ಇಳಾ – ೬

ಇಳಾ – ೬

ಚಿತ್ರ: ರೂಬೆನ್ ಲಗಾಡಾನ್

ಗಿಡಗಳಿಗೆ ಗೊಬ್ಬರ ಕೊಡಬೇಕಾಗಿರುವುದರಿಂದ ಗೊಬ್ಬರದ ವ್ಯವಸ್ಥೆ ಮಾಡಬೇಕಿತ್ತು. ಗೊಬ್ಬರ ಬೇರೆ ಸರಿಯಾಗಿ ಸಿಗದೆ ಗಲಾಟೆಯಾಗುತ್ತಿತ್ತು. ಈ ಗೊಬ್ಬರಕ್ಕಾಗಿ ರೈತರೆಲ್ಲ ದಿನವಿಡೀ ಸರತಿ ನಿಂತು ಅಷ್ಟೋ ಇಷ್ಟೋ ಗೊಬ್ಬರಪಡೆಯಬೇಕಿತ್ತು. ಈ ಗೊಬ್ಬರ ರಾಕ್ಷಸನ ಹೊಟ್ಟೆಗೆ ಅರೆಕಾಸು ಮಜ್ಜಿಗೆಯಂತಾಗುತ್ತಿತ್ತು. ಆದರೂ ರೈತರು ಛಲಬಿಡದ ತ್ರಿವಿಕ್ರಮನಂತೆ ಪ್ರತಿದಿನ ಮನೆಮಂದಿಯನ್ನೆಲ್ಲ ಸರತಿ ನಿಲ್ಲಿಸಿ ಗೊಬ್ಬರ ಪಡೆಯುತ್ತಿದ್ದರು. ಈ ಗೊಬ್ಬರಕ್ಕಾಗಿಯೆ ಹಾಹಾಕಾರ, ಮುಷ್ಕರ, ಹೊಡೆದಾಟ ಬಡಿದಾಟವೇ ನಡೆದುಹೋಗುತ್ತಿತ್ತು. ಹಾಗೆ ಗೊಬ್ಬರಕ್ಕಾಗಿ ಹೋರಾಡಿ ಪೊಲೀಸರ ಗುಂಡಿಗೆ ರೈತರು ಬಲಿಯಾದುದನ್ನು ಪದೇ ಪದೇ ಟಿವಿಗಳಲ್ಲಿ ತೋರಿಸುತ್ತಿದ್ದಾಗ ಇಳಾಗೆ ಆ ರೈತರ ಬಗ್ಗೆ ಅನುಕಂಪ, ಪರಿಸ್ಥಿತಿಯ ಬಗ್ಗೆ ಜಿಗುಪ್ಸೆ ಬಂದುಬಿಟ್ಟಿತು. ಈ ಗೊಬ್ಬರಕ್ಕಾಗಿ ಇಷ್ಟೆಲ್ಲ ಕಷ್ಟಪಟ್ಟು ಕೊನೆಗೆ ಪ್ರಾಣವನ್ನು ಬಲಿಕೊಡಬೇಕಾ ಎಂದು ಚಿಂತಿಸಿದಳು. ತಮ್ಮ ತೋಟಕ್ಕೂ ಈ ಗೊಬ್ಬರದ ಅವಶ್ಯಕತೆ ಇದೆ. ಈ ಗೊಬ್ಬರವಿಲ್ಲದೆ ಬದುಕಲಾರೆವು ಎಂಬ ಮನಃಸ್ಥಿತಿಗೆ ರೈತರು ತಲುಪಿರುವುದು ಎಂತಹ ಶೋಚನೀಯ ಎಂದುಕೊಂಡಳು. ತಾನು ಓದು ನಿಲ್ಲಿಸಿ ತೋಟದ ಕೆಲಸ ಮಾಡಬೇಕೆಂದು ನಿರ್ಧರಿಸಿದಾಗಲೇ ಕೃಷಿಗೆ ಸಂಬಂಧಪಟ್ಟ ಹಲವಾರು ಪುಸ್ತಕಗಳನ್ನು ಮೈಸೂರಿನಿಂದ ಬರುವಾಗಲೇ ಕೊಂಡು ತಂದಿದ್ದಳು. ಪ್ರತಿದಿನ ಅದನ್ನು ಪರೀಕ್ಷೆಗೆ ಓದುವಂತೆ ಓದುತ್ತಿದ್ದಳು. ರೇಡಿಯೋದಲ್ಲಿ ಬರುವ ಕೃಷಿ ಕಾರ್ಯಕ್ರಮವನ್ನು ತಪ್ಪದೆ ಕೇಳುತ್ತಿದ್ದಳು. ಪತ್ರಿಕೆಗಳಲ್ಲಿ ಬರುತ್ತಿದ್ದ ಕೃಷಿ ವಿಭಾಗದ ವಿಚಾರಗಳನ್ನು ಗಮನವಿಟ್ಟು ಓದಿ, ಒಂದಿಷ್ಟು ವಿಚಾರಗಳು ಅವರಿಗೆ ತಿಳಿಯುತ್ತಿತ್ತು. ರಾಸಾಯನಿಕ ಗೊಬ್ಬರಗಳಿಂದ ಭೂಮಿ ದಿನೇ ದಿನೇ ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದ್ದು, ಅದು ನೀಡುತ್ತಿರುವ ಫಲಗಳಲ್ಲೂ ಮೊದಲಿದ್ದ ಸತ್ವ ಇಲ್ಲವೆಂದು ಸದಾ ಪರಿಸರವಾದಿಗಳು ಹೇಳುತ್ತಿರುವುದು ಇಳಾಗೂ ಸರಿ ಎನಿಸತೊಡಗಿತು.

ಈ ಮಧ್ಯೆ ತೀರ್ಥಹಳ್ಳಿ ಸಮೀಪ ಇರುವ ಒಂದು ಕೃಷಿ ತರಬೇತಿ ಕೇಂದ್ರದ ಬಗ್ಗೆ ರೇಡಿಯೋದಿಂದ ತಿಳಿದು ಅಲ್ಲಿ ನೋಡಿಬರುವ ಕುತೂಹಲದಿಂದ ಹೋಗಿದ್ದಳು. ತೀರ್ಥಹಳ್ಳಿ ಸಮೀಪವಿರುವ ಅದೊಂದು ಪುಟ್ಟ ಹಳ್ಳಿ. ಅಲ್ಲಿ ದಂಪತಿಗಳಿಬ್ಬರು ಸಾವಯವ ಕೃಷಿ ಮೂಲಕ ಇಡೀ ತೋಟವನ್ನು ಸಂರಕ್ಷಿಸುತ್ತಿದ್ದರು. ತಾವೇ ಗೊಬ್ಬರ ತಯಾರಿಸುತ್ತಿದ್ದರು. ಎರೆಹುಳ ಗೊಬ್ಬರವನ್ನು ತಯಾರಿಸಿ ಇಡೀ ತೋಟಕ್ಕೆ ನೀಡಿ ಹಸಿರು ಕಾಡಿನಂತೆ ಕಂಗೊಳಿಸುವಂತೆ ಮಾಡಿರುವುದು ಇಳಾಗೆ ವಿಸ್ಮಯವಾಗಿತ್ತು. ರಾಸಾಯನಿಕ ಗೊಬ್ಬರದ ಸೋಂಕು ಇಲ್ಲದೆ, ಯಾವ ರಾಸಾಯನಿಕ ಕೀಟನಾಶಕಗಳ ಬಳಕೆ ಇಲ್ಲದೆ ತೋಟ ಇಷ್ಟೊಂದು ಸಮೃದ್ಧವಾಗಿರಲು ಸಾಧ್ಯವೇ ಎಂದು ಬೆರಗುಗೊಂಡಿದ್ದಳು. ಈ ಕುರಿತು ಅಲ್ಲಿನ ತಜ್ಞರೊಂದಿಗೆ ಚರ್ಚಿಸಿದಾಗ ಅದನ್ನು ಯಾರು ಬೇಕಾದರೂ ಸಾಧ್ಯವಾಗಿಸಿಕೊಳ್ಳಬಹುದೆಂದು, ತಪಸ್ಸಿನಂತೆ ಕೃಷಿಯನ್ನು ಧ್ಯಾನಿಸಿದರೆ ಆ ತಾಯಿ ಒಲಿಯುತ್ತಾಳೆ ಎಂದು ಹೇಳಿ ಒಂದು ಉಪನ್ಯಾಸವನ್ನೇ ನೀಡಿದರು.

