ಹೊಂಬಿಸಿಲು ನಾಚೀತು ನನ್ನ ಚೆನ್ನೆಯ ಕೆನ್ನೆ-
ಯಲ್ಲಿ ಮಿರುಗುವ ಕಾಂತಿಗೆ,
ನಕ್ಷತ್ರ ನಮಿಸೀತು ನನ್ನ ದೇವಿಯ ಕಣ್ಣು
ಸುತ್ತ ಹರಡುವ ಶಾಂತಿಗೆ

ನನ್ನ ಹುಡುಗಿಯ ಪ್ರೇಮಕಿಂತಲೂ ವಿಸ್ತಾರ
ಯಾವುದಿದೆ ಭೂಮಿಯೇ, ಬಾನೇ?
ಅವಳ ಬಿಸಿತುಟಿಯಲ್ಲಿ ಶರಣಾಗಿ ಕರಗುತಿದೆ
ಹಣ್ಣಾದ ಹುಣ್ಣಿಮೆಯ ಇರುಳೇ!

ಬೆನ್ನ ಮೇಲಿಳಿದ ಜಡೆ, ಹಂಸದಾ ತೇಲುನಡೆ
ಮೈಯೊ ತೂಗುಯ್ಯಾಲೆ, ಅಲ್ಲಿ
ಆಡುವುದು ನನ್ನ ಮನ, ಕಂಪು ಕೇದಗೆವನ
ಕವಿಯುವುದು ಪರಿಮಳವ ಚೆಲ್ಲಿ
*****

ಪುಸ್ತಕ: ನಿನಗಾಗೇ ಈ ಹಾಡುಗಳು

Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)