ಬೆಳಕಿನ ತೇರು

ನಾವು ಕಲಾವಿದರು
ಬೆಳಕಿನ ತೇರನೆಳೆಯುವವರು
ರವಿ ಮೂಡುವ ಮುನ್ನ ಕಣ್ಣ ತೆರೆದು
ನಾಗರಿಕ ಕಿರಣಗಳು ನೆಲ ಮುಟ್ಟುವ
ಮುನ್ನವೇ ಎದ್ದವರು
ತಂಗಾಳಿಗೆ ಮೈಯೊಡ್ಡಿದವರು
ಅರುಣೋದಯದ ಉಷಾಕಾಂತಿಗೆ
ಮೈಪುಳಕಗೊಂಡು ಆಹಾ ಓಹೋ ಓಂ….
ಎಂದು ಉದ್ಗಾರ ತೆಗೆದವರು
ಭೂಮಿ ಬಾನುಗಳ ಜೋಡಿಸಿದ
ದಿವ್ಯದೆಳೆಗಳ ಹಿಡಿದು
ಹೆಣೆ ಹೆಣೆದು ಹಾಡುತ್ತ ಕುಣಿದವರು
ಈ ನೆಲ ಜಲಗಳ ಗಿರಿವನಗಳ
ಗಿಡ ಮರಗಳ ಜೀವಿ ಸಂಕುಲಗಳ
ಹೂವು ಹಣ್ಣು ದುಂಬಿ ಕೋಗಿಲೆಗಳ
ದನಿಗಳ ಜೊತೆಗೆ ದನಿ ಕೂಡಿಸಿದವರು
ಗುಡುಗು ಮಿಂಚುಗಳೊಡನೆ ಮಿಂಚಿದವರು
ಸುರಿವ ಮಳೆಯೊಡನೆ ಮೈಮನ ನೆನೆದು
ನೆಲದೊಳಗಿಂದ ಸತ್ವ ಹೀರಿ ಮೇಲೆದ್ದವರು
ಪುಳಕಗೊಂಡು ಚಿಗುರು ಹುಲ್ಲಿನೂಡನೆ
ಕೆಂದಳಿರಿನೊಡನೆ ದಳ ದಳ ಅರಳಿ
ಕೊಂಬೆ ರೆಂಬೆಗಳ ದಿಗ್ದಿಗಂತಗಳವರೆಗೆ
ಚಾಚಿ ಬಣ್ಣ ಬಣ್ಣಗಳ ನಾದ ನಿನಾದಗಳ
ಮೈದುಂಬಿಕೊಂಡು ಕಲಕಲದೊಳಗಿಂದ ನಿಷ್ಕಲದೆಡೆಗೆ
ನಾದದೊಳಗಿನ ಅನಾದಿ ಅನಾದದೆಡೆಗೆ ತುಡಿದವರು
ಅ-ಕ್ಷರವನು ಅಕ್ಷರ ವರ್ಣಗಳಲಿ
ಮಾತುಗಳಲಿ ಹಿಡಿದಿಟ್ಟವರು
ಮಾತನೆ ಮಾತೇ ವಾಣೀ
ಸಾವಿತ್ರಿ ಗಾಯತ್ರಿ ಸರಸ್ವತೀ ದೇವೀ
ಎಂದು ಕರೆದು ನಂಬಿ ಮೈಮಣಿದವರು

ನಾವು ನಾದ ಸರಸ್ವತಿ ವೇದ ಸರಸ್ವತಿ
ಬೋಧ ಸರಸ್ವತಿ ಮೋದ ಸರಸ್ವತಿಯ ಮುದ್ದಿನ ಮಕ್ಕಳು
ಆ ತಾಯಿಗೆ ಸಂಗೀತವೊಂದು ಮೊಲೆ
ಸಾಹಿತ್ಯವೊಂದು ಮೊಲೆ
ಚಿತ್ರ ಶಿಲ್ಪ ನಾಟ್ಯಾದಿಗಳು
ಆ ತಾಯಿಯ ಶ್ರೀ ರೂಪ ಲೀಲೆ
ಅವಳ ಹಾಲು ಕುಡಿದು ಚಿರಂತನ
ಚಿರನೂತನ ಚೆಲುವ ಚಿಮ್ಮಿ
ಚಿರವಾಗಿ ಈ ನೆಲದಿ ನಿಲಿಸಿ ಹೋದವರು
ಆ ನವ ನವೋನ್ವೇಷ ಪ್ರತಿಭಾದೇವಿಗೆ
ಶರಣಾದವರು-ಮರಣ ಮೀರಿದವರು
ಆ ಅಮೃತವ ಕುಡಿದು ಅಮರರಾದವರು
ಆ ಸುಧೆಯನೀಂಟಿ ವಿಧಿಯ ದಾಟಿದವರು
ಅಸತ್ತಿನಿಂದ ಸತ್ತಿನೆಡೆಗೆ
ತಮಂಧದಿಂದ ಬೆಳಕಿನೆಡೆಗೆ ಸಾಗಿದವರು
ಬೆಳಕಿನ ತೇರನೆಳೆದವರು

