ಮೇಳ: ಸಿರಿ ಅಂತರಗಟ್ಟೆ ಮಾರಿ ಎನಿಸಿದವಳೆ
ನೆಲೆ ನಿಂತು ಜೀವಗಳ ಕಾದವಳೆ ||

ಕಂದಗಳ ಕಾದವಳೆ
ಜೀವಿನ ಮರದವಳೆ
ಕೇಳಿದ್ದ ಕೊಟ್ಟವಳೆ
ಬೇಡಿದ್ದ ಬಿಟ್ಟವಳೆ ||

ಸತ್ಯವ್ವ ಮುತ್ಯವ್ವ ಕರಿಕಾರಲರಮ್ಮ
ಬೇವ ತಿಂದು ಬೇವನುಟ್ಟಮ್ಮ
ಸಿಡುಬ ನುಂಗಿ ಕಂದಗಳ ಕಾದವಳೆ
ಪ್ಲೇಗಮ್ಮನನ್ನು ಬಿಡದೆ ನುಂಗಿದವಳೆ ||

ಜೋಗಿಯ ಪ್ರಸಂಗ

ಮೇಳ:     ತಾಯೆ ನೀ ಯಾರೆ
ಅಂತರ್‍ಗಟ್ಟೆ ಮಾರಿ ||

ಕೇಡು ಬಯಸಿದವಗೆ
ಕೇಡು ನೀಡಿದೆ ಕೊಡುಗೆ
ಒಳಿತು ಬಯಸಿದವಗೆ
ಕೊಟ್ಟೆ ಬಯಸಿದ ಹಾಗೆ ||

ನಿಂತಲ್ಲೆ ನಿಂತವಳೆ
ಕುಂತಲ್ಲೆ ಕುಂತವಳೆ
ಬ್ರಹ್ಮಾಂಡ ತಿಳಿದವಳೆ
ಸಕಲವಾ ನಡೆದವಳೆ

ರೂಪದೊಳು ರೂಪವಿಲ್ಲ
ಕಾಯದೊಳು ಕಾಯವಿಲ್ಲ
ಇಲ್ಲವೆಂದರೆ ಐದೀ
ಐದಿಯೆಂದರೆ ಇಲ್ಲ ||

ಹೆಬ್ಬೂರು ನಿಗರು ಶಿಖೆಯ ಗಣಂಗು ಪ್ರಸಂಗ

ಮೇಳ:    ಮಾಟಗಾತಿ ಮಾಯಗಾತಿ
ಏನೆ ನಿನ್ನ ಕೀರುತಿ ||

ಮಾಯಾವ ಗೆದ್ದವಳೆ
ಗೆಲುವನ್ನೆ ಹೊದ್ದವಳೆ
ಮೀಯ ಬಂದವರಿಗೆಲ್ಲ
ಹಿಂಗು ತಿನ್ನಿಸಿದವಳೆ ||

ಗರಿ ನಿರಿಗೆ ಸೆರಗ ತಾಯಿ
ಸೋಜಿಗವೆ ಮಹಾಮಾಯಿ
ಪಿಂಡಾಂಡ ಬ್ರಹ್ಮಾಂಡವೆಲ್ಲ
ನಿನ್ನ ಸೀರೆಯಾಯಿತಲ್ಲ ||

ತ್ರಿಮೂರ್ತಿಗಳ ತ್ರಿಶೂಲ ಮಾಡಿ
ದಿಕ್ಕು ದೆಸೆನೆಲ್ಲ ಪಟ್ಟಣ ಮಾಡಿ
ಅಂತರದ ನಿನ್ನ ಕಟ್ಟೆಯ ಒಳಗೆ
ಜೀವ ಕಾಯುವ ಕಾಯಕದೊಳಗೆ ||

ಮೇಳ:    ಕಿಲಗುಡವ ಹಸಿಗೂಸ
ನುಂಗೀದನಲ್ಲ
ಕೂಸಾದ ಅಮ್ಮನ್ನ
ನುಂಗೀದನಲ್ಲ ||

ಹೊಟ್ಟೇಲಿಂದ ತಾಯಿ
ಬಿಳಲಾದಳಲ್ಲ
ಬೆಳಬೆಳೆದು ಮಾಯಾವಿ
ಮರವಾದಳಲ್ಲ ||

ಕಂಚಿ ವೀರನ ಪ್ರಸಂಗ

ಮೇಳ:     ಕಂಚಿಯ ವೀರನೊಬ್ಬ
ಅಂತರಗಟ್ಟೆವ್ವನ ಸುದ್ದಿಕೇಳಿ
ಗೆಲ್ಲುತ್ತೇನಂತ ಬಂದಾನೆ
ತಂದನ್ನಾ ತಾನ ||

ವೀರಾನ ವೇಸ ಧರಿಸಿ
ಬರುತಾನೆ ಕಂಚಿ ಕಡಿಯಿಂದ
ತಂದನ್ನಾ ತಾನ ||

ಮೇಳ :    ಅವ್ವಾ ತಾಯೆ
ಅಂತರಗಟ್ಟೆವ್ವ ||

ಕಾಯಿ ಹಣ್ಣು ಮಾಡಿದವಳೆ
ಕಲ್ಲು ನೀರು ಮಾಡಿದವಳೆ
ಬೀಜ ವೃಕ್ಷ ಮಾಡಿದವಳೆ ||

ಮೂರು ಲೋಕ ಬ್ರಹ್ಮಾಂಡವನೆ
ಸೀರೆ ಮಾಡಿ ಸುತ್ತಿ ನೆರಿಗೇಲಿ
ನೆಲದ ಕಂದಗಳ ಕಾದವಳೆ ||

ತಂದನ್ನೊ ತಾನೊ
ತಾನಂದಾನೊ ತಾನೊ ||

ಬಾಳ ಹಸನು ಮಾಡಲು ಕುಂತು
ಕಂದಗಳಿಗೆ ಜೀವ ಹಿಡಿದು ಕುಂತು
ಜಗದ ಜುಟ್ಟ ನಡುಗಿಸಿದವಳೆ
ಬಂದ ಮಕ್ಕಳನ್ನೆಲ್ಲ ಕಾಪಾಡಿದವಳೆ ||

ಹಂಸದ ಮೇಲಿನ ಪದ

ಹುಡುಕಿ ಬಂದಾ ಹಂಸೆ
ಎತ್ತ ಹಾರಿತು ನಂಬಿಸಿ ||

ಸೆಳೆದಿತ್ತು ಕಣ್ಣಮಿಂಚ
ಹಾಕಿ ಪ್ರೀತಿಯ ಹೊಂಚ
ಕರೆದೊಯ್ಯಲು ಮುಗಿಲತ್ತ
ಕಾಣದೆ ಹೋಯಿತೆತ್ತ ||

ಅಮೃತವ ಕುಡಿದ ಹಂಸೆ
ಬಿಟ್ಟು ಮಾನವ ಹಿಂಸೆ
ನಲಿನಲಿದು ನರಕವ
ಮಾಡಿತಲ್ಲ ಸ್ವರ್ಗವ ||

ಏಕತಾರಿಯ ಕಾಯಿ
ಹಣ್ಣಾದಂತೆ ಕಾಯ
ತಂತಿ ನಾದದ ಇಂಪು
ತತ್ವ ಗ್ಯಾನದ ತಂಪು ||

*****