ಪುಂಸ್ತ್ರೀ – ೯

ಪುಂಸ್ತ್ರೀ – ೯

ಎಲ್ಲಿ ದೊರಕೀತು ಸುಖವು?

ಅಂಬೆ ವಿಹ್ವಲಳಾಗಿದ್ದಳು. ಇನ್ನು ಹೋಗುವುದು ಎಲ್ಲಿಗೆ ಎಂದವಳಿಗೆ ತೋಚುತ್ತಲೇ ಇರಲಿಲ್ಲ. ಕಾಶಿಯಿಂದ ಹಸ್ತಿನಾವತಿಯ ರಥವೇರಿ ಬಂದವಳು ಅವಿವಾಹಿತೆಯಾಗಿ ಕಾಶಿಗೆ ಹೋಗಬಾರದು. ಹಸ್ತಿನಾವತಿಗೆ ಹಿಂದಿರುಗಿ ಭೀಷ್ಮರೆದುರು ನಿಂತು ವಾದಿಸುವುದರಲ್ಲಿ ಅರ್ಥವಿರಲಿಲ್ಲದ ಉಪಯೋಗವೂ ಕಾಣಲಿಲ್ಲ. ಸಮಷ್ಟಿ ಪ್ರಜ್ಞೆಯಿಂದ, ಯೋಚಿಸುವ ಆಚಾರ್ಯರು ಅವರ ವೈಯಕ್ತಿಕ ಬೇಕು ಬೇಡಗಳಿಗೆ ಕಿಂಚಿತ್ತೂ ಬೆಲೆ ಕೊಡುವವರಲ್ಲವೆಂಬುದು ಅವಳಿಗೆಂದೋ ವೇದ್ಯವಾಗಿತ್ತು. ಇನ್ನು ಈ ಸಾಲ್ವಭೂಪತಿ ಸ್ವಾಭಿಮಾನದಲ್ಲಿ ಯಾರಿಗೂ ಕಡಿಮೆಯವನಲ್ಲ. ಕೊನೆಗೂ ದೃಢವಾದ ದನಿಯಲ್ಲಿ ಹಸ್ತಿನಾವತಿಯ ಭಿಕ್ಷೆ ತನಗೆ ಬೇಡವೆಂದನಲ್ಲಾ? ಆದರೆ ಅದು ಸಮಷ್ಟಿ ದೃಷ್ಟಿಯಿಂದ ಅವನು ತೆಗೆದುಕೊಂಡ ಅತ್ಯಂತ ಮಹತ್ತ್ವದ ನಿರ್ಧಾರವೆಂಬುದು ಅವಳಿಗೆ ಮನವರಿಕೆಯಾಗಿತ್ತು.

ನಿರಾಕರಣೆಯ ಆ ಕ್ಷಣದಲ್ಲೂ ಸಾಲ್ವಭೂಪತಿಯ ಕಣ್ಣುಗಳಲ್ಲಿ ಅವಳನ್ನು ಅನಿವಾರ್ಯವಾಗಿ ಕಳಕೊಳ್ಳಲೇಬೇಕಾದ ಬಗ್ಗೆ ನೋವಿತ್ತು. ಅವಳದನ್ನು ಸ್ಪಷ್ಟವಾಗಿ ಗುರುತಿಸಿದ್ದಳು. ಅವನಿಗೆ ಅಂಬೆ ಬೇಕಿತ್ತು. ಆದರೆ ಹಸ್ತಿನಾವತಿಯಿಂದ ಕಳುಹಿಸಿಕೊಟ್ಟ ಅಂಬೆಯನ್ನು ಅವನು ಸ್ವೀಕರಿಸುವಂತಿರಲಿಲ್ಲ. ಸ್ವಯಂವರ ಮಂಟಪದಿಂದ ಹಸ್ತಿನಾವತಿಯ ರಥವೇರುವ ಮುನ್ನ ಇದೊಂದು ಸೂಕ್ಷ್ಮ ತನಗೆ ಹೊಳೆಯದೆ ಹೋದುದಕ್ಕೆ ಅವಳು ವಿಷಾದಿಸಿದಳು. ಸ್ವಯಂವರ ಮಂಟಪದಲ್ಲಿ ತನ್ನಪ್ಪನಿಗೆ ಮತ್ತು ಸಾಲ್ವಭೂಪತಿಗೆ ಏನೇನೂ ತೊಂದರೆಯಾಗಬಾರದು ಮತ್ತು ಭೀಷ್ಮರು ಅವರಾಗಿಯೇ ಸೌಭ ದೇಶಕ್ಕೆ ತನ್ನನ್ನು ಕಳುಹಿಸಿಕೊಡಬೇಕೆಂಬುದು ಅವಳ ಯೋಜನೆಯಾಗಿತ್ತು. ಭೀಷ್ಮರು ಬ್ರಹ್ಮಚರ್ಯ ವ್ರತಪಾಲಕರು ಎಂಬುದನ್ನು ಅವಳು ಕೇಳಿ ತಿಳಿದಿದ್ದಳು. ಪಣವನ್ನು ಗೆದ್ದವರೇ ಮದುವೆಯಾಗತಕ್ಕದ್ದೆಂಬ ವಾದದಿಂದ ಭೀಷ್ಮರನ್ನು ಕಟ್ಟಿಹಾಕಿ ಸೌಭಕ್ಕೆ ಅವರಾಗಿಯೇ ಅವಳನ್ನು ಕಳುಹಿಸಿಕೊಡುವಂತೆ ಮಾಡುವಲ್ಲಿ ಅವಳು ಯಶಸ್ವಿಯಾಗಿದ್ದಳು. ಅವಳ ಯೋಜನೆ ಸಾಲ್ವಭೂಪತಿಯ ಸ್ವಾಭಿಮಾನದಿಂದಾಗಿ ವಿಫಲವಾಗಿತ್ತು. ಸಾಲ್ವಭೂಪತಿಗೆ ಅವಳಂತಹ ಮಡದಿ ಇನ್ನೆಂದಿಗೂ ಸಿಗುವುದಿಲ್ಲ. ಸಾಲ್ವನನ್ನು ಬಿಟ್ಟು ಅನ್ಯರನ್ನು ಪತಿಯೆಂದು ಭಾವಿಸಲು ಅವಳಿಂದ ಸಾಧ್ಯವೇ ಇಲ್ಲ. ಇನ್ನೇನು ಮಾಡುವುದೆಂದು ಅವಳು ಚಿಂತಾಕ್ರಾಂತಳಾದಳು.

ಮೊದಲಿಗೆ ಸೌಭವನ್ನು ಬಿಟ್ಟು ಬಿಡಬೇಕು. ಗಡಿಯವರೆಗೆ ಸಾಲ್ವಭೂಪತಿಯ ರಥದಲ್ಲಿ ಹೋದರೆ ಅವನ ಹಂಗಿನಲ್ಲಿ ಬಿದ್ದ ಹಾಗಾಗುತ್ತದೆ. ನಡೆದುಕೊಂಡು ಹೋದರೆ ಕತ್ತಲಾಗುವುದರೊಳಗೆ ಸೌಭದ ಗಡಿಯನ್ನು ದಾಟುವುದು ಅಸಾಧ್ಯದ ಮಾತು. ಸಾಲ್ವಭೂಪತಿಯಿಂದ ದೊರೆತ ದೊಡ್ಡ ಗಂಟಿನೊಡನೆ ಪುರೋಹಿತ ದೇವೀ ಚರಣದಾಸ ಸಂತೋಷದಿಂದ ರಥದಲ್ಲಿ ಕೂತಿದ್ದಾನೆ. ಹಸ್ತಿನಾವತಿ ತಲುಪಿದ ಮೇಲೆ ಆಚಾರ್ಯರಿಂದ ಕಾಣಿಕೆ ಪಡೆದೇ ಪಡೆಯುತ್ತಾನೆ. ಆಗ ಸಾಲ್ವಭೂಪತಿಯಿಂದ ಸಿಕ್ಕ ಗಂಟಿನ ಬಗ್ಗೆ ಏನನ್ನೂ ಹೇಳಲಾರ. ಹೇಳಿದರೆ ಭೀಷ್ಮರಿಂದ ಸಿಗುವುದು ಕಡಿಮೆ ಯಾಗಬಹುದೆಂಬ ಆತಂಕ ಇವನಿಗಿದ್ದೇ ಇರುತ್ತದೆ. ಇವನು ಖಂಡಿತಾ ನಡೆಯಲಾರ. ನಡೆಯಲು ಇವನಿಂದ ಈಗ ಸಾಧ್ಯವಾಗಲಾರದು. ಗಡಿಯವರೆಗೆ ರಥದಲ್ಲೇ ಹೋಗಬೇಕಾಗುತ್ತದೆ.

