Home / ಕವನ / ಕವಿತೆ / ಹರಿಭಕ್ತಿಸಾರ

ಹರಿಭಕ್ತಿಸಾರ

ಪೀಠಿಕೆ.
ಭಾ.ಷ.
ಹರಿವ ನದಿಯೊಳು ಮಿಂದ ಮಾತ್ರಕೆ |
ಹರಿಯುವದೆ ದುಷ್ಕೃತ್ಯದೋಷವು? |
ಹರಿಯು ಕಾಂಬನೆ ಬರಿಯ ಜಪತಪ ಹೋಮಹವನಗಳಿ೦ ||
ಉರುತರದ ಶುದ್ಧಾಂತರಂಗದಿ |
ಸ್ಮರಿಸಿದಾಕ್ಷಣ ನಾಮಮಾತ್ರವ |
ಹರಿಯು ಬರುವನು ಬೇಡು ಭಕ್ತನೆ ವರವನೆಂದೆನುತ ||೧||
ಗುರುವು ನುಡಿದೀ ನುಡಿಯನಾಲಿಸಿ |
ತರಳನೊಬ್ಬನು ಬಾಲಭಾವದಿ |
ಗುರುವರೇಣ್ಯರೆ, ನಿಮ್ಮ ಮಾತಿನ ಭಾವವೇನಿಹುದೋ ||
ಅರಿಯೆನೈ ನೀಂ ಪೇಳಿರೆಲ್ಲವ |
ಹರಿಯ ಕಾಣುವದೆಂದರೇನದು? |
ವರವನೀಯುವನಾತನೆಂತೀ ಕಲಿಯ ಕಾಲದಲಿ ||೨||
ಕಂದ, ನಿನ್ನಯ ಮಾತಿನಿಂದಾ |
ನಂದವಾಯಿತು; ಕೇಳು ಪೇಳುವೆ |
ನಿಂದು ವರಹರಿ ಭಕ್ತಿಸಾರವ ನಿನಗೆ ತಿಳಿವಂತೆ ||
ಕಂದ! ನೀ ತಿಳಿದಿರುವೆಯಲ್ಲವೆ? |
“ಚಂದದಿಂ ನೀನೊಂದು ಪಾರವ |
ನಿಂದು ಕಲಿತರೆ’ ಕೊಡುವೆನುಂಡೆಯ” ನೆಂಬ ಮಾತನ್ನು ||೩||
ಹೊಂದಿಸುತ ನೀನೋಡು ಮೇಲಣ |
ಸಂದ ಧರ್ಮೋಕ್ತಿಯನು ನಿನ್ನಯ |
ತಂದೆ ತಾಯ್ಗಳು ತೋರುವಾಶೆಯು ಚಿಕ್ಕ ನುಡಿಯೊಡನೆ ||
ಮಂದಮತಿಗಳು ತಿಳಿಯಲಾರರು |
ಎಂದೆನುತ ಬಹು ಗೂಢತತ್ವವ |
ತಂದಿಹರು ಪೂರ್ವಜರು ತಾವೀ ಸುಲಭರೂಪಕ್ಕೆ ||೪||
ನೋಡದಲೆ ಫಲವನ್ನು ಕರ್ಮವ |
ಮಾಡುವದು ಮೂಢರಿಗಸಾಧ್ಯವು |
ಬೇಡುವರು ಫಲವನ್ನು ತತ್‌ಕ್ಷಣವವರು ಚಡಪಡಿಸಿ ||
ನೋಡುತೀ ಕಷ್ಟವನ್ನು ಹಿರಿಯರು |
ಹೂಡಿದರು ಬಹುದೊಡ್ಡ ಜಾಲವ |
ಗೂಢವಾದಾ ಸ್ವರ್ಗ-ನರಕದ ಪುಣ್ಯ ಪಾಪಗಳ ||೫||
ಮನಕೆ ಸಿಗ್ಗೆನಿಸದಿಹ ಕರ್ಮವ |
ತನಗೆ ಸೇರಿದುದೆಂಬ ಭಾವದಿ |
ಮನದಿ ಫಲದಾಶೆಯನು ತಾರದೆ ಗೈವುದಿದು ನೀತಿ ||
ಜನರು ತಿಳಿಯರಮೌಲ್ಯನೀತಿಯ |