ತೈತ್ತಿರೀಯ ಅರಣ್ಯಕದ ಒಂದು ಕಥೆ. ಭೂಮಿಯನ್ನು ಬ್ರಹ್ಮ ಸೃಪ್ಪಿಸಿದ. ಹೆಣ್ಣಾಗಿ ಆಕೆ ಬೆಳೆಯುತ್ತಾಳೆ. ಬೆಳೆದ ನಂತರ ಸೃಷ್ಟಿಕರ್ತನನ್ನು ಕೇಳುತ್ತಾಳೆ : ತನಗೆ ತಡೆಯಲಾರದ ಸಂಕಟ, ನೋವು ಅಂತ. ಬ್ರಹ್ಮ ತನ್ನ ತಲೆಯೆಲ್ಲ ಖರ್ಚು ಮಾಡಿದರೂ ಪ್ರಯೋಜನಕ್ಕೆ ಬರಲಿಲ್ಲ. ಮನುಷ್ಯರು ಕಾದಾಡಿ ಭೂಮಿ ರಕ್ತದಲ್ಲಿ ಕೆಸರಾಗುವಂತೆ ಬ್ರಹ್ಮ ಮಾಡಿದ. ಆದರೂ ಉಪಯೋಗವಾಗಲಿಲ್ಲ. ಆಗ ಭೂಮಿಯನ್ನು ಪ್ರೀತಿಸುವ ಕೃಷಿಕನನ್ನು ಸೃಷ್ಟಿ ಮಾಡಿದ. ರೈತ ಕೃಷಿ ಮಾಡಿ ಬೆಳೆ ತೆಗೆದ, ಆಗ ಮತ್ತೆ ಭೂಮಿ ಬ್ರಹ್ಮನಸ್ಸು ಕಂಡು ಹೇಳುತ್ತಾಳೆ: ‘ಈಗ ಸಂಕಟವಿಲ್ಲ… ಶಾಂತಿ ಬಂದಿದೆ’ ಎಂದು.

ಅನ್ನದಲ್ಲಿ ಆನಂದವಿದೆ, ಅನ್ನ ಬೆಳೆದು, ಅನ್ನ ಹಂಚಿ ತಿಂದು ಸುಖಸುವ ಪ್ರಜ್ಞೆಯಲ್ಲಿ ಆನಂದವಿದೆ. ಅನ್ನವಿರದಿದ್ದರೆ ನೋವು, ಅದು ಬೇಕೆಂಬ ಅರಿವಿರದಿದ್ದರೆ ಸಂಕಟ, ಏನೋ ಕಳೆದುಕೊಂಡ ಭಾವ. ಅನ್ನ ಆನಂದ ಎರಡೂ ಭಿನ್ನವಲ್ಲ. ವಿರೋಧವಾದ ತತ್ತ್ವಗಳಲ್ಲ. ಭೂಮಿತಾಯಿ ಒಡಲಿಗೆ ರಾಸಾಯನಿಕ ಗೊಬ್ಬರ ಎಂಬ ವಿಷ ಬೆರೆಸುತ್ತಿದ್ದೇವೆ. ಕೀಟನಾಶಕಗಳಿಂದ ಅವಳನ್ನು ಸ್ವಲ್ಪ ಸ್ವಲ್ಪವೇ ಬಲಿತೆಗೆದುಕೊಂಡು, ಆಕೆಯ ಮಕ್ಕಳಾದ ಮಾನವ ಜನಾಂಗವನ್ನು ರೋಗ ರುಜಿನಗಳತ್ತ ತಳ್ಳುತ್ತಿದ್ದೇವೆ. ಈ ಪಾಪಿ ವಿಷದ ಪ್ರಭಾವ ಮಣ್ಣಿನ ಮಕ್ಕಳಿಗೆ ಗೋಚರಿಸುತ್ತಿಲ್ಲ. ಈ ರೀತಿಯ ಗೊಬ್ಬರ ಕೀಟನಾಶಕಗಳಿಂದ ದ್ಯೆತನು ದ್ರಗ್ಸ್ ಇಲ್ಲದೆ ಅದರ ದಾಸ ಹೇಗೆ ಬದುಕಿರಲಾರೆ ಎನ್ನುತ್ತಾನೋ, ಹಾಗೆ ರಾಸಾಯನಿಕ ಗೊಬ್ಬರವಿಲ್ಲದೆ ತನಗೆ ಬದುಕಿಲ್ಲ ಎಂದುಕೊಂಡು ತಾನು ವಿಷ ತಿಂದು ಎಲ್ಲರಿಗೂ ವಿಷ ಉಣಿಸುತ್ತಿದ್ದಾನೆ. ನಿಧಾನವಾಗಿ ಇಲ್ಲಿ ಎಚ್ಚರಿಕೆಯ ಕ್ರಾಂತಿ ಗೀತೆ ಮೊಳಗುತ್ತಿದೆ. ತಾನು ಉಂಡು ಇತರರಿಗೂ ಉಣಿಸುತ್ತಿರುವ ವಿಷಕ್ಕೆ ಮುಂದೊಂದು ದಿನ ತಾನು ತನ್ನವರ ಜೊತೆಗೆ ಬಲಿಯಾಗುತ್ತಿರುವ ಸತ್ಯ ಕೆಲವರಿಗಾದರೂ ಗೋಚರಿಸಿ, ರಾಸಾಯನಿಕದಿಂದ ದೂರವಾಗಿ ಬೆಳೆ ಬೆಳೆದು ತೋರಿಸುತ್ತಿದ್ದಾರೆ. ಅಂತಹ ಭೂಮಿ ತಾಯಿಯ ಸಂಕಟವನ್ನು ಮೀರಿಸಿದವನು ರೈತ. ಈ ತೋಟದ ಪುರುಷೋತ್ತಮರಾಯರು ರೈತರಲ್ಲಿ ರೈತರು. ಕೃಷಿಯನ್ನು ಕಾಯಕವಾಗಿ ಮಾತ್ರವಲ್ಲ, ಪ್ರಯೋಗ ಧೀರತೆಯ ಮೂಲಕ ಕಲೆಯನ್ನಾಗಿ ಮಾಡಿದವರು. ಕ್ಕಷಿ ವ್ಯವಸಾಯದ ನೆಲದಲ್ಲಿ ಅಪಚಾರವಾಗದಂತೆ ನಡೆದುಕೊಂಡವರು. ಹೊಲ, ಜಲ, ದೈವಕೃಪೆ, ಪರಿಶ್ರಮ ಎಲ್ಲ ಕೃಷಿಗೂ ಬೇಕು. ಹೊಸ ಬೆಳೆ, ಹೊಸ ರುಚಿ ಎಂದು ನಾವೇ ನಿರ್ಮಿಸಿಕೊಂಡ ಸಂಕಟದಿಂದ ನಾವು ದೂರಾಗಬೇಕು ಎಂದು ಕರೆ ನೀಡಿದಾಗ ಅದು ಇಳಾಳ ಮನದಾಳಕ್ಕೆ ಇಳಿದಿತ್ತು. ‘ಇದ್ದ ಎರಡು ದಿನಗಳೂ ಅಲ್ಲಿನ ತೋಟ ಸುತ್ತಿದ್ದಳು. ಸುಮಾರು ೨೦ ಎಕರೆಯ ತೋಟ, ಕಾಫಿ, ಅಡಿಕೆ, ತೆಂಗು, ಮೆಣಸು, ಏಲಕ್ಕಿ, ಜಾಯಿಕಾಯಿ, ಕಿತ್ತಲೆ, ಗೋಡಂಬಿ, ಮಾವು, ನಿಂಬೆ, ಹೇರಳೆ, ಹಲಸು, ಒಂದೇ… ಎರಡೇ… ಅದೆಷ್ಟು ರೀತಿಯ ವೈವಿಧ್ಯಮಯ ಬೆಳೆಗಳ ಸಮ್ಮಿಶ್ರ ತೋಟ. ಯಾವ ರೀತಿಯ ಬೆಳೆ ಅಲ್ಲಿ ಇಲ್ಲ ಎಂದು ಹುಡುಕಬೇಕಿತ್ತು! ಅಲ್ಲಿಯೇ ಒಂದೆಡೆ ಎರೆಹುಳು ಗೊಬ್ಬರ ತಯಾರಿಸುವ ಘಟಕ, ತೋಟಕ್ಕೆ ಬೇಕಾದ ಸಗಣಿ ಗೊಬ್ಬರಕ್ಕಾಗಿ ಸಾಕಿರುವ ದನ ಕರುಗಳು, ಅವುಗಳಿಂದ ಹೈನುಗಾರಿಕೆಯ ಅಭಿವೃದ್ಧಿಯ ಪುಟ್ಟ ಡೈರಿಯೇ ಅಲ್ಲಿರುವಂತೆ ಅನ್ನಿಸಿತ್ತು.