ನಾವು ಕಲಾವಿದರು
ನಾವಿಲ್ಲದಿರಲು ಏನಿದೆ ಇಲ್ಲಿ
ಬದುಕಬೇಕೆಂಬಾಸೆ
ಇದೋ ಮುದಿಬ್ರಹ್ಮ ಸೃಷ್ಟಿಸಿದ ಬರಡು ಭೂಮಿ
ಕಷ್ಟ ನಷ್ಟಗಳ ಕಲ್ಲು ಮುಳ್ಳುಗಳು
ಸಾವು ನೋವುಗಳ ಕಹಿ ಬೇವುಗಳು
ಹಿಂಸೆ ತುಳಿತ ಹೊಡೆತಗಳ ರಕ್ತಗಾಯಗಳು
ದ್ವೇಷ ಮೋಸ ಕುಟಿಲತೆಗಳ ವಿಷಜಂತುಗಳು
ಕುಂದು ಕೊರತೆ ಕೊರಗುಗಳ ಕೊರಕಲು ಕಂದಕಗಳು
ವಿರೂಪ ಕುರೂಪ ಕರಾಳಗಳ ಕೋರೆ ಹಲ್ಲುಗಳು
ಈ ಮರುಭೂಮಿಯೊಳಗೇ ಜಲದೊರತೆ
ಈ ಬರಡು ಬಂಜರಿನೊಳಗೇ ಹಸಿರು-ಹಣ್ಣು-ಹಾಲು-ಜೇನು
ಕಲ್ಲು ಮುಳ್ಳುಗಳೊಳಗೇ ನಯದ ಹೂ ಹಾದಿ
ಕಹಿ ಬೇವುಗಳೊಳಗೇ ಸಿಹಿಯ ಸಾಂತ್ವನ ಬೋಧ
ಹಿಂಸೆ ಗಾಯ ವ್ರಣಗಳಿಗೆ ಪ್ರೀತಿ ಕರುಣೆಗಳ ಮುಲಾಮು
ವಿಷಗಳೊಳಗೆ ಸ್ನೇಹದ ಗರುಡಮಣಿ
ಕಂದಕಗಳ ದಾಟಿ ಜೀಕುವ ಹಿಗ್ಗಿನುಯ್ಯಾಲೆ
ವಿರೂಪ ಕುರೂಪಗಳಲೇ ಸುರೂಪ ಸೌಂದರ್ಯಗಳ
ಕಂಡುಕೊಂಡವರು ಕಂಡುಂಡು ಸುತ್ತೆಲ್ಲ ಹಂಚಿದವರು
ಅಸಹ್ಯವಾದೀ ಬದುಕ ಸಹ್ಯಸವಿಗೊಳಿಸಿದವರು
ಬಳಲಿಕೆಯಿದ್ದರೂ ಬಾಳುವೆಯಲಿ
ಒಲವಿನ ನೀರೆರೆದವರು
ತೊಳಲಾಟವಿದ್ದರೂ ತೇಲಿಸುವ
ದೋಣಿಯನ್ನು ಅಣಿ ಮಾಡಿದವರು
ಬಾಳಬೇಕು ಇಲ್ಲೇ ಬಾಳಬೇಕೆಂಬ
ಆಶೆಯ ತುಂಬಿದವರು
ಕೈಲಾಸಕೆ ಬಾ ಎಂದು ಶಿವನೇ ಕರೆದರೂ
ಬೇಡ ಇಲ್ಲೇ ಎಲ್ಲಾ ಇದೆ
ನೀನೂ ಇಲ್ಲೇ ಬಾ ಎಂದು ಕರೆದವರು
* * *

ನಾವು ಕಲಾವಿದರು
ಗಾಳಿಯ ಜೋಕಾಲಿಯಲಿ ಜೀಕಿ
ಮಂಗಳದಂಗಳವ ತಿರೆಗೆ ತಂದವರು
ತಿಂಗಳನ ತಿಳಿನೀರ ಚಳೆಹೊಯ್ದು
ಚಿಕ್ಕೆಗಳ ರಂಗೋಲಿ ಹಾಕುವವರು
ಅವುಗಳನೇ ಹೂಗಳ ಮಾಡಿ
ಪ್ರಿಯೆಯ ತುರುಬಿಗಿಟ್ಟು ಚೆಂದ ನೋಡುವವರು
ಸೂರ್ಯ ಚಂದಿರರ ತಿಲಕ ಮಾಡಿ
ಹಣೆಗಿಟ್ಟು ತೇಜವ ಮೆರೆಯುವವರು
ಸಿಡಿಲುಗಳ ಕೈಯಲ್ಲಿ ಹಿಡಿದು
ಕಲ್ಲು ಬೆಟ್ಟಗಳ ತುಂಡರಿಸುವವರು
ನಮಗೆ ಬೇಕಾದಂತೆ ಕಂಡರಿಸುವವರು
ಬಾಳಿಗೋಜೆಯನು ತೆರೆಯುವವರು
ನಾಡೋಜರು ನಾವು
ಒಳಗಿನೊಳಗಿನ ಬೆಳಕಿನ ಬಾಗಿಲ ತೆರೆದು
ಯೋಗ ಸಿದ್ಧಿಗಳನೂ ಪಡೆಯುವವರು
* * *

ನಾವು ಶಿಲ್ಪ ಕಲಾವಿದರು
ಜಗವೇ ವಿಶ್ವ ಶಿಲ್ವಿಯ ಜಗುಲಿ
ಕಲ್ಲುಗಳನೇ ಮಾತಾಡಿಸಿ ಕುಣಿಸುವವರು
ಕಲ್ಲರಳಿ ಹೂವಾಗಿ ಬಳ್ಳಿ ಬಳ್ಳಿ ಕುಸುರಿಯಾಗಿ
ದೇವಲೋಕಕೆ ಏಣಿ ಹಾಕುವವರು
ಅಪ್ಸರೆಯರೂಡನೆ ದೇವಾನುದೇವತೆಗಳನೂ
ಭೂಮಿಗೆ ಕರೆತಂದು ನಾಟ್ಯವಾಡಿಸುವವರು
ಬಾದಾಮಿ ಬೇಲೂರು ಅಜಂತಾ ಎಲ್ಲೋರ
ಐಹೊಳೆ ಹಂಪಿ ಗೊಮ್ಮಟ ಗೋಲಗುಮ್ಮಟ
ಎಲ್ಲೆಡೆ ಅರಳಿದವು ಗುಡಿಗೋಪುರಗಳ ಕಮ್ಮಟ
ಸಂಸ್ಕೃತಿಯ ಶಿಲಾ ಕುಸುಮಗಳು
ವಿವಿಧ ಧರ್ಮಗಳ ಕಲಾಸುಮಗಳು
ದಿವ್ಯಲೋಕದೆಡೆ ತೋರು ಬೆರಳುಗಳು
ಅವುಗಳಿಗಿಟ್ಟು ಹೊಳೆವ ಕಳಶಗಳು
* * *

