಸ್ತ್ರೀಯ ಗಿರಾಕಿಗಳು ತಿಳಕೊಂಡಿದ್ದೇನಂದರೆ- ಅವಳು ಒಬ್ಬ ಅಂಗಿಡಿಕಾರ್ತಿ ಮಾತ್ರವಲ್ಲದೆ ಇನ್ನೂ ಏನೇನೋ ಆಗಿದ್ದಳು. ಅವಳು ಜಗತ್ತಿನ ಒಬ್ಬ ಪ್ರಸನ್ನಮುಖದ ನಾಗರಿಕಳೂ ಆಗಿದ್ದಳು.
* * * *

ಕೆಳಗಡೆಯಲ್ಲಿ ಯಾವ ಮಹಾಪುರುಷನ ಪರಿಸ್ಥಿತಿಯನ್ನು ತೋರಿಸುತ್ತ ಹೋಗುವೆನೋ ಆತನ ಪ್ರಸನ್ನತೆಯು ಒಂದು ಸುಂದರವಾದ ಉಗಮಸ್ಥಾನದಿಂದ ನೀರಿನ ಹೊನಲು ಪ್ರವಹಿಸಿದಂತೆ ಪ್ರವಾಹಿತವಾಗುತ್ತಿತ್ತು. ಅವನಿಗೆ ಲಾಭದ ಇಚ್ಛೆಯೂ ಇರಲಿಲ್ಲ. ಗಿರಾಕಿಗಳದೂ ಇರಲಿಲ್ಲ. ಅವನು ಪ್ರಸಿದ್ಧನೂ ಗೌರವಶಾಲಿಯೂ ಅದ ರಾಮನು.
ರಾಮನು ಹತ್ತು ತಲೆ ಹಾಗೂ ಇಪ್ಪತ್ತು ಭುಜಗಳುಳ್ಳ ರಾವಣನನ್ನು ಹೊಡೆದು ಹಾಕಿದ್ದನು. ನಾನು ನಿಮಗೆ ಈ ಕಥೆಯ ಪ್ರಾರಂಭವನ್ನು ಹೇಳಿಬಿಟ್ಟಿದ್ದೇನೆ. ಇರಲಿ, ಆ ಯುದ್ಧವು ಬಹು ಭಯಂಕರವಾಗಿತ್ತಲ್ಲದೆ ಕೆಲವೊಂದು ಜನಾಂಗಗಳ ನಡುವೆ ನಡೆದಿತ್ತು. ಸಾವಿರಾರು ಕಪಿಗಳೂ ಕರಡಿಗಳೂ ರಾಮನ ಸೇನೆಯಲ್ಲಿ ತಮ್ಮ ಪ್ರಾಣಗಳನ್ನು ಬಲಿ ಕೊಟ್ಟವು. ಅವನ ಶತ್ರುಗಳಾದ ರಾಕ್ಷಸರ ಹೆಣಗಳಿಂದ ಬಣಿವೆಯೇರಿತ್ತು. ಅವರ ರಾಜನು ನಿರ್ಜೀವವಾದ ನೆಲದ ಮೇಲೆ ಬಿದ್ದುಕೊಂಡಿದ್ದನು. ಅಲಲ! ಅವನನ್ನು ಹೊಡೆದು ಹಾಕುವುದು ಅದೆಷ್ಟು ಕಠಿಣವಾಗಿತ್ತು! ಒಂದಾದ ಬಳಿಕ ಒಂದರಂತೆ ರಾಮಚಂದ್ರದೇವನು ಅವನ ಹತ್ತು ತಲೆಗಳನ್ನೂ ಇಪ್ಪತ್ತು ಭುಜಗಳನ್ನೂ ಕತ್ತರಿಸಿದನು. ಆದರೆ ಅದು ಹೇಗೋ ಅವು ಮತ್ತೆ ಚಿಗಿತು ಬಿಡುವವು. ಒಂದಾದಮೇಲೆ ಒಂದರಂತೆ ಅವನು ಅವೆಷ್ಟು ಕತ್ತರಿಸಿ ಹಾಕಿದನೋ ಲೆಕ್ಕವಿಲ್ಲ. ಕೊನೆಯಲ್ಲಿ ಆಕಾಶದಿಂದ ತಲೆ ಹಾಗೂ ತೋಳುಗಳ ಮಳೆಯೇ ಸುರಿಯತೊಡಗಿದೆಯೆಂದು ಅವನಿಗೆ ಕಾಣತೊಡಗಿತು.

