ಎಲ್ಲಿ ಪ್ರಿಯಕರ ಹೇಳಿ ಯಾರಾದರೂ
ಬಾರನೇತಕೆ ಬಳಿಗೆ ಕ್ಷಣವಾದರೂ?
ಕದ್ದೊಯ್ದ ನನ್ನೆದೆಯ ಕಣ್ಣಿನಲ್ಲಿ,
ಹಗಲು ಬೆರೆಯಿತು ಘೋರ ಇರುಳಿನಲ್ಲಿ
ಪ್ರೀತಿ ಮಾತೆಂದೂ ತುಟಿ ದಾಟಲಿಲ್ಲ – ನೋಟ
ಒಮ್ಮೆಯೂ ದೀನೆಯನು ಸೋಕಲಿಲ್ಲ
ಏಕೆ ಮಾಡಿದ ಹೀಗೆ ನನ್ನ ಚೆಲುವ
ಹೇಗೆ ತಾಳಿದ ಇಂಥ ಘೋರ ನಿಲುವ?
ಕನಸಿನಲ್ಲೂ ಅವನ ನಗೆ ಕರೆವುದು
ಎದ್ದೆನೋ ನೆನಪುಗಳ ಧಗೆ ಸುಡುವುದು
ಒಲವಿನಾಲಿಂಗನಕೆ ಕಾದೆ ದಿನವೂ
ಅವನಿಗೇಕಿಲ್ಲ ದಯೆ ಒಂದು ಕಣವೂ?
ಇಡಿಯ ಬದುಕೇ ನೋವ ಕಡಲಾಗಿದೆ
ಮಾರುಹೋದುದೆ ನನಗೆ ಮುಳುವಾಗಿದೆ.
ನಿದ್ದೆ ಸುಳಿಯದು ನನ್ನ ಕಣ್ಣ ಬಳಿಗೆ
ಕೊನೆಯೆ ಇಲ್ಲವೆ ಈ ಹೊಲೆರಾತ್ರಿಗೆ?
ನಲ್ಲನಿಲ್ಲದ ಪ್ರಿಯವೆ ಇಲ್ಲ ನನಗೆ
ಅವನ ದನಿ ಹೊರತು ಹಿತವಿಲ್ಲ ಕಿವಿಗೆ
ಹೇಳಿ ಯಾರಾದರೂ ಪ್ರಿಯಕರನಿಗೆ
ಒಮ್ಮೆ ಕರೆಯಲಿ ನನ್ನ ಮನದ ಮನೆಗೆ.
*****
ಪುಸ್ತಕ: ನಿನಗಾಗೇ ಈ ಹಾಡುಗಳು


