ನಾವು ಚಿತ್ರ ಕಲಾವಿದರು
ಅಂತರಿಕ್ಷದಗಲ ಕ್ಯಾನ್ವಾಸು
ಭೂಮಿಯುದ್ದಗಲಕೂ ಹಾಸಿದ ಹಾಳೆ
ಅದರ ಮೇಲೆ ಅನಂತ ಭಾವ ರಾಗಗಳ ಬಣ್ಣಗಳ
ಹರವಿ ವಿವಿಧ ವಿನ್ಯಾಸಗಳ ಬಳಿಯುತ್ತೇವೆ
ಕಾಣದಪೂರ್ವ ಲೋಕಗಳನಿಲ್ಲೇ ಇಳಿಸುತ್ತೇವೆ
ಎಳೆಯುತ್ತೇವೆ ಎಳೆ ಎಳೆ ಅಸಂಖ್ಯ ಆಕೃತಿಗಳು
ಮೈದಳೆಯುತ್ತವೆ ಜೀವ ತುಂಬಿ
ಬರಡು ಬದುಕಿಗೆ ಬಣ್ಣ ತುಂಬಿದವರು
ನಮ್ಮ್ಮ ಕಲ್ಪನೆಯ ಕುಂಚದಿಂದ
ನರಕ ನರಲೋಕವೆ ಆಗುವುದು ನಾಕ

ಬಣ್ಣವಿಲ್ಲದ ಬದುಕೊಂದು ಬದುಕೇ
ಗವಿಗಳಿಂದ ಶುರು ಮಾಡಿದೆವು
ಗುಡಿಸಲು ಮನೆ ಗೋಡೆ ಅರಮನೆ ಗುರುಮನೆಗಳ
ನೋಡಿದರೆ ನೆಮ್ಮದಿ ಮೂಡುವಂತೆ
ಚಿತ್ರ ಚಿತ್ತಾರಗಳಿಂದ ಸಿಂಗಾರ ಮಾಡಿದೆವು
ಸೀರೆ ಕುಪ್ಪಸ ಅಂಗಿ ಬಟ್ಟೆಬರೆಗಳ ಮೇಲೆಲ್ಲಾ
ಹಬ್ಬ ಪರಿಷೆ ಮದುವೆ ಸಂಭ್ರಮಗಳಲ್ಲೆಲ್ಲಾ
ಬಣ್ಣಗಳ ಬಗೆ ಬಗೆ ಬಳ್ಳಿ
ದಿನ ದಿನವೂ ಮನೆಯಂಗಳದಲ್ಲಿ ರಂಗವಲ್ಲಿ
ಎಲ್ಲೆಂದರಲ್ಲಿ ಎಲ್ಲೆಲ್ಲೂ
ಬಣ್ಣ ಭಾವಗಳು ರೇಖೆ ರಾಗಗಳು
ಜಗವ ಸುಂದರಗೊಳಿಸುವೆವು
ನಾವು ಕಲಾವಿದರು
* * *

ನಾವು ಸಾಹಿತ್ಯ ಕಲಾವಿದರು
ಆಕಾಶವೆ ಕಾಗದ, ಕಡಲುಗಳೆ ಮಸಿಕುಡಿಕೆ
ಕಕ್ಕುಲತೆ ಅನುಭೂತಿಯ ಲೆಕ್ಕಣಿಕೆ ಹಿಡಿದು
ಬರೆದೇ ಬರೆಯುತ್ತಿದ್ದೇವೆ ಕವಿಗಳು
ವೇದ ಪುರಾಣಗಳು ರಾಮಾಯಣ ಭಾರತಗಳು
ಶರಣರ ಚರಿತೆಗಳು ಸಂತರ ಕಥೆಗಳು
ಎಷ್ಟೊಂದು ಅಮೃತದೊರತೆಗಳು
ವ್ಯಾಸ ವಾಲ್ಲೀಕಿ ಕಾಳಿದಾಸ ಬಾಣ
ಪಂಪ ರನ್ನ ಹರಿಹರ ರಾಘವಾಂಕ
ಚಾಮರಸ ಕುಮಾರವ್ಯಾಸ ರತ್ನಾಕರ ಲಕ್ಷ್ಮೀಶ
ಪುರಂದರ ಕನಕ ಸರ್ವಜ್ಞ ತತ್ವಪದಕವಿಗಳು
ಕುವೆಂಪು ಬೇಂದ್ರೆ ಒಂದೇ ಎರಡೇ
ಸಾವಿರ ಸಾವಿರ ಕವಿದನಿಗಳು
ಶಾರದೆಯ ಕೊರಳ ಹಾರದ ರತ್ನದ ಮಣಿಗಳು

ಸಾವಿರಾರು ವರ್ಷಗಳ ಶಬ್ದ ಪರುಷದ ಗಣಿಗಳು
ಬರೆಯುತ್ತಿದ್ದಾರೆ ಕವಿಗಳು
ಹಾಳೆ ತುಂಬಲೊಲ್ಲದು
ಮಸಿ ತೀರಲೊಲ್ಲದು
ಲೆಕ್ಕಣಿಕೆಯೂ ದಣಿವ ಲೆಕ್ಕಿಸಲೊಲ್ಲದು
* * *