ನೆನುತ ಹಿರಿಯರು ಜೋಡಿಸಿದರೈ |
“ನಿನಗೆ ಪಾಪವು ಬರುವದೆ ” ನ್ನುವ ಭೀತಿಭಾವನೆಯ ||೬||
ನೀತಿ ಭೀತಿಗಳೆಂಬ ಜೋಡಿಗೆ |
ಆತುಕೊಂಡಿತು ಮುಂದಿನಾಶೆಯು |
ಈತರದ ಮೂವಿಧದೆ ನಡೆವವು ಸಕಲಕರ್ಮಗಳು ||
ನೀತಿಯನು ನೋಡುವರು ಪೂಜ್ಯರು |
ಭೀತಿಯಲಿ ನಡೆಯುವರು ನೀಚರು |
ಸೋತು ಸಕಲವ ಮುಂದಿನಾಶೆಗೆ ನಡೆವರುಳಿದವರು ||೭||
ಈಗ ಪೇಳಿದ ಪೂಜ್ಯವರ್ಗದ |
ಯೋಗಿಗಳು ಜಗದೊಳಗೆ ದುರ್ಲಭ |
ರಾಗಿಹರು ಕಲಿಮಹಿಮೆ! ಉಳಿದವರಲ್ಲಿ ಬಹುಜನರು ||
ಆ ಗುಣೋತ್ತಮರಂತೆ ನೀತಿಯ |
ಸೋಗುಗಳ ಕೈಕೊಂಡು ಮನದಲಿ |
ನೀಗಲಾರದೆ ಫಲದೊಳಾಶೆಯ ಕರ್ಮವೆಸಗುವರು ||೮||
ಈ ಪರಿಯ ಫಲದಾಶೆಗೈವರಿ |
ಗಾಪುರುಷರುವದೇಶಗೈದರು |
ವಾಪತಾಪದ ನಾಶ, ಪುಣ್ಯದ ಲಾಭದಾಶೆಗಳ ||
ಪಾಪವೆಂಬುದು ಲೋಕದಲಿತಾ |
ರೂಪುಗೊಂಡಿಲ್ಲೈಯ! ಕಂದನೆ |
ಪಾಪಕಾರ್ಯವಗೈಯೆ ಮನಕಹ ತಾಪವೇ ಪಾಪ ||೯||
ಪುಣ್ಯ ಪಾಪಗಳಲ್ಲಿ ವೈಲ |
ಕ್ಷಣ್ಯವಿರುವದು ಸತ್ಯಕಂದನೆ |
ಪುಣ್ಯಮನಕಾನಂದವೀವುದು ಪಾಪತಾಪಕರ ||
ಪುಣ್ಯವಂತರಿಗಾಗಿ ದೇವರು |
ಪುಣ್ಯಲೋಕವ ನಿರ್ಮಿಸಿಲ್ಲವು |
ಪುಣ್ಯ ಕಾರ್ಯವಗೈಯೆ ಮನಕಹ ಶಾಂತಿಯೇ ಸ್ವರ್ಗ ||೧೦||
ಪರರಿಗುಪಕೃತಿಯಪ್ಪ ಕೃತಿಯನು |
ಪರರನುತಿ ಸ್ವಾರ್ಥಂಗಳೆಣಿಸದೆ |
ತಿರುಗಿಯುಪಕಾರವನು ಬಯಸದೆ ಮಾಡೆ ಪುಣ್ಯವದು ||
ಪರರ ಮನವನನೀತಿಯಿಂದಲಿ |
ಕೊರಗಿಸುವದೇ ಪಾಪಕಾರ್ಯವು |
ನರಕವದರಿಂದುದ್ಭವಿಸುವದು; ಮನವ ನೋಯಿಪುದು ||೧೧||
ನರಕನಾಕಗಳೆಂಬವಿಲ್ಲವು |
ನರರ ಹೃದಯವೆ ನಾಕನರಕಗ |
ಳರಿತು ನಡೆವುದು ಕಂದ ನೀನೀಗೂಢತತ್ವವನು ||
ಹರಿಯಕಾಣುವದೆಂದರೇನೆಂ |
ದರಿವುದಕ್ಕೀ ಮಾತುಪೀಠಿಕೆ |
