ಪುಸ್ತಕ ಪ್ರೀತಿ

ಪುಸ್ತಕ ಪ್ರೀತಿ

ಚಿತ್ರ: ಅಲೆಕ್ಸಾಂಡರ್‍ ಸ್ಟಾಕ್ಮಾರ್‍

ಪ್ರಿಯ ಸಖಿ,

ಪುಸ್ತಕದಿ ದೊರೆತರಿವು ಮಸ್ತಕದಿ ತಳೆದಮಣಿ. ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಪುಸ್ತಕ ಜ್ಞಾನವು ಬಹಿರಂಗ ವ್ಯಾಪ್ತಿಯಲ್ಲಿ ಬರುವುದು. ಚಿಂತನೆ ಜನ್ಯವಾದ ಜ್ಞಾನವು ಅಂತರಂಗ ವ್ಯಾಪ್ತಿಯಾದುದು. ನಿಜವೇ ಆದರೆ ಚಿಂತನಶೀಲತೆ ಬೆಳೆಯುವುದು ಪುಸ್ತಕಗಳ ಸಂಪರ್ಕದಿಂದ. ಆದ್ದರಿಂದ ಪುಸ್ತಕಗಳ ಪ್ರಯೋಜನವು ಅಂತರಂಗ ಚೈತನ್ಯದ ಸಾಧನೆಗೆ ಮೊದಲ ಮೆಟ್ಟಿಲು ಎನ್ನಬಹುದು.

ಪುಸ್ತಕಗಳು ಹಲವಾರು ಮಹಾತ್ಮರ ಜೀವನವನ್ನು ರೂಪಿಸಿವೆ. ಹಲವರ ಬದುಕಿನಲ್ಲಿ ಪ್ರಭಾವ ಬೀರಿವೆ. ಕ್ರಾಂತಿಯುಂಟು ಮಾಡಿವೆ. ಬದಲಾವಣೆ ತಂದಿವೆ. ಹೊಸ ವಿಚಾರಗಳನ್ನು ಮೊಳೆಸಿವೆ, ಬೆಳೆಸಿವೆ. ಉತ್ತಮ ಪುಸ್ತಕವನ್ನು ಓದುವವರು ಇರುವವರೆಗೂ
ಈ ಪ್ರಕ್ರಿಯೆಗಳು ಸಾಗುತ್ತಿರುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಪುಸ್ತಕಗಳನ್ನು ಓದುತ್ತಿರುವವರು ಕಡಿಮೆಯಾಗುತ್ತಿದ್ದಾರೆ ಎಂಬ ದೂರು ಎಲ್ಲೆಡೆಯಿಂದ ಕೇಳಿ ಬರುತ್ತಿದೆ. ಇದಕ್ಕೆ ಹಲವಾರು ಕಾರಣಗಳೂ ಇವೆ.

ಬದಲಾದ ನಮ್ಮ ಜೀವನ ಶೈಲಿಯಿಂದ ಅವಸರದ ಈ ಯುಗದಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಹಾಗೇ ದೃಶ್ಯ ಮಾಧ್ಯಮಗಳ ಹಾವಳಿಯೂ ಈ ಹವ್ಯಾಸಕ್ಕೆ ನೇರ ಪೆಟ್ಟು ಕೊಟ್ಟಿದೆ. ಹಣವನ್ನು ಮಾಡುವುದೇ ಜೀವನದ ಪ್ರಮುಖ ಗುರಿಯೆಂಬ ಭೂತ ಮಿದುಳನ್ನು ಹೊಕ್ಕಂದಿನಿಂದ ಯಾವ ಹವ್ಯಾಸಗಳಿಗೂ ಈಗ ಜನರಿಗೆ ಬಿಡುವಿಲ್ಲ. ಫ್ಯಾಷನ್, ಐಷಾರಾಮದ ಬದುಕು, ಪಂಚತಾರಾ ಸಂಸ್ಕೃತಿಯೆಡೆಗೆ ಹೆಚ್ಚು ವಾಲುತ್ತಿರುವ ನಮಗೆ ಓದುವುದು, ಗಂಭೀರವಾಗಿ ಯೋಚಿಸುವುದು, ಚಿಂತಿಸುವುದು, ಓದಿದ್ದನ್ನು ಮನನ ಮಾಡುವುದು ಎಲ್ಲವೂ ಬೋರ್ ಎನ್ನಿಸುತ್ತದೆ.

ಪ್ರಿಯ ಸಖಿ, ಆದರೆ ಬೇರೆ ಯಾವ ಮಾಧ್ಯಮವೂ ನೀಡಲಾಗದಂತಹ ಸಂತೋಷವನ್ನು, ಆತ್ಮ ತೃಪ್ತಿಯನ್ನು ಪುಸ್ತಕದ ಓದು ನೀಡುತ್ತದೆ. ಉತ್ತಮ ಪುಸ್ತಕದ ಓದಿನಿಂದ ಮನಸ್ಸು ಅರಳುತ್ತದೆ. ಇದೇ ಓದಿನಿಂದ ನಮಗೆ ದೊರೆಯುವ ಪ್ರತಿಫಲ. ಹಾಗೇ ಎಲ್ಲ ಮಾಧ್ಯಮಗಳಿಗೂ ಮೂಲ ಪುಸ್ತಕಗಳೇ ಎನ್ನುವುದನ್ನು ನಾವು ಮರೆಯುವಂತಿಲ್ಲ. ಅಧ್ಯಾತ್ಮ, ಧಾರ್ಮಿಕ, ತಾತ್ವಿಕ, ಸಾಮಾಜಿಕ, ನೈತಿಕ, ಕೌಟುಂಬಿಕ,
ರಾಜಕೀಯ ಹೀಗೆ ಯಾವುದೇ ವಿಭಾಗದ ಪುಸ್ತಕವಿರಲಿ ಆ ಅಭಿರುಚಿಯಿರುವ ಓದುಗನಿಗೆ ನೆಮ್ಮದಿಯನ್ನು ನೀಡುತ್ತದೆ. ಹೊಸ ಬೆಳಕನ್ನು ಮೂಡಿಸುತ್ತದೆ.

ಸಖಿ, ಪುಸ್ತಕಕ್ಕೆ ಒಂದು ಜನಾಂಗದ ಕಣ್ಣು ತೆರೆಸುವ ಶಕ್ತಿಯಿದೆ. ಆದ್ದರಿಂದಲೇ ನಮ್ಮಲ್ಲಿ ಪುಸ್ತಕ ಪ್ರೀತಿ ಎಷ್ಟು ಬೇಗ ಮೊಳೆಯುತ್ತದೋ ಅಷ್ಟೂ ಒಳ್ಳೆಯದು. ಆ ಪ್ರೀತಿಯಿಂದ ನಾವು ಹೆಚ್ಚು ಹೆಚ್ಚು ಓದುವಂತಾಗಲಿ, ತಿಳಿಯುವಂತಾಗಲಿ, ಆರಳುವಂತಾಗಲಿ, ನೆಮ್ಮದಿ ಕಾಣುವಂತಾಗಲಿ.


Previous post ಹೊಳೆಸಾಲಿನ ಮರ
Next post ಸಂಸಾರ

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…