ಓದಿ ಬರೆಯದವರು
ಜಾನಪದ ಕಲಾ ಹಾಡುಗಾರರು
ನಾವು ಮುಗ್ಧರು, ಬದುಕು ಬೆಂಕಿಯಲಿ ದಗ್ಧರು
ಜೀವನದ ಪಾಡನ್ನೇ ಹಾಡುತ್ತೇವೆ
ಅಳುವ ಕಂದನ ತುಟಿಯಲಿ ಹವಳ ಕಾಣುತ್ತೇವೆ
ಕಣ್ನೊಟದಲ್ಲಿ ಶಿವನಲಗು ಕಾಣುತ್ತೇವೆ
ಲಾಲಿ ಹಾಡುತ್ತ ದುಡಿಮೆಯಲ್ಲೇ ಹಾಡುತ್ತ
ದಣಿದು ಬಂದು ಕಾಲ ಕಳೆವಾಗ
ಕುಂತಾಗ ನಿಂತಾಗ ಹಾಡಿ ಹಾಡಿ
ಹಾಡಿನ ಕಣಜ ತುಂಬಿದೆವು
ತಲೆ ಮಾರುಗಳುದ್ದಕ್ಕೂ ಉಳಿಸಿಕೊಂಡು ಬಂದೆವು
ದಾರಿ ಹೊರೆಯ ಹೊತ್ತು ತಂದೆವು
ಅದನೇ ನಡೆವ ನೆಲದ ಹೆಜ್ಜೆಗಳ ಮುಂದೆ
ಹಣತೆ ಹಚ್ಚಿಕೊಂಡು ಅದರ
ಬೆಳಕಿನಲೇ ನಡೆಯುತ್ತಾ ಬಂದೆವು

ಮಾನವನ ಮತಿಗೆ ಮಾತಿಗೆ
ಸಿದ್ದಿಯನು ತಂದೆವು ಪ್ರಸಿದ್ದಿಯಲ್ಲ
ಮಾನವ ಮಾತು ಕಲಿತಿದ್ದಕ್ಕೆ
ಸಾರ್ಥಕವಾಯಿತು ನರ ಜನುಮ
ಅದರಿಂದಲೇ ನರಚರಿತೆ
ಪಾವನ ಪದುಮ-ಏಕೆಂದರೆ
ಕುರಿತೋದದೆಯುಂ ಕಾವ್ಯ ಪ್ರಯೋಗ
ಪರಿಣತ ಮತಿಗಳೆಂದು ನಮ್ಮ ಹೆಗ್ಗಳಿಕೆ

ನಮಗೆ ಬಿರುದು ಬಾವಲಿಗಳಿಲ್ಲ
ಮಾನವನಿತಿಹಾಸದಲಿ ನಮ್ಮ ಗುರುತಿಲ್ಲ
ನಮ್ಮನಾರೂ ಗುರುತಿಸಲಿಲ್ಲ
ನಾವು ಅನಾಮಧೆಯರು
ಆದರೂ ನಮಗೆ ಅದರ ಚಿಂತೆಯಿಲ್ಲ
ನಾವು ಬದುಕನ್ನೇ ಹಾಡಾಗಿ
ಹಾಡನೇ ಬದುಕಿನ ಬೆಳಕಾಗಿ ಮಾಡಿಕೊಂಡವರು
ನಮಗಷ್ಟೇ ಸಾಕು ಈ ಬದುಕಿನ ಕಾವ್ಯ
* * *

ಅದು ನೀರಸವ ರಸಮಯಗೊಳಿಸುವುದು
ಹೃದಯವ ಕರಗಿಸಿ ಹೂವಿನೂಲು ಅರಳಿಸುವುದು
ಹಿಗ್ಗಿಸುವುದು ಕುಗ್ಗಸುವುದು
ಜ್ವಾಲೆಯೊಲು ಕೆರಳಿಸುವುದು
ಮರುಭೂಮಿಯಲೂ ಹಸಿರು ನಳನಳಿಸುವುದು
ಬರಡು ಹಯನಹುದು ಕೊರಡು ಕೊನರುವುದು
ಯಾವುದೋ ಮಂತ್ರದಂಡ ಆಡಿಸಿದಂತೆ
ಇಲ್ಲಿ ಕಪಿಯು ಕಡಲ ಜಿಗಿಯಬಹುದು
ಕಲ್ಲಿಗೆ ಜೀವ ಬರಬಹುದು
ಇಲ್ಲಿಗೆ ಮೇಲಿನವರಿಳಿಯಬಹುದು
ಪ್ರಾಣಿ ಪಕ್ಷಗಳು ಮಾತಾಡಬಹುದು
ಬ್ರಹ್ಮನಿಗೆ ಸವಾಲೆಸೆದು
ಹೊಸ ಹೊಸದನ್ನು ಸೃಷ್ಟಿ ಮಾಡುವವರು
ಈ ಸೃಷ್ಟಿ ಚಿರ ನೂತನವಾಗದಿದ್ದರೆ
ಆದೀತು ಇದು ಹಳೆಯ ಕೊಳೆತ ಹೊಂಡ
ಬೆಂಕಿಯಾರಿದ ಕುಂಡ

ನಮ್ಮ ಕಾವ್ಯಕ್ಕೆ ದೇಶ ಕಾಲಗಳ ಮಿತಿ ಇಲ್ಲ
ಇದರ ಭಾವಸಾಗರದಲೆ ವಿಶ್ವ ವಿಸ್ತಾರ
ಪರಿಮಳ ದ್ರವ್ಯದೊಳಗದ್ದಿ ತೆಗೆದ
ಕೋಮಲ ವಸ್ತ್ರದಂತೆ ಇದರ ಪರಿಣಾಮ
ಸದಾ ಘಮಘಮಿಸುವುದು ಮನುಜನಿರುವವರೆಗೂ
ಏನಿದರ ಮಹಿಮೆ
ಅಕ್ಷರಕೆ ಲಕ್ಷವರಹ ಕೊಟ್ಟವರುಂಟು ಪಡೆದವರುಂಟು
ಅಥವಾ ಯಾರೂ ಗುರುತಿಸದೆ
ಭಿಕ್ಷುಕರಾಗಿ ನಡೆದವರುಂಟು
ಶಾರದೆಗಿರದೆ ಲಕ್ಷ್ಮಿಯ ನಂಟು
ಬರೆದದ್ದೆಲ್ಲ ಗಟ್ಟಿ ಕಾಳಲ್ಲ
ಉಳಿದದ್ದೆ ಜನಮನದಿ ಕಾಲನ ಲೀಲೆ
ಕಾಲವನೂ ಮೀರುವ ಚಿರಂತನ ಮಾಲೆ
* * *