ಹಸ್ತಿನಾವತಿಯ ರಥದಲ್ಲಿ ಸೌಭದ ಗಡಿಯವರೆಗೆ ಬರುವಾಗ ಅವಳಿಗದು ಹಂಗೆನಿಸಿರಲಿಲ್ಲ. ಅವಳ ಹೃದಯ ಗೆದ್ದವನಲ್ಲಿಗೆ ಪಣದಲ್ಲಿ ಗೆದ್ದವನು ಕಳುಹಿಸಿಕೊಟ್ಟದ್ದೆಂಬ ಭಾವವಿತ್ತು. ಅವಳನ್ನು ಸೌಭಕ್ಕೆ ಕಳುಹಿಸಬೇಕಾದ ಬಾಧ್ಯತೆ ಭೀಷ್ಮರದ್ದು ಎಂದುಕೊಂಡಿದ್ದಳು. ಈಗ ಸಾಲ್ವ ಭೂಪತಿಯಿಂದ ತಿರಸ್ಕೃತಳಾದಾಗ ಅನಾಥಪ್ರಜ್ಞೆ ಕಾಡಿತು. ಸಾಲ್ವಭೂಪತಿಗೆ ಅವಳನ್ನು ಎಲ್ಲಿಗೂ ಕಳುಹಿಸಬೇಕಾದ ಬಾಧ್ಯತೆ ಇಲ್ಲವೆಂಬುದರಿವಾಗಿ ಕಾಡಿದ ಪ್ರಜ್ಞೆಯದು. ಆದರೂ ಸಾಲ್ವಭೂಪತಿಯ ರಥದಲ್ಲಿ ಗಡಿಯವರೆಗೆ ಪಯಣಿಸಲೇ ಬೇಕಾಗಿರುವ ಅನಿವಾರ್ಯತೆಯಿಂದ ತಾನು ಕುಬ್ಜಳಾದಂತೆ ಅವಳಿಗನ್ನಿಸಿತು.

ಪಣವನ್ನು ಗೆದ್ದವನೇ ತನ್ನನ್ನು ಧರ್ಮಬದ್ಧವಾಗಿ ವರಿಸಬೇಕೆಂದು ಅವಳು ವಾದಿಸಿದ್ದಳು. ರಾಜಮಾತೆ ಸತ್ಯವತೀದೇವಿ ಅವಳ ವಾದವನ್ನು ಅಂತಿಮವಾಗಿ ಬೆಂಬಲಿಸಿದ್ದಳು. ಸತ್ಯವತೀದೇವಿಯ ಕತೆ ಆರ್ಯಾವರ್ತಕ್ಕೆಲ್ಲಾ ತಿಳಿದ ವಿಷಯವಾಗಿತ್ತು. ಸಣ್ಣ ಪ್ರಾಯದಲ್ಲೇ ಜೀವನದ ಹಲವು ಮಗ್ಗಲುಗಳನ್ನು ಅವಳು ಕಂಡವಳು. ಶಂತನು ಚಕ್ರವರ್ತಿಗಳ ಕೈಹಿಡಿಯುವ ಮುನ್ನ ಪರಾಶರ ಮಹಾಮುನಿಗಳಿಂದ ದ್ವೈಪಾಯನನನ್ನು ಪಡೆದವಳು. ಆತನಷ್ಟು ಮೇಧಾವಿ ಆರ್ಯಾವರ್ತದಲ್ಲಿ ಬೇರೊಬ್ಬನಿಲ್ಲವೆಂದು ಅಪ್ಪ ಹೇಳುತ್ತಿದ್ದುದು ಅಂಬೆಗೆ ನೆನಪಾಯಿತು. ಬೀಜದ ಮಹಿಮೆಯದು! ಅವಳನ್ನು ಕುರು ಸಾಮ್ರಾಜ್ಯ ರಾಜಮಾತೆಯೆಂದು ಒಪ್ಪಿಕೊಂಡಿದೆ. ಅಂಥವಳ ಉದರದಲ್ಲಿ ಜನಿಸಿದ ವಿಚಿತ್ರವೀರ್ಯನಿಗೆ ಸ್ವಯಂವರ ಮಂಟಪಕ್ಕೆ ಹೋಗಿ ರಾಜಮಹಾರಾಜರುಗಳೊಡನೆ ಕಾದಾಡುವ ಕ್ಷಾತ್ರತ್ವವಿರಲಿಲ್ಲ. ಆಚಾರ್ಯ ಭೀಷ್ಮ ಮತ್ತು ರಾಜಮಾತೆಯರೊಡನೆ ತಾನು ಚರ್ಚಿಸುತ್ತಿರುವಾಗ ವಿಚಿತ್ರವೀರ್ಯ ಕಣ್ಣು ಮಿಟುಕಿಸುತ್ತಿದ್ದುದು ಅವಳ ಸ್ಮೃತಿ ಪಟಲದಲ್ಲಿ ಮೂಡಿತು. ಒಂದೇ ಒಂದು ಅಭಿಪ್ರಾಯವನ್ನು ಹೇಳಲು ಅವನಿಂದ ಸಾಧ್ಯವಾಗಿರಲಿಲ್ಲ. ಒಂದು ಹಂತದಲ್ಲವನು ನಿರಾಸಕ್ತಿಯಿಂದ ಎದ್ದು ಹೋಗಿದ್ದ. ಅವನು ಕುರು ಸಾಮ್ರಾಜ್ಯದ ಚಕ್ರವರ್ತಿ ಅ ಭೀಷ್ಮರಂತೆ ವಿಚಿತ್ರವೀರ್ಯನೂ ಶಂತನು ಚಕ್ರವರ್ತಿಗಳ ಸಂತಾನವೇ. ಬೀಜಕ್ಕಿಂತ ಕ್ಷೇತ್ರ ಪ್ರಬಲವಾಗಿ ಹೀಗಾಯಿತೆ? ಅಥವಾ ಸತ್ಯವತೀ ದೇವಿಗೆ ಪರಾಶರರನ್ನು ಮರೆಯಲು ಸಾಧ್ಯವಾಗದುದರ ಪರಿಣಾಮವೇ ಇದು? ಏನೇ ಆದರೂ ರಾಜಮಾತೆ ಅದೃಷ್ಟವಂತೆ. ವಿಚಿತ್ರವೀರ್ಯ ಏರಿರುವ ಸಿಂಹಾಸನಕ್ಕೆ ಆಚಾರ್ಯ ಭೀಷ್ಮರ ರಕ್ಷಣೆಯಿದೆ. ಅಗತ್ಯ ಬಿದ್ದಾಗ ದ್ವೈಪಾಯನರು ನೆರವಿಗೆ ಬಂದೇ ಬರುತ್ತಾರೆ. ಇವರಿಬ್ಬರಿರುವವರೆಗೆ ಕುರು ಸಾಮ್ರಾಜ್ಯ ಹೊರಗಿನ ಶಕ್ತಿಗಳಿಂದ ನಾಶವಾಗುವುದಿಲ್ಲ. ಆದರೆ ಬೃಹತ್‌ ವೃಕ್ಷವೊಂದು ತನ್ನೊಳಗಿನ ಹುಳಗಳಿಂದಲೇ ನಾಶವಾಗಬಹುದು!

ತಾನು ನೇರವಾಗಿ ಕಾಶಿಗೇ ಹೋಗಿಬಿಟ್ಟರೇನೆಂಬ ಯೋಚನೆ ಅಂಬೆಯಲ್ಲಿ ಮೂಡಿತು. ಅಲ್ಲಿ ನಾನು ಬೇರೊಂದು ಅನನ್ಯತೆಯನ್ನು ಕಂಡುಕೊಳ್ಳಬೇಕು. ಕಾಶಿ ಸಮಸ್ತ ಆರ್ಯಾವರ್ತದ ಶ್ರದ್ಧಿಕೇಂದ್ರ. ಗಂಗಾ ತಟದುದ್ದಕ್ಕೂ ಬೆತ್ತಲೆಯಾದ, ಅರೆಬೆತ್ತಲೆಯಾದ, ಪೂರ್ಣ ಕಾಷಾಯಾಂಬರ ಧಾರಿಗಳಾದ ಯಾವ್ಯಾವುದೋ ಶ್ರದ್ಧೆಗಳ ತಾಂತ್ರಿಕರು, ಮಾಂತ್ರಿಕರು, ಸಾಧಕರು, ಸಿದ್ಧರು ಮತ್ತು ಬೂದಿಬಡುಕ ಸಂನ್ಯಾಸಿಗಳಿದ್ದಾರೆ. ಇವರ ನಡುವೆ ಎಲ್ಲೋ ಒಂದೆಡೆ ನಾನು ಯೋಗಿನಿಯಾಗಿ ಇದ್ದು ಬಿಡಬಹುದು. ಅಥವಾ ಅರಮನೆಗೆ ಹಿಂತಿರುಗಿ ಅಪ್ಪನಿಗೆ ಸಮಸ್ತ ವಿಷಯ ತಿಳಿಸಿ ಕಾಶಿಯ ವಿದ್ಯಾಪೀಠದಲ್ಲಿ ಶಾಸ್ತ್ರವಿದ್ಯೆ ಮುಂದುವರಿಸಬಹುದು. ಅಲ್ಲಿರುವ ಏಕವೇದಿ, ದ್ವಿವೇದಿ, ತ್ರಿವೇದಿ, ಚತುರ್ವೇದಿಗಳ ನಡುವೆ ನಾನೊಬ್ಬಳು! ದೊಡ್ಡ ವೇದ ವಿದುಷಿಯಾಗಿ, ಜಾತಿಗಳ, ವರ್ಣಗಳ ಮತ್ತು ಸ್ತ್ರೀಪುರುಷರ ನಡುವೆ ಯಾವುದೇ ವ್ಯತ್ಯಾಸಗಳನ್ನು ಮಾಡದ ನವ ನವೋನ್ಮೇಷಶಾಲಿ ಯಾದ ಮತವೊಂದನ್ನು ಯಾಕೆ ಹುಟ್ಟು ಹಾಕಬಾರದು?

