Home / ಬಾಲ ಚಿಲುಮೆ / ಕಥೆ / ವಿಕಾಲನ ಕಥೆ

ವಿಕಾಲನ ಕಥೆ

ಒಂದಾನೊಂದು ಊರಿನಲ್ಲಿ ಭದ್ರಸೇನನೆಂಬ ರಾಜನಿದ್ದನು. ಅವನಿಗೆ ರತ್ನವತಿ ಎಂಬ ಲಕ್ಷಣವತಿಯಾದ ಮಗಳಿದ್ದಳು. ಅವಳಿಗೆ ಒಬ್ಬ ರಾಕ್ಷಸನು ಹಿಡಿದಿದ್ದನು. ಆದರೆ ಅವಳು ರಕ್ಷಾ ಯಂತ್ರವನ್ನು ಕಟ್ಟಿಕೊಂಡಿದ್ದಳು. ಅದರಿಂದ ಅವಳನ್ನು ಹೊತ್ತು ಕೊಂಡು ಹೋಗಲು ಆಗಲಿಲ್ಲ.
ಒಂದು ದಿನ ನಡುರಾತ್ರಿಯಲ್ಲಿ ರಾಕ್ಷಸನು ಅಂತಃಪುರದ ಮೂಲೆಯಲ್ಲಿ ನಿಂತಿದ್ದನು. ಆ ರಾಕ್ಷಸನನ್ನು ರಾಜಪುತ್ರಿಯು ಸಖಿಗೆ ತೋರಿಸಿ “ಇದೇ ಈ ವಿಕಾಲ ಸಮಯದಲ್ಲಿ ನನ್ನನು ಗೋಳು ಹೊಯ್ದುಕೊಳ್ಳುವ ರಾಕ್ಷಸ. ಇದನ್ನು ತಪ್ಪಿಸಲು ಏನಾದರೂ ಮಾರ್ಗವನ್ನು ಹುಡುಕು” ಎಂದಳು.
ವಿಕಾಲಸಮಯ ಎಂದರೆ ಹೊತ್ತಲ್ಲದ ಹೊತ್ತು. ಅದನ್ನು ರಾಕ್ಷಸನು ವಿಕಾಲನು ಬರುವ ಸಮಯ ಎಂದುಕೊಂಡು, “ಆಃ ವಿಕಾಲನೆಂಬ ಇನ್ನೊಬ್ಬನೂ ಇವಳನ್ನು ಹಿಡಿದಿರಬೇಕು. ಅವನಿಗೂ ನನ್ನಂತೆಯೇ ಇವಳನ್ನು ಹೊತ್ತುಕೊಂಡು ಹೋಗಲು ಅಸಾಧ್ಯವಾಗಿದೆ. ಇರಲಿ. ಆ ವಿಕಾಲನು ಯಾರೋ ನೋಡೋಣ” ಎಂದು ಕುದುರೆಯಾಗಿ ಲಾಯದಲ್ಲಿ ನಿಂತನು.
ಆ ವೇಳೆಗೆ ಒಬ್ಬ ಕುದುರೆ ಕಳ್ಳನು ಲಾಯದೊಳಕ್ಕೆ ನುಗ್ಗಿ ಬಂದು ದೀಪವನ್ನು ಆರಿಸಿ ಕುದುರೆ ಕುದುರೆಯನ್ನು ಮುಟ್ಟಿ ನೋಡುತ್ತ ಬಂದನು. ರಾಕ್ಷಸ ಕುದುರೆಯು ಮಿಕ್ಕ ಕುದುರೆಗಳಿಗಿಂತ ಚೆನ್ನಾಗಿತ್ತು. ಅದರಿಂದ ಅವನು ಅದಕ್ಕೆ ಕಡಿವಾಣ, ಹಲ್ಲಣಗಳನ್ನು ಹಾಕಿ, ಅದರ ಮೇಲೆ ಕುಳಿತು ಓಡಿಸಿಕೊಂಡು ಹೋದನು. ರಾಕ್ಷಸನೂ “ಇವನೇ ವಿಕಾಲ ನಿರಬೇಕು. ಎಲ್ಲ ಕುದುರೆಗಳನ್ನೂ ಬಿಟ್ಟು ನನ್ನನ್ನೇ ಹಿಡಿದಿದ್ದಾನೆ. ಬಂತು ನನಗೆ ಮೃತ್ಯು. ಇನ್ನು ನಾನು ಬದುಕುವಂತಿಲ್ಲ” ಎಂದು ಹೆದರಿ ನಾಗಾಲೋಟ ಓಡಿತು.