ನಾವು ಸಂಗೀತ ಕಲಾವಿದರು
ನಮ್ಮ ನಾದ ಮಿಡಿಯುತ್ತದೆ ಭೂಮಿ ಆಕಾಶಗಳ
ಏಕತಾ ಸೂತ್ರದ ತಂತಿಗಳಲ್ಲಿ
ಗ್ರಹ ತಾರೆಗಳ ಚಲನಗತಿಯಲ್ಲಿ
ಬಾನು ಸೋರೆಯಕಾಯಿ ತಂಬೂರಿ
ನೆಲದೆದೆಯ ಜೀವನಾಡಿಯ ನರಗಳಿಗೂ
ಆಗಸದ ದಿವ್ಯಕಾಯಗಳಿಗೂ
ಜೋಡಿಸಿ ಬಿಗಿದ ಶೃತಿ ತಂತುಗಳು
ಮಿಡಿಯುತ್ತದೆ ನಾದಗಳ ಅನಾದಿ ಸ್ಥಾಯಿಯಿಂದ
ಭೂಗರ್ಭದೊಳಗಿಂದ ಮೂಡುವ ಝೇಂಕಾರ
ಬಾನಾಚೆಯ ಶಬ್ದ ನಿಶ್ಶಬ್ದ ಮೀರಿದ ಓಂಕಾರ
ಇವೆರಡರ ನಡುವೆ ಅನಂತ ರಾಗಗಳು
ವೈವಿಧ್ಯ ಸ್ವರ ಲೀಲೆಗಳ ಸರಾಗಗಳು
ನಾದಸಾಗರದ ಮೇಲೆ ಅಗಣಿತ ತರಂಗಗಳು
ಹಗಲಿರುಳುಗಳು ಕ್ಷಣಕ್ಷಣಗಳು
ದಿನ ಮಾಸಗಳು ಋತುಮಾನಗಳು
ಸೂರ್ಯಚಂದ್ರರ ನಿಯಮ ಮೀರದ ನಡಿಗೆಗಳು
ಈ ವಿಶ್ವವಿನ್ಯಾಸ ಲಯದೊಡನೆ
ಮರ್ತ್ಯ ಜೀವಿಗಳ ನಾಡಿಮಿಡಿತ ಎದೆಬಡಿತ
ಹೆಜ್ಜೆಗಳ ಲಯ ಬೆರೆತು ತಾಳ ಹಾಕುತ್ತದೆ
ರಾಗಾಲಾಪ ನಾದಲೀಲೆಯೊಡನೆ
ಈ ಲಯ ತಾಳಗಳು ಬೆರೆತೊಡನೆ
ತಗೋ ತುಂಬಿ ಹೋಯಿತು ಸಂಗೀತ
ನೆಲ ಬಾನು ಜಡಚೇತನಗಳ ಓತಪ್ರೋತ

ಮಗುವಿನ ಅಮ್ಮಾ ಕರುವಿನ ಅಂಬಾ
ಕೋಗಿಲೆಯ ಪಂಚಮದಿಂಚರ ನವಿಲಿನ ಸ್ವರ
ಹಕ್ಕಿಗಳ ಚಿಲಿಪಿಲಿ ಹಂಸದೊಯ್ಯಾರ
ಆನೆಯ ಘೀಳು ಕುದುರೆಯ ಹೇಷಾರವ
ಗೂಳಿಯ ಗುಟುರು ಘರ್ಜಿಸುವ ಕಂಠೀರವ
ಮಳೆಯ ಧಾರಾಕಾರ ಅಬ್ಬಿಯ ಧಬಧಬೆ
ಕಡಲ ಮೊರೆತ ಗುಡುಗು ಸಿಡಿಲಿನಾರ್ಭಟ
ಹೊಳೆಯ ಜುಳು ಜುಳು ನಿನಾದ
ಎಲ್ಲಾ ಎಲ್ಲಾ ಸಾಗಿ ಬಂದವು ಸೇರಿಕೊಂಡವು
ಗೀತ ಮೇಳದಲ್ಲಿ ಸ್ವರಗಳ ಮೆರವಣಿಗೆಯಲ್ಲಿ
ನೂರು ಭಾವಗಳಿಗೆ ರಾಗ ರೂಪ
ಬಾಳ ಸೋವು ನಲಿವು ಪ್ರೇಮ ಪ್ರಣಯ
ರೌದ್ರ ರೋಷ ಶೋಕ ರೋದನ
ತಾಪ ತಲ್ಲಣ ಆಶೆ ಸಮಾಧಾನ
ಹೀಗೆ ಬದುಕಿನುಸಿರು ಊದುತದೆ ದಿನದಿನ
ಸಂಗೀತದ ವೇಣುವಿನೊಳಗೆ

