ಅಂದು ಬೆಳಗಿನ ಊಟಕ್ಕೆ ಕುಳಿತ ಗುರುಗಳು ಕೇಳಿದರು.
‘ಇಂದು ಅನ್ನ ಮಾಡಿದವರಾರು?’
“ನಾನು” ಎಂದ ಶಿಷ್ಯ.
‘ಬರಿ ನೀನು ಇರಲು ಅನ್ನವಾಯಿತೇ?’
‘ಇಲ್ಲ ಅಕ್ಕಿ ಬೇಕೇ ಬೇಕು’
‘ಬರಿ ಅಕ್ಕಿ ಇರಲು ಅನ್ನವಾಯಿತೇ?’
‘ಇಲ್ಲ ಗುರುಗಳೇ! ನೀರು ಬೇಕಾಯಿತು!’
‘ಅಕ್ಕಿ, ನೀರು ಇರುವಾಗ, ಅನ್ನವಾಯಿತೇ?’
‘ಇಲ್ಲ ಗುರುಗಳೇ! ತಪ್ಪಲೆ ಬೇಕಾಯಿತು!’
‘ಅಕ್ಕಿ, ನೀರು, ತಪ್ಪಲೆಯಿಂದ ಅನ್ನವಾಯಿತೇ?’
‘ಇಲ್ಲ ಗುರುವೆ! ಒಲೆ ಬೇಕಾಯಿತು’
‘ಅಕ್ಕಿ, ನೀರು, ತಪ್ಪಲೆ, ಒಲೆ ಇದ್ದಾಗ ಅನ್ನವಾಯಿತೇ?’
‘ಇಲ್ಲ ಒಲೆ ಹಚ್ಚಲು ಬೆಂಕಿಪೊಟ್ಟಣ ಬೇಕಾಯಿತು’.
‘ಬೆಂಕಿ ಪೊಟ್ಟಣ ಸಿಕ್ಕಾಗ ಅನ್ನವಾಯಿತೇ?’
‘ಇಲ್ಲ ಕಡ್ಡಿ ಗೀರಿ, ಒಲೆ ಹೊತ್ತಿಸಿ, ನೀರು ಕುದ್ದು, ಅಕ್ಕಿ ಬೆಂದು, ಗಂಜಿ ತೆಗೆದು, ಬೆಂದ ಅಕ್ಕಿ ಕಾಳು ಹದಗೊಂಡ ಮೇಲೆ ಅನ್ನವಾಯಿತು’.
‘ಹಾಗಾದರೆ ಅನ್ನ ಮಾಡಲು ಇಷ್ಟೆಲ್ಲಾ ಇರುವಾಗ ಕೊನೆಗೆ ನೀನು ಬೇಕಾಯಿತಲ್ಲವೇ?’
‘ಹೌದು ಗುರುವೆ!’ ಎಂದ ಶಿಷ್ಯ.
‘ಅನ್ನ ಯಾರು ಮಾಡಿದ್ದು ? ಅಂದಾಗ ‘ನಾನು’ ಎಂದು ಮೊದಲು ಹೇಳಿದೆ. ಆದರೆ ಅನ್ನ ಮಾಡಲು ಕೊನೆಯ ಅಗತ್ಯ ನೀನಾಗಿದ್ದಿ. ಎಲ್ಲಾ ಪದಾರ್ಥಗಳ ಕೊನೆಯಕೊಂಡಿಯಾದ ‘ನಾನು’ ಎಂದು ಮೊದಲು ಹೇಳಿಬಿಟ್ಟೆಯಲ್ಲಾ ಎಂದು ಗುರುಗಳು ಹೇಳಲು ಶಿಷ್ಯನಿಗೆ ಎಲ್ಲಾ ಕರ್ಮದಲ್ಲೂ ‘ನಾನು’ ಎಂಬುದು ಕೊನೆಯದು, ಕನಿಷ್ಠದ್ದು ಎಂಬುದರ ಅರಿವಾಯಿತು.
*****








