ಬಾನೊಳಗಾಯಿತು ಮುಗಿಲು
ಸೊಕ್ಕುಳಿದಡಗಿತು ಬಿಸಿಲು
ಈ ನೋಟಕದೇಂ ಮಿಗಿಲು
ಸ್ಕಿತಿಗೇಕಯಿ ಈ ದಿಗಿಲು?
ಗೂಡೆಡೆ ಹಾರಿತು ಹಕ್ಕಿ
ಆವೋಡಿತು ದೌಡಿಕ್ಕಿ
ತರು ಮೊರೆಯಿತು ಶರಣಿಕ್ಕಿ
ಜನ ಕಕ್ಕಾವಿಕ್ಕಿ!
ದೆಸೆಗುಬ್ಬಸವೀ ಸದ್ದು
ಏನೆ ಗುಡುಗಲು ಗುಡುಗೆದ್ದು,
ಬರಲು ಪರಾಕನು ಹೇಳಿ
ವೈತಾಳಿಕ ಭೋರ‍್ಗಾಳಿ,
ಮಿಂಚಿನ ಕತ್ತಿಯ ವರಸೆ
ಆಟೋಪವ ಬಲು ಮೆರಸೆ
ಬಂದನಿಗೋ ಮಳೆರಾಯ
ಕಾರೊಡಲತಿಕಾಯ!
ಬ್ರಹ್ಮಾಂಡವೆ ಬಿರಿದವೊಲು
ಹೊಳೆದಪ್ಪಳಿಸಿತು ಸಿಡಿಲು,
ಬಾಂದಳವೇ ಕಳಚಿದೊಲು
ಜಲಕಾಯಿತು ನೆಲಮುಗಿಲು,
ಮನೆ-“ನೋವನ ತೆಪ್ಪ”ದೊಳು
ಜನ ಹದುಗಿತು ಭೀತಿಯೊಳು,
ಜಂಝಾನಿಲ ವೈಹಾಳಿ
ಮುಗಿಲಿಟ್ಟಿತು ದಾಳಿ.
ಇಂತೈತರೆ ಕಾರ‍್ಮುಗಿಲು,
ಸೊಕ್ಕುಡುಗಲು ಡಗೆಯಳಲು,
ಈ ಹದುಳಕದೇಂ ಮಿಗಿಲು
ಸ್ಥಿತಿಗೇಕಯಿ ಈ ದಿಗಿಲು!
ಮಂಗಳಕೇಕೀ ವೇಷ
ಈ ತೆರ ವಿಷಮವಿಲಾಸ,
ಶಿವಕೇಕೀ ದುಮ್ಮಾನ?
ಇದು ಯಾವ ಸುಮಾನ!
*****