ಋಷಿಗಳ ಶಾಂತಿಯ ಸಾಮಗಾನ
ರಸ‌ಋಷಿಗಳ ಮಾನವ ಪ್ರೇಮಗಾನ
ದೇಹ ದಂಡಿಗೆ ನರಗಳು ತಂತಿ
ಶರಣರು ಶಿವಗರ್ಪಿಸಿದ ಭಕ್ತಿಗಾನ
ತಾಳ ತಂಬೂರಿ ಹಿಡಿದು ಬೀದಿಗಳಲ್ಲಿ
ಹಾಡಿದ ದಾಸರ ಸುಮರ್ಪಣಗಾನ
ತತ್ವಪದಕಾರರ ಚಿಂತನಗಾನ
ದೇಹವೀಣೆಯ ಮಾಡಿ ವಾಗ್ಧೇವಿಗರ್ಪಿಸಿದ
ವರಕವಿಗಳ ಜೀವನಸಂಗೀತದ ಭಾವಗಾನ
ಇಂಪು ಗಾನದೊಡನೆ ಕ್ರಾಂತಿಯ ಕೆಂಪುಗಾನ
ಲೋಕದ ಮಲಿನವ ತೊಳೆದು
ತಿಳಿವಿನ ಗಂಗೆ ಹರಿಸಿ ಹಾಡುತಲೇ ಬಂದಿದ್ದೇವೆ
ಉತ್ತರಾದಿ ದಕ್ಷಿಣಾದಿಗಳ ಬೇದವಿರದ
ಜನ ಕಲ್ಯಾಣ ಗಾನ
ತಾಳ ಮೃದಂಗಗಳು ವೀಣೆ ಕೊಳಲುಗಳು
ತಬಲಾ ಪೇಟಿಗಳು ಪಿಟೀಲು ಸಿತಾರಗಳು
ಶಹನಾಯಿ ದಿಲ್ ರುಬಾಗಳು ಅಸಂಖ್ಯ ವಾದ್ಯಗಳು
ದೇವರು ಕೊಟ್ಟ ಕೊರಳು ಬಾಯಿಗಳಂತೂ ಸರಿಯೇ
ಎಲ್ಲವೂ ನುಡಿದವು ಸಪ್ತಸ್ವರಗಳಲೇ
ಅದರಲೇ ಸಪ್ತಲೋಕಗಳ ಸುಪಲೋಕವ
ತೆರೆದೆವು ಗಂಧರ್ವಲೋಕ
* * *

ನಾವು ಜಾನಪದ ಕಲಾವಿದರು
ನಾವು ಹಾಡುತ್ತೇವೆ ದುಡಿಯುವಾಗ
ದುಡಿದುಡಿದು ದಣಿದಾಗ
ಏಕತಾರಿ ಮೀಟುತ್ತ ದಿಮಡಿ ದುಡಿಗಳ
ಬಾರಿಸುತ್ತ ತಾಳ ಹಾಕುತ್ತ ಕತೆಗಳ ಹೇಳುತ್ತೇವೆ ರಾತ್ರಿಯೆಲ್ಲ
ವೇಷಗಳ ಕಟ್ಟಿಕೊಂಡು ತಾಳ ಮದ್ದಲೆಗಳೊಡನೆ
ಮಾತಾಡುತ್ತ ಹಾಡುತ್ತ ಕುಣಿಯುತ್ತೇವೆ
ಬಯಲಾಟ ದೊಡ್ಡಾಟ ಯಕ್ಷಗಾನಗಳ
ಇರುಳೆಲ್ಲ ಮೈಮರೆತು ನೋಡುವಂತೆ
ಕೋಲಾಟ ಕಂಸಾಳೆ ಹಲಗೆ ಡಪ್ಪುಗಳು
ಡೊಳ್ಳು ನಗಾರಿಗಳು ತಮ್ಮಟೆಗಳು
ಕಹಳೆ ನಂದೀಕೋಲು ಸಮಾಳ ಮಜಾಲ್ತಿಗಳು
ಎಷ್ಟು ಸಂಗತಿಗಳು ನಮ್ಮ ಹಾಡುಗಳಿಗೆ
ಇಹದ ನೋವನು ಮರೆಯುವಂತೆ
ಇರುವ ವಿಷವರ್ತುಲದಲೇ ಖುಷಿಯ ಹುಡುಕುವಂತೆ
ದೇವರುಗಳ ಗುರಿ ಮಾಡಿ ಅವರ ಸುತ್ತ
ಸುತ್ತುತ್ತಲೇ ನಮ್ಮ ಬಟ್ಟೆಗಳ ಸುತ್ತಿಕೊಂಡು
ಇಹದಲ್ಲಿ ಪರದ ಪರದೆ ನೆಯ್ದುಕೊಂಡು
ಅದರಲ್ಲೇ ಸರ್ವ ಸುಖ ಸಾರ್ಥಕತೆ
ಕಂಡುಕೊಂಡು ಬಾಳುತ್ತೇವೆ ಅದನೆ ಹಾಡುತ್ತೇವೆ
* * *