ಸಾವಯುವ ಕೃಷಿಯಿಂದ ಬೆಳೆದ ಭತ್ತದ ಅಕ್ಕಿಯ ಊಟ, ಹಾಲು, ತುಪ್ಪ, ಮೊಸರು ವಾಹ್! ಎರಡು ದಿನಗಳ ಊಟ, ತಿಂಡಿ, ಅಮೃತಕ್ಕೆ ಸಮವಾಗಿತ್ತು. ಕಾಫಿಯ ಬದಲು ನೀಡುತ್ತಿದ್ದ ಕಷಾಯ ಎಂಬ ಪಾನೀಯ ಅತ್ಯಂತ ರುಚಿಕಟ್ಟಾಗಿದ್ದು, ಅದನ್ನು ತಯಾರಿಸುವ ವಿಧಾನವನ್ನೆಲ್ಲ ಅಲ್ಲಿ ಕೇಳಿ ತಿಳಿದುಕೊಂಡಿದ್ದಳು. ಅಲ್ಲಿಂದ ಬರುವಾಗ ಪುರುಷೋತ್ತಮರ ಪತ್ನಿ ಎಲ್ಲಾ ಹೆಣ್ಣುಮಕ್ಕಳಿಗೂ ತೆಂಗಿನಕಾಯಿಯ ಜೊತೆಗೆ ಬೌಸ್‌ಪೀಸ್, ಮಡಿಲಕ್ಕಿ ಎಲ್ಲಾ ಇಟ್ಟು ಮನೆ ಮಗಳನ್ನು ಕಳುಹಿಸಿ ಕೊಡುವಂತೆ ನೀಡಿದಾಗ ಇಳಾ ಭಾವುಕಳಾಗಿದ್ದಳು. ಎಂತಹ ಸಂಸ್ಕೃತಿ, ಎಂತಹ ಸಹೃದಯತೆ ಎನಿಸಿತ್ತು. ಇಂತಹ ಕಾರ್ಯಕ್ರಮಗಳು ಇಲ್ಲಿ ಪದೇ ಪದೇ ನಡೆಯುತ್ತಿದ್ದು ಬಂದವರಿಗೆಲ್ಲ ವಸತಿ, ಊಟ ಮುಂತಾದ ಎಲ್ಲಾ ಸೌಕರ್ಯವನ್ನು ಉದಾರವಾಗಿ ನೀಡಿ ತಮ್ಮ ಹೃದಯ ವೈಶಾಲ್ಯತೆಯನ್ನು ಮೆರೆಸುತ್ತಿದ್ದರು. ಆ ಎರಡೂ ದಿನಗಳು ಎಲ್ಲವನ್ನು ಮರೆತು ಅಲ್ಲಿಯೇ ಲೀನವಾಗಿದ್ದಳು ಇಳಾ.

ಈಗ ಅಂತಹುದೇ ಪ್ರಯೋಗ ತಾನೇಕೆ ಮಾಡಬಾರದು. ಹೊಡೆದಾಡಿ, ಬಡಿದಾಡಿ, ಪ್ರಾಣ ಕಳೆದುಕೊಂಡು ಆ ರಾಸಾಯನಿಕ ಗೊಬ್ಬರವೆಂಬ ವಿಷವನ್ನೇಕೆ ತರಬೇಕು. ತಂದು ಭೂಮಿತಾಯಿಗೇಕೆ ಸಂಕಟ ತೊಂದೊಡ್ಡಬೇಕು. ಭೂ ತಾಯಿಗೂ ವಿಷ ಉಣಿಸಿ, ತಾವು ಕೂಡ ವಿಷ ಉಣ್ಣುವ ವಿಷಮ ಪರಿಸ್ಥಿತಿಯಿಂದೇಕೆ ಹೊರಬರಬಾರದು ಎಂದು ಆಲೋಚಿಸತೊಡಗಿ, ಅದನ್ನು ಕೃತಿಗಿಳಿಸುವ ನಿಟ್ಟಿನಲ್ಲಿ ಕಾರ್ಯೋನ್ನುಖಳಾಗುವ ನಿಲುವು ತಾಳಿದಳು.

ಮೊದಲು ನೀಲಾಳೊಂದಿಗೆ ಈ ಕುರಿತು ಚರ್ಚಿಸಿದಳು. ನೀಲಾ ತನಗೆ ಅದೊಂದೂ ಗೊತ್ತಾಗುವುದಿಲ್ಲ. ನಿಂಗೆ ಹ್ಯಾಗೆ ಬೇಕೊ ಹಾಗೆ ಮಾಡು ಎಂದು ಅವಳಿಗೆ ಹೆಚ್ಚಿನ ಸ್ವತಂತ್ರ ಕೊಟ್ಟುಬಿಟ್ಟಳು. ಅವಳೀಗ ಶಾಲೆಯಲ್ಲಿ ಸಂಪೂರ್ಣ ಮಗ್ನಳಾಗಿಬಿಟ್ಟಿದ್ದಾಳೆ. ಪುಟ್ಟ ಮಕ್ಕಳೊಂದಿಗಿನ ಒಡನಾಟ ತನ್ನೆಲ್ಲ ನೋವನ್ನು ಮರೆಸಿ ಹೊಸ ಲೋಕಕ್ಕೆ ಕರೆದೊಯ್ಯುತ್ತಿದೆ. ಶಾಲೆಗಾಗಿ, ಶಾಲಾಮಕ್ಕಳ ಸಲುವಾಗಿ ತನ್ನೆಲ್ಲ ಸಮಯವನ್ನು ಮೀಸಲಾಗಿಟ್ಟುಬಿಟ್ಟಿದ್ದಾಳೆ. ಅಮ್ಮನಿಂದ ವಿರೋಧವಿಲ್ಲವೆಂದು ಗೊತ್ತಾದ ಕೂಡಲೇ ತನ್ನ ಕೆಲಸ ಸುಲಭವಾಯಿತೆಂದು ಕಾರ್ಯೋನ್ಮುಖಳಾದಳು.

ಮೊದಲು ಹಸುವಿನ ಗೊಬ್ಬರ ಮತ್ತು ಗಂಜಲಕ್ಕಾಗಿ, ಪಶುಸಂಗೋಪನೆ ಕೈಗೊಳ್ಳಲು ಮನೆಯಲ್ಲಿರುವ ಹಸುಗಳ ಜೊತೆಗೆ ಮತ್ತೊಂದಷ್ಟು ಹಸು, ಎಮ್ಮೆಗಳನ್ನು ಕೊಂಡುಕೊಳ್ಳಲು ಸಿದ್ದಳಾದಳು.

ತಮ್ಮೂರ ಸಮೀಪವೇ ಕೃಷ್ಟಕುಮಾರ್ ಎಂಬುವರು ಹಸುಗಳನ್ನು ಸಾಕಿ ಅದರ ಬಹೂಪಯೋಗಿ ಪದಾರ್ಥಗಳಿಂದ ಅನುಕೂಲ ಪಡೆಯುತ್ತಿದ್ದಾರೆ ಎಂದು ತಿಳಿದು ಅವರನ್ನು ಹುಡುಕಿಕೊಂಡು ಹೊರಟಳು. ಈಗಾಗಲೇ ಸಾಕಷ್ಟು ಹಸುಗಳನ್ನು ಸಾಕಿರುವವರು ಇಳಾಳನ್ನು ಸಂಭ್ರಮದಿಂದಲೇ ಬರಮಾಡಿಕೊಂಡರು. ಇಳಾಳ ಕಥೆ ಕೇಳಿ ವ್ಯಥಿತರಾದ ಕೃಷ್ಣಕುಮಾರ್, ತಮ್ಮ ಮೆಲು ಮಾತುಗಳಿಂದ ಸಮಾಧಾನಿಸಿದರು. ಕೃಷಿಯಲ್ಲಿ ಆಸಕ್ತಿ ತಳೆದು, ತನ್ನ ಡಾಕ್ಷರ್ ಕನಸನ್ನ ಮರೆತು, ಈ ಪುಟ್ಟ ವಯಸ್ಸಿನಲ್ಲಿ ಕೃಷಿಯಲ್ಲಿ ಏನಾದರೂ ಹೊಸತನ್ನು ಮಾಡಲು ಹೊರಟಿರುವ ಇಳಾಳ ಮನೋಧಾರ್ಢ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಸುಗಳಿಂದ ಹೇಗೆ ಕೃಷಿಗೆ ಅನುಕೂಲವಾಗುವಂತೆ ದುಡಿಸಿಕೊಳ್ಳಬಹುದೆಂದು ಬಿಡಿಸಿ ಬಿಡಿಸಿ ಹೇಳಿದರು. “ಎಂತಹ ಹಸುಗಳನ್ನು ಸಾಕಬೇಕು, ವಿದೇಶಿ ಹಸುಗಳಾದ ಸಿಂಧಿ ಹಸು, ಮಿಶ್ರತಳಿಯ ಹಸುಗಳನ್ನು ಸಾಕುವುದರಿಂದ ಹಾಲು ಉತ್ಪಾದನೆ ಹೆಚ್ಚು ಇರುತ್ತದೆ ಅಲ್ಲವೇ” ಎಂದು ಇಳಾ ತನ್ನ ಅಭಿಪ್ರಾಯವನ್ನು ತೆರೆದಿಟ್ಟಳು.

