ನನ್ನ ಕನ್ನಡವೆಂತು ಬಾಳಿ ಬದುಕೀತು!
ಉನ್ನತದ ಶಿಖರವನ್ನೇರಿ ಮೆರೆದೀತು!
ನುಡಿಯೊಂದೆ ನಾಡೊಂದೆ ಜನವೆಲ್ಲ ಒಂದೆ
ನಡೆಯೊ೦ದೆ ಗುಡಿಯೊಂದೆ ಮನದಾಳ ಒಂದೆ
ಗುರಿಯೊಂದೆ ಸಿರಿಯೊಂದೆ ಸೌಭಾಗ್ಯ ಒಂದೆ
ಅರಿವೊಂದೆ ಇರುವೊಂದೆ ಜೀವಿತವದೊಂದೆ
ನೆಲವೊಂದೆ ಕುಲವೊಂದೆ ದೈವತವದೊಂದೆ
ಛಲವೊಂದೆ ಬಲವೊಂದೆ ಭವಿತವ್ಯವೊಂದೆ
ಈ ಕನಸು ಮೈಗೊಂಡು ಬರುವ ದಿನವೆಂದು!
ಈ ನನಸು ಫಲಿಸಿ ಬಹ ಮಾಗಿ ದಿನವೆಂದು!
ಕನ್ನಡವ ಎತ್ತಿ ಹದಗೊಳಿಪ ಜನ ಬೇಕು
ಕನ್ನಡವ ಬಿತ್ತಿ ಬೆಳೆ ತರುವ ಜನ ಬೇಕು
ಕನ್ನಡದ ಮಕ್ಕಳಿಗೆ ಕನ್ನಡವೆ ಊಟ
ಕನ್ನಡವೆ ಆಟ, ಕನ್ನಡವೆ ಸಿರಿನೋಟ
ಹೊಲದಿ ದುಡಿವವನಿರಲಿ ಕೂಲಿ ಆಳಾಗಿರಲಿ
ಜಲದ ಒಡಲನು ಅಗಿವ ಅಂಬಿಗನು ಇರಲಿ
ಸೌದೆ ಸೀಳುವನಿರಲಿ ಸೌದೆ ಮಾರುವನಿರಲಿ
ಕೌದೆ ಹೊಲಿಯುವನಿರಲಿ-ಹೊದೆವನಿರಲಿ
ಕಲ್ಲು ಕಡಿವವನಿರಲಿ ಹುಲ್ಲು ಕೊಯ್ವವನಿರಲಿ
ಬೆಲ್ಲ ಕಡಲೆಯ ಮಾರಿ ಜೀವಿಸುವನಿರಲಿ
ಬಲ್ಲ ಪ೦ಡಿತನಿರಲಿ ಮತ್ತೆ ಪಾಮರನಿರಲಿ
ಎಲ್ಲರಲಿ ಕನ್ನಡವೆ ಚಿಮ್ಮುತಿರಲಿ
ನಮಗಿರುವ ಭವಿತವ್ಯ ಕನ್ನಡಕೆ ಇಹುದು
ಸಮವದುವೆ ಅಷ್ಟಾ೦ಗ ಸಿದ್ಧಿಯಹುದು
ತಮತಮಗೆ ಕಂದಿರುವ ಪೌರುಷವು ಬಹುದು
ಅಮರತೆಯ ಬೀರಿ ಚಿರಕಾಲ ಬಾಳುವುದು
ವ್ಯವಹಾರ ವಾಣಿಜ್ಯವಿದರ ಅಡಿಗಲ್ಲು
ವ್ಯವಸಾಯದಾಕಳಿಗೆ ಹಾಕಿರುವ ಹುಲ್ಲು
ವ್ಯವಧಾನ ಕನ್ನಡದ ಅವಧಾನಿಗಳ ಸೊಲ್ಲು
ವ್ಯವಹರಿಸಿ ಉಲಿಯುವದು ನಮ್ಮ ಕಿವಿಯಲ್ಲು
ಕೊರತೆ ಎಂಬುದು ಇಲ್ಲ ನಮ್ಮ ಕನ್ನಡಕೆ
ಒರತೆಯಾಗಿಹುದದುವೆ ನಮ್ಮ ಜೀವಿತಕೆ
ಅರಿತಷ್ಟು ಆಳವಿಹ ಇಂಗಿತವು ಜಗಕೆ
ಸುರಿಸಿ ಸುಜ್ಞಾನವನು ತರುವ ಬೆಳಕೆ
*****








