“ಮಳೆ ಮಳೆ ಎಂದು ರೈತರು
ಆಕಾಶದೆಡೆಗೆ ನೋಡುವಂತೆ
ಇಲ್ಲಿಯೆ ಅರಬರು
ಪೆಟ್ರೋಲ್ ಪೆಟ್ರೋಲ್ ಎಂದು
ಮರುಭೂಮಿ ಆಳ ನೋಡುತ್ತಾರೆ”
ರೈತನಿಗೆ ನಲದಾಳ ಸಂಬಂಧವಿಲ್ಲ
ಅರಬನಿಗೆ ಆಕಾಶದಾಳಗೊತ್ತಿಲ್ಲ
ನಮ್ಮ ರೈತ ದೋ ದೋ ದುಮ್ಮಿಕ್ಕುವ
ಮಳೆಗೆ ಹಣ ಕೊಡಬೇಕಿಲ್ಲ;
ಇಲ್ಲಿ ನೆಲದೊಡಲಾಳದೊಳಗಿರುವ ಚಿಮ್ಮುವ
ಪೆಟ್ರೋಲಿಗೆ ಹಣ ಕೊಡಬೇಕಿಲ್ಲ
ರೈತ ತೊನೆದಾಡುವ
ತೆನೆ, ಪೈರು, ಹಣ್ಣು ಕಂಡಂತೆ
ಅರಬ ತೆರ ತೆರನಾದ
ಪೆಟ್ರೋ ಪರ್‌ಫ್ಯೂಮ್‌, ಪ್ಲಾಸ್ಟಿಕ್ ಕಾಣುವನು.
ಸುಂಯ್‌ ಗುಡುವ ಬಿಸಿಗಾಳಿಯ
ಬಿಸಿಲ್ಗುದುರೆ ಏರಿ ಹೊರಟ ಅರಬ
ಅಬ್ಬರದ ಬಿರುಗಾಳಿಯನ್ನೇ ಅಟ್ಟಿಸಿಕೊಂಡು ಬರುವ
ಮಳೆಯೊಳಗೆ ನೆನೆಯುವ ರೈತ
ಓಯಸಿಸ್ಸಿಗೆ ಬಾಯ್ಬಿಡುವ ಜನ
ಶ್ರಾವಣದ ಮಳೆ, ತಂಪು ಇಂಪು
ಹೊಳೆ, ಹಳ್ಳ, ಝರಿ, ಕೆರೆಗುಡ್ಡ
ಕೊಳ್ಳ, ಬೆಟ್ಟ, ನೋಡಿದರೆ
ಧಿಮಾಕಿನ ಪಟ್ರೋಡಾಲರ್‌ಗಳೆಲ್ಲ
ಮೆತ್ತಗಾಗುತ್ತವೆ
*****

ಪುಸ್ತಕ: ಗಾಂಜಾ ಡಾಲಿ

ಲತಾ ಗುತ್ತಿ
Latest posts by ಲತಾ ಗುತ್ತಿ (see all)