“ಜನಸಾಮಾನ್ಯರ ಸಾಮಾನ್ಯ ತಿಳುವಳಿಕೆ ಅದು. ಒಂದು ರೀತಿಯ ತಪ್ಪು ತಿಳುವಳಿಕೆ ಕೂಡ. ದೇಶಿ ತಳಿಯ ಹಸುಗಳನ್ನು ಸಾಕುವುದು ಸುಲಭ. ಈ ಹಸುಗಳಿಗೆ ರೋಗ ರುಜಿನಗಳು ಕಡಿಮೆ. ಕೃಷಿ ಉಳಿಯಬೇಕೆಂದರೆ ದೇಶಿ ತಳಿಯ ಹಸುಗಳನ್ನು ಉಳಿಸಿ ಬೆಳೆಸುವುದೇ ನನ್ನ ಧ್ಯೇಯ” ಎಂದರು.

ಕೊಟ್ಟಿಗೆಗೆ ಕರೆದುಕೊಂಡು ಹೋಗಿ ಇಳಾಳಿಗೆ ಇವಳು ಭಾರತಿ, ಅವಳು ಪಾರ್ವತಿ, ಅಲ್ಲಿದ್ದಾನಲ್ಲ ಅವನು ಅಭಿರಾಮ ಎಂದು ಪರಿಚಯಿಸಿದರು. ಅವರು ಹೆಸರು ಹೇಳಿದಾಗ ಹಸು ಕರುಗಳು ಅವರತ್ತ ನೋಡಿ ಕಿವಿ ನಿಮಿರಿಸಿ ಪ್ರತಿಕ್ರಿಯೆ ತೋರಿದ್ದನ್ನು ನೋಡಿ ಇಳಾಳಿಗೆ ಸಂಭ್ರಮವೆನಿಸಿತು. ಈ ಹಸುಗಳು ಹೇಗೆ ತಮ್ಮ ಯಜಮಾನನ್ನು ಗುರುತಿಸುತ್ತವೆ. ಅವರು ಕೂಗಿದ್ದು ತನ್ನನ್ನೆ ಎಂದು ಅದು ಹೇಗೆ ಕಿವಿ ನಿಮಿರಿಸಿ ಪ್ರತಿಕ್ರಿಯೆ ತೋರುತ್ತದೆ ಎನಿಸಿ ಮುದಗೊಂಡಳು. ಪ್ರಾಣಿಗಳಿಗೆ ಒಂದಿಷ್ಟು ಪ್ರೀತಿ ತೋರಿದರೆ ಅವು ಅದರ ಎರಡರಷ್ಟು ಪ್ರೀತಿ ಹಿಂತಿರುಗಿಸುತ್ತವೆ ಎಂಬುದು ಇಲ್ಲಿ ನೋಡಿ ಅರ್ಥವಾಯಿತು. ಅದರ ಕೊಟ್ಟಿಗೆಯಲ್ಲಿ ಕಾಂಕ್ರೇಜ್, ದೇವಣಿ, ಮಲೆನಾಡ ಗಿಡ್ಡ ತಳಿ ಸೇರಿದಂತೆ ಹದಿನೇಳು ದೇಶಿ ತಳಿಗಳಿರುವುದಾಗಿ ತಿಳಿಸಿದರು. ಈ ದೇಶಿ ತಳಿಗಳನ್ನು ಉಳಿಸಿ ಬೆಳೆಸಬೇಕೆಂದು ತಮ್ಮಲ್ಲಿದ್ದ ಮಿತ್ರತಳಿಯ ಹಸುಗಳನ್ನೆಲ್ಲ ಮಾರಾಟ ಮಾಡಿದ್ದರು. ತಮ್ಮಲ್ಲಿರುವ ಹಸುಗಳಿಗೆ ಕೃತಕ ಗರ್ಭಧಾರಣೆ ಮಾಡಿಸಲು ತಮಗೆ ಇಷ್ಟವಿಲ್ಲವೆಂದು ತಿಳಿಸಿ, ಆಯಾ ತಳಿಯ ಹಸುಗಳಿಗೆ ಅದೇ ತಳಿಯ ಹೋರಿಗಳಿಂದ ಸಹಜ ಗರ್ಭಧಾರಣೆ ಮಾಡಿಸುತ್ತ ತಳಿಶುದ್ದತೆ ಕಾಪಾಡಿಕೊಂಡು ಬರುತ್ತಿರುವುದಾಗಿ ಹೇಳಿದರು.

ಕೊಟ್ಟಿಗೆಯ ಸಗಣಿಯನ್ನು ಬಳಸಿಕೊಂಡು ಗೋಬರ್ಗ್ಯಾಸ್ ತಯಾರಿಸಿ ಬಳಸುವುದನ್ನು ನೋಡಿದಳು. ದೇಶಿ ಹಸುಗಳ ಸಗಣಿಯಿಂದ ಗುಣಮಟ್ಟದ ಗ್ಯಾಸ್ ಉತ್ಪಾದನೆಯಾಗುತ್ತದೆ ಎಂಬುದು ಕೃಷ್ಣಕುಮಾರ್ ಅನಿಸಿಕೆ. ಗೋಬರ್‌ಗ್ಯಾಸ್ ಸ್ಲಯರಿಯನ್ನು ಅವರು ತಮ್ಮ ತೋಟಕ್ಕೆ ಬಳಸುತ್ತಾರೆ. ಇದನ್ನು ಬಿಟ್ಟರೆ ಬೇರೆ ಗೊಬ್ಬರ ಬಳಸುವುದಿಲ್ಲ ಎಂದರು. ಕೊಟ್ಟಿಗೆ ಗೊಬ್ಬರದಿಂದ ಇಡೀ ತೋಟ ನಳನಳಿಸುತ್ತಿರುವುದನ್ನು ಇಳಾ ಕಣ್ಣಾರೆ ಕಂಡಳು. ತರಕಾರಿ ಬೆಳೆಸಲು ಕೂಡ ಇದೇ ಸ್ಲರಿಯನ್ನು ಮತ್ತು ಗಂಜಲನ್ನು ಬಳಸುತ್ತೇವೆ ಎಂದಾಗ ನಿಜಕ್ಕೂ ಆಶ್ಚರ್ಯವಾಗಿತ್ತು. ತರಕಾರಿಗಳಿಂದ ಗಿಡಗಳು ಜಗ್ಗುತ್ತಿದ್ದವು. ಕೀಟನಾಶಕವಿಲ್ಲ, ರಾಸಾಯನಿಕ ಗೊಬ್ಬರವಿಲ್ಲ-ಆದರೂ ಇಳುವರಿ ತುಂಬಿತುಳುಕುತ್ತಿತ್ತು.

ಕಾಂಕ್ರೇಜ್ ತಳಿ ಹಸುಗಳಿಂದ ಒಂದೊಂದು ಹಸು ದಿನಕ್ಕೆ ಐದಾರು ಲೀಟರ್ ಹಾಲು ಕೊಡುತ್ತದೆ. ಹಾಲು ಗಟ್ಟಿಯಾಗಿದ್ದು, ಅತ್ಯಂತ ರುಚಿ ಮತ್ತು ಪೌಷ್ಟಿಕಾಂಶಗಳಿಂದ ಕೂಡಿರುತ್ತದೆ. ಯಾವುದೇ ಸಿಂಧು ಹಸುವಿನ ಹಾಲು ಈ ಹಾಲಿಗೆ ಸಾಟಿ ಇಲ್ಲ ಎಂದು ತಿಳಿಸಿದರು. ಮುಂಚೆ ಮಿಶ್ರ ತಳಿ ಹಸುಗಳನ್ನು ಸಾಕುತ್ತಿದ್ದಾಗ ವಾರಕೊಮ್ಮೆ ಪಶುವೈದ್ಯರ ಅಗತ್ಯ ಬೇಕೇಬೇಕಿತ್ತು. ಆದರೆ ಈಗ ವೈದ್ಯರ ಮುಖವನ್ನೆ ನೋಡುವಂತಿಲ್ಲ. ಎಲ್ಲಾ ಹಸುಗಳು ಆರೋಗ್ಯದಿಂದಿವೆ. ಈ ಹಸುಗಳ ಮೇವಿಗಾಗಿ ಹೈಬ್ರಿಡ್ ಹುಲ್ಲು ಬೆಳೆಯುತ್ತೇವೆ. ಸಣ್ಣ ಕರುಗಳನ್ನು ಕಟ್ಟಿಹಾಕದೆ ಸುತ್ತಾಡಿ ಬರಲು ಬಿಡುತ್ತೇವೆ. ಅವುಗಳು ತಮ್ಮ ಮಕ್ಕಳಿಗಿಂತ ಹೆಚ್ಚು ಎಂದು ಪ್ರೀತಿಯಿಂದ ಅವುಗಳ ಮೈದಡವಿ ಹೇಳಿದರು.