ನಾವು ರಂಗ ಕಲಾವಿದರು
ಜಗನ್ನಾಟಕ ಸೂತ್ರಧಾರನ
ವಿಶ್ವಲೀಲಾ ನಟನ ಚತುರನ
ದೇವ ದೇವ ಮಹಾದೇವ ನಟರಾಜನ
ತಾಂಡವ ಕೋಮಲ ಪಾದಾರಜದಲಿ
ಶಾಂತಮಯ ಶಿವರೂಪವನು
ರೌದ್ರಮಯ ರುದ್ರರೂಪವನು
ಎರಡನೂ ಮೇಳೈಸಿ ಸಾಂಗತ್ಯಗೊಳಿಸಿದ
ನಟನಾ ಸಾಧಕರು ನಾವು
ರಾತ್ರಿಗೆಲ್ಲ ಬಗೆಬಗೆಯ ರಂಗು ಬಳಿದು
ರಾಮಭೀಮರಾಗಿ ಸೀತೆ ದ್ರೌಪದಿಯರಾಗಿ
ರಾವಣ ಕೀಚಕರಾಗಿ ದೇವತೆಗಳಾಗಿ
ರಕ್ಕಸರಾಗಿ ಕಿನ್ನರ ಕಿಂಪುರುಷರಾಗಿ
ಪ್ರಾಣಿ ಪಕ್ಷಿಗಳಾಗಿ ಎಲ್ಲವೂ ಆಗಿ
ವಿಭಾವಾನುಭಾವಗಳೊಡನೆ
ಪರಕಾಯ ಪ್ರವೇಶ ಮಾಡಿ
ಅಭಿನಯಿಸಿ ಹಾಡಿ ಕುಣಿದು
ಪುರಾಣವ ಪುನರ್ ಸೃಷ್ಟಿಸಿ
ಮಾಯಾ ಲೋಕವ ನಿರ್ಮಿಸಿ
ಪ್ರೇಕ್ಷಕರ ನಗಿಸಿ ಅಳಿಸಿ ಅನುಭೂತಿಗೊಳಿಸಿ
ಅವರ ಭಾವ ತಂತುಗಳ ಮೀಟಿ
ಎದೆಗಳನರಳಿಸಿ ಹಗುರಾಗಿಸಿ
ರಂಗದ ಮೇಲೆ ಮೆರೆದಾಡುತ್ತೇವೆ ನಾವು
ರಜತ ಪರದೆ ಕಿರುತೆರೆಗಳ ಮೇಲೂ ಹರಿದಾಡುತ್ತೇವೆ
ಈ ಲೋಕವೇ ದೇವನಾಡಿಸುವ ನಾಟಕ ರಂಗ
ಜೀವಿಗಳೆಲ್ಲ ನಟರು ಎಂಬ ಜೀವನ ಸಿದ್ಧಾಂತಕ್ಕೆ
ನಾವೇ ಕಾರಣಕರ್ತರು
ಬಣ್ಣದ ಬದುಕು ಥಳುಕು ಬಳುಕು
ಬಣ್ಣವೊರೆಸಿಕೊಂಡ ಮೇಲೆ
ಕಟುವಾಸ್ತವದ ಕಲ್ಲು ಮುಳ್ಳುಗಳ
ಮೇಲೆ ಮಲಗುತ್ತೇವೆ ಮುಲುಗುತ್ತಾ

ರಂಗ ಬಿಟ್ಟು ಬೀದಿಗೆ ಬಂದು
ಹಗಲುವೇಷರಾಗಿ ಜೋಗಿತಿಯರಾಗಿ
ಜೋಗಿ ದಾಸರಾಗಿ ಗೊಂದಲಿಗರಾಗಿ ಡೊಂಬರಾಗಿ
ಹುಲಿವೇಷಗಾರರಾಗಿ ಕಿಳ್ಳೇಕ್ಯಾತರಾಗಿ
ತೊಗಲುಗೊಂಬೆ ಆಡಿಸುವವರಾಗಿ
ಬೀದಿ ಬಯಲಾಟಗಳ
ಆಡುತ್ತೇವೆ ಹೊಟ್ಟೆ ಪಾಡಿಗಾಗಿ
ಹೊಟ್ಟೆ ತುಂಬದ ಈಗೀಗ
ಕೈಬಿಡುತ್ತಿದ್ದೇವೆ ಶತಶತಮಾನಗಳ
ಜಾನಪದ ಸಂಪದವ ನಮ್ಮ ತಾಳ ತಂಬೂರಿಗಳ
ನಾಗರಿಕ ಯಾಂತ್ರಿಕ ಕೃತಕ ಫ್ಲಡ್ ಲೈಟಿಗೆ
ಆವಿಯಾಗುತ್ತಿವೆ ಬಣ್ಣಗಳು
ಹಾರಿ ಹೋಗುತಿವೆ ಬಣ್ಣ ಬಣ್ಣದ ಹಕ್ಕಿಗಳು
* * *

ನಾವು ಕಲಾವಿದರು
ನಮಗಿಲ್ಲ ಜಾತಿಮತ ದೇಶ ಭಾಷೆಗಳ ಗಡಿರೇಖೆ
ನಮಗೆ ಪಾರ್ಟಿ ಪಕ್ಷಗಳಿಲ್ಲ
ನಮ್ಮದು ವಿಶ್ವಮಾನವ ಮಹಾವೃಕ್ಷ
ಅದಕುಂಟು ರಂಗು ರಂಗು ಶಾಖೆ
ನಮ್ಮ ಬಿಸ್ತಿಲ್ಲಾಖಾನ ರವಿಶಂಕರರು
ಸುಬ್ಬಲಕ್ಷ್ಮಿ ಪರವೀನ ಸುಲ್ತಾನರು
ಕಡಲಾಚೆ ದಾಟಿ ವಿದೇಶಗಳಲ್ಲಿ
ಜನಮನಸೂರೆಗೊಳ್ಳುವರು
ನಮ್ಮ ಯಕ್ಷಗಾನ ತೊಗಲುಗೊಂಬೆಯಾಟಗಳು
ಅವರಿಗೂ ಪ್ರಿಯ
ಅವರ ಸಂಗೀತ ಬ್ಯಾಲೆಗಳು
ಬ್ರೇಕ್ ಡ್ಯಾನ್ಸ್ ಗಳು ನಮಗೂ ಪ್ರಿಯ
ಬಣ್ಣ ರೇಖೆಗಳೇ ಭಾಷೆಯಾದ ಚಿತ್ರಕಲೆ
ತಬ್ಬಿಕೊಳ್ಳುತ್ತದೆ ವಿಶ್ವವನ್ನೆಲ್ಲ ತನ್ನ ಬಾಹುಗಳಲ್ಲಿ
ಭಾವೈಕ್ಯದ ಭಾಷೆ ಕೊಡುತ್ತದೆ

ನಮಗೆ ಕರಿ ಬಿಳಿ ಮೈಚರ್ಮಗಳು
ಕುಂಟು ಕುರುಡು ಅಂಗವಿಕಲತೆಗಳು
ವೇಷ ಭೂಷಣಗಳು ಯಾವೂ ಅಡ್ಡಿಯಲ್ಲ
ನಾವು ಭದ್ರವಾಗಿ ನಂಬಿ ಹಿಡಿದಿದ್ದೇವೆ
ಮಾನವತೆಯ ಬೊಡ್ಡೆ
ನಮಗೆ ಮುಖ್ಯವಲ್ಲ ಮಾನವ ಮಾಡಿಕೊಂಡ ವಿಕೃತಿ
ನಮಗೆ ಮುಖ್ಯ ವಿಶ್ವೈಕ ಪ್ರಕೃತಿ