ತರಳಪೇಳುವೆ ಮುಂದಿನಂಶವ ಕೇಳು ಭಕ್ತಿಯಲ್ಲಿ ||೧೨||
ದೇವರು
ಎತ್ತಿಹಿಡಿದಿಹರಾರು ಭೂಮಿಯ |
ಸುತ್ತಿಸುವರಾರದನು ಸೂರ್ಯನ |
ಸುತ್ತಲೂ ಗರಗರನೆಯನುದಿನ ಗಳಿಗೆ ಬಿಡದಂತೆ ||
ಬಿತ್ತಿರುವ ಬೀಜಗಳ ಮಳೆಯ |
ನಿತ್ತು ಬೆಳಿಸುವರಾರು ಬೆಳಕನು |
ಕತ್ತಲೆಯನಾರುಂಟುಮಾಡಿದರೆಮಗೆ ತಿಳಿಯುವದೇ? ||೧೩||
ಹಾವಿಗಂತಹ ವಿಷವನೀಯುತ |
ಗೋವಿಗಂತಹ ಸುಧೆಯ ನೀಡಿದ |
ನಾವನೆಂಬುದ ಪೇಳಲಾಪೆಯ ಕಂದ! ಕಠಿಣವಿದು ||
ದೇವರೆನ್ನುವ ಮೂರುವರ್ಣಗ |
ಳಾವ ಶಕ್ತಿಯ ತೋರಿಸುವವೋ |
ಆವ ಶಕ್ತಿಯು ಜಗವ ಸೃಷ್ಟಿಸಿ ಬೆಳಿಸಿ ಕೊಲ್ಲುವದೋ ||೧೪||
ಭಕ್ತಿಯಿಂ ಕೇಳುವದು ಬಾಲನೆ |
ಭಕ್ತ ವತ್ಸಲ ದೇವರೆನ್ನುವ |
ಶಕ್ತಿಯೊಂದಿಹುದೀ ಜಗತ್ತಿನೊಳೆಂದು ನಂಬುವದು
ಭಕ್ತರಾದವರಿಷ್ಟ ಕಾರ್ಯಕೆ |
ಶಕ್ತಿಯನು ಸಂಗ್ರಹಿಸಲೋಸುಗ |
ಯುಕ್ತಿಯಿಂದಾ ಶಕ್ತಿಗಿತ್ತರು ಹಲವು ರೂಪಗಳ ||೧೫||
ರೂಪವೊಂದೇ ಸಾಲದೆಂದಾ |
ರೋಪಿಸಿದರದರಲ್ಲಿ ಗುಣಗಳ |
ರೂಪಗುಣಗಳ ಜೋಡಿಗಿತ್ತರು ಹಲವು ಹೆಸರುಗಳ ||
ಈ ಪರಿಯ ನೂರೆಂಟು ನಾಮದಿ |
ರೂಪಗುಣಗಳೊಳಡಗಿಕೊಂಡಿಹ |
ಆ ಪರಮಶಕ್ತಿಯನು ಕಾಣಲು ಭಕ್ತಿಯೇ ಯುಕ್ತಿ ||೧೬||
ಭಕ್ತಿ
ಹೊತ್ತು ಹೊತ್ತಿಗೆ ಮೊಲೆಯನುಣಿಸುತ |
ಎತ್ತಿ ಮುದ್ದಾಡುತ್ತ ಬೆಳಿಸುವ |
ಹೆತ್ತ ತಾಯನು ಕಾಣದಿರೆ ನಿನಗಂದು ಮನದೊಳಗೆ ||
ಎತ್ತ ನೋಡಿದಡತ್ತ ಕಣ್ಣಿಗೆ |
ಕತ್ತಲೆಯೆ ಕಾಣಿಸಿತು ಬಾಲ್ಯದಿ |
ಉತ್ತುಮನೆಯೀ ತಾಯ ಮೇಲಣ ಮಮತೆಯೇ ಭಕ್ತಿ ||೧೭||
ಹರೆಯದೊಳ್ ಪ್ರಿಯತ್ನಿಯೊಳ್ ಮನ |
ಹರಿವು ತಿರುವದು, ಅನ್ನ ನೀರಿನ |
ಪರಿವೆಯಿಲ್ಲದೆ ಕಷ್ಟ ನಷ್ಟಗಳೆಣಿಕೆಯಿಲ್ಲದಲೆ ||
ಹರಿವ ನೀರಿನೊಳುರಿವ ಬೆಂಕಿಯೊ |
ಳಿರದು ಭಯವದಕಿಂಥ ಕವಲುಗ |