‘ನೋಡಮ್ಮಾ ಇಳಾ, ಕೃಷಿ ಹಾಗೂ ಹೈನುಗಾರಿಕೆ ಒಂದಕ್ಕೊಂದು ಪೂರಕ. ಬೇಸಾಯ ಲಾಭದಾಯಕವಾಗಿರಲು ಸಾವಯವ ಗೊಬ್ಬರಬೇಕು. ಗೊಬ್ಬರ ಬೇಕೆಂದರೆ ರೈತರ ಬಳಿ ದನ ಕರುಗಳಿರಬೇಕು. ಇತ್ತೀಚಿನ ದಿನಗಳಲ್ಲಿ ಇಲ್ಲಿ ದನಕರುಗಳಿಲ್ಲದೆ ಬೇಸಾಯ ಮಾಡುವ ರೈತರು ಇದ್ದಾರೆ. ಬರೀ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸಿ ಬೇಸಾಯ ಮಾಡಲು ಸಾಧ್ಯವಿಲ್ಲ ಎಂಬುದು ಈಗೀಗ ರೈತರ ಗಮನಕ್ಕೆ ಬರುತ್ತಿರುವುದು ಸ್ವಾಗತಾರ್ಹ’ ಎಂದರು ಕೃಷ್ಣಕುಮಾರ್.

ಕೃಷ್ಣಕುಮಾರ್ ಭೇಟಿಯ ನಂತರ ಬಹಳಷ್ಟು ವಿಚಾರಗಳು ಇಳಾಗೆ ತಿಳಿದು ಬಂದವು. ತಾನು ಇವರನ್ನು ಭೇಟಿಯಾಗದಿದ್ದಲ್ಲಿ ಹೆಚ್ಚು ಹಾಲು ಕೊಡುತ್ತದೆ ಎಂಬ ತನ್ನ ಸಾಮಾನ್ಯ ತಿಳುವಳಿಕೆಯಿಂದ ಸಿಂಧು ಹಸುಗಳನ್ನು ಕೊಂಡುಬಿಡುತ್ತಿದ್ದೆ. ಮೊದಲೇ ಇವರನ್ನು ಭೇಟಿಯಾದದ್ದು ಒಳ್ಳೆಯದಾಯಿತು ಎಂದುಕೊಂಡಳು ಇಳಾ.

ಮಧ್ಯಾಹ್ನ ಕೃಷ್ಣಕುಮಾರ್‌ರವರ ಪತ್ನಿ ವಿಶೇಷ ಅಡುಗೆ ಮಾಡಿ ಬಡಿಸಿದರು. ತಮ್ಮ ಬಂಧುಗಳೇನೋ ಎಂಬಂತೆ ಪ್ರೀತಿ ಆದರದಿಂದ ನೋಡಿಕೊಂಡು ಬಲವಂತವಾಗಿ ಬಡಿಸಿ ಹಾಲು ಮೊಸರಿನ ಹೊಳೆಯೇ ಹರಿಸಿದಾಗ ಕೃತಜ್ಞತೆಯಿಂದ ಮೂಕಳಾದಳು ಇಳಾ, ಇಂತಹ ಪ್ರೀತಿ ವಾತ್ಸಲ್ಯಕ್ಕೆ ಬೆಲೆ ಕಟ್ಟಲು ಸಾಧ್ಯವೇ ಎನಿಸಿತು. ತುಂಬು ಹೃದಯದಿಂದ ತಮ್ಮಲ್ಲಿಗೂ ಒಮ್ಮೆ ಬರಲು ತಿಳಿಸಿ ಅವರಿಂದ ಬೀಳ್ಕೊಟ್ಟಳು.

ಮನೆಗೆ ಬಂದೊಡನೆ ಅಜ್ಜಿಯೊಂದಿಗೆ, ನೀಲಾಳೊಂದಿಗೆ ಕೃಷ್ಣಕುಮಾರ್ ಬಗ್ಗೆ ಹೇಳಿದ್ದೆ ಹೇಳಿದ್ದು. ಇಂಜಿನಿಯರ್ ಆಗಿರುವ ಕೃಷ್ಣಕುಮಾರ್ ನಗರದ ಆಮಿಷಗಳಿಗೆ ಒಳಗಾಗದೆ ಅಷ್ಟೊಂದು ಓದಿದ್ದರೂ ಹಳ್ಳಿಯಲ್ಲಿಯೇ ನೆಲಸಿ ಸಾಂಪ್ರದಾಯಿಕ ರೀತಿಗಳಿಂದ ವ್ಯವಸಾಯ ಮಾಡಿ ತೋಟವನ್ನು ಅದೆಷ್ಟು ಸೊಗಸಾಗಿ ಕಾಪಾಡಿಕೊಂಡಿದ್ದಾರೆ. ಹಸುಕರುಗಳನ್ನಂತೂ ಮಕ್ಕಳಂತೆ ಸಾಕುತ್ತಿದ್ದಾರೆ. ಇಂತಹವರಿಂದ ತನ್ನಂಥಹವರು ಕಲಿಯುವುದು ಸಾಕಷ್ಟಿದೆ ಎಂದು ಮನದುಂಬಿ ಹೇಳಿಕೊಂಡಳು. ಕೃ‍ಷ್ಣಕುಮಾರ್‌ರವರು ತೋಟದಲ್ಲಿ ತನ್ನ ಮೇಲೆ ಪ್ರಭಾವಿಸಿದ್ದನ್ನು ತಮ್ಮ ತೋಟದಲ್ಲಿಯೂ ಜಾರಿಗೆ ತರಲು ಮನಸ್ಸು ಮಾಡಿದಳು.

ಈಗಿರುವ ಹಸುಗಳ ಜೊತೆಗೆ ಮತ್ತೊಂದಷ್ಟು ಹಸುಗಳನ್ನು ಖರೀದಿಸಲು ದೊಡ್ಡಪ್ಪನ ಸಹಾಯ ಪಡೆದಳು. ಸುಂದೇಶ್ ಅಂತೂ ಇದೆಲ್ಲ ಏನಪ್ಪ ರಗಳೆ. ಇರುವ ಹಸುಗಳ್ನು ಸಾಕಲಾರದೆ ಎಲ್ಲರೂ ಮಾರುತ್ತಿದ್ದಾರೆ. ನಿಂಗ್ಯಾಕೆ ಅಷ್ಟೊಂದು ಹಸುಗಳು. ಏನೇನೋ ಮಾಡಿ ದುಡ್ಡು ಹಾಳು ಮಾಡುವ ಯೋಚನೆಯಲ್ಲಿದ್ದೀಯಾ? ಮೊದಲೇ ಸಾಲ ಇನ್ನೂ ತೀರಿಲ್ಲ. ಹುಡುಗು ಬುದ್ಧಿ. ನಿನಗೇನು ಗೊತ್ತಾಗುತ್ತೆ. ಇರುವ ದುಡ್ಡು ಹುಡಿ ಮಾಡಿಬಿಟ್ಟರೆ ನಾಳೆ ನಿನ್ನ ಓದು, ಮದುವೆಗೆ ಏನು ಮಾಡಬೇಕು. ಹೇಗೋ ಇನ್ನೊಂದು ವರುಶ ಸುಮ್ನೆ ಕಾಲ ತಳ್ಳಿಬಿಡು. ಮುಂದಿನ ವರ್ಷ ಕಾಲೇಜಿಗೆ ಸೇರಿ ಡಿಗ್ರಿ ಮಾಡುವಿಯಂತೆ. ಬೇಸರ ಎನಿಸಿದರೆ ಅಲ್ಲಿವರೆಗೂ ಸ್ಕೂಲ್ಗೆ ಹೋಗಿ ಆ ಮಕ್ಕಳಿಗೇನಾದರೂ ಕಲಿಸು’- ಅಂತ ಶುರುಮಾಡಿಬಿಟ್ಟರು.