ನಾವು ‘ನಾನಾಗಿ ನನಗಾಗಿ’ ಬದುಕುವುದಿಲ್ಲ
ನನ್ನೊಳಗೆ ‘ನಾವು’ ಚಿರಸ್ಥಾಯಿ
ಲೋಕಕಾಗಿ ನಮ್ಮ ಬದುಕು ಕಲೆ ಸುಖದಾಯಿ
ಜಗದಳುವು ನಮಗಿರಲಿ ಜಗವೆಲ್ಲ ನಗುತಿರಲಿ
ಎಂದು ಅಳು ನುಂಗಿ ನಗುವವರು ನಾವು
ಕಲೋಪಾಸನೆ ನಮಗೆ ಜೀವನಯೋಗ
ಪರಮನ ಗುರಿಯೆಡೆ ಸಾಧನೆಯ ಉದ್ಯೋಗ
ನಮ್ಮಲ್ಲುಂಟು ಕಲಾ ತಪಸ್ವಿಗಳು
ನಾದ ಬ್ರಹ್ಮರು ಕುಂಚಬ್ರಹ್ಮರು ರಸ‌ಋಷಿಗಳು
ಶಿಲ್ಪಸಿದ್ಧರು ಅಭಿನಯ ಪ್ರಸಿದ್ಧರು ನಾಟ್ಯರಾಣಿಯರು
ದೇವ ದೇವಿಯರನೂ ಒಲಿಸಿಕೊಂಡ
ಸಿದ್ಧಿ ಪುರುಷರು ಮಹಾ ಮಹಿಮರು

ನಾವು ಕಲಾವಿದರು ಹೂವಿನ ತೇರನೆಳೆಯುವವರು
ಜೀವನದ ಸೌಂದರ್ಯ ಮುಖದೆಡೆಗೆ
ಸದಾ ಮುಖ ಮಾಡಿದವರು
ಸೂರ್ಯನೆಡೆಗೆ ಕಮಲ ಮುಖಮಾಡಿದಂತೆ
ಪ್ರೀತಿ ಪ್ರೇಮ ಹಿಗ್ಗುಗಳಿಂದ
ಅರಳಿ ಹಿಗ್ಗುವವರು
ದ್ವೇಷ ಹಿಂಸೆಗಳಿಗೆ ಪ್ರತಿಯಾಗಿ
ಹೃದಯಗಳ ಬೆಸೆಯುವೆವು
ಬನ್ನಿ ಗೆಳೆಯ ಗೆಳತಿಯರೆ
ಕೂಡಿಸುವವರು ಕಟ್ಟುವವರು ನಾವು
ಒಡೆಯುವುದನೆಂದೂ ಸಹಿಸೆವು
ಕೂಡೋಣ ಬನ್ನಿ ವಿಶ್ವದುದ್ದಗಲಕೆ
ನಮ್ಮ ತೋಳುಗಳ ಚಾಚಿ ಕೈ ಕೈ ಹಿಡಿದು
ಮಾನವ ವರ್ತುಲ ಜಾಡಿ ತಬ್ಬೋಣ
ಭೂಮಂಡಲವನೆಲ್ಲ ಒಂದಾಗಿ
ಮಾತಾಡುವ ಕಲೆ ಕೆಲಸ ಮಾಡುವ ಕಲೆ
ವೇಷಭೂಷಣ ಕಲೆ ಮನೆಯನಂದಗೊಳಿಸುವ ಕಲೆ
ಉಳುವ ಬೆಳೆವ ಕಲೆ ಉಣುವ ರುಚಿಯ ಕಲೆ
ಬೋಧನೆಯ ಕಲೆ ವಾದಿಸುವ ಕಲೆ
ಆಟಗಳ ಕಲೆ ಹೋರಾಟಗಳ ಕಲೆ
ವೈದ್ಯಕಲೆ ವಾಸ್ತು ಕಲೆ
ಯಾವುದರಲ್ಲಿಲ್ಲ ಕಲೆ
ಎಲ್ಲ ಕಲೆಗಳ ತಾಯಿಬೇರು ಬದುಕಿನ ಕಲೆ
ಜೀವನವೇ ಕಲೆಯೆಂದು ತಿಳಿಯೋಣ ಬನ್ನಿ
ಜೀವನಕಲೆಯನ್ನು ಕಲಿಯೋಣ ಬನ್ನಿ
ಬೆಳಕಿನ ತೇರನೆಳೆಯೋಣ ಬನ್ನಿ
*****
(೪.೩.೨೦೦೭ರಂದು ಹೊಸಪೇಟೆಯಲ್ಲಿ ಬಳ್ಳಾರಿ ಜಿಲ್ಲಾ ಕಲಾವಿದರ ಮತ್ತು ಸಾಂಸ್ಕೃತಿಕ ಸಮ್ಮೇಳನದ ಅಧ್ಯಕ್ಷರಾಗಿ ಸಾದರಪಡಿಸಿದ ಕವನ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾರದ ಬರ
Next post ಶಿವತತ್ತ್ವರತ್ನಾಕರ : ಕನ್ನಡ ನೆಲದ ಹೆಮ್ಮೆ

ಸಣ್ಣ ಕತೆ

 • ಜೀವಂತವಾಗಿ…ಸ್ಮಶಾನದಲ್ಲಿ…

  ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

 • ಆನುಗೋಲು

  ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

 • ಗೃಹವ್ಯವಸ್ಥೆ

  ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

 • ಕೂನನ ಮಗಳು ಕೆಂಚಿಯೂ….

  ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

 • ಇರುವುದೆಲ್ಲವ ಬಿಟ್ಟು

  ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

cheap jordans|wholesale air max|wholesale jordans|wholesale jewelry|wholesale jerseys