(ಗೋ. ಕೃ. ಅವರಿಗೆ)
ಎದುರು ಬಾನ ತೀರದಲ್ಲಿ
ರಾಶಿ ರಾಶಿ ಹೊನ್ನ ಚೆಲ್ಲಿ
ಸರಿಯುತಿಹಳು ಸಂಜೆ, ಕೆಳೆಯ,
ಸ್ವರ‍್ಣಲುಬ್ಧವಾಗಿ, ಎಲೆಯ
ಕೈಗಳಿಂದ ಬೊಗಸೆಯಾಯ್ದು
ಹಳುವಿಹುದಿಕೊ ಹುಯಿಲಗಯ್ದು.
ಇದನು ಕಂಡು ಕೊಂಕು ಚಂದ್ರ
ನಗುತಿಹನದೊ ಮುಗಿಲಿನಿಂದ,
ಕೊನೆ ಆರಿಕೆ ನಾಣ್ಯದಂತೆ
ಸ್ವರ‍್ಣಲೇಖೆ ಅಳಿಯಿತು.
ತಣಿವರಿಯದ ತೃಷ್ಣೆಯಂತೆ
ಬನವ ಕತ್ತಲಡಸಿತು.
ಕದಡುನೀರು ತಿಳಿವ ತೆರದಿ
ನೀಲವಾಯ್ತು ಬಾನ ಶರಧಿ.
ತಲದಿ ಹೊಳೆವ ಶುಕ್ತಿಯಂತೆ
ಕಾಣಬಹವು ಚುಕ್ಕಿ ಸಂತೆ.
ಮೆಲುಮೆಲ್ಲನೆ ಬೆಳಕ ಹೀರಿ
ಇಳಿವಳಿರುಳು ತಿರೆಯ ಸಾರಿ;
ಸ್ತಬ್ಧವಾಗುತಿಹುದು ಸೃಷ್ಟಿ,
ದಿವಕಾಯಿತು ದಿವ್ಯದೃಷ್ಟಿ.
ಒಲಿದವರೀ ಉಪವನದೊಳು
ಪ್ರಕೃತಿಪುರುಷರಂದದಿ
ತಮ್ಮನರಿಯೆ ಜಗವ ಮರೆಯೆ
ನೆರೆವರೇಕಾಂತದಿ.
ದಿಟವಾಗಿಯು ಚೆಲುವು ತಾಣ
ಈ ಪ್ರಶಾಂತ ಕ್ರೀಡಾವನ.
ಹಲಸೂರಿನ ಕೆರೆಗೆ ನೆರವು
ಮುಗಿಲೆ ಎನ್ನೆ ನೀರ ಹರವು.
ಮೇಲು ಕಳಗು ನಿರಾಧಾರ-
ವೆನೆ ಬಿಂಬಿಪ ಸರಸ್ತೀರ.
ಶಿವನ ಡಮರುವಂತೆ ತರುವು
ನೆಳಲಿನೊಡನೆ ಬೆರೆವ ಚೆಲುವು.
ಕುಡಿವರಿಯುವ ಕಲ್ಪಲತೆಯ
ಹೋಲ್ವ ದೀಪವಲ್ಲರಿ
ಕೆಳಗೆ ತೇಲ್ವ ಅರಿಲ ಹೂವ
ನಂದನಕಾಯ್ತಚ್ಚರಿ.
ಅಕ್ಕೊ ಆ ಹಿರಿಯ ಮರದ
ಮುಡಿಯ ಮೇಲೆ ಬೆಳ್ಳಿಯಿಹುದ!
ಕಡಲ ನಡುವೆ ನಿಂತ ಮಹಾ-
ಫಣಿಯ ಮಣಿಯ ತೆರದೊಳಹಾ!
ವಿಸ್ಮಯಕರವೀ ದರ‍್ಶನ.
ಮಲಗಿಹನೋ ಮಧುಸೂದನ
ವನದ ಶ್ಯಾಮಗರ‍್ಭದಲ್ಲಿ
ಹೊಂಗನಸಿನ ಪ್ರಭೆಯ ಚೆಲ್ಲಿ
ತನ್ನ ಸುತ್ತ-ನಿದ್ರೆಯಾಚೆ
ಆದಿಶೇಷ ತಲ್ಪದೊಳ್
ದೆಸೆಯಾಚೆಗೆ ಲಯಕೆ ಸಂದ
ತಿರೆಯ ಸೃಷ್ಟಿಕಲ್ಪದೊಳ್?
ದಿಟ, ಸುಂದರವೀ ಉಪವನ.
ನೀನೊಲಿದಂತೆನ್ನಯ ಮನ
ತೃಪ್ತವಾಯ್ತು ಚೆಲುವ ಹೀರಿ
ನನಸಿನ ತೆರೆ ಮರೆಗೆ ಜಾರಿ.
ಆತ್ಮವಂತರಿಲ್ಲಿ, ದಿಟವು,
ಆತ್ಮ ಮಗ್ನರಾಗಲಳವು;
ಈ ತಾಣಕೆ ಬಹ ವಿದಗ್ಧ
ಆಗಬಹುದು ಭಾವಮುಗ್ಧ;
ಒಲಿದ ಮಂದಿ ತಮ್ಮ ಕನಸ
ಇಲ್ಲಿ ಮಾಡಬಹುದು ನನಸ;
ಜಲದೆದೆಯೊಳು ಸೃಷ್ಟಿ ಇಲ್ಲಿ
ಸ್ನಿಗ್ಧವಪ್ಪ ತೆರದೊಳು
ಕವನವೊಂದು ಮೂಡಬಹುದು
ಇಲ್ಲಿ ಕವಿಯ ಬಗೆಯೊಳು.
*****