ಅವರ ಉಪದೇಶ ಕೇಳಲಾರದೆ ‘ದೊಡ್ಡಪ್ಪ ನಾನು ಕಾಲೇಜಿಗೆ ಹೋಗುವುದಿಲ್ಲ, ಶಾಲೆಗೂ ಹೋಗುವುದಿಲ್ಲ. ನಾನು ತೋಟ ನೋಡಿಕೊಳ್ಳುತ್ತೇನೆ. ಇದು ನನ್ನ ಧೃಡ ನಿರ್ಧಾರ. ಯಾರು ಏನು ಹೇಳಿದರೂ ಈ ನಿರ್ಧಾರಾನ ಬದಲಿಸಲಾರೆ. ಮೊದಲು ನಂಗೆ ನಾನು ಹೇಳಿದ ಹಸುಗಳನ್ನು ತಂದು ಕೊಡಿ’ ಕೊಂಚ ನಿಷ್ಠೂರವಾಗಿಯೇ ಇಳಾ ಹೇಳಿಬಿಟ್ಟಾಗ, ಸುಂದರೇಶ್ ದಿಗ್ಮೂಢರಾಗಿ ನಿಂತುಬಿಟ್ಟರು. ತಮ್ಮ ಕಣ್ಮುಂದೆ ಬೆಳೆದ, ಇನ್ನೂ ಮಗುವಿನಂತೆಯೇ ತಮಗೆ ಕಾಣುತ್ತಿರುವ ಇಳಾ ಇಷ್ಟೊಂದು ನಿರ್ಧಾರಿತಳಾಗಿ ಮಾತನಾಡಬಲ್ಲಳೇ. ತಮ್ಮ ಮಾತನ್ನು ಕೇಳುವ ಮಟ್ಟದಲ್ಲಿ ಈ ಹುಡುಗಿ ಇಲ್ಲ. ಏನಾದರೂ ಮಾಡಿಕೊಳ್ಳಲಿ. ಮೊದಲೇ ಅಪ್ಪನನ್ನು ಕಳೆದುಕೊಂಡು ನೊಂದಿರುವ ಮಗುವನ್ನು ನೋಯಿಸುವುದು ಬೇಡವೆಂದು ನಿರ್ಧರಿಸಿ, ‘ಸರೀನಮ್ಮ ಏನಾದ್ರೂ ಮಾಡಿಕೊ, ನನ್ನ ಮಾತು ನೀನೆಲ್ಲಿ ಕೇಳ್ತಿ ನಿಂಗಿಷ್ಟ ಬಂದ ಹಾಗೆ ನೀನಿರು, ಹಸುಗಳನ್ನು ಕೊಡಿಸೊ ಏರ್ಪಾಟು ಮಾಡುತ್ತೇನೆ’ ಎಂದು ಮುನಿಸಿನಿಂದಲೇ ಹೊರಟುಬಿಟ್ಟರು.

ಅವರ ಮುನಿಸಿನಿಂದೇನು ಇಳಾ ಧೃತಿಗೆಡಲಿಲ್ಲ. ದೊಡ್ಡಪ್ಪ ಹಾಗೆ ಮಾತನಾಡುವುದು ಸಹಜ. ಕಷ್ಟಪಡುವುದು ಬೇಡ ಎಂಬ ಭಾವನೆ ಪಾಪ ದೊಡ್ಡಪ್ಪನದು. ಇದೇ ದೊಡ್ಡಪ್ಪ ಮುಂದೊಂದು ದಿನ ‘ನಾನು ಏನೋ ತಿಳಿದುಕೊಂಡಿದ್ದ ತಮ್ಮನ ಮಗಳ ಬಗ್ಗೆ. ಎಲ್ಲರೂ ಹೆಮ್ಮೆಪಡುವ ರೀತಿಯಲ್ಲಿ ಸಾಧನೆ ಮಾಡಿ ತೋರಿದ್ದಾಳೆ’ ಎಂದು ಹೇಳಿಕೊಳ್ಳುವ ದಿನ ಬಂದೇ ಬರುತ್ತದೆ. ಹಾಗೆ ಬಂದೇ ಬರಿಸುತ್ತೇನೆ ಎಂದು ದೊಡ್ಡಪ್ಪನ ಮುನಿಸನ್ನು ಮನ್ನಿಸಿಬಿಟ್ಟಳು.

ತೋಟಕ್ಕೆ ಹಾಕಲು ಎರೆ ಹುಳು ಗೊಬ್ಬರ ತಯಾರಿಸಲು ತೋಟದ ಮೂಲೆಯೊಂದರಲ್ಲಿ ಸಿದ್ದಪಡಿಸುವ ವ್ಯವಸ್ಥೆ ಮಾಡಿದಳು. ತೊಟ್ಟಿಗಳನ್ನು ಕಟ್ಟಿಸಿ, ತೋಟದ ಎಲೆಗಳು ಕಸಕಡ್ಡಿಗಳೊಂದಿಗೆ ಮಣ್ಣು ತುಂಬಿ ಎರೆಹುಳುಗಳನ್ನು ಕೊಂಡು ತಂದು ಅದರಲ್ಲಿ ಬಿಟ್ಟಳು. ಇವಳ ಎಲ್ಲಾ ಚಟುವಟಿಕೆಗಳನ್ನು ತೋಟದ ಆಳುಗಳು ಬೆರಗುಗಣ್ಣಿನಿಂದ ನೋಡುತ್ತ, ಈ ಪುಟ್ಟ ಹುಡುಗಿ ಅದೇನು ಮಾಡುತ್ತಾಳೋ ಎಂಬ ಕುಕೂಹಲ ತೋರುತ್ತ ಅವಳು ಹೇಳುವ ಎಲ್ಲಾ ಕೆಲಸಗಳನ್ನು ಆಸ್ಥೆಯಿಂದಲೇ ಮಾಡುತ್ತ ಬಂದರು. ಈಗ ಕೊಟ್ಟಿಗೆಗೆ ಹೊಸ ಹಸುಗಳು ಬಂದು ಸೇರಿದ್ದವು. ಹಸುಗಳನ್ನು ನೋಡಿಕೂಂಡು ಹಾಲು ಕರೆದು ಅವುಗಳ ಆರೈಕೆ ಮಾಡಲೆಂದೇ ಒಂದು ಆಳನ್ನು ಗೊತ್ತುಪಡಿಸಲಾಯಿತು. ಡೈರಿಯ ವ್ಯಾನು ಇವರ ತೋಟದ ಮುಂದೆಯೇ ಹಾದುಹೋಗುತ್ತಿದ್ದು, ಮನೆಗೆ ಉಳಿದು ಹೆಚ್ಚಾದ ಹಾಲನ್ನು ಆ ವ್ಯಾನಿಗೆ ಹಾಕಲು ಏರ್ಪಾಡು ಮಾಡಿದಳು. ಹಾಲಿನಿಂದಲೂ ವರಮಾನ ಬರಲು ಆರಂಭಿಸಿತ್ತು. ತೋಟಕ್ಕಾಗಿ ಹೊರಗಿನಿಂದ ಗೊಬ್ಬರ ತರುವುದನ್ನು ನಿಲ್ಲಿಸಿದಳು. ಕೀಟನಾಶಕಗಳನ್ನು ನಿಪೇಧಿಸಿದಳು. ಗಂಜಲದಿಂದ ಜೀವಾಮೃತವನ್ನು ತಯಾರಿಸುವುದನ್ನು ಕಲಿತು ಅದೇ ಜಲವನ್ನು ಗಿಡಗಳಿಗೆ ಸಿಂಪಡಿಸಿ ಕೀಟ, ರೋಗ ರುಜಿನಗಳಿಂದ ಹತೋಟಿಗೆ ತರಲು ಪ್ರಯತ್ನಿಸಿದಳು. ತೋಟದಲ್ಲಿ ಕಾಫಿ ಗಿಡದ ಜೊತೆಗೆ ಮತ್ತೇನು ಮಿಶ್ರ ಬೆಳೆ ಬೆಳೆಯಬಹುದು ಎಂದು ಆಲೋಚಿಸಿ ಪ್ರಗತಿಪರ ರೈತರ ತೋಟ ಸುತ್ತಿ ಬಂದಳು. ಅವರು ತಮ್ಮ ತೋಟದಲ್ಲಿ ಬೆಳೆದು ಲಾಭ ಗಳಿಸುತ್ತಿದ್ದ ಏಲಕ್ಕಿ, ಕಾಳುಮೆಣಸು, ಅರಿಶಿಣ, ಕೋಕಂ ಅನ್ನು ತಾನು ತಮ್ಮ ತೋಟದಲ್ಲಿ ಬೆಳೆಯಬಹುದು. ಅದರಿಂದ ಪ್ರತ್ಯೇಕ ಆದಾಯ ಪಡೆಯಬಹುದೆಂದು ಮನಗಂಡಳು. ಕೂಡಲೇ ಕೃಷಿ ಬೆಳೆಯಿಂದ ಏಲಕ್ಕಿ- ಕಾಳುಮೆಣಸು, ಅರಿಶಿಣ, ಕೋಕಂ ಸಸಿಗಳನ್ನು ತಂದು ತೋಟದಲ್ಲಿ ಬೆಳೆಯುವ ಏರ್ಪಾಡು ಮಾಡಿದಳು.