ಇಲ್ಲ, ಮತ್ತೆ ಕಾಶಿಗೆ ಹೋಗುವುದು ಸರಿಯಾಗುವುದಿಲ್ಲ. ಅಪ್ಪ ನನ್ನನ್ನು ಮನಸ್ಸಿಲ್ಲದಿದ್ದರೂ ಕಳುಹಿಸಿಕೊಟ್ಟದ್ದು ಹಸ್ತಿನಾವತಿಗೆ. ಅಲ್ಲಿಂದ ನಾನಾಗಿಯೇ ಸಾಲ್ವಭೂಪತಿಯಲ್ಲಿಗೆ ಬಂದು ತಿರಸ್ಕೃತಳಾದವಳು ಯಾವ ಮುಖದಿಂದ ಹೋಗಿ ಅಪ್ಪನೆದುರು ನಿಂತು, ಇಲ್ಲಿ ನಡೆದುದ್ದನ್ನೆಲ್ಲಾ ಹೇಳುವುದು? ನಾನು ಹಸ್ತಿನಾವತಿಯ ಸೊಸೆಯಾಗುವುದು ಅಥವಾ ಸೌಭದ ರಾಣಿ ಯಾಗುವುದು ಅಪ್ಪನಿಗೆ ಇಷ್ಟವಿರಲಿಲ್ಲ. ಸ್ವಯಂವರ ಮಂಟಪದಲ್ಲಿ ಸಾಲ್ವಭೂಪತಿ ಎಲ್ಲರನ್ನೂ ಗೆಲ್ಲುತ್ತಿರುವಾಗ ಅಪ್ಪ ಕೆಂಡ ತುಳಿದವನಂತೆ ಆಡುತ್ತಿದ್ದ. ಆಚಾರ್ಯ ಭೀಷ್ಮರ ಪ್ರವೇಶವಾದಾಗ ತತ್ತರಿಸಿ ಹೋಗಿದ್ದ. ಆಮಂತ್ರಣವಿಲ್ಲದವರು ಬಂದು ಅನಾಹುತಕ್ಕೆ ಕಾರಣರಾಗಿದ್ದರು. ಅಪ್ಪ ಶೌರ್ಯವನ್ನು ಪಣವಾಗಿರಿಸಿದ್ದೇ ತಪ್ಪು. ಅದರ ಬದಲು ಆಯ್ಕೆಯ ಸ್ವಾತಂತ್ರ್ಯವನ್ನು ನಮಗೇ ನೀಡಬೇಕಿತ್ತು. ನಾನು ಸಾಲ್ವಭೂಪತಿಯನ್ನು ಆಯ್ಕೆ ಮಾಡಿ ಸುಖವಾಗಿರುತ್ತಿದ್ದೆ. ಅಂಬಿಕೆ, ಅಂಬಾಲಿಕೆಯರು ತಮ್ಮಿಷ್ಟದವರನ್ನು ಆಯ್ದುಕೊಳ್ಳುತ್ತಿದ್ದರು. ಆಗ ಭೀಷ್ಮರಿಗೆ ಸ್ವಯಂವರ ಮಂಟಪಕ್ಕೆ ಬರಲಾಗುತ್ತಿರಲಿಲ್ಲ. ವಿಚಿತ್ರವೀರ್ಯ ಬರುತ್ತಿದ್ದರೂ ತಲೆನೆಟ್ಟಗಿರುವವರು ಯಾರೂ ಅವನನ್ನು ವರಿಸುತ್ತಿರಲಿಲ್ಲ.

ಅಪ್ಪನನ್ನೂ ತಪ್ಪಿತಸ್ಥನೆನ್ನುವಂತಿಲ್ಲ. ಆಮಂತ್ರಣವಿಲ್ಲದವರು ಸ್ವಯಂವರ ಮಂಟಪಕ್ಕೆ ಬಂದಾರೆಂದು ಅವನು ಭಾವಿಸಿರಲಾರ. ಕಾಶೀರಾಜ್ಯಕ್ಕೆ ಸಮರ್ಥ ಉತ್ತರಾಧಿಕಾರಿಯೊಬ್ಬನನ್ನು ಅವನು ಹುಡುಕಬೇಕಾಗಿತ್ತು. ಅದಕ್ಕವನು ಸ್ವಯಂವರ ಮಾರ್ಗವನ್ನು ಆಯ್ದುಕೊಂಡ. ಕುರು ಸಾಮ್ರಾಜ್ಯವನ್ನು, ಸೌಭ ದೇಶವನ್ನು ಉದ್ದೇಶಪೂರ್ವಕವಾಗಿಯೇ ಹೊರಗಿಟ್ಟ. ತನ್ನ ಹೆಣ್ಣು ಮಕ್ಕಳಿಗೆ ಯಾರು ಪತಿಯಾಗಬಾರದೆಂಬುದನ್ನು ಅವನದೇ ನೆಲೆಯಲ್ಲಿ ಯೋಚಿಸಿ ಕಾರ್ಯಪ್ರವೃತ್ತನಾದ. ಕಾಶೀರಾಜ್ಯ ಕುರುಸಾಮ್ರಾಜ್ಯಕ್ಕೋ, ಸೌಭ ದೇಶಕ್ಕೋ ಸೇರಿ ಅಸ್ತಿತ್ತ್ವವನ್ನೇ ಕಳಕೊಳ್ಳುವುದು ಅವನಿಗಿಷ್ಟವಿರಲಿಲ್ಲ. ಆಮಂತ್ರಣ ನೀಡದಿದ್ದರೂ ಸಾಲ್ವಭೂಪತಿ ಬಂದುಬಿಟ್ಟ. ತಾನು ಮದುವೆಯಾಗದವರು, ತಮ್ಮನಿಗೆ ಮದುವೆ ಮಾಡಿಸಲು ಆಚಾರ್ಯ ಭೀಷ್ಮರೂ ಬಂದರು. ಅವರದಕ್ಕೆ ಕೊಡುವ ಕಾರಣವೇನೇ ಇರಲಿ, ಇಬ್ಬರೂ ಮಾಡಿದ್ದು ತಪ್ಪು. ಇಬ್ಬರದೂ ಶುದ್ಧ ಅಹಂಕಾರ ಪ್ರವೃತ್ತಿ. ಹೆಣ್ಣನ್ನು ಹೇಗೆ ಬೇಕಾದರೂ ನಡೆಸಿಕೊಳ್ಳಬಹುದೆನ್ನುವ ಧಾಷ್ಟ್ರ್ಯ. ಅದಕ್ಕೆ ಅವರು ಸ್ವಾಭಿಮಾನವೆಂಬ ನವಿರಾದ ಪದವನ್ನು ಬಳಸಿದ್ದಾರೆ. ಮುಂದೇನು ಮಾಡುವುದು? ಎಷ್ಟು ಯೋಚಿಸಿದರೂ ದಾರಿಯೇ ಕಾಣುತ್ತಿಲ್ಲವಲ್ಲಾ?

ರಥವೇರಿ ಕುಳಿತಿದ್ದ ಪುರೋಹಿತ ದೇವೀ ಚರಣದಾಸ ಅವಸರಿಸಿದ: “ಅಂಬೇ, ಇನ್ನೂ ಯಾಕೆ ವೇಳೆ ಕಳೆಯುತ್ತಿದ್ದೀಯೆ? ಸಾಲ್ವಭೂಪತಿಯಿಂದ ತಿರಸ್ಕೃತಳಾದ ಮೇಲೆ ಇಲ್ಲಿ ನಿಲ್ಲುವುದು ಸರಿಯಾಗುವುದಿಲ್ಲ. ಆಚಾರ್ಯರ ಆಜ್ಞೆಯ ಪ್ರಕಾರ ನಿನ್ನನ್ನು ಇಲ್ಲಿ ಬಿಟ್ಟು ನಾನು ಹಸ್ತಿನಾವತಿಗೆ ಹಿಂದಿರುಗಬೇಕಿತ್ತು. ಆದರೆ ಈ ಪರಿಸ್ಥತಿಯಲ್ಲಿ ಇಲ್ಲಿ ನಿನ್ನನ್ನು ನಾನು ಬಿಟ್ಟು ಹೋಗಲಾರೆ. ಈಗ ರಥವೇರು. ಸೌಭದ ಗಡಿ ದಾಟುವುದರೊಳಗೆ ಮುಂದಿನ ಹಾದಿ ನಿಚ್ಚಳವಾದೀತು.”

ಅನ್ಯಮಾರ್ಗವಿಲ್ಲದೆ ಅವಳು ರಥ ಹತ್ತಿದಳು. ಮನಸ್ಸು ಅಸ್ಥಿರ ಭವಿಷ್ಯದ ಬಗ್ಗೆ ಚಿಂತಿಸುತ್ತಿತ್ತು. ರಥ ಮುಂದಕ್ಕೆ ಚಲಿಸುತ್ತಿರುವಾಗ ಪುರೋಹಿತ ದೇವೀ ಚರಣದಾಸನೆಂದ: “ಅಂಬೇ, ಕ್ಷತ್ರಿಯರು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆನ್ನುವುದು ಪ್ರತೀತಿ. ಆದರೆ ನೀನು ಕೊಟ್ಟ ಮಾತಿಗೆ ತಪ್ಪಿದ್ದೀಯಾ.”

