ಮನಸಿನಲ್ಲಿ ಹೊಳೆದವನೆ
ಕನಸಿನಲ್ಲಿ ಬೆಳೆದವನೆ
ಜೀವನವನೆ ತೊಳೆದವನೆ
ಎಲ್ಲಿರುವೆ ಬಾ!
ಚೆಲುವಿನಲ್ಲಿ ಮಾಗಿರುವೆ
ಒಲವಿನಲ್ಲಿ ಬಾಗಿರುವೆ
ಜಗದ ರೂಪವಾಗಿರುವೆ
ಕೈಗೆ ಕೈಯ ತಾ!
ಹಳ್ಳ ಹೊಳೆಗೆ ನೂಗಿದಾಗ
ಹೂ ಹೂವಿಗೆ ತಾಗಿದಾಗ
ಹಕ್ಕಿ ಕೆರಳಿ ಕೂಗಿದಾಗ
ಮೂಡಿದವನೆ ಬಾ!
ಗಂಡು-ಹೆಣ್ಣು ಕೂಡಿದಾಗ
ತಾಯಿ ಕೂಸ ನೋಡಿದಾಗ
ಜೀವ ಸೆರೆಯ ತೋಡಿದಾಗ
ಬಹನೇ ಕೈ ತಾ!
ಕಿರಣ ಹಸಿರ ಮುದ್ದಿಡುತಿರೆ
ಬಿಂಬಿ ಬಸಿರ ಬಗೆದು ಬರೆ
ತುಂಬಿ ತನ್ನ ಗುಂಗಿನೊಳಿರೆ
ಕುಣಿದವನೇ ಬಾ!
ಕಣ್ಣು ಕಣ್ಣ ಸೆಳೆಯುತಿರೆ
ಮಳೆಗೆ ಮಣ್ಣೆ ಮೊಳೆಯುತಿರೆ
ಮೋಡ ಬಿಲ್ಲ ತಳೆಯುತಿರೆ
ಚಾಚಿದ ಕೈ ತಾ!
*****