ಳಿರದ ತನ್ನಯ ಸತಿಯೊಳಿರ್ಸಾ ಪ್ರೇಮವೇ ಭಕ್ತಿ ||೧೮||
ದುಡಿದು ಗಳಿಸಿದ ಹಣದ ರಾಶಿಯ |
ಮಡದಿ ಮಕ್ಕಳ ಕೈಯೊಳಾದರು |
ಕೊಡಲು ಮನವಿಲ್ಲದಲೆ ಕಾಯುವ ಮೂಢಮಾನವರ ||
ದೃಢತರದ ಧನಲೋಭವೆಂಬುವ |
ಬಿಡದ ಮನದಾಸಕ್ತಿಯೇ ಜಗ |
ದೊಡೆಯ ಶಂಕರನೊಡನೆ ಘಟಿಸಲು ಭಕ್ತಿ ಯೆನಿಸುವದು ||೧೯||
ಭಕ್ತಿಯೆಂಬುದು ಬೇರೆಯಿಲ್ಲವು |
ಯುಕ್ತಿ ಕವಲುಗಳಿರದ ಮನದಾ |
ಸಕ್ತಿಯೇ ನಿಜಭಕ್ತಿಯದರಿಂ ತಮ್ಮ ಮನದೊಳಗೆ ||
ಶಕ್ತಿ ಸಂಗ್ರಹವಾಗಿ ಇಚ್ಛಾ |
ಶಕ್ತಿಯಿಂ ಜಗವನ್ನು ತುಂಬಿದ |
ಶಕ್ತಿಯೊಡನೈಕ್ಯವನು ಪಡೆವುತ ಪಡೆವರಿಷ್ಟವನು ||೨೦||
ಮೂರ್ತಿ ಪೂಜೆ
ಮನದ ಬಯಕೆಯ ಪಡೆಯಲೋಸುಗ |
ಘನಮಹಿಮ ಜಗದೇಕಶಕ್ತಿಗೆ |
ತನಗೆ ಬೇಕಾಗಿರ್ದರೂಪವ ನಿತ್ತು ಪೂಜಿಸುತ ||
ಮನದೆ ಭಾವಿಸುತಲದರ ಗುಣಗಳ |
ತನಗೆ ಬೇಕಾದಂತೆಯೇ ಕಡೆ |
ಗನುನಯದಿ ನಂಬುವನು ತನ್ನಾಧೀನವಾಯ್ತೆಂದು ||೨೧||
ತನಗೆ ವಶವಾಗಿರ್ದ ಶಕ್ತಿಯ |
ತನಗೆ ಬೇಕಾಗಿರ್ದ ಕಾರ್ಯಕೆ |
ಅನುಗೊಳಿಸಿ ಕಳುಹಿಸುವನಾತನು ಮನದ* ಬಲದಿಂದ ||
ಮನದಿ ಹರಿಯಿಹನೆಂಬ ಮಾತಿದು! |
ಜನರು ಗೈಯುವ ದೇವತಾರಾ- |
ಧನೆಯ ಗುಟ್ಟಿದು! ಮಂತ್ರಶಾಸ್ತ್ರದ ಮೂಲತತ್ವವಿದು! ** ||೨೨||
ಭಾವವೇ ಬಲವೆಂಬ ಮಾತಿನ |
ಭಾವವಿದರೊಳಗಿಹುದು ಬಾಲನೆ |
ಭಾವಿಸದಿರನ್ಯಥಾ! ನಂಬುತ ನಡೆವುದೀ ನುಡಿಯ ||
ಆವನಿಚ್ಛಾಶಕ್ತಿ ಬಲವಿಹು |
ದಾವನಲಿ ತನುಮನವನಾಳುವ |
ಭಾವದೈಕ್ಯತೆಯಿರುವದವನೇ ಭಕ್ತಪುಂಗವನು ||೨೩||
ಭೂತದಯೆ
ಲೋಕದಲಿ ನರರಿಷ್ಟ ಸಿದ್ಧಿಗೆ |
ಏಕವಾಕ್ಯತೆಯಿಂದ ವೇಳ್ದರು |
ಲೋಕಸಂಗ್ರಹ ಶಕ್ತಿಸಂಗ್ರಹವೆಂಬ ಮಾರ್ಗಗಳ ||
ಏಕಲಕ್ಷ್ಯದಿ ಶಕ್ತಿ ಸಂಗ್ರಹ |