ಅವಳು ಬೆಚ್ಚಿಬಿದ್ದು ಗಾಬರಿಯಿಂದ ಕೇಳಿದಳು: “ಇದೇನನ್ನು ಹೇಳುತ್ತಿದ್ದೀರಿ ಪುರೋಹಿತರೇ ನೀವು? ನಾನೆಲ್ಲಿ ಕೊಟ್ಟ ಮಾತಿಗೆ ತಪ್ಪಿದ್ದೇನೆ? ನಿಮ್ಮಂತಹ ವಿದ್ವಾಂಸರು ಹೀಗೂ ಮಿಥ್ಯಾರೋಪ ಮಾಡುವುದೆ?”

ಪುರೋಹಿತ ದೇವೀ ಚರಣದಾಸನೆಂದ: “ನಾನು ಮಾಡುತ್ತಿರುವುದು ಮಿಥ್ಯಾರೋಪವಲ್ಲ. ಸಾಲ್ವಭೂಪತಿಯ ಆಸ್ಥಾನ ಸೇರಿದ ಕೂಡಲೇ ನನ್ನ ಹೆಣ್ಣುಮಕ್ಕಳಿಗೆ ಚಿನ್ನದ ಬಳೆ ಮತ್ತು ಸ್ವರ್ಣ ಹಾರ ನೀಡುವುದಾಗಿ ಮಾತು ಕೊಟ್ಟಿದ್ದಿ. ಆ ಸಾಲ್ವಭೂಪತಿ ಉದಾರಿ. ಇಷ್ಟೆಲ್ಲಾ ಕೊಟ್ಟು ಕಳುಹಿಸಿದ್ದಾನೆ. ನಾನು ನಿನ್ನನ್ನು ಅಷ್ಟು ದೂರದ ಹಸ್ತಿನಾವತಿಯಿಂದ ಇಲ್ಲಿಯವರೆಗೆ ಕರಕೊಂಡು ಬಂದವನು. ಈಗ ಕ್ಷೇಮವಾಗಿ ಹಸ್ತಿನಾವತಿಗೇ ಕರಕೊಂಡು ಹೋಗಲು ನಿಶ್ಚಯಿಸಿದ್ದೇನೆ. ನೀನೇನು ನನ್ನ ಮಗಳಾ, ಅತ್ತೆಯಾ? ಇನ್ನೂ ನೀನು ನನಗೇನನ್ನೂ ನೀಡಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ. ಯಕಶ್ಚಿತ್‌ ಉಪಕಾರ ಸ್ಮರಣೆಯೂ ನಿನ್ನಲ್ಲಿಲ್ಲ.”

ವೃದ್ಧ ಪುರೋಹಿತನ ಮಾತುಗಳಿಗೆ ಅವಳು ದಂಗಾಗಿ ಹೋದಳು. ಸಾಮಾನ್ಯವಾಗಿ ಅರವತ್ತು ದಾಟಿದ ಮೇಲೆ ಜೀವನದಲ್ಲಿ ಸಹಜವಾಗಿ ವೈರಾಗ್ಯ ಮೂಡುತ್ತದೆಂದು ಅವಳು ಕೇಳಿ ತಿಳಿದಿದ್ದಳು. ಈ ಪುರೋಹಿತನಿಗೆ ಎಪ್ಪತ್ತು ದಾಟಿದರೂ ಲಾಲಸೆ ಬಿಟ್ಟಿಲ್ಲ. ಜೀವನಕ್ಕೊಂದು ಸಾರ್ಥಕ ಉದ್ದೇಶವಿದ್ದು ಅದನ್ನು ಸಾಧಿಸಲೆತ್ನಿಸುವವರು ಮಾತ್ರ ಮಾನವರೆನಿಸಿಕೊಳ್ಳುತ್ತಾರೆಂದು ಅವಳು ಓದಿ ತಿಳಿದಿದ್ದಳು. ಇವನ ಜೀವಿತದ ಉದ್ದೇಶ ಒಂದೇ ಸ್ವರ್ಣ ಗಳಿಕೆ. ಇವನ ಬಾಯಿಯಿಂದ ತಾನ್ಯಾಕೆ ವಚನಭ್ರಷ್ಟಳೆಂಬ ಅಪವಾದ ಕೇಳಬೇಕೆಂದುಕೊಂಡು ಅಂಬೆಯೆಂದಳು: “ಸ್ವಾಮಿ ಪುರೋಹಿತರೇ, ಸಾಲ್ವಭೂಪತಿ ನನ್ನನ್ನು ಸ್ವೀಕರಿಸುತ್ತಿದ್ದರೆ ನನ್ನ ಮೈಮೇಲಿರುವ ಎಲ್ಲಾ ಆಭರಣಗಳನ್ನು ಆಗಲೇ ನಿಮಗೆ ಕೊಟ್ಟು ಬಿಡುತ್ತಿದ್ದೆ. ಕೊಟ್ಟ ಮಾತನ್ನು ಅಂಬೆ ಮೀರುವವಳಲ್ಲ. ನನ್ನ ಮುಂದಿನ ಗಮ್ಯಸ್ಥಾನ ಯಾವುದೆಂದು ತೀರ್ಮಾನಿಸಲಾಗದೆ ಗೊಂದಲದಲ್ಲಿ ತಡವಾಯಿತು. ಒಮ್ಮೆ ನಿರ್ಧಾರವಾಯಿತೆಂದರೆ ನಾನು ಹೇಳಿದ್ದಕ್ಕಿಂತಲೂ ಹೆಚ್ಚೇ ಕೊಟ್ಟು ಬಿಡುತ್ತೇನೆ. ತಪ್ಪು ತಿಳಿಯಬೇಡಿ”.

ಸೌಭದ ಗಡಿಯಲ್ಲಿ ಹಸ್ತಿನಾವತಿಯ ರಥ ಪುರೋಹಿತನಿಗಾಗಿ ಕಾಯುತ್ತಿತ್ತು. ಅಂಬೆ ಮರಳಿ ಬಂದದ್ದನ್ನು ಕಂಡು ಸಾರಥಿಗಾದ ಆಶ್ಚರ್ಯ ಅವನ ಮುಖದಲ್ಲಿ ಎದ್ದು ಕಾಣುತ್ತಿತ್ತು. ರಥದಿಂದಿಳಿದ ಅಂಬೆ ಸೌಭದ ಸಾರಥಿಯ ಬಳಿಗೆ ಹೋಗಿ ಎರಡು ಬಳೆಗಳನ್ನು ತೆಗೆದು ಅವನಿಗೆ ಕೊಟ್ಟು ಹೇಳಿದಳು. ಇವು ಚಿನ್ನದ ಬಳೆಗಳು. ನಮ್ಮನ್ನು ಗಡಿಯವರೆಗೆ ಕ್ಷೇಮವಾಗಿ ನೀನು ತಂದು ಸೇರಿಸಿದ್ದಕ್ಕೆ ನಿನ್ನ ಪತ್ನಿಗಿದು ಕಾಶೀ ರಾಜಕುಮಾರಿ ಅಂಬೆಯ ಉಡುಗೊರೆ. ಇನ್ನೊಂದನ್ನು ಸಾಲ್ವ ಭೂಪತಿಗೆ ಕೊಟ್ಟು ಬಿಡು. ಅವನ ರಥದಲ್ಲಿ ಇಲ್ಲಿಯವರೆಗೆ ಬಂದ ಋಣಕ್ಕಿದು ಪರಿಹಾರ. ಅವನಿದನ್ನು ಹಾಗೆಂದು ಸ್ವೀಕರಿಸದಿದ್ದರೆ ತೊಟ್ಟುಕೊಳ್ಳಲು ಹೇಳು. ಅವನ ಸ್ವಭಾವಕ್ಕಿದು ತಕ್ಕ ಉಡುಗೊರೆಯಾಗುತ್ತದೆ.”

ಸೌಭದ ಸಾರಥಿಗೆ ಅಂಬೆಯ ಪೂರ್ವಾಪರ ತಿಳಿದಿರಲಿಲ್ಲ. ಅವಳ ವರ್ತನೆ ಅವನಲ್ಲಿ ಅಮಿತಾಶ್ಚರ್ಯವನ್ನುಂಟು ಮಾಡಿತು. ಅವನು ವಿನೀತ ಭಾವದಲ್ಲಿ ನುಡಿದ: “ಅಮ್ಮಾ, ನನಗೆ ಧನಿಗಳು ದಿನಕ್ಕೆ ಇಂತಿಷ್ಟೆಂದು ಕೊಡುತ್ತಾರೆ. ಅಪರಿಚಿತಳಾದ ನಿಮ್ಮಿಂದ ನಾನೇನನ್ನೂ ಬಯಸುವುದಿಲ್ಲ. ಅನ್ಯರ ಧನಕ್ಕೆ ಕೈಯೊಡ್ಡಬಾರದೆಂಬುದು ಸೌಭ ದೇಶ ರೂಢಿಸಿಕೊಂಡಿರುವ ಮೌಲ್ಯ. ಇನ್ನು ನಾನು ನಿಮ್ಮ ಒಂದು ಬಳೆಯನ್ನು ಧನಿಗಳಿಗೆ ಕೊಟ್ಟು ನೀವಂದುದನ್ನು ಹೇಳಲು ಸಾಧ್ಯವಾಗುತ್ತದೆಯೆ? ದಯವಿಟ್ಟು ಇವನ್ನು ನೀವೇ ಇಟ್ಟುಕೊಳ್ಳಿ.”