ಪತ್ರಿಕೆಯಲ್ಲಿ ಬೇಸಾಯದ ಜತೆಗೆ ವ್ಯಾಪಾರ ಎಂಬ ಬರಹ ಕಣ್ಸೆಳೆಯಿತು. ಕೃಷಿಕನೊಬ್ಬ ತಾನು ಬೆಳೆದ ಪದಾರ್ಥಗಳನ್ನು ಮಾರಿ ಲಾಭ ಗಳಿಸುತ್ತಿದ್ದಾನೆ. ಮನಸ್ಸಿದ್ದಲ್ಲಿ ಮಾರ್ಗವಿದೆ ಎಂಬ ನಾಣ್ನುಡಿಯನ್ನು ನಿಜ ಮಾಡಿದ್ದಾರೆ. ದಿನಬಳಕೆಯ ಪದಾರ್ಥಗಳೇ ಉದ್ಯೋಗವನ್ನೂ ಸೃಷ್ಟಿ ಮಾಡಿಕೊಡುವ ಸಂಪನ್ಮೂಲಗಳಾಗುತ್ತಿವೆ. ತಮ್ಮ ಹಿತ್ತಲಲ್ಲಿ ಬೆಳೆಯುತ್ತಿರುವ, ತಮ್ಮ ತೋಟದಲ್ಲಿ ಬೆಳೆದ ಏಲಕ್ಕಿ, ಕಾಳುಮೆಣಸು, ಶುಂಠಿ, ಅರಿಶಿಣ, ಕೋಕಂ ಇತ್ಯಾದಿ ದಿನಬಳಕೆಯ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಮಾರುತ್ತಿದ್ದಾರೆ. ಮನೆಯ ಹಿತ್ತಿಲಿನಲ್ಲಿ ಬೆಳೆದ ಮೂಡ ಹಾಗಲ, ಕರಿಬೇವು, ಮಜ್ಜಿಗೆಹುಲ್ಲು, ಪುದೀನ, ಲೊಳೆಸರ ಮುಂತಾದ ಔಷಧಿಯ ಗಿಡಗಳನ್ನು ತಮ್ಮ ಹಿತ್ತಲಿನಲ್ಲಿ ಬೆಳೆದಿದ್ದಾರೆ.

ಮನೆಯ ಅಂಗಳದಲ್ಲಿ ಸೇವಂತಿಗೆ, ದಾಸವಾಳ, ಅಂಥೋರಿಯಂ, ಜರ್ಬರಾ, ಜಿನೇಲಿಯಂ, ಗ್ಲಾಡಿಯೋಲಸ್, ಡೇರ ಹೀಗೆ ಅನೇಕ ರೀತಿಯ ಹೂ ಬೆಳೆದು ಮಾರುತ್ತಾರೆ. ಲಾಭವೂ ಬರುತ್ತಿದೆ. ಈ ವ್ಯಾಪಾರದಲ್ಲಿ ಮನೆಯವರೆಲ್ಲ ಸಹಕರಿಸುತ್ತಿದ್ದಾರೆ. ಹೀಗಾಗಿ ಕೃಷಿಯನ್ನೆ ನಂಬಿ ಜೀವಿಸುತ್ತಿದ್ದರೂ ಚೆನ್ನಾಗಿಯೇ ಬದುಕಿದ್ದೇವೆ ಎಂದು ಹೇಳಿದ ರೈತರ ಮಾತುಗಳು ಇಳಾಳ ಮನದಲ್ಲಿ ಹೆಚ್ಚಿನ ಪ್ರಭಾವ ಬೀರಿತು.

ಹೌದು ಕೆಲಸವಿಲ್ಲವೆಂದು ಅದೆಷ್ಟು ಕೃಷಿಕರ ಮಕ್ಕಳು ನಗರ ಸೇರುತ್ತಿದ್ದಾರೆ. ತಮ್ಮ ಸ್ವಂತ ಸ್ಥಳದಲ್ಲಿ ರಾಜನ ಹಾಗೆ ಬದುಕುವ ಅವಕಾಶವಿದ್ದರೂ ಪಟ್ಟಣ ಸೇರಿ ಎಲೆಲ್ಲ ಯಾರದ್ದೊ ಕೈಕೆಳಗೆ ಕೆಲಸ ಮಾಡಿ ಗುಲಾಮರಂತಿರುವ ಪರಿಸ್ಥಿತಿ ಏಕೆ ಎನಿಸಿತು. ಇವತ್ತು ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ಹಿರಿಯ ಚೈತನ್ಯಗಳನ್ನು ಬಿಟ್ಟರೆ ಎಷ್ಟೋ ಹಳ್ಳಿಗಳಲ್ಲಿ ಯುವಜನಾಂಗವೇ ಇಲ್ಲವಾಗುತ್ತಿದೆ. ಇಡೀ ಗ್ರಾಮ ಖಾಲಿ ಹೊಡೆಯುತ್ತಿದೆ. ಬದಲಾಗಿ ಯುವಕರು ಹಳ್ಳಿಯಲ್ಲೇ ಉಳಿದರೆ ಅದೆಷ್ಟು ಚಿನ್ನಾಗಿರುತ್ತದೆ. ನಗರದಲ್ಲಿ ಮಾಡವ ಗುಲಾಮಗಿರಿಯೇ ಇವರಿಗೆ ಯಾಕಿಷ್ಟು ಇಷ್ಟವಾಗುತ್ತಿದೆ ಎನಿಸಿತು.

ಮಣ್ಣು ನೆಟ್ಟಿಕೊಂಡು ನೈಸರ್ಗಿಕ ಕೃಷಿ ಮಾಡಬೇಕು. ಮಧ್ಯವರ್ತಿಯ ಹಾವಳಿ ಇಲ್ಲದೆ ತಾವು ಬೆಳೆದ ಉತ್ಪನ್ನಗಳನ್ನು ತಮ್ಮ ಮನೆಯ ಬಾಗಿಲಲ್ಲೇ ಗ್ರಾಹಕರಿಗೆ ಸಿಗುವಂತೆ ವ್ಯವಸ್ಥೆ ಮಾಡಿಕೊಂಡು, ಕಲಬೆರಕೆ ಇಲ್ಲದ ಗುಣಮಟ್ಟದ ಸರಕು ಒದಗಿಸಿದರೆ ಬೆಳೆದ ಬೆಳೆಗೆ ಒಳ್ಳೆಯ ಲಾಭವೂ ಸಿಗುತ್ತದೆ. ತಮ್ಮ ಮನೆಯ ಅಂಗಳದಲ್ಲಿಯೋ ಅಥವಾ ಹತ್ತಿರದ ಮಾರುಕಟ್ಟೆಯಲ್ಲಿಯೋ ಮಾರಾಟ ಮಾಡುವ ಅವಕಾಶ ಸಿಕ್ಕರೆ ಬೇಸಾಯ ಖಂಡಿತಾ ಲಾಭದಾಯಕ ಎಂದು ಇಳಾ ಓದಿ ತಿಳಿದುಕೊಂಡಳು.