ಆ ಭಯಂಕರವಾದ ಯುದ್ಧವು ಮುಗಿಯುವ ಹೊತ್ತಿಗೆ ಯುದ್ಧದಲ್ಲಿ ಸತ್ತುಹೋಗಿದ್ದ ಆ ಎಲ್ಲ ಕಪಿಗಳನ್ನೂ ಕರಡಿಗಳನ್ನೂ ಪುನರ್ಜೀವಿತಗೊಳಿಸಲಾಯಿತು. ಅವರೆಲ್ಲರು ಹೀಗೆ ಎದ್ದು ನಿಲ್ಲಲು ಒಂದು ಮಹಾ ಸೇನೆಯು ಆಜ್ಞೆಯನ್ನು ಪ್ರತೀಕ್ಷಿಸುತ್ತ ನಿಂತಂತೆ ತೋರಿತು. ಯಶಸ್ವಿಯಾದ ರಾಮನ ವ್ಯವಹಾರವು ವಿಜಯ ದೊರೆತ ಬಳಿಕ ಸರಲವೂ ಶಾಂತವೂ ಆಗಿತ್ತು. ಅವನು ತನ್ನ ನಂಬಿಗೆಯ ಮಿತ್ರರ ಕಡೆಗೆ ತನ್ನ ಕೃಪಾಪೂರ್ಣವಾದ ದೃಷ್ಟಿಯನ್ನು ಬೀರಿದನು.

ಆಗಲೇ ರಾವಣನ ಸಿಂಹಾಸನದ ಉತ್ತರಾಧಿಕಾರಿಯಾಗಿದ್ದ ವಿಭೀಷಣನು ಆ ಯುದ್ಧದಲ್ಲಿ ಇನ್ನೊಂದು ಸಾಹಸಪೂರ್ವಕವಾಗಿ ಭಾಗವಹಿಸಿದ ಆ ವೀರರ ಸಲುವಾಗಿ ಒಂದು ಗಾಡಿತುಂಬ ರತ್ನಗಳನ್ನೂ ಉಚ್ಚತರದ ಉಡುಗೊರೆಗಳನ್ನೂ ತಂದನು.

ರಾಮನು ಹೇಳಿದ್ದೇನೆಂದರೆ-ಮಿತ್ರನಾದ ವಿಭೀಷಣನೇ ಕೇಳು. ನೀನು ಮೇಲೆ ಮುಗಿಲಲ್ಲಿ ಏರಿಹೋಗು. ಮತ್ತು ಅಲ್ಲಿಂದ ಈ ನನ್ನ ಕಾಣಿಕೆಗಳನ್ನು ಸೇನೆಯ ಎದುರಿಗೆ ಚಲ್ಲಿಕೊಡು.

ವಿಭೀಷಣನು ಹಾಗೆಯೇ ಮಾಡಿದನು. ತನ್ನ ರಥವನ್ನು ಅವನು ಮೇಲೆ ತೆಗೆದುಕೊಂಡು ಹೋದನು. ಬಳಿಕ ಅಲ್ಲಿಂದವನು ಆ ಎಲ್ಲ ಥಳಥಳಿಸುವ ರತ್ನದೊಡವೆಗಳನ್ನೂ ಬಣ್ಣಬಣ್ಣದ ಸುಂದರ ವಸ್ತ್ರದುಡುಗೊರೆಗಳನ್ನೂ ಕೆಳಗಡೆಗೆಸದನು.

ಆಗ ಏನಾಯಿತು? ಇಳಿದುಬರುವ ಆ ನಿಧಿಯ ಮೇಲೆ ಎಲ್ಲ ಕವಿಗಳು; ಕರಡಿಗಳೂ ಒಂದನ್ನೊಂದು ನುಗಿಸುತ್ತ ಎರಗಿಬಿದ್ದವು. ಅದೊಂದು ಅಂದ- ಚಂದದ ಕುಣಿದಾಟವೇ ನಡೆಯಿತು.

ರಾಮನೂ ಅವನ ಪತ್ನಿಯಾದ ಸೀತೆಯೂ ಗಹಗಹಿಸಿ ನಕ್ಕರು. ಅವನ ಬಂಧುವಾದ ಲಕ್ಷ್ಮಣನಗೂ ತನ್ನ ನಗೆಯನ್ನು ತಡೆಯಲಾಗಲಿಲ್ಲ.