ಅಂಬೆ ದನಿ ಎತ್ತರಿಸಿದಳು: “ನಾನು ಹೇಳಿದಂತೆ ಕೇಳು. ಸೌಭದೇಶದ ರೂಢಮೌಲ್ಯಗಳನ್ನು ನಿನ್ನ ದೊರೆ ನನಗೆ ಚೆನ್ನಾಗಿ ಪರಿಚಯಿಸಿದ್ದಾನೆ. ಅವನ ಋಣ ನನಗೆ ಬೇಡ. ಅವನಿದನ್ನು ತೊಟ್ಟುಕೊಳ್ಳಲಿ. ಇದು ಅವನ ಜೀವನ ಮೌಲ್ಯದ ಸಂಕೇತವಾಗಲಿ. ಅವನು ನಿರಾಕರಿಸಿದರೆ ಎರಡನ್ನೂ ನೀನೇ ಇಟ್ಟುಕೋ. ಸುಮ್ಮನೆ ವಾದಿಸಬೇಡ.”

ಮತ್ತೆ ಸೌಭದ ಸಾರಥಿ ಬಾಯಿ ತೆರೆಯಲಿಲ್ಲ. ಅಂಬೆಯ ಎರಡು ಚಿನ್ನದ ಬಳೆಗಳನ್ನು ಮೌನವಾಗಿ ತೆಗೆದುಕೊಂಡು ರಥವನ್ನು ಹಿಂದಿರುಗಿಸಿದ. ಅಂಬೆಗೆ ಮುಂದೇನೆಂಬುದನ್ನು ನಿರ್ಧರಿಸಲು ಸಾಧ್ಯವಾಗಿರಲಿಲ್ಲ. ಅವಳಿನ್ನೂ ಹಸ್ತಿನಾವತಿಯ ರಥವೇರದ್ದನ್ನು ನೋಡಿ ಪುರೋಹಿತನೆಂದ: “ಅಂಬೇ, ಕತ್ತಲಾಗುತ್ತಿದೆ. ಕತ್ತಲಲ್ಲಿ ನಾವು ಪ್ರಯಾಣ ಮಾಡುವಂತಿಲ್ಲ. ಸಮೀಪದಲ್ಲೆಲ್ಲಾದರೂ ಛತ್ರವಿರಬಹುದು. ಅಲ್ಲುಳಿದು ನಾಳೆ ಹಸ್ತಿನಾವತಿಗೆ ಹೋದರಾಯಿತು. ಆಚಾರ್ಯರು ಏನು ಹೇಳುತ್ತಾರೋ ಹಾಗೆ ಮಾಡಬಹುದು.”

ಹಸ್ತಿನಾವತಿಯವರೆಂಬ ಕಾರಣಕ್ಕೆ ಛತ್ರದಲ್ಲಿ ರಾಜೋಪಚಾರ ದೊರಕಿತು. ರಥಕ್ಕೆ ಪ್ರದಕ್ಷಿಣೆ ಬಂದು ಧ್ವಜಕ್ಕೆ ಕೈ ಮುಗಿಯುತ್ತಿದ್ದ ಜನರ ಸಂಖ್ಯೆಗೆ ಲೆಕ್ಕವಿರಲಿಲ್ಲ. ಧ್ವಜಕ್ಕೆ ಕೈ ಮುಗಿಯುವ ಪ್ರಜೆಗಳು ನಿಜಕ್ಕೂ ಸುಖವಾಗಿದ್ದಾರಾ? ನನಗೆ ಗೊತ್ತಿಲ್ಲ. ಜೀವನದಲ್ಲಿ ಸದ್ಧರ್‍ಮವಂತರಾಗಿ ನಡೆದುಕೊಳ್ಳುತ್ತಾರಾ? ನನಗೆ ಗೊತ್ತಿಲ್ಲ. ಧ್ವಜವನ್ನಂತೂ ಗೌರವಿಸುತ್ತಿದ್ದಾರೆ. ಅಥವಾ ಇದು ತೋರಿಕೆಯ ಗೌರವವೆ? ನನಗೆ ಗೊತ್ತಾಗುತ್ತಿಲ್ಲ. ಕುರು ಸಾಮ್ರಾಜ್ಯವನ್ನು ಇವರೇಕೆ ಗೌರವಿಸಬೇಕು? ಅದು ಇವರ ಸ್ವಾತಂತ್ರ್ಯವನ್ನು ರಕ್ಷಿಸುತ್ತದೆಂದೆ? ಸಾಮ್ರಾಜ್ಯಗಳು ಪ್ರಜೆಗಳ ಸ್ವಾತಂತ್ರ್ಯವನ್ನು ಕಬಳಿಸುತ್ತವೆ. ಆದರೂ ಇವರು ಧ್ವಜಕ್ಕೆ ಗೌರವ ನೀಡುತ್ತಿದ್ದಾರೆ. ಯಾಕೆಂದು ನನಗೆ ಗೊತ್ತಾಗುತ್ತಿಲ್ಲ.

ಮರುದಿನ ಬ್ರಾಹ್ಮೀ ಮುಹೂರ್ತದಲ್ಲೆದ್ದು ಅಂಬೆ ಪುರೋಹಿತನೊಡನೆ ಪ್ರಯಾಣ ಮುಂದುವರಿಸಿದಳು. ಹಸ್ತನಾವತಿಯ ಹಾದಿಯಲ್ಲಿ ದೂರದಲ್ಲಿ ಸರೋವರವೊಂದು ಕಾಣಿಸಿತು. ಸೌಭಕ್ಕೆ ಬರುವಾಗ ಅವಳು ಅದನ್ನು ಗಮನಿಸಿರಲಿಲ್ಲ. ಈಗ ಸರೋವರವನ್ನು ಕಂಡಾಗ ಮನಸ್ಸಿಗೆ ಆಹ್ಲಾದ ಉಂಟಾಯಿತು. ಅವಳಿಗೆ ಕಾಶಿಯ ಉಪವನದ ಆ ಸರೋವರದ ನೆನಪಾಗಿ ಮೈ ಪುಳಕಿತವಾಯಿತು. ಅವಳು ಸ್ವಚ್ಚಂದವಾಗಿ ಇರುತ್ತಿದ್ದುದೇ ಆ ಸರೋವರದಲ್ಲಿ. ಪುರುಷ ಸಾನ್ನಿಧ್ಯದ ಸುಖವನ್ನು ಅವಳಿಗೆ ಪರಿಚಯಿಸಿದ್ದು ಆ ಸರೋವರ. ಪ್ರೀತಿಯ ನವಿರು ಮೂಡಿದ್ದು ಅಲ್ಲೇ. ಇಲ್ಲೂ ಒಂದು ಸರೋವರ ಕಾಣಿಸುತ್ತಲಿದೆ. ಇಲ್ಲೆಲ್ಲಾದರೊಂದು ಮುನಿ ವಸತಿ ಇರಬಹುದು. ಗುರುಕುಲ ನಡೆಸುತ್ತಿರುವ ಘನ ಸಾಧಕ ಋಷಿ ಇರಲೂಬಹುದು. ಹೋಗಿ ನೋಡಬೇಕು. ಇದ್ದರೆ ಇಲ್ಲೇ ಇದ್ದು ಬಿಡಬೇಕು. ಅವನಿಂದ ವೇದೋಪನಿಷತ್ತುಗಳನ್ನು ಅಧ್ಯಯನ ಮಾಡಬೇಕು. ಸ್ತ್ರೀಯರನ್ನು ಮಾನವರಂತೆ ಕಾಣಲು ಸಾಧ್ಯವಾಗುವ ಲೋಕಸೂತ್ರಗಳನ್ನು ರಚಿಸಬೇಕೆಂದು ಅಂಬೆ ಅಂದುಕೊಂಡಳು.

ಅವಳಿಗೆ ಇನ್ನೊಂದು ಯೋಚನೆ ಬಂತು. ಒಂದು ವೇಳೆ ನಾನು ಹಸ್ತಿನಾವತಿಗೆ ಹೋದರೇನಾಗುತ್ತದೆ? ಮತ್ತೆ ಭೀಷ್ಮರೆದುರು ನನ್ನ ಗೋಳಿನಕತೆ ತೆರೆದಿಡಬೇಕಾಗುತ್ತದೆ. ಅದರಿಂದ ಉಪಯೋಗವೇನಿಲ್ಲ. ಹೆಚ್ಚೆಂದರೆ ಭೀಷ್ಮರು ನನ್ನನ್ನು ವಿಚಿತ್ರವೀರ್ಯನ ಕೊರಳಿಗೆ ಕಟ್ಟುತ್ತಾರೆ. ಯಾರಿಟ್ಟರೋ ಅವನಿಗೆ ಆ ಹೆಸರನ್ನು? ನಿಲುವಿನಲ್ಲಾಗಲೀ, ನಡವಳಿಕೆಯಲ್ಲಾಗಲೀ ವೀರತ್ವದ ಲವಲೇಶವೂ ಕಾಣಸಿಗದವನ ಹೆಸರು ವಿಚಿತ್ರವೀರ್ಯ! ಆತನನ್ನು ಕಟ್ಟಿಕೊಂಡ ನನ್ನ ತಂಗಿಯರು ದೈಹಿಕವಾಗಿ ಸುಖವಾಗಿರುವುದಿಲ್ಲ. ದೈಹಿಕ ಸುಖ ಸಿಗದವರು ಮಾನಸಿಕವಾಗಿಯೂ ಸುಖಿಗಳಾಗಿರಲಾರರು. ಹಸ್ತಿನಾವತಿಯ ಅಂತಃಪುರದಲ್ಲಿರುವುದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳುವುದೇ ಶ್ರೇಯಸ್ಕರ.

ಸಂದರ್ಭದ ಶಿಶುವಾಗಿ ಭೀಷ್ಮರು ಕಡ್ಡಾಯವಾಗಿ ಬ್ರಹ್ಮಚಾರಿಗಳಾಗಬೇಕಾಗಿ ಬಂದುದನ್ನು ತಪ್ಪೆನ್ನುವಂತಿಲ್ಲ. ಆದರೆ ಅವರು ವಿಚಿತ್ರವೀರ್ಯನಿಗೆ ನನ್ನ ತಂಗಿಯಂದಿರನ್ನು ರಾಣಿಯರನ್ನಾಗಿ ಮಾಡಿದ್ದು ಅಕ್ಷಮ್ಯ ಅಪರಾಧ. ಪುಂಸ್ತ್ವವಿಲ್ಲದವನಿಗೆ ತಾರುಣ್ಯ ತುಂಬಿ ತುಳುಕುತ್ತಿರುವ ಎರಡು ಅನಾಘ್ರಾತ ಪುಷ್ಪಗಳನ್ನು ನಿರ್ದಯವಾಗಿ ಅರ್ಪಿಸಿಬಿಟ್ಟ ಭೀಷ್ಮರು ಅಧರ್ಮಿ. ಪ್ರತಿಷ್ಠೆಯ ಅಮಲು ತಲೆಗಡರಿ ಅವರು ವಿವೇಚನಾಶಕ್ತಿಯನ್ನೇ ಕಳಕೊಂಡಿದ್ದಾರೆ. ಬಲಗರ್ವಿತ ಭೀಷ್ಮರಿಗೊಂದು ಪಾಠ ಕಲಿಸಬೇಕು. ನೋಡೋಣ, ಅಂಬೆಗೂ ಒಂದು ಕಾಲ ಬಂದೀತು.

“ಸಾರಥೀ, ರಥ ನಿಲ್ಲಿಸು”. ಅಂಬೆಯ ಆಜ್ಞೆಗೆ ರಥ ನಿಂತಿತು. ಅಂಬೆ ರಥದಿಂದ ಕೆಳಗಿಳಿದಳು. ಮೈ ಮೇಲಿಂದ ಆರು ಚಿನ್ನದ ಬಳೆಗಳನ್ನು ಮತ್ತು ಮೂರು ಸ್ವರ್ಣ ಮಾಲೆಗಳನ್ನು ತೆಗೆದು ಪುರೋಹಿತ ದೇವೀ ಚರಣದಾಸನಿಗೆ ನೀಡಿದಳು: “ಪುರೋಹಿತರೇ, ಇವು ನಿಮ್ಮ ಮೂವರು ಹೆಣ್ಣು ಮಕ್ಕಳಿಗೆ. ಇದಕ್ಕಿಂತ ಹೆಚ್ಚಿನದನ್ನು ಈ ಪರಿಸ್ಥತಿಯಲ್ಲಿ ನನ್ನಿಂದ ನಿರೀಕ್ಷಿಸಬೇಡಿ.”

ಸಾರಥಿ ಅಂಬೆಯನ್ನೇ ನೋಡುತ್ತಿದ್ದ. ಅವಳ ಕೈಗಳಲ್ಲಿ ಇನ್ನು ಕೆಲವು ಚಿನ್ನದ ಬಳೆಗಳಿದ್ದವು. ಅವುಗಳಲ್ಲಿ ಮೂರನ್ನು ತೆಗೆದು ಸಾರಥಿಗೆ ನೀಡಿ ಹೇಳಿದಳು: “ಇವುಗಳಲ್ಲಿ ಎರಡು ನಿನಗೆ, ನಿನ್ನ ಕೆಲಸವನ್ನು ತಾಳ್ಮೆಯಿಂದ ನಿರ್ವಹಿಸಿದುದಕ್ಕೆ. ಒಂದನ್ನು ಆ ಭೀಷ್ಮಾಚಾರ್ಯರಿಗೆ ಕೊಡು. ಗೆದ್ದು ತಂದ ಕನ್ಯೆಯರನ್ನು ಅನ್ಯರಿಗೊಪ್ಪಿಸಿದ ಅವರ ಗಂಡುತನಕ್ಕಿದು ಉಡುಗೊರೆಯೆಂದು ಹೇಳಿಬಿಡು.”

ಸಾರಥಿಗೆ ಏನು ಹೇಳಬೇಕೆಂದೇ ತೋಚಲಿಲ್ಲ. ಪುರೋಹಿತನಿಗೆ ತಡೆಯಲಾಗಲಿಲ್ಲ. ದುಗುಡದ ದನಿಯಲ್ಲಿ ಅವನೆಂದ: “ರಾಜಕುಮಾರೀ, ಇದು ಅರಣ್ಯ ಪ್ರದೇಶ. ಇಲ್ಲಿ ಅಪಾಯಕಾರಿ ಕಾಡುಪ್ರಾಣಿಗಳಿರಬಹುದು. ನೀನು ಚಿನ್ನಾಭರಣಗಳನ್ನು ತೊಟ್ಟುಕೊಂಡಿರುವ ಸೌಂದರ್ಯವತಿ ಯುವತಿ. ಇಲ್ಲಿ ಜನ ವಾಸಿಸುತ್ತಿರಬಹುದು. ನಿನಗಿದು ತೀರಾ ಅಪರಿಚಿತ ಪ್ರದೇಶ. ಇಲ್ಲಿ ನಿನ್ನನ್ನು ಏಕಾಂಗಿನಿಯಾಗಿ ಬಿಟ್ಟುಹೋಗಲು ನನ್ನ ಮನಸ್ಸು ಒಪ್ಪುತ್ತಿಲ್ಲ. ದಯವಿಟ್ಟು ಹಸ್ತಿನಾವತಿಗೆ ಬಾ. ಅಲ್ಲಿ ನಿನ್ನ ಭವಿಷ್ಯವನ್ನು ನಿರ್ಧರಿಸಬಹುದು.”

ನಕಾರಾತ್ಮಕವಾಗಿ ಅಂಬೆ ತಲೆಯಾಡಿಸಿದಳು: “ಪುರೋಹಿತರೇ, ಕಾಡುಪ್ರಾಣಿಗಳು ವಿನಾಕಾರಣ ತೊಂದರೆ ಕೊಡಲು ಅವೇನು ಮನುಷ್ಯರೇ? ಈ ಅರಣ್ಯದ ಋಷಿಮುನಿಗಳು ಮತ್ತು ನಿವಾಸಿಗಳು ನನ್ನ ಆಭರಣ ದೋಚಲಾರರು. ಇವನ್ನೂ ನಿಮಗೇ ಕೊಟ್ಟು ಬಿಡಬಹುದಿತ್ತು. ಆದರೆ ನನ್ನಲ್ಲೊಂದು ಸಂಕಲ್ಪವಿದೆ. ಅದನ್ನು ಈಡೇರಿಸಲು ಇವುಗಳು ಬೇಕಾಗಬಹುದು. ನೀವು ನನ್ನ ಬಗ್ಗೆ ಚಿಂತಿಸುವ ಅಗತ್ಯವೇನಿಲ್ಲ. ನಿಶ್ಚಿಂತೆಯಿಂದ ಇನ್ನು ಹಸ್ತಿನಾವತಿಗೆ ತೆರಳಬಹುದು.”

ಪುರೋಹಿತ ದೇವೀಚರಣದಾಸನ ಆತಂಕ ದೂರವಾಗಲಿಲ್ಲ. ರಾಜಕುಮಾರೀ, ಅರಣ್ಯ ವಾಸಿಗಳೂ ಮನುಷ್ಯರೇ. ನಿನ್ನನ್ನು ನೋಡಿ ಚಿತ್ತ ಚಾಂಚಲ್ಯಕ್ಕೆ ತುತ್ತಾಗಿ ನಿನಗವರು ಅಪಾಯವುಂಟು ಮಾಡಬಹುದು. ಹೆಣ್ಣುಗಳಿಗೆ ರೂಪವೂ ಶತ್ರುವಾಗುವುದುಂಟು. ಹಸ್ತಿನಾವತಿಯ ಅರಮನೆಗೆ ಬರಲು ನಿನಗಿಷ್ಟವಿಲ್ಲದಿದ್ದರೆ ಬಿಡು. ಭೀಷ್ಮರಿಗೆ ಹೇಳಿ ಕಾಶಿಗೇ ನಿನ್ನನ್ನು ಕಳುಹಿಸುವ ವ್ಯವಸ್ಥೆ ಮಾಡಿಸುತ್ತೇನೆ. ದಯವಿಟ್ಟು ಬಾ.”

ಅಂಬೆ ದೃಢಸ್ವರದಲ್ಲೆಂದಳು: “ಪುರೋಹಿತರೇ, ಸ್ವಯಂವರ ಮಂಟಪದಿಂದ ಹಸ್ತಿನಾವತಿಗೆ ಬರುವಾಗ ಕಾಶಿಯ ಋಣ ತೀರಿತು ಎಂದುಕೊಂಡವಳು ನಾನು. ಸಾಲ್ವಭೂಪತಿ ನನ್ನನ್ನು ಸ್ವೀಕರಿಸುತ್ತಿದ್ದರೂ ಅಪ್ಪ ಸ್ವೀಕರಿಸುತ್ತಿರಲಿಲ್ಲ. ಈಗಲೂ ಸ್ವೀಕರಿಸಲಾರ. ಈ ಪರಿಸ್ಥತಿಯಲ್ಲಿ ಅಪ್ಪನೆದುರು ನಿಲ್ಲಲು ಕ್ಷತ್ರಿಯಾಣಿಯಾಗಿ ನನ್ನ ಮನಸ್ಸು ಒಪ್ಪುತ್ತಿಲ್ಲ. ಇಲ್ಲಿ ಸರೋವರವಿದೆ. ಮುನಿವಸತಿಯೋ, ಜನವಸತಿಯೋ ಇರಲೇಬೇಕು. ಇದ್ದರೆ ಮೃಗಗಳಿಂದ ಅಪಾಯ ಬರಲಾರದು. ಅಲ್ಲದೆ ಪುರೋಹಿತರೇ, ಮನುಷ್ಯರಿಗಿಂತ ಎಂದೆಂದಿಗೂ ಮೃಗಗಳೇ ಮೇಲು.”

ಪುರೋಹಿತ ದೇವೀಚರಣದಾಸನಿಗೆ ಈ ಮಾತು ನಾಟಿತು. ತಕ್ಷಣ ಅವನೆಂದ: “ನನ್ನನ್ನು ತಪ್ಪು ತಿಳಿಯಬೇಡವಮ್ಮಾ. ಎಷ್ಟು ವಿದ್ಯೆ ಇದ್ದರೇನು? ಪ್ರಭು ನೀಡಿದರೆ ನನ್ನಂಥವರಿಗುಂಟು. ಸಾಹಿತ್ಯ ಕೃತಿಗಳನ್ನು ಓದಿ ಆಸ್ವಾದಿಸುವ ಒಳ್ಳೆಯತನ ನಾಡನ್ನು ಆಳುವವರಿಗಿರುವುದಿಲ್ಲ. ನಮ್ಮಂಥವರು ರಚಿಸುವ ಕಾವ್ಯ, ನಾಟಕಗಳನ್ನು ಇತರ ವಿದ್ವಾಂಸರುಗಳು ಹೊಟ್ಟೆಕಿಚ್ಚಿನಿಂದ ವಾಚಾಮಗೋಚರ ಟೀಕಿಸಿ ಅದನ್ನು ವಿಮರ್ಶೆ ಎಂದುಬಿಡುತ್ತಾರೆ. ಶೂದ್ರರಿಗೆ ಓದು ಬರಹ ಬರುವುದಿಲ್ಲ. ಓದು ಬರಹ ಬರುವ ವರ್ಣಗಳಲ್ಲಿ ಹೆಚ್ಚಿನವರಿಗೆ ಕಾವ್ಯ, ನಾಟಕಗಳು ಅರ್ಥವಾಗುವುದಿಲ್ಲ. ಅವರಲ್ಲಿ ಸಾಹಿತ್ಯದ ಆಸಕ್ತಿಯವರು ಬಹಳ ಕಡಿಮೆ. ನಿಜ ಹೇಳಬೇಕೆಂದರೆ ಲೋಕದಲ್ಲಿ ಧನಕನಕವುಳ್ಳವರನ್ನು ಎಲ್ಲರೂ ಗೌರವಿಸುತ್ತಾರೆ. ಪಾಂಡಿತ್ಯಕ್ಕೆ ಬೆಲೆ ಕೊಡುವವರು ಯಾರೂ ಇಲ್ಲ.”

ವಿಷಾದದ ದನಿಯಲ್ಲಿ ಪುರೋಹಿತ ಮುಂದುವರಿಸಿದತ ಆಗ ನೀನು ಹೇಳಿದೆಯಲ್ಲಾ, ಮನುಷ್ಯರಿಗಿಂತ ಮೃಗಗಳು ಮೇಲು ಎಂದು. ಅದು ನಿಜವಮ್ಮಾ. ಮನುಷ್ಯರಿಗೆ ಉಪಕಾರ ಸ್ಮರಣೆಯೆಂಬುದಿರುವುದಿಲ್ಲ. ನಾನು ಅತ್ಯಂತ ಹೆಚ್ಚು ಮಾನಸಿಕ ವೇದನೆ ಅನುಭವಿಸಿದ್ದೇ ನನ್ನ ಶಿಷ್ಯವರ್ಗದಿಂದ. ಬಡ ವಿದ್ಯಾಕಾಂಕ್ಷಿಗಳಿಗೆ ನಾನು ನನ್ನ ಗಳಿಕೆಯ ಒಂದು ಭಾಗವನ್ನು ನೀಡಿ ಅವರನ್ನು ಗುರುಕುಲಗಳಲ್ಲಿ ಓದಿಸಿದ್ದುಂಟು. ನಾಟಕ, ಕಾವ್ಯಗಳ ಓದುಗರನ್ನು ಪ್ರೋತ್ಸಾಹಿಸಿ ಕವಿಗಳನ್ನಾಗಿ ಮಾಡಿದ್ದುಂಟು. ನೆಲೆ ಕಂಡುಕೊಂಡ ಮೇಲೆ ಅವರಿಗೆ ಗುರುಗಳ ನೆನಪಾಗಲಿಲ್ಲ. ಸಿರಿವಂತರಾದ ಮೇಲೂ ಗುರುಗಳ ಋಣವನ್ನು ತೀರಿಸಬೇಕೆಂದಾಗಲಿಲ್ಲ. ಅವರಿಂದ ನನ್ನ ಸಂಕಷ್ಟಗಳು ನಿವಾರಣೆಯಾಗುತ್ತವೆಂದು ನಾನವರನ್ನು ಪ್ರೋತ್ಸಾಹಿಸಿದ್ದಲ್ಲ. ಆದರೆ ದುರಂತ ನೋಡು. ನನ್ನ ಕಟುವಿಮರ್ಶಕರೆಲ್ಲಾ ಒಂದು ಕಾಲದ ನನ್ನ ಶಿಷ್ಯಂದಿರೇ. ಪ್ರತಿಫಲವಿಲ್ಲದೆ ದುಡಿಯಬೇಡ ಎಂಬುದು ಇಷ್ಟು ವರ್ಷಗಳ ನನ್ನ ಅನುಭವದಿಂದ ನಾನು ಕಲಿತ ಪಾಠ.”

ಪುರೋಹಿತ ಸಾಂತ್ವನದ ದನಿಯಲ್ಲಿ ಮುಂದುವರಿಸಿದ: “ಜೀವನದ ಸಂಧ್ಯಾಕಾಲದಲ್ಲಿರುವ ನಾನು ನಿನಗೊಂದು ಕಿವಿಮಾತನ್ನು ಹೇಳತ್ತಿದ್ದೇನೆ. ವ್ಯವಸ್ಥೆಯನ್ನು ಎದುರು ಹಾಕಿಕೊಂಡು ಗೆಲ್ಲಲು ಯಾರಿಂದಲೂ ಸಾಧ್ಯವಿಲ್ಲ. ನಿನ್ನನ್ನೇ ದೃಷ್ಟಾಂತವಾಗಿ ತೆಗೆದುಕೋ. ನಿನ್ನ ಹುಟ್ಟು, ಅಂತಸ್ತು, ರೂಪ, ಯೌವನ, ವಿದ್ಯೆ ಯಾವುದೂ ನಿನ್ನ ಸಹಾಯಕ್ಕೆ ಬರಲಿಲ್ಲ. ಈಗ ನಿನ್ನಲ್ಲಿ ಮೂಡಿರುವುದು ಪ್ರತೀಕಾರ ಭಾವ. ಪ್ರತೀಕಾರ ಭಾವವೇ ಮನುಕುಲದ ಇತಿಹಾಸವನ್ನು ರಕ್ತರಂಜಿತವನ್ನಾಗಿಸಿದ್ದು. ಒಬ್ಬಳು ಹೆಣ್ಣು ವ್ಯವಸ್ಥೆಗೆದುರಾಗಿ ಏನನ್ನು ಮಾಡಲು ಸಾಧ್ಯವೆಂಬುದನ್ನು ಯೋಚಿಸಿ ನೋಡು. ಹಸ್ತಿನಾವತಿಗೆ ಬಂದು ವಿಚಿತ್ರವೀರ್ಯನ ಮಡದಿಯಾಗು. ಈಗಲೂ ಹಸ್ತಿನಾವತಿಯ ಸಮ್ರಾಙ್ಞಿಯಾಗುವ ಅವಕಾಶ ನಿನಗಿದ್ದೇ ಇದೆ. ಆಚಾರ್ಯ ಭೀಷ್ಮರು ತಮ್ಮನಿಗಾಗಿ ತಪ್ಪು ಮಾಡಿರಬಹುದು. ಆದರೆ ಅವರು ನಿರ್ದಯಿಗಳಲ್ಲ. ನಿನ್ನ ಪ್ರೇಮಕ್ಕೆ ಗೌರವ ನೀಡಿ ಅವರು ನಿನ್ನನ್ನು ಸಾಲ್ವಭೂಪತಿಯಲ್ಲಿಗೆ ಕಳುಹಿಸಿದ್ದೇ ಅದಕ್ಕೆ ಸಾಕ್ಷಿ. ಕಾಶಿಯಿಂದ ನಿನ್ನನ್ನು ಕರೆತಂದವರು ಅವರು. ನಿನಗೊಂದು ಭದ್ರವಾದ ನೆಲೆಯನ್ನು ಕಲ್ಪಿಸಿಕೊಡಬೇಕಾದುದು ಅವರ ಧರ್ಮ. ಕೆಲಸಕ್ಕೆ ಬಾರದ ವಿಚಾರಗಳನ್ನು ನಿನ್ನ ಮನದಿಂದ ತೊಡೆದು ಹಾಕು. ನನ್ನೊಡನೆ ಹಸ್ತಿನಾವತಿಗೆ ಬಾ.”