ವೇಕಲಕ್ಷ್ಯದೊಳಿಷ್ಟ ಸಾಧನ |
ಲೋಕಸಂಗ್ರಹಕಾಗಿ ಹುಟ್ಟಿತು ಭೂತದಯೆ ಜಗದಿ ||೨೪||
ಭೂತದಯೆಯಿಂ ನಡೆವ ಮನುಜಗೆ |
ಭೂತಗಳ್‌ ವಶವಾಗಿ ವರ್ತಿಸ |
ಲಾತ ಪಡೆಯುವನಿಷ್ಟ ಸಿದ್ಧಿಯ ಲೋಕಸಂಗ್ರಹದಿ ||
“ಭೂತದಯೆಯಿಂ ಪ್ರೀತನಾಗುವ |
ಭೂತನಾಥನು” ಎಂಬ ಮಾತಿನೊ- |
ಳೀ ತೆರದ ಗೂಢಾರ್ಥವಿಹುದೈ ಮುದ್ದು ಬಾಲಕನೇ ||೨೫||
ತಾತ್ಪರ್ಯ
ತತ್ವವರಿಯದ ಮೂರ್ತಿಪೂಜೆಯು |
ಸತ್ವ ಹೀನರ ಭೂತದಯೆಯುಂ |
ವ್ಯರ್ಥವಾಗುವವರಿತು ನಡೆವುದು ಕಂದ! ತತ್ವವನು ||
ತತ್ವ ವಿದರಾದಂಥ ಮುನಿಗಳು |
ಸತ್ವ ಶಾಲಿಗಳಾಗಿ ಮನಸಿನ |
ಸತ್ವ ಬಲದಿಂ ಹರಿಯನೋಳ್ಪರು ವರವ ಪಡೆಯುವರು ||೨೬||
*****
** ಪ್ರತಿಯೊಂದು ದೇವತಾರಾಧನೆಯ ಕಾರ್ಯದಲ್ಲಿಯೂ ಆವಾಹನೆ, ಅರ್ಚನೆ, ಧ್ಯಾನ,
ಪ್ರಾರ್ಥನೆ ಎಂಬ ನಾಲ್ಕು ಮುಖ್ಯ ಅಂಗಗಳು ಇದ್ದೇ ಇರುವವು. ಅಖಿಲ ಜಗದ್ವ್ಯಾಪಿಯಾದ
ಈಶ್ವರೀ ಶಕ್ತಿಯನ್ನು ಇಚ್ಛಿತ ಆಕಾರದ ವಸ್ತುವಿನಲ್ಲಿ (ಮೂರ್ತಿಯಲ್ಲಿ) ಸಂಗ್ರಹಿಸುವದೇ ಆವಾಹನೆಯು; ಆ ಆವಾಹ್ನಿತ ದೇವತಾಶಕ್ತಿಗೆ ಭಕ್ತಿಯಿಂದ ಯಥಾಶಕ್ತಿ ಷೋಡಶೋಪಚಾರಗಳನ್ನು ಅರ್ಪಿಸಿ ಅದರಲ್ಲಿ ಅವಶ್ಯಕ ಗುಣಗಳನ್ನು ಆರೋಪಿಸಿ ಆ ಶಕ್ತಿಯ ಪ್ರಕಾಶಕ್ಕೂ ಪೂಜಕನಿಗೂ ಸಂಬಂಧವುಂಟಾಗುವಂಥ ಅನುಕೂಲ ಅವಸ್ಥೆಯನ್ನು ತ೦ದುಕೊಳ್ಳುವದೇ ಅರ್ಚನೆಯು. ಧ್ಯಾನವು ಶಕ್ತಿ ಸಂಗ್ರಾಹಕ ಕಾರ್ಯವು, ಅಂದರೆ ಆವಾಹ್ನಿತ ದೇವತಾಶಕ್ತಿಯೊಡನೆ ತಾದಾತ್ಮ್ಯವನ್ನು ಪಡೆಯುವದು, ಹಾಗು ಈ ರೀತಿಯಾಗಿ ಸಂಗ್ರಹಿಸಿದ ಶಕ್ತಿಯನ್ನು ಇಚ್ಛಿತಕಾರ್ಯದ ಸಾಧನೆಗೆ ನಿಯೋಗಿಸಿಕೊಳ್ಳುವದೇ ಪ್ರಾರ್ಥನೆಯು
* Will-Power
Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...