ಕೇವಲ ವೀರಪುರುಷರೇ ಈ ಪ್ರಕಾರ ನಗಬಲ್ಲರು. ಶುದ್ಧವೂ ಸರಲವೂ ಆದ ಆನಂದದ ಹೊರತು ಇನ್ನಾವುದು ಪ್ರಿಯವಾಗಬಲ್ಲದು? ವಾಸ್ತವದಲ್ಲಿ ಉತ್ಸಾಹ ಹಾಗೂ ಸಾಹಸಗಳ ಮೂಲದಲ್ಲಿ ಒಂದೇ ಭಾವನೆಯು ಕಾರ್ಯ ಮಾಡುತ್ತಿರುತ್ತದೆ. ಜೀವನದ ಕಠಿಣ ಕ್ಷಣದಲ್ಲಿ ಪ್ರಸನ್ನತೆಯನ್ನು ಕಾಪಾಡಿಕೊಂಡಿರುವುದೇ ಒಂದು ಬಗೆಯ ಸಾಹಸವಾಗಿರುತ್ತದೆ. ಹಾಗೂ ಅದು ಮುದಿತ ಸ್ವಭಾವದ ಅಂಗವಾಗಿರುತ್ತದೆ.

ಪ್ರತಿಯೊಂದು ಸಮಯದಲ್ಲಿ ನಿಶ್ಚಯವಾಗಿ ನಗುವ ಅವಶ್ಯಕತೆಯಿಲ್ಲ- ಆದರೆ ಜೀವನವು ಅದೆಷ್ಟು ಪ್ರಮಾಣದಲ್ಲಿ ಪ್ರಸನ್ನ ಗಂಭೀರಭಾವವುಳ್ಳದ್ದೂ ಸಂತೋಷಪೂರ್ಣ ಸ್ವಭಾವವುಳ್ಳದ್ದೂ ಆಗುವುದೋ ಅಷ್ಟು ಒಳ್ಳೆಯದು. ಅದು ಯಾರ ಗುಣಗಳ ಪ್ರಭಾವವಾಗಿರಬಲ್ಲದೆಂದರೆ- ತಾಯಿಯು ಮನೆ ಯನ್ನು ಮಕ್ಕಳ ಸಲುವಾಗಿ ಆನಂದಮಯ ಮಾಡಿಕೊಡುತ್ತಾಳೆ. ಒಬ್ಬ ದಾಯಿಯು ರೋಗವನ್ನು ಶೀಘ್ರವಾಗಿಯೇ ದೂರಗೊಳಿಸುವುದರಲ್ಲಿ ಸಫಲಳಾಗುತ್ತಾಳೆ. ಸ್ವಾಮಿಯು ತನ್ನ ಸೇವಕರ ಕೆಲಸವನ್ನು ಸುಲಭಗೊಳಿಸುತ್ತಾನೆ. ಒಬ್ಬ ಶ್ರಮಜೀವಿಯು ತನ್ನ ಸಂಗಡಿಗರಲ್ಲಿ ಸದ್ಭಾವನೆಯನ್ನು ಹುಟ್ಟಿಸುತ್ತಾನೆ. ಪ್ರಯಾಣಿಕನು ತನ್ನ ಜೊತೆಗಾರರ ಬೇಸರದ ಪ್ರಯಾಣ ದಲ್ಲಿ ಸುಖವನ್ನು ತುಂಬುತ್ತಾನೆ. ಒಬ್ಬ ನಾಗರಿಕನು ಅನ್ಯ ನಾಗರಿಕರ ಹೃದಯದಲ್ಲಿ ಆಶೆಯನ್ನು ಮೊಳೆಸಿಡುತ್ತಾನೆ.

ಪ್ರಸನ್ನಚಿತ್ತರಾದ ಓ ಬಾಲಕ-ಬಾಲಕಿಯರೇ, ನೀವು ನಿಮ್ಮ ಪ್ರಫುಲ್ಲತೆಯಿಂದ ಏನು ಮಾಡಲಾರಿರಿ ?

ಹಿಂದಿ ಮೂಲ: ಶ್ರೀ ತಾಯಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬದುಕು
Next post ಸತ್ಯ

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

cheap jordans|wholesale air max|wholesale jordans|wholesale jewelry|wholesale jerseys