ಈ ಜಗತ್ತಿನಲ್ಲಿ ಅಸಂಖ್ಯ ಜೀವಕೋಶಗಳಿವೆ. ಪ್ರಾಣಿ, ಪಕ್ಷಿ ಕೀಟ, ಉರುಗಜಾತಿಯ ಕಸೇರಕುಗಳು, ಈ ಭೂಮಿಯ ಮೇಲೆ ಹುಟ್ಟಿ ವರ್ಣವೈವಿಧ್ಯಮಯವಾಗಿ ಬದುಕುತ್ತಿವೆ. ಈ ಎಲ್ಲ ಜೀವಿಗಳಲ್ಲಿ ಅರಿವು ಹೊಂದಿದ, ಪಂಚೇಂದ್ರಿಯಗಳ ಸಾಕ್ಷಿಯುಳ್ಳ ಮಾನವನ ಉಗಮವು ೨ ದಶಲಕ್ಷ ವರ್ಷಗಳ ಹಿಂದೆ ಆಯಿತು ಮತ್ತು ಆಫ್ರಿಕಾ ಖಂಡವೇ ಈ ಮಾನವ ಜೀವಿಯ ಜನನ ಸ್ಥಳವಾಯಿತು! ಸುಮಾರು ೨೦೦೦ ದಶಲಕ್ಷ ವರ್ಷಗಳ ಹಿಂದೆ ಸಮುದ್ರದಲ್ಲಿ “ಸಣ್ಣ ಬ್ಯಾಕ್ಟೀರಿಯಾಗಳು ಕಾಣಿಸಿಕೊಂಡವು. ಇದೇ ಭೂಮಿಯ ಮೇಲೆ ಕಾಣಿಸಿಕೊಂಡು “ಪ್ರಥಮ ಜೀವಿಗಳು” ಎಂದು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

ಕಾಲಾನುಕ್ರಮದಲ್ಲಿ ನೆಲದಮೇಲೆ ಸಸ್ಯಗಳು, ಪಾಚಿಗಳೂ, ನೀರಿನಲ್ಲಿ ಹುಳುಗಳೂ ಮತ್ತು ಅಂಬಲಿ ಮೀನಿನಂತಹ ಜೀವಿಗಳೂ ಕಂಡು ಬಂದವು. ಸಸ್ಯಗಳು ಆಮ್ಲಜನಕವನ್ನು ಬಿಡುಗಡೆ ಮಾಡುವುದರ ಮೂಲಕ “ಓಜೋನ್” ಪದರ ರಚನೆಯಾಯಿತು. ಈ ಪದರವು ಸೂರ್ಯನಿಂದ ಹೊರಹೊಮ್ಮಿದ ಅಪಾಯಕಾರಿ ಕಿರಣಗಳನ್ನು ಭೂಮಿಗೆ ತಲುಪದಂತೆ ತಡೆಯುವುದರ ಮೂಲಕ ಜೀವಿಗಳ ಏಳಿಗೆಗೆ ಅನುವು ಮಾಡಿಕೊಟ್ಟಿತು. ಸುಮಾರು ೪೫೦ ದಶಲಕ್ಷ ವರ್ಷಗಳ ಹಿಂದೆ ಜಲಾಂತರಾಳದಲ್ಲಿ ಚಿಪ್ಪನ್ನು ಹೊಂದಿದ “ಟ್ರೈಲೋಬೈಟ್ಸ್‌” ಎಂಬ ಪ್ರಾಣಿಗಳು ಹುಟ್ಟಿಕೊಂಡವು. ಮತ್ತೆ ದಶಲಕ್ಷ ವರ್ಷಗಳ ಹಿಂದೆ ನೀರಿನಲ್ಲಿ ಜೀವಿಗಳು ಅಭಿವೃದ್ಧಿ ಹೊಂದಿದವು. ಇದೇ ವೇಳೆ ನೀರಿನಲ್ಲಿ ಪ್ರಥಮ ಮೀನುಗಳು ಮತ್ತು ನೆಲದ ಮೇಲೆ ‘ಕುಕ್ ಸೋನಿಯಾ’ ಎಂಬ ನಿಜವಾದ ಅಧಿಕೃತ ಸಸ್ಯಗಳು ಹುಟ್ಟಿಕೊಂಡವು.

ಸುಮಾರು ೧೫೦ ದಶಲಕ್ಷ ವರ್ಷಗಳ ಹಿಂದೆ ಭೂಮಿಯ ಮೇಲೆ ‘ಡೈನೋಸಾರ್’ಗಳು ಕಾಣಿಸಿಕೊಂಡವು. ಈ ಪ್ರಾಣಿಗಳು ವಿವಿಧ ರೀತಿಯ ಸರಿಸೃಪಗಳನ್ನು ಮತ್ತು ಹಾರಬಲ್ಲ ಸಾಮರ್ಥ್ಯವನ್ನು ಹೊಂದಿದ ‘ಟೇರೊಸಾಸರ್’ಗಳನ್ನು ಒಳಗೊಂಡಿದ್ದವು. ಹೆಚ್ಚಿನ ಡೈನೋಸಾಗಳು ಬೃಹದಾಕಾರದ ದೇಹದೊಂದಿಗೆ ಹಾವಿನಂತಹ ತೆಳುವಾದ ಕತ್ತು ಸಣ್ಣ ತಲೆಗಳನ್ನು ಹೊಂದಲಾರಂಭಿಸಿದವು ಸುಮಾರು ೬೫ ದಶಲಕ್ಷವರ್ಷಗಳ ಹಿಂದೆ ‘ಡೈನೋಸಾರ್’ ಅವನತಿ ಹೊಂದುವರೆಗೂ ಭೂಮಿಯ ಮೇಲೆ ಪ್ರಾಣಿ ಮತ್ತು ಸಸ್ಯವರ್ಗಗಳೆರಡಲ್ಲೂ ಈ ಜೀವಿಗಳು ವಿಕಾಸ ಹೊಂದಿದವು. ಹೀಗೆ ಭೂಮಿಯ ಮೇಲೆ ಜೀವಿಗಳ ಜೀವವಿಕಾಸವಾದ
ಚರಿತ್ರೆ ವಿಜ್ಞಾನ ಜಗತ್ತಿನಲ್ಲಿ ಮೂಡಿಬಂದಿದೆ.
*****

ಪುಸ್ತಕ: ವಿಜ್ಞಾನದ ವಿಸ್ಮಯ ಶೋಧಗಳು