ಅಂತೂ ಬಾವಿಯೊಳಗಿನ ಕಪ್ಪೆಯಂತಿದ್ದ ತನಗೆ ಕೃಷಿ ಮಾಡಲು ಇಳಿದೊಡನೆ ಅದೆಷ್ಟು ವಿಚಾರಗಳು ತಿಳಿಯುತ್ತಿವೆಯಲ್ಲ… ಮುಂದೆ ತಾನು ಈ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡಂತೆ ಪ್ರಾವಿಣ್ಯತೆ ಗಳಿಸಬಹುದೆಂದು ಅಂದುಕೊಂಡಳು. ಈ ವಿಚಾರಗಳಲ್ಲಿ ಮುಳುಗಿ ಹೋದವಳಿಗೆ ತಾನು ಡಾಕ್ಟರ್ ಆಗಬೇಕೆಂದಿದ್ದು, ಆದಾಗಲು ಸಾಧ್ಯವಾಗದ್ದಕ್ಕೆ ಅಪ್ಪನ ಸಾವು ಕಾರಣವಾದದ್ದು, ಅಪ್ಪನ ಸಾವು ಸಾಲಗಳ ಕಾರಣದಿಂದ ಆದ್ದದ್ದು- ಹೀಗೆ ಎಲ್ಲವನ್ನು ಮರೆತು ತೋಟ, ತೋಟದ ಬೆಳೆಗಳು, ಸಾವಯವ ಕೃಷಿ. ಹೀಗೆ ಈ ಸುತ್ತಲೇ ಸುತ್ತುವಂತೆ ತನ್ನ ಮನ ಪರಿವರ್ತನೆಯಾಗಿದ್ದು ಹೇಗೆ ಎಂದು ಅಚ್ಚರಿಪಟ್ಟುಕೊಂಡಳು.

ಒಂದು ದಾರಿ ಮುಚ್ಚಿದ ಕೂಡಲೇ ಮತ್ತೊಂದು ಹಾದಿ ತಾನೇ ತೆರೆದುಕೊಂಡು ಹೋಗುವಂತೆ… ಮುನ್ನುಗ್ಗುವಂತೆ ತನ್ನನ್ನು ಪ್ರಚೋದಿಸಿದ್ದು ಅದಾವ ಅಂಶವಿರಬಹುದೆಂದು ಆಲೋಚಿಸಿದಳು.

ಪ್ರಾಯಶಃ ಅಪ್ಪನ ದುಡುಕು, ಮೂರ್ಖತನ, ಸೋಲನ್ನು ಸಾವಿನಲ್ಲಿ ಕಾಣುವ ಹೇಡಿತನ ಇವೆಲ್ಲವನ್ನು ತಾನು ದ್ವೇಷಿಸಿದ್ದ ಕಾರಣವಿರಬಹುದೆ? ಅಪ್ಪ ಯಾಕೆ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು? ಅಪ್ಪನಂತೆ ನಾನು ಸೋಲಬಾರದು, ಹೌದು, ನಾನು ಸೋಲಬಾರದು. .

ಅಪ್ಪ ಸೋತಲ್ಲಿ ತಾನು ಗೆಲುವು ಕಾಣಬೇಕೆಂಬ ಛಲವೇ ತನ್ನಲ್ಲಿ ಈ ರೀತಿ ಪ್ರಬೋದಿಸಿತೇ? ಇಲ್ಲ… ತಾನು ಗೆಲ್ಲುತ್ತೇನೆಯೋ, ಗೆಲುವು ತನಗೆ ಒಲಿಯುತ್ತದೆಯೋ, ನಿಡಿದಾಗಿ ಉಸಿರು ಬಿಟ್ಟು ಸೋಲೋ ಗೆಲುವು ಹೆಜ್ಜೆ ಇಟ್ಟಾಗಿದೆ. ಹಿಂದೆಗೆಯುವಂತೆಯೇ ಇಲ್ಲ. ಎಲ್ಲರಂತೆ ತಾನಾಗದೆ ತಾನು ವಿಶೇಷವಾಗಿ ಸಾಧಿಸಬೇಕು. ಆ ಸಾಧನೆಯ ಮೆಟ್ಟಿಲೇರಲೇಬೇಕು, ಅದು ಎಷ್ಟೇ ಕಷ್ಟವಾದ ಹಾದಿಯಾದರೂ ಸರಿ ಹಿಮ್ಮೆಟ್ಟಬಾರದು. ಯಾರೂ ಪ್ರೋತ್ಸಾಹ ಕೊಡದಿದ್ದರೂ ಪರವಾಗಿಲ್ಲ, ನಾನು ಮುಂದೆ ಇಟ್ಟ ಹೆಜ್ಜೆ ಹಿಂದಕ್ಕಿಡಬಾರದು.

ಹೆಣ್ಣು ಮದುವೆಯಾಗಿ ಸಂಸಾರ, ಗಂಡ, ಮಗು… ಇದಿಷ್ಟೇ ಬದುಕು ಎನ್ನುವಂತೆ ತಾನಿರಬಾರದು. ಅದರ ಹೊರತಾಗಿಯೂ ಮತ್ತೇನೋ ಇದೆ. ಅದನ್ನು ಯಾವ ಹೆಣ್ಣಾದರೂ ಪಡೆದುಕೊಳ್ಳಬಹುದು ಎಂಬ ಸತ್ಯವನ್ನು ತೋರಿಸುವ, ಇತರರಿಗೆ ಮಾದರಿಯಾಗಿ ನಿಲ್ಲುವ ಎದೆಗಾರಿಕೆ ನನ್ನಲ್ಲಿದೆ. ಅದೊಂದು ದ್ಯೆವ ತನಗಿತ್ತ ವರವೇ ಸರಿ. ತನ್ನನ್ನು ಎಲ್ಲರೂ ಪುಟ್ಟ ಹುಡುಗಿಯೆಂದೇ ಭಾವಿಸುತ್ತಾರೆ. ತನ್ನ ರೀತಿನೀತಿಗಳನ್ನು, ತಾನು ಮಾಡಬೇಕೆಂದಿರುವ ಸುಧಾರಣೆಗಳನ್ನು ಆಳುಗಳು ಕೂಡ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅಮ್ಮನಂತೂ ಏನಾದರೂ ಮಾಡಿಕೊಳ್ಳಲಿ ಎಂದು ತಟಸ್ಥಳಾಗಿಬಿಟ್ಟಿದ್ದಾಳೆ. ಅಜ್ಜಿಯೂ ಈ ಗೋಳೆಲ್ಲ ಯಾಕೆ ಮಗು ಹಾಯಾಗಿ ತಿಂದುಂಡು ಇರಬಾರದೇ ಎಂದು ತಾನು ತೋಟದೊಳಗೆ ಹೋಗಿ ಕೆಲಸ ಮಾಡುವುದನ್ನ ವಿರೋಧಿಸುತ್ತಾಳೆ. ಇನ್ನು ದೊಡ್ಡಪ್ಪನೊ ಹೆಣ್ಣುಮಕ್ಕಳೆಂದರೆ ಓದಲಷ್ಟೇ ಲಾಯಕ್ಕು, ಓದಿ ಮದುವೆ ಆಗಿಬಿಟ್ಟರೆ ಸಾಕು ಎನ್ನುವ ನಿಲುವು. ತನ್ನನ್ನು ಯಾರೂ ಸೀರಿಯಸ್ಸಾಗಿ ನೋಡುತ್ತಿಲ್ಲ.

ಇಳಾ ಅಪ್ಪ ಸತ್ತ ದುಃಖದಲ್ಲಿ, ವಿದ್ಯಾಭ್ಯಾಸ ಹಾಳಾದ ಆವೇಶದಲ್ಲಿ ಏನೋ ಮಾಡಲು ಹೋಗುತ್ತಿದ್ದಾಳೆ. ನಾಲ್ಕು ದಿನಕ್ಕೆ ಸಾಕಾಗಿ ತೋಟವೂ ಬೇಡ… ಈ ಊರು ಬೇಡ… ಅಂತ ತಾನೇ ಕೈ ಮುಗಿದು ಮೈಸೂರಿಗೆ ಹೊರಟುಬಿಡುತ್ತಾಳೆ ಎಂಬುದೇ ಎಲ್ಲರ ಲೆಕ್ಕಾಚಾರವಾಗಿತ್ತು.

ಯಾರ ಲೆಕ್ಕಾಚಾರ ಹೇಗಾದರೂ ಇರಲಿ, ಈ ಇಳಾ ಏನು ಎಂಬುದನ್ನು ಇಂದಲ್ಲ ನಾಳೆ ತೋರಿಸುತ್ತೇನೆ ಎಂದು ಅವಳು ಅಂದುಕೊಂಡಾಗ ಮನಸ್ಸು ಹಗುರವಾಗಿ ತನ್ನ ಹಾದಿಯಲ್ಲಿ ಮುನ್ನಡೆಯಲು ಹುಮ್ಮಸ್ಸು ಮೂಡುತ್ತಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೇಡಿಕೆ
Next post ಮಿಂಚುಳ್ಳಿ ಬೆಳಕಿಂಡಿ – ೪೩

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

cheap jordans|wholesale air max|wholesale jordans|wholesale jewelry|wholesale jerseys