ಹಸ್ತಿನಾವತಿಯ ಸಮ್ರಾಙ್ಞಿ! ಮನಸ್ಸಿಗೂ ದೇಹಕ್ಕೂ ಎಂದೆಂದೂ ಸುಖ ನೀಡಲು ಸಾಧ್ಯವಾಗದ ವಿಚಿತ್ರವೀರ್ಯನ ಕೈ ಹಿಡಿದರೆ ಸಿಗುವ ಪಟ್ಟವದು. ಲೋಕದಲ್ಲಿ ಗಂಡಿನ ಅಂತಸ್ತು ಮತ್ತು ಸಂಪತ್ತನ್ನು ನೋಡಿ ಮದುವೆಯಾಗುವವರಿದ್ದಾರೆ. ಅವರಿಗೆ ನಿಜವಾಗಿಯೂ ಸುಖ ಸಿಗುತ್ತದಾ? ಬಾಳಲ್ಲಿ ಸುಖ ಸಂತೃಪ್ತಿ ದೊರೆಯಬೇಕಾದರೆ ಪತಿಗೆ ದೈಹಿಕ ಆರೋಗ್ಯವಿರಬೇಕು. ಅವನು ಕಲೆ, ಸಾಹಿತ್ಯಗಳಲ್ಲಿ ಆಸಕ್ತಿಯಿರುವ ವಿನೋದ ಪ್ರಿಯ ರಸಿಕನಾಗಿರಬೇಕು. ಸಂತೃಪ್ತಿಯಿಲ್ಲದ ಧನಕನಕ ಅಂತಸ್ತುಗಳು ಯಾರಿಗೆ ಬೇಕು? ಪುರೋಹಿತದೇವೀ ಚರಣದಾಸನಿಗೆ ವಿಚಿತ್ರವೀರ್ಯನ ಸ್ಥತಿ ಗೊತ್ತಿಲ್ಲವೆಂದಲ್ಲ. ನನಗೆ ಬೇರಾವ ದಾರಿಯೂ ಇಲ್ಲವೆಂಬುದನ್ನು ಇವನು ಪರೋಕ್ಷವಾಗಿ ಸೂಚಿಸುತ್ತಿದ್ದಾನೆ. ವಿಚಿತ್ರವೀರ್ಯನಿಗೆ ಸ್ವಸಾಮಥ್ರ್ಯದಿಂದ ಹೆಂಡತಿಯೊಬ್ಬಳನ್ನು ಪಡೆಯಲಾಗಲಿಲ್ಲ. ಸ್ವಸಾಮಥ್ರ್ಯದಿಂದ ಹಸ್ತಿನಾವತಿಗೊಬ್ಬ ಉತ್ತರಾಧಿಕಾರಿಯನ್ನು ಕೊಡಲು ಖಂಡಿತಾ ಸಾಧ್ಯವಿಲ್ಲ. ಕುರುವಂಶ ಇಲ್ಲಿಗೇ ನಿಂತುಬಿಡುತ್ತದೆ?

ನಿರ್ಧಾರದ ದನಿಯಲ್ಲಿ ಅಂಬೆಯೆಂದಳು: “ಪುರೋಹಿತರೇ, ಹಸ್ತಿನಾವತಿಯ ಅಂತಃಪುರ ನನ್ನ ಪಾಲಿಗೆ ಕುಂಭೀಪಾಕ ನರಕವಾಗುವುದು ಬೇಡ. ನಿಮ್ಮೊಡನೆ ಹಸ್ತಿನಾವತಿಗೆ ಬರುವ ಮಾತೇ ಇಲ್ಲ. ನೀವು ಪ್ರತಿಫಲಕ್ಕಾಗಿ ಹಾತೊರೆದುದನ್ನು ತಪ್ಪೆಂದು ನಾನು ಹೇಳುವುದಿಲ್ಲ. ನಿಮ್ಮ ಸ್ಥಾನದಲ್ಲಿರುತ್ತಿದ್ದರೆ ನಾನೂ ಹಾಗೆಯೇ ವರ್ತಿಸುತ್ತಿದ್ದೆನೇನೊ? ಅದು ದೊಡ್ಡ ವಿಷಯವೇ ಅಲ್ಲ. ಆದರೆ ವಿಚಿತ್ರವೀರ್ಯನಿಂದ ಕುರುವಂಶ ಬೆಳೆಯಲು ಸಾಧ್ಯವಿದೆಯೆಂದು ನಿಮ್ಮಂಥವರು ಭಾವಿಸಲು ಸಾಧ್ಯವಿಲ್ಲವೆಂದುಕೊಂಡಿದ್ದೇನೆ. ಸಿಂಹಾಸನದ ರಕ್ಷಕನಾದ ಭೀಷ್ಮನ ಕಣ್ಣೆದುರೇ ಕುರುವಂಶ ಕೊನೆಯಾಗುತ್ತದೆಂದು ವಿಚಿತ್ರವೀರ್ಯನನ್ನು ನೋಡಿದಂದೇ ನನಗೆ ಮನವರಿಕೆಯಾಗಿದೆ. ನೀವೇನು ಹೇಳುತ್ತೀರಿ?”

ಪುರೋಹಿತ ದೇವೀಚರಣದಾಸ ಸಮ್ಮತಿಸೂಚಕವಾಗಿ ತಲೆಯಾಡಿಸಿದ. ಅಂಬೆ ಮುಂದು ವರಿಸಿದಳು: “ಪುರೋಹಿತರೇ, ನಿಮಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಒಮ್ಮೆಯಾದರೂ ಅವರ ಮನಸ್ಸುಗಳನ್ನು ಅರ್ಥ ಮಾಡಿಕೊಳ್ಳುವ ಗೋಜಿಗೆ ನೀವು ಹೋಗಿದ್ದೀರಾ? ಆರ್ಯಾ ವರ್ತದ ಹೆಣ್ಣುಗಳಿಗೆ ಸ್ವಾತಂತ್ರ್ಯ ಮತ್ತು ಸಮಾನತೆ ದೊರೆಯುವುದು ಯಾವಾಗ? ಘನ ವಿದ್ವಾಂಸರಾದ ನೀವು ಕೇವಲ ಹೊಟ್ಟೆಯ ಪಾಡನ್ನು ಮಾತ್ರ ಯೋಚಿಸಬಾರದು. ವಿದ್ಯಾವಂತರು ವಿಚಾರವಂತರಾಗಿ ಲೋಕಕ್ಕೆ ಬೆಳಕು ನೀಡಬೇಕು. ನಿಮ್ಮ ವಿದ್ಯೆಗೆ ಲೋಕರೂಢಿಯನ್ನು ಬದಲಾಯಿಸುವ ಶಕ್ತಿಯಿದೆ. ಹೆಣ್ಣಿಗೆ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ದೊರಕಿಸಿಕೊಡಬಲ್ಲ ಒಂದಷ್ಟು ಹೊಸ ಶ್ಲೋಕಗಳನ್ನು ರಚಿಸಿ ದಯವಿಟ್ಟು ಧರ್ಮಶಾಸ್ತ್ರಗಳಿಗೆ ಸೇರಿಸಿ. ಇದು ನೀವು ಅಂಬೆಯಂಥ ಅಸಹಾಯಕ ಹೆಣ್ಣು ಮಕ್ಕಳಿಗೆ ಮಾಡಬಹುದಾದ ಮಹದುಪಕಾರ. ದಯವಿಟ್ಟು ನಿಮ್ಮ ಪ್ರಯಾಣ ಮುಂದುವರಿಸಿ. ಕ್ಷತ್ರಿಯಾಣಿಯಾದ ನಾನು ನನ್ನ ರಕ್ಷಣೆಯನ್ನು ಮಾಡಿಕೊಳ್ಳಬಲ್ಲೆ.”
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹುಡುಗ – ಹುಡುಗಿ
Next post ಮಧುರ ನೀರವ ಚಿಂತನೆಗಳ ಅಧಿವೇಶನಕೆ

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…