ಹೊಡೆದರೂ, ಮುಳ್ಳು ಚುಚ್ಚಿದರೂ, ಕಡಿವಾಣ ಎಳೆದರೂ ನಿಲ್ಲದೆ ಓಡುತ್ತಿರುವ ಕುದುರೆಯನ್ನು ನೋಡಿ, “ನಿಜವಾಗಿಯೂ ಇದಕ್ಕೆಲ್ಲೋ ದೆವ್ವ ಹಿಡಿದಿದೆ. ಇದನ್ನು ಹಿಡಿಯುವುದು ಸಾಧ್ಯವಿಲ್ಲ ಇದೆಲ್ಲಾದರೂ ನನ್ನನ್ನು ಹೊತ್ತುಕೊಂಡು ಹೋಗಿ ಕೊಲ್ಲುವುದು  ತಪ್ಪಿಸಿಕೊಳ್ಳಬೇಕು?” ಎಂದು ಆ ಕಳ್ಳನು ಯೋಚಿಸಿಕೊಂಡು, ಬೆಳಗಾಗುವ ವೇಳೆಗೆ ದಾರಿಯಲ್ಲಿ ಸಿಕ್ಕಿದ ಒಂದು ಆಲದ ಮರವನ್ನು ಹತ್ತಿಕೊಂಡನು.
ಆ ಮರದಲ್ಲಿ ಆ ರಾಕ್ಷಸನಿಗೆ ಪರಮ ಸ್ನೇಹಿತನಾದ ಒಂದು ಕಪಿ ಇತ್ತು. ಅದು ಓಡುತ್ತಿದ್ದ ರಾಕ್ಷಸನನ್ನು ನಿಲ್ಲಿಸಿ “ಏನು?” ಎಂದು ಕೇಳಿತು. ರಾಕ್ಷಸನು ವಿಕಾಲನ ಕಥೆಯನ್ನು ಹೇಳಲು, “ನಿನ್ನ ವಿಕಾಲನು ಈ ಮರದಲ್ಲಿದ್ದಾನೆ. ನೋಡು. ಅವನು ಮನುಷ್ಯ ನಿನ್ನ ಆಹಾರ” ಎಂದಿತು. ಅದನ್ನು ಕಳ್ಳನು ಕೇಳಿ ಕಪಿಯ ಮೇಲೆ ಕೋಪಮಾಡಿಕೊಂಡು, ಅದರ ಬಾಲವನ್ನು ಹಿಡಿದು ಚೆನ್ನಾಗಿ ಕಚ್ಚಿ ಬಿಟ್ಟನು. ಕಪಿಯು ಕೊಂಬೆಗಳ ನಡುವೆ ಕುಳಿತಿತ್ತು. ಅದು ಅತ್ತ ಇತ್ತ ತಿರುಗುವಂತೆ ಇಲ್ಲ. ಆ ನೋವೋ ಸಹಿಸಲಾರದಷ್ಟು. ಆಗ, ಅದು ನೋವಿನಿಂದ ಮುಸುಡಿ ಸೊಟ್ಟ ಮಾಡಿಕೊಂಡು ಅಯ್ಯೋ ಎಂದು ಕೂಗಿ ಕೊಂಡಿತು.
ರಾಕ್ಷಸನು ಆ ಕೂಗನ್ನೂ ಅದರ ಮುಸುಡನ್ನೂ ನೋಡಿ. “ನೋಡಿದೆಯಾ ವಿಕಾಲನ ಮಹಿಮೆ? ನನಗೆ ಬೇಡ ಈ ಸಹವಾಸ” ಎಂದು ಕಾಲಿಗೆ ಬುದ್ದಿ ಹೇಳಿದನು.
ಅದರಿಂದ ಹೇಳಿದೆ, “ಓಡಿಗೆದ್ದವ ಬದುಕಿದ” ಎಂದು. ಅದರಿಂದ ನನಗೆ ಅಪ್ಪಣೆಯನ್ನು, ಕೊಡು. ನಾನು ಮನೆಗೆ ಹೋಗುವೆನು. ನಿನ್ನ ಲೋಭದ ಫಲವನ್ನು ನೀನು ಅನುಭವಿಸು” ಎಂದನು.
ಚಕ್ರಧರನು “ಸತ್ಯ. ಆದದ್ದಾಯಿತು. ಹೋಗಿ ಬಾ. ನೀನೆಲ್ಲಾದರೂ ಚೆನ್ನಾಗಿರು.” ಎಂದು ಆಶೀರ್ವಾದ ಮಾಡಿ ಕಳುಹಿಸಿ ಕೊಟ್ಟನು.
ಇಂತಿದು ಹೊಸಗನ್ನಡ ಪಂಚತಂತ್ರದಲ್ಲಿ
“ನೋಡದೆ ಮಾಡಿದರೆ” ಎಂಬ
ಎರಡನೆಯ ತಂತ್ರವು ಮುಗಿದುದು
*****
Tagged:

Leave a Reply

Your email address will not be published. Required fields are